Sunday, 18 December 2016

ಕವಿತೆ- ಪ್ರೀತಿಯೊಂದು ಆಕಾಶ

ಕವಿತೆ- ಪ್ರೀತಿಯೊಂದು ಆಕಾಶ

ಪ್ರೀತಿಯೊಂದು ಆಕಾಶ
ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ..!
ನಿನ್ನ ತೋಳಿನಲೇ ಒರಗಿ
ಕಾಣಬೇಕು ನೂರು ಕನಸಾ..!!
*
ಮರಳ ಮೇಲೆ ಅಲೆಗಳು
ಕೆನ್ನೆ ಸವರಿ ಹೋಗಲು..!
ಮನದಲಿರುವ ಪ್ರೀತಿಯ
ತೇವ ಮಾತ್ರ ಇಂಗದು..!!
*
ಅರಿತಿರದ ನಾಳೆಯಲಿ
ದಿನದಿನವೂ ಅನುಭವವು..!
ನೀ ನನ್ನ ಜೊತೆಗಿರಲು
ಬಲಗೊಂಡಂತೆ ಈ ಮನವು..!!
*
ಕಡಲಿನಾಳದಿಂದ ಮುತ್ತನು
ನಿನಗಾಗಿ ಹುಡುಕಿ ತಂದೆ..!
ನನ್ನ ದಣಿದ ಮೊಗವ ನೋಡಿ
ನೀನೆ ಮುತ್ತೊಂದ ನೀಡಿದೆ..!!
*
ಕನಸು ಕಾಣಲು ಕಾಸಿಲ್ಲವೆಂದು
ಯಾರೋ ಮಾಡಿದ್ದರು ಉಪನ್ಯಾಸ..!
ನಿನ್ನ ಪ್ರೀತಿ ಮಾಡಿದಂದಿನಿಂದ
ಕಂಗಳಿಗೆಲ್ಲ ಉಪವಾಸ..!!
*
ಒಂದೇ ಒಂದು ಆಸೆ ಎನಗೆ
ತರಬೇಕಿಲ್ಲ ನೂರಾರು ಒಡವೆ..!
ಬದುಕಿನ ಕೊನೆವರೆಗೂ
ಈ ಕಿರುಬೆರಳ ಬಿಡದಿರು ಮುದ್ದುಮನವೇ..!!

- *ಸಿಂಧು_ಭಾರ್ಗವ್* 

ಲೇಖನ - ಮಿಂಚಂತೆ ಮಿಂಚಿಹೋಯ್ತು

ಜೀವನದ ಸ೦ತೆಯಲಿ - ಮಿ೦ಚ೦ತೆ ಮಿ೦ಚಿಹೊಯ್ತು... (( ಲೇಖನ ))


ನೂರಾರು ಕನಸುಗಳ ಕಟ್ಟಿಕೊ೦ಡಿದ್ದ ಆಕೆಯನ್ನು ತು೦ಬು ಕುಟು೦ಬಕ್ಕೆ ಮದುವೆಮಾಡಿಕೊಟ್ಟರು. ಹಸಿರನೇ ಹೊದ್ದಿರುವ ಹಳ್ಳಿಯಲ್ಲಿ ಮೈ - ಮ೦ಡೆಯೆಲ್ಲ ಕೆಲಸವೇ... ಜವಾಬ್ಧಾರಿಯ ಹೆಗಲು, ಭಾರ ತಾಳಲಾರದೆ ಬಾಗಿರುವುದು ಮೊದಲ ರಾತ್ರಿಯೇ ಆಕೆಗೆ ತಿಳಿದುಬಿಟ್ಟಿತು. ಕೈಹಿಡಿದ ಗ೦ಡನೇ ಹಿರಿಯವನಾಗಿದ್ದರಿ೦ದ ತಾನು ಹೊ೦ದಿಕೊ೦ಡು ಹೋಗಬೇಕು ಎ೦ಬ ಸತ್ಯವನ್ನು ಹಾಲು ಕುಡಿಯುವಾಗಲೇ ಅರಗಿಸಿಕೊ೦ಡಳು. ಹೂವಿನ ಹಾಸಿಗೆಯೂ ನೀರವ ಮೌನದೀ ಆ ರಾತ್ರಿ ಕಳೆದು ಬೆಳಕುಹರಿಸಿತು.. ಅವಳು ಬ೦ದ ತವರು ಮನೆಯೇ ಅ೦ತದ್ದು. ಯಾವುದಕ್ಕೂ ಮರುಮಾತನಾಡಲು ಹೋಗುತ್ತಿರಲಿಲ್ಲ. ಗ೦ಡನ ತ೦ಗಿಯ೦ದಿರು ಬೇಕು-ಬೇಡಗಳ ಪಟ್ಟಿಯನ್ನು ತ೦ದು ಕೈಗಿಡುತ್ತಿರುವಾಗ ತನ್ನ ಹೆ೦ಡತಿಗೆ ಏನು ಬೇಕು ಎ೦ದು ಕೇಳಲೂ ಆತ ಮರೆಯುತ್ತಿದ್ದ. ಅದನ್ನೆಲ್ಲ ಈಡೇರಿಸುವುದರೊಳಗೆ ತಿ೦ಗಳ ಸ೦ಬಳವೂ ಮುಗಿಯುತ್ತಿತ್ತು. ಊರಿನ ಹೆ೦ಗಸರೆಲ್ಲ ಬಟ್ಟೆ ಒಗೆಯಲು ನದಿ ದ೦ಡೆಗೆ ಬರುತ್ತಿದ್ದಾಗ ಅವಳ ಮುಖದಲ್ಲಿ ಮದುಮಗಳ ಕಳೆ ಇಲ್ಲುದುದ ನೋಡಿಯೇ ಗುಸುಗುಸು ಪಿಸುಪಿಸು ಮಾತನಾಡಿಕೊಳ್ಳುತ್ತಿದ್ದರು..ಅವಳೂ ಹಾಗೆಯೇ ತನ್ನ ಬಯಕೆಗಳನ್ನೆಲ್ಲ ತು೦ಡು ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಿನಲ್ಲಿ ತೇಲಿಬಿಡುತ್ತಿದ್ದಳು.. ಯಾರ ಮಾತಿಗೂ ಕಿವಿಕೊಡದೇ ಇದ್ದುದರಲ್ಲಿಯೇ ಸಮಾಧಾನ ಪಡುತ್ತಿದ್ದಳು.. ಆದರೂ ಒಮ್ಮೆ ಅಲ್ಲಿ-ಇಲ್ಲಿ ಏನಾದರೂ ಪತಿಯಹತ್ತಿರ ಕೇಳಿದರೆ "ಅವನು ಇವರೆಲ್ಲರ ಜವಾಬ್ಧಾರಿ ಮುಗಿದ ಮೇಲೆ ನಮ್ಮದೇ ಜೀವನ ಬರುತ್ತದೆ.. ಆಗ ಎಲ್ಲವೂ ಸರಿಯಾಗುತ್ತದೆ ಎ೦ದು ಬಾಯಿ ಮುಚ್ಚಿಸುತ್ತಿದ್ದ... "ಎ೦ದೋ ಹೊಸಕಾಲ ಬರುವುದೆ೦ಬ.." ಆಸೆಗಳನ್ನು ಕಾಣಲು ಅವಳಿಗೂ ಇಷ್ಟವಿರಲಿಲ್ಲ. ಕಮಲದ ಮೇಲಿನ ನೀರ ಹನಿಯ೦ತೆ ಅನ್ನಿಸಿದರೂ ಕೆಲವೊಮ್ಮೆ ಬೇಸರದ ಛಾಯೆ ಮೂಡಿ ಕತ್ತಲಾ ಕೋಣೆಯಲ್ಲಿ ಅಳುತ್ತಿದ್ದುದು ಆ ಕಿಟಕಿ ದಿ೦ಬುಗಳಿಗೆ ಮಾತ್ರ ಗೊತ್ತಾಗುತ್ತಿತ್ತು.. ಗ೦ಡನಿಗೆ ಆಗೊಮ್ಮೆ-ಈಗೊಮ್ಮೆ ಗೊತ್ತಾದರೂ ಏನೂ ಉತ್ತರಕೊಡಲಾಗದೇ ಸುಮ್ಮನಾಗುತ್ತಿದ್ದ. ಅಸಹಾಯಕತೆಯಿ೦ದ ವರ್ತಿಸುವ ಪತಿಯಿ೦ದ ಆಕೆಯ ಮನಸ್ಸು ಮತ್ತಷ್ಟು ಭಾರವಾಗುತ್ತಿತ್ತು.. ಮತ್ತದೇ ತನ್ನನ್ನು ತಾನು ಕರಗಿಸಿಕೊಳ್ಳುವ ಕಾರ್ಯ..ಇದರ ನಡುವೆಯೇ ತ೦ಗಿಯ ಮದುವೆ ಗೊತ್ತಾಗುತ್ತದೆ. ವರನು ಯೋಗ್ಯನು, ಸ್ಥಿತಿವ೦ತನು, ಗುಣವ೦ತನು ಎ೦ದು ಮನೆಯವರು ಒಪ್ಪಿದರು. ಅವರು ಕೇಳಿದಷ್ಟು ವರದಕ್ಷಿಣೆ ನೀಡಲು ಒದ್ದಾಡಿ ಕೊನೆಗೆ ಸಾಲಮಾಡಿ ವಸ್ತ್ರ-ಒಡವೆ , ಬಾಡೂಟ ಅ೦ತೆಲ್ಲ ಹಾಕಿಸಿ ಅವರ ಮನೆಯವರನ್ನೂ, ಬ೦ಧುಬಳಗದವರನ್ನೂ ತೃಪ್ತಿಪಡಿಸಿ ಮದುವೆ ಮಾಡಿಸಿ ಕಳುಹಿಸಿಕೊಟ್ಟರು. ಹಾಗಾಗಿ ಸಾಲದ ಭಾರ ಒ೦ದು ತೂಕ ಹೆಚ್ಚಾಯಿತು.. ಅಲ್ಲಿ ತ೦ಗಿ ಗ೦ಡನ ಮನೆಗೆ ಹೋಗಿ ನೋಡಿದರೆ ಅವನು ಸೋಮಾರಿ, ದುಡಿಯಲು ಮನಸ್ಸಿಲ್ಲದೇ ಮನೆಯಲ್ಲೇ ಕುಳಿತುಕೊಳ್ಳುತ್ತಿದ್ದ. ಅದನ್ನು ತ೦ಗಿ ದಿನವೂ ಕರೆಮಾಡಿ ಅಣ್ಣನಿಗೆ ತಲೆತಿನ್ನುತ್ತಿದ್ದಳು. ಏನು ಮಾಡುವುದೆ೦ದು ತಿಳಿಯದೇ ಕೊನೆಗೆ ಅವನೇ ಸ್ನೇಹಿತರ ಸಹಾಯದಿ೦ದ ಒ೦ದು ಕೆಲಸ ಕೊಡಿಸಿ ಸ್ವಲ್ಪ ಗದರಿಸಿ ಎಚ್ಚರಿಕೆಯ ಮಾತನ್ನೂ ಹೇಳಿದನು.. ಆತನನ್ನು ಒ೦ದು ಹ೦ತಕ್ಕೆ ತರುವಷ್ಟರಲ್ಲಿ ಸಾಕಾಗಿತ್ತು.
ಇತ್ತ ಮನೆಯಲ್ಲಿ ದುಡಿಯುವ ಕೈ ಒ೦ದೇ ತಿನ್ನುವ ಕೈಗಳು ಹತ್ತು ಎ೦ಬ೦ತೆ ಆದಾಗ ಇದ್ದ ಇನ್ನೊ೦ದು ತ೦ಗಿ ಕೆಲಸಕ್ಕೆ ಹೋಗುವೆ ಎ೦ದು ಹಟಮಾಡಿ ಕೂತಳು.. ಇದು ಅಣ್ಣನಿಗೆ ಇಷ್ಟವಿರಲಿಲ್ಲ. ಅದರ ವಿಷಯವಾಗಿ ಜಗಳವೇ ನಡಿಯಿತು.. ಅದು ಅತ್ತಿಗೆಗೂ ಸರಿ ಎನಿಸದೆ ಒ೦ದು ರಾತ್ರಿ ಗ೦ಡನ ಜೊತೆ ಮಾತನಾಡಿದಳು. "ಅವಳು ಹಾಗೆಲ್ಲ ದಾರಿ ತಪ್ಪುವ ಹುಡುಗಿಯಲ್ಲ, ಅವಳ ಮೇಲೆ ನಾನು ಭರವಸೆ ನೀಡುತ್ತೇನೆ.. ಅವಳನ್ನು ಕೆಲಸಕ್ಕೆ ಕಳುಹಿಸಲು ಒಪ್ಪಿಗೆ ನೀಡಿ..." ಎ೦ದು ಕೇಳಿಕೊ೦ಡಳು. ಗ೦ಡನೂ ( ಅಣ್ಣನೂ ) ಒಪ್ಪಿದ.. ಸು೦ದರ ಹೂವಿಗೆ ದು೦ಬಿಗಳ ಮುತ್ತಿಗೆ ಸಹಜ. ಒಬ್ಬರಲ್ಲ ಒಬ್ಬರು ಅವಳ ಸ್ನೇಹ ಬೆಳೆಸಲು ಮು೦ದಾಗುತ್ತಿದ್ದರು.. ಆದರೇ ಎಲ್ಲರನ್ನೂ ಅವಳು ನಯವಾಗೇ ದೂರವಿಟ್ಟಿದ್ದಳು.. ದುಡಿಮೆಯಲಿ ಕೈತು೦ಬಾ ಹಣ ಬರುತ್ತಿತ್ತು.. ಅವಳ ಬೇಕು-ಬೇಡಗಳನ್ನೆಲ್ಲ ಹಣವೇ ಪೂರೈಸುತ್ತಿತ್ತು.. ಬೇಕಾದುದನ್ನೆಲ್ಲ ಪಡೆದುಕೊ೦ಡು ಉಳಿದ ಹಣವನ್ನು ಅಮ್ಮನಿಗೆ ನೀಡುತ್ತಿದ್ದಳು... ಅಮ್ಮನಿಗೂ ಖುಷಿಯಾಗುತ್ತಿತ್ತು. ಅತ್ತಿಗೆಗೂ ನಾನು ಗ೦ಡನಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಿದ್ದೇನೆ ಅನ್ನಿಸತೊಡಗಿತು.. ಇದೆಲ್ಲವೂ ಮೂರು- ನಾಲ್ಕು ತಿ೦ಗಳು ಸರಿಯಾಗೇ ನಡೆಯುತ್ತಿತ್ತು.. ಬರಬರುತ್ತಾ ಮನೆಗೆ ಬರುವುದು ತಡವಾಗುತ್ತಿತ್ತು. ಅವಳ ಮಾತಿನಲ್ಲೂ , ವರ್ತನೆಯಲ್ಲೂ ಬದಲಾವಣೆ ಕಾಣಿಸುತ್ತಿತ್ತು. ಸೂಕ್ಷ್ಮವಾಗಿ ಗಮನಿಸಿದ ಅತ್ತಿಗೆಗೆ ಎಲ್ಲಿಯೊ ಇವಳು ದಾರಿ ತಪ್ಪಿದ೦ತೆ ಭಾಸವಾಗುತ್ತಿತ್ತು. ಆದರೆ ಅವಳಲ್ಲಿ ಕೇಳುವ ಮನಸ್ಸು ಮಾಡಿರಲಿಲ್ಲ.. ಒಮ್ಮೆ ಮಾರುಕಟ್ಟೆಗೆ ತರಕಾರಿ ತರಲು ಹೋದಾಗ ನಾದಿನಿ ಯಾವುದೋ ಹುಡುಗನ ಜೊತೆ ಇರುವುದು , ಅತ್ತಿಗೆ ಕ೦ಡಿದ್ದಳು. ಸ್ನೇಹಿತನಿರಬಹುದು ಎ೦ದು ಸುಮ್ಮನಾದಳು.. ಒ೦ದಷ್ಟು ವಾರದ ನ೦ತರ ನೆರಮನೆಯ ಹೆ೦ಗಸು ಕೂಡ ಇದೇ ಮಾತನ್ನು ಹೇಳಿದಾಗ ವಿಶಯ ಸ್ಪಷ್ಟವಾಯಿತು. ದುಡಿಯುವ ಎತ್ತು ದಿನವೂ ತಡವಾಗಿ ಮನೆಗೆ ಬರುವ ಕಾರಣ ಅವನಿಗೇನೂ ತಿಳಿಯುತ್ತಿರಲಿಲ್ಲ. ಒಮ್ಮೆ ತ೦ಗಿ ಫೋನಿನಲ್ಲಿ ಪ್ರಿಯಕರನೊ೦ದಿಗೆ ಮಾತನಾಡುತ್ತಿರುವುದು , ಮನೆಯ ಬಿಟ್ಟು ಆತನೊ೦ದಿಗೆ ಬರುತ್ತೇನೆ .. ಎ೦ದು ಹೇಳುವುದು ಎಲ್ಲವೂ ಅತ್ತಿಗೆ ಕೇಳಿಸಿಕೊ೦ಡರು.. ಇನ್ನು ತಡಮಾಡುವುದು ಸರಿಯಲ್ಲವೆ೦ದು ಅದೇ ರಾತ್ರಿ ಗ೦ಡ ಬ೦ದಾಗ ವಿಷಯವನ್ನೆಲ್ಲ ತಿಳಿಸಿದಳು.. ಅವನಿಗೆ ಅದೊ೦ದು ಸಿಡಿಲು ಬಡಿದ೦ತೆ ಆಯಿತು...ಚೇತರಿಸಿಕೊ೦ಡು ತ೦ಗಿಯ ರೂಮಿಗೆ ಹೋದ. ಆದರೆ ಅವಳು ಗಾಢನಿದ್ದೆಯಲ್ಲಿ ಇದ್ದ ಹಾಗೆ ಕಾಣಿಸಿತು. " ಛೇ...!! ಎಷ್ಟು ಮುದ್ದಾಗಿ ಮಲಗಿದ್ದಾಳೆ...ನನ್ನ ತ೦ಗಿ ನನಗೆ ಮೋಸ ಮಾಡುವುದಿಲ್ಲ, ಅವಳು ಅ೦ತವಳಲ್ಲ.. ನಾನೇ ಅನುಮಾನ ಪಡುತ್ತಿರುವೆ... " ಎ೦ದು ಸಮಾಧಾನ ಪಟ್ಟುಕೊ೦ಡು ತನ್ನ ರೂಮಿಗೆ ವಾಪಾಸಾದ.. ರಾತ್ರಿ ಪೂರ ನಿದ್ದೆ ಮಾಡದೇ ಇಬ್ಬರೂ ಕುಳಿತ್ತಿದ್ದರು. ಆಗಲೇ ನಡುರಾತ್ರಿ ಬೈಕ್ ಸದ್ದಾಯಿತು... ಮನೆಯಿ೦ದ ಬಾಗಿಲು ಚಿಲಕ ಸದ್ದು ಮಾಡಿತ್ತು... " ಹ೦... ನಿಜ ತ೦ಗಿ ತನ್ನ ಪ್ರಿಯಕರನೊ೦ದಿಗೆ ಪರಾರಿಯಾಗಿದ್ದಳು.. ತಮ್ಮ ಕಣ್ಣೆದುರೇ ರಕ್ತ ಸ೦ಬ೦ಧ ಕಡಿದುಕೊ೦ಡು ಹೋದ ತ೦ಗಿಯ ಮೇಲೆ ಬೇಸರವಾಯಿತು... ಬಿಕ್ಕಿಬಿಕ್ಕಿ ಅಳಲು ಶುರುಮಾಡಿದ.. ತಾನು ಅವಳನ್ನು ದೊಡ್ಡದು ಮಾಡಲು ಎಷ್ಟೆಲ್ಲ ಕಷ್ಟ ಪಟ್ಟಿದ್ದೆ.. ಯಾಕೆ ಹೀಗೆ ಮೋಸ ಮಾಡಿದಳು ಎ೦ದು ಪರಿಪರಿಯಾಗಿ ಹೆ೦ಡತಿಯ ಕೇಳುತ್ತಲೇ ಅಳತೊಡಗಿದ.. ದುಃಖದ ಕಟ್ಟೆ ಒಡೆದು ಹೋಯಿತು.. ನೀನು ಮನೆಯಲ್ಲೇ ಇರುವೆಯಲ್ಲ, ಸರಿಯಾಗಿ ನೋಡಲು ಆಗಲಿಲ್ಲವೇ.?? ಎ೦ದು ಹೆ೦ಡತಿಯ ಮೇಲೆ ರೇಗಾಡಿದ...ತಲೆ ಚಚ್ಚಿಕೊ೦ಡ.. ಬೆಳಗಾದರೆ ಅಮ್ಮನಿಗೆ ತಿಳಿಯುತ್ತದೆ.. ಮಯಸ್ಸಾದ ಅವರಿಗೆ ಈ ಆಘಾತ ಹೇಗೆ ಸಹಿಸಿಕೊ೦ಡಾರು..? ಎ೦ದು ಚಿ೦ತಿಸತೊಡಗಿದ.. ಹೆ೦ಡತಿ ಎಷ್ಟು ಸಮಾಧಾನ ಮಾಡಿದರೂ ಸುಧಾರಿಸುತ್ತಿರಲಿಲ್ಲ. ಆಚೆಯಿ೦ದ ಊರಿನವರಿಗೆಲ್ಲ ವಿಷಯ ತಿಳಿದು ತನ್ನ ಮಾನ ಮರ್ಯಾದೆ ಹರಾಜಾಗುತ್ತದೆ ಎ೦ದು ಭಯಗೊ೦ಡ... ಅವಳಿಗೂ ಭಯವಾಗ ತೊಡಗಿತು. ಎಲ್ಲಿ ಪ್ರಾಣ ಕಳೆದುಕೊಳ್ಳುವ ಯೋಚನೆ ಮಾಡುವರೋ ಎ೦ದು.. ಹೇಗೋ ಬೆಳಗಾಯಿತು... ಹಕ್ಕಿಗಳು ಸುಪ್ರಭಾತ ಹಾಡಲು ಶುರುಮಾಡಿದವು..ಅಮ್ಮನಿಗೂ ಎಚ್ಚರವಾಯಿತು... ನೋಡಿದರೆ ಮನೆಯ ವಸ್ತುವೆಲ್ಲ ಚದುರಿತ್ತು.. ವಿಷಯ ಏನು.? ಏನಾಯಿತು ಎ೦ದು ಗಾಬರಿಯಿ೦ದಲೇ ಕೇಳಿದಳು.. ತ೦ಗಿ ಮನೆ ಬಿಟ್ಟು ಪ್ರಿಯಕರನೊ೦ದಿಗೆ ಹೋಗಿದ್ದು ತಿಳಿಸಿದಾಗ ಲಘುವಾಗಿ ಹೃದಯಾಘಾತಕ್ಕೆ ಒಳಗಾದರು.. ಅಮ್ಮನನ್ನು ಸಮಾಧಾನ ಪಡಿಸಿ ಪೋಲಿಸಿರಿಗೆ ಕ೦ಪ್ಲೈ೦ಟ್ ಕೊಡಲು ಹೋದ.. ಊರ ಜನರ ಬಾಯಿಗೂ ಗಾಳಿಯ೦ತೆ ವಿಷಯ ಹಬ್ಬಿತ್ತು. ಇವನಿಗೆ ಹಾದಿಯಲ್ಲಿ ಬರಲೂ ಅವಮಾನವಾಗುತ್ತಿತ್ತು.. ಸಾಲ ಕೊಟ್ಟವರು ಇದನ್ನೇ ನೆಪಮಾಡಿ ಹುಚ್ಚು ಹುಚ್ಚಾಗಿ ಚುಚ್ಚು ಮಾತನ್ನಾಡಲು ಶುರು ಮಾಡಿದರು.. "ಹೇಗೆ ಕಷ್ಟಗಳು ,ಅವಮಾನ, ನೋವು ಒ೦ದರ ಹಿ೦ದೆ ಒ೦ದರ೦ತೆ ಸರಪಳಿ ರೀತಿ ಕಟ್ಟಿ ಹಾಕುತ್ತಿದೆ ನೋಡು.." ಎ೦ದು ಹೆ೦ಡತಿಯಲ್ಲಿ ಹೇಳಿ ಅಳುತ್ತಿದ್ದ... ತಾಯಿಯೊ ಈ ಅವಮಾನ ಸಹಿಸಲಾಗದೇ ಮರಣಹೊ೦ದಿದರು... ಅದರ ನೋವು ಕೂಡ ಇವನನ್ನು ಮೂಖನನ್ನಾಗಿಸಿತು.. ಗಾಯದ ಮೇಲೆ ಭರೆ ಎಳೆದ೦ತೆ ನೋವು ಹೆಚ್ಚಾಯಿತು.. ತ೦ಗಿ ಎಷ್ಟು ದಿನವಾದರೂ ಮರಳಿ ಬರಲೇ ಇಲ್ಲ.. ಪೋಲಿಸರೂ ಕ೦ಪ್ಲೈ೦ಟನ್ನು ಬದಿಗೆ ಹಾಕಿ ಕೂತಿದ್ದರು.. ಅವಳು " ಎಲ್ಲೊ ಒ೦ದು ಕಡೆ ಸುಖವಾಗಿ ಇರಬಹುದು.." ಎ೦ದು ಎಣಿಸುವ ಹಾಗೂ ಇರಲಿಲ್ಲ. ಏನೂ ಮಾಡಲು ತೋಚದೇ ಕೈಚೆಲ್ಲಿ ಕುಳಿತು ಬಿಟ್ಟಿದ್ದ,...ಇತ್ತ ಮೊದಲ ತ೦ಗಿಯು ಗಾರ್ಭಿಣಿ ಯಾಗಿರುವ ವಿಷಯ ತಿಳಿದು ಖುಷಿಪಟ್ಟರು.. ಬಾವನು ಸುಧಾರಿಸಿದ್ದಾನೆ.. ಸರಿಯಾಗಿ ಸ೦ಸಾರ ನಡೆಸಿಕೊ೦ಡು ಹೋಗುತ್ತಿದ್ದಾನೆ ಎ೦ದೆಣಿಸಿ ಸಮಾಧಾನ ಪಟ್ಟುಕೊ೦ಡರು.. ಇದರ ಮಧ್ಯೆ ತನಗೂ ಒ೦ದು ತೊಟ್ಟಿಲು ತೂಗುವ ಆಸೆ ಇದೆ ಎ೦ದಿದಕ್ಕೆ ಇನ್ನೂ ಐದು ವರುಷಗಳು ಹೋಗಲಿ ಎ೦ದು ಮು೦ದೂಡಿದ್ದ... ವರುಷಗಳು ಉರುಳಿದ್ದವು.. ತ೦ಗಿಯೂ ಬಾಣ೦ತನಕ್ಕೆ ತವರು ಮನೆಗೆ ಬ೦ದಿದ್ದಳು.. ಎರಡನೇ ತ೦ಗಿ ಎಲ್ಲೋ ಒ೦ದು ಊರಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆ ಹುಡುಗ ಒಳ್ಳೆಯವನೇ.. ಚೆನ್ನಾಗೇ ಹೆ೦ಡತಿಯನ್ನು ನೋಡಿಕೊಳ್ಳುತ್ತಿದ್ದಾನೆ " ಎ೦ದು ದೂರದಿ೦ದ ವಿಷಯ ತಿಳಿಯಿತು.. ಅಲ್ಲೆ ಸಮಾಧಾನ ಪಟ್ಟುಕೊ೦ಡ. ಒಮ್ಮೆ ಹೋಗಿ ನೋಡಿ ಮಾತನಾಡಿಸಿಕೊ೦ಡು ಬ೦ದ. ಒ೦ದು ಹ೦ತಕ್ಕೆ ಎಲ್ಲವೂ ತಿಳಿಯಾಯಿತು.. ಇವನೂ ಅಪ್ಪನಾದ.. ಮುದ್ದಾದ ಮಗುವೂ ಮನೆಯಲ್ಲಿ ಆಟವಾಡಲು ಶುರುಮಾಡಿತ್ತು....

 ಬೇಡವೆ೦ದರೂ ಕಷ್ಟಗಳ ಅಲೆಗಳು ಬ೦ದು ಮನಸ್ಸನ್ನು ಅಪ್ಪಳಿಸುತ್ತವೆ... ಬಾಗಿಲನ್ನು ತಟ್ಟುತ್ತದೆ.. ಸ೦ತೋಷದ ಕಿರುನಗುವೂ ಮೂಡುತ್ತದೆ...ಸ೦ಭ್ರಮದ ವಾತಾವರಣವೂ  ತು೦ಬಿಕೊಳ್ಳುತ್ತದೆ.. ಗಡಿಯಾರದ ಮುಳ್ಳುಗಳ೦ತೆ ಒ೦ದರ ಹಿ೦ದೆ ಒ೦ದರ೦ತೆ ಬರುವ ಎಲ್ಲಾ ನೋವು-ನಲಿವುಗಳನ್ನು ಎದುರಿಸುವ ಶಕ್ತಿ, ಧೈರ್ಯ ನಮಗಿರಬೇಕಷ್ಟೇ... ನಮ್ಮ ಜೀವನ ಹೇಗೆ ಎನ್ನುವುದನ್ನು ಕಾಲವೇ ನಿರ್ಧರಿಸುತ್ತದೆ ...

- ಶ್ರೀಮತಿ ಸಿ೦ಧು ಭಾರ್ಗವ್

ಹಾಡು ಮನಸಿನಲಿ ವೀಣೆ ನುಡಿಸಿದೆ

ಹಾಡು : ಮನಸಿನಲಿ ವೀಣೆ ನುಡಿಸಿದ

ಮನಸಿನಲಿ ನನ್ನ ಮನಸಿನಲಿ ತಿಳಿಸದೇನೆ ನುಸುಳಿಬಿಟ್ಟ..
ಮನಸಿನಲಿ ಈ ಮನಸಿನಲಿ ಪ್ರೀತಿವೀಣೆ ನುಡಿಸಿಬಿಟ್ಟ..
~
ನನಗೇನಾಗಿದೆ
ಮನ ಕುಣಿದಾಡಿದೆ,
ನನ್ನವನೆಂಬುದೇ ಕೊಂಚ ಸೊಗಸಾಗಿದೆ..
~
ನೀ ದೂರದಲೇ ನನ್ನ
ನೋಡಿದರೇನೇ ಮನ ನಾಚುವುದು..
ನೀ ಸನಿಹ ಬಂದರೆ
ಸಾಕೀಗ ಮೈನಡುಗುವುದು..
~
ನಿನ್ನ ಒಂದು ಮಾತಿಗೆಂದೇ
 ನಾ ಕಾಯುತಲಿರುವೆ..
ನಿನ್ನ ಒಂದು ಸ್ಪರ್ಶಕ್ಕೆಂದೇ
ಹಾತೊರೆಯುತಲಿರುವೆ..
~
ನಿನ್ನ ಒಂದು ನಗುವು
ಮಗುವಿನಂತ ಮೊಗವು
ಕಾಡುವುದು ಪ್ರತಿಕ್ಷಣವು..
ನಿನ್ನ ಹುಸಿಕೋಪ
ನಿನ್ನ ಗಡಸು ದನಿಯೂ
ಗುಯ್ ಗುಡುವುದು ದಿನವೂ..
‌~~~
- #ಸಿಂಧುಭಾರ್ಗವ್. 🍁

ಕತೆ- ಪರಿಶ್ರಮಕ್ಕೆ ಸಂದ ಜಯ

ಪರಿಶ್ರಮಕ್ಕೆ ಸಂದ ಜಯ

ರಾಮು ತಂದೆ ಇಲ್ಲದ ಬಡವರ ಮನೆ ಹುಡುಗ. ಅಮ್ಮ ಸಾಲಸೋಲ ಮಾಡಿ ಓದಿಸುತ್ತಿದ್ದಳು. ಅವನಿಗೋ ಇಂಜಿನಿಯರಿಂಗ್ ಓದಿ, ಪ್ರಸಿದ್ಧ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಬೇಕೆಂಬ ಆಸೆ. ಆಗಾದರೂ ನಮ್ಮ ಕಷ್ಟಗಳಿಗೆಲ್ಲ ಮುಕ್ತಿ ಸಿಗಬಹುದು ಎಂಬ ಬಯಕೆ. ಅದಕ್ಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದ. ಶಿಸ್ತಿನ ಜೀವನ ನಡೆಸುತ್ತಾ ,ಓದಿನ ಕಡೆ ಗಮನ ಕೊಡುತ್ತಾ ,ಅಮ್ಮನ ಕೆಲಸಕ್ಕೂ ನೆರವಾಗುತ್ತಿದ್ದ.
ನೆರಮನೆಯ ಸೋಮುವಿಗೆ ಓದಿನಲ್ಲಿ ಆಸಕ್ತಿಯೂ ಕಡಿಮೆ, ಹಾಗೆ ಕಷ್ಟವೆಂದರೆ ಏನೂ ಎಂದು ಅರಿವಿಗೆ ಬಾರದಂತೆ ತಂದೆತಾಯಿ ಬೆಳೆಸಿದ್ದರು. ಅವನು ಮುಂದೆ ಏನಾಗುತ್ತಾನೋ ಎಂಬ ಆತಂಕ ಮನೆಮಾಡಿತ್ತು. ಒತ್ತಾಯಿಸಿ ಸಿ.ಇ.ಟಿ ಪರೀಕ್ಷೆ ಬರೆಯಲು ಹೇಳಿದರು. ಇಂಜಿನಿಯರಿಂಗ್ ಸೀಟು ಸಿಕ್ಕಿತು. ರಾಮು ಕೂಡ ಅದೇ ಕಾಲೇಜಿನಲ್ಲಿ ಸೀಟು ಪಡೆದ. ಇಬ್ಬರೂ ಒಂದೇ ರೂಮಿನಲ್ಲಿ ತಮ್ಮ ಕಾಲೇಜು ದಿನಗಳನ್ನು ಕಳೆಯಲು ಶುರುಮಾಡಿದರು. ಗಂಭೀರವಾಗಿ ಓದುತ್ತಿದ್ದ ರಾಮುವೂ ಎಲ್ಲ ಸೆಮಿಸ್ಟರ್ ನಲ್ಲಿ ಪಾಸಾದ. ಆದರೆ ಸೋಮು , ಅಲ್ಲಿಯೂ ಆಸಕ್ತಿ ತೋರುತ್ತಿರಲಿಲ್ಲ. ಹೆತ್ತವರ ಬಲವಂತಕ್ಕೆ ಅಲ್ಲಿ ಬಂದು ಕುಳಿತ ಹಾಗೆ ವರ್ತಿಸುತ್ತಿದ್ದ. ಇಷ್ಟವಿದ್ದರೆ ತರಗತಿಗೆ ಹೋಗುತ್ತಿದ್ದ. ಪ್ರತಿ ಇಂಟರ್ನಲ್ಸ್ ನಲ್ಲಿ ಪಾಸಾಗುವುದು ಅನುಮಾನವಿತ್ತು. ಹಾಗೆ ಕೆಟ್ಟ ಗೆಳಯರ ಸಹವಾಸದಿಂದ ಧೂಮಪಾನ ,ಮದ್ಯಪಾನ ಎಲ್ಲವನ್ನೂ ಮೈಗಂಟಿಸಿಕೊಂಡಿದ್ದ. ಅವನ ಈ ವರ್ತನೆ ರಾಮುವಿಗೆ ಹಿಡಿಸದೇ ಹಾಸ್ಟೇಲಿನಲ್ಲಿ ತಾನು ಬೇರೆ ರೂಮಿಗೆ ಬದಲಾಯಿಸಿಕೊಂಡ. ಕಷ್ಟಪಟ್ಟು ಓದಿ ಪ್ರತೀ ಸೆಮಿಸ್ಟರ್ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸುತ್ತಾ ಬಂದ. ಅಮ್ಮನಿಗೂ ತಿಂಗಳಿಗೊಮ್ಮೆ ಪತ್ರ ಬರೆದು ಎಲ್ಲವನ್ನೂ ಖುಷಿಯಿಂದ ಹಂಚಿಕೊಳ್ಳುತ್ತಿದ್ದ. ಜೊತೆಗೆ ತಾಯಿ ಸೋಮುವಿನ ಬಗ್ಗೆ ಕೇಳಿದಾಗ "ಅವನ ಬಗ್ಗೆ ಏನು ಹೇಳುವುದು , ಸ್ವಲ್ಪವೂ ಬದಲಾವಣೆ ಇಲ್ಲಮ್ಮ.." ಎಂದು ಸುಮ್ಮನಾಗುತ್ತಿದ್ದ. ಇದರ ಮಧ್ಯೆ ಸೋಮು ಪ್ರಶ್ನೆ ಪತ್ರಿಕೆ ಕದ್ದನೆಂದು ಕಾಲೇಜಿನಿಂದ ಹೊರಹಾಕಿದರು. ಹೆತ್ತವರ ಕನಸು ನೀರಿನಲ್ಲಿ ಹೋಮ ಮಾಡಿದಂತಾಯಿತು. ಹೇಗೋ ಕಾಲೇಜಿನಲ್ಲಿ ಬೇಡಿಕೊಂಡು ಕೊನೆಯ ಸೆಮಿಸ್ಟರ್ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟರು. ಸ್ವಲ್ಪ ಬುದ್ಧಿ ಬಂದ ಸೋಮುವಿಗೆ , ಬಾಲ್ಯದ ಗೆಳೆದ ರಾಮುವಿನ ನೆನಪಾಯಿತು. ಅವನ ಸಹಾಯ ಪಡೆದಾದರೂ ಓದಿ ಪಾಸಾಗಬೇಕು ಎಂದ ಪಣತೊಟ್ಟ. ರಾಮುವು ಪಕ್ಕದ ಕೋಣೆಯಲ್ಲಿ ಓದುತ್ತಿದ್ದವನನ್ನು ಮಾತನಾಡಲು ಕರೆದ. "ನನ್ನೆಲ್ಲ ತಪ್ಪಿನ ಅರಿವಾಗಿದೆ. ನಿನ್ನ ಮನಸಿಗೂ ನೋವುಂಟು ಮಾಡಿದ್ದೆ. ನನ್ನನ್ನು ಕ್ಷಮಿಸಿ ಬಿಡು " ಎಂದು ಬೇಡಿಕೊಂಡ. ಅವನು ಮನಕರಗಿ ಕ್ಷಮಿಸಿ ಓದಲು ಸಹಾಯ ಮಾಡಿದ. ಹಗಲು ರಾತ್ರಿ ಎನ್ನದೇ ಇಬ್ಬರೂ ಕಷ್ಟಪಟ್ಟು ಓದಿದರು. ಬಾಲ್ಯದ ನೆನಪುಗಳನ್ನೆಲ್ಲ ಮೆಲುಕು ಹಾಕುತ್ತಾ ಖುಷಿಖುಷಿಯಾಗಿ ಓದುತ್ತಿದ್ದರು. ಅವನ ಈ ಬದಲಾವಣೆಯನ್ನು ತರಗತಿಯ ಅಧ್ಯಾಪಕರು ನೋಡಿ ಸಂತೋಷ ಪಟ್ಟರು.
*
ಕೊನೆಗೂ ಸತ್ವಪರೀಕ್ಷೆಯ ದಿನ ಹತ್ತಿರ ಬಂದಿತು. ಎಲ್ಲರೂ ಪರೀಕ್ಷಾ ಹಾಲಿನಲ್ಲಿ ಗಂಭೀರವಾಗಿ ಕುಳಿತಿದ್ದರು. ಅದೆಷ್ಟೋ ಪರೀಕ್ಷೆಗಳ ಬರಿಯದೇ ತೇಲಿಸಿಬಿಟ್ಟಿದ್ದ ಸೋಮುವಿಗೆ ಒಮ್ಮೆ ಕಣ್ಣು ತೇವಗೊಂಡಿತು. ಪ್ರಶ್ನೆ ಪತ್ರಿಕೆಯ ಪಡೆದ ಸೋಮು ಗೊತ್ತಿದ್ದ ಪ್ರಶ್ನೆಗಳಿಗೆಲ್ಲ ಉತ್ತರಿಸಿ ಹಾಲಿನಿಂದ ಹೊರನಡೆದ. ರಾಮುವೂ ಎಲ್ಲವೂ ಸುಲಭವಾಗಿರುವ ಪ್ರಶ್ನೆಗಳ ಬಂದಿದ್ದವು ಎಂದು ಖುಷಿಯಿಂದ ಪರೀಕ್ಷೆ ಬರೆದು ಹೊರನಡೆದ.
*
ತಿಂಗಳುಗಳು ಉರುಳಿದವು. ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದರು. ಸೋಮುವಿಗೆ ಫಲಿತಾಂಶ ನೋಡುವ ಧೈರ್ಯವಿರಲಿಲ್ಲ. ಪಾಸಾಗುತ್ತೇನೋ ಇಲ್ಲವೋ ಎಂಬ ಭಯಕಾಡುತ್ತಿತ್ತು. ಸೋಮು ಎಲ್ಲದರಲ್ಲೂ ಪಾಸಾಗಿದ್ದ.‌ ಅದಕ್ಕೆ ಹೇಳುವುದು ನಮ್ಮಲ್ಲಿ ಹಟವಿರಬೇಕು. ಪಣತೊಟ್ಟು ಹಿಡಿದ ಕೆಲಸವನ್ನು ಸಾಧಿಸಬೇಕು. ಆಗಲೇ ಫಲಿತಾಂಶ ಚೆನ್ನಾಗಿ ಬರುವುದು..

- ಸಿಂಧುಭಾರ್ಗವ್ 

ಜನುಮದ ಜೋಡಿ ಕನ್ನಡ ಸಿನೇಮಾ

(@)(@)

(@)()@)

ಸಿನೇಮಾ: ಜನುಮದ ಜೋಡಿ (೧೯೯೬)

ಟಿ.ಎಸ್ ನಾಗಾಭರಣ ರ ನಿರ್ದೇಶನದ, ವಿ.ಮನೋಹರ್ ಅವರ ಸಂಗೀತದ " #ಜನುಮದ_ಜೋಡಿ " ಸಿನೇಮಾ (ಗುಜರಾತಿ ಮಲೇಲಾ ಜೀವ ನೋವೆಲ್ ನಿಂದ ಆಧಾರಿತ-೧೯೯೬) ನಾನು ಆರೇಳು ವರುಷದವಳಾಗಿದ್ದಾಗ ನೋಡಿದ್ದೆ. ನಮ್ಮ ತಂದೆಯವರು ಸಂಸಾರ ಸಮೇತ ಕರೆದುಕೊಂಡು ಹೋಗಿ ತೋರಿಸಿದ ಸಿನೇಮಾ.. ಇಪ್ಪತ್ತು ವರುಷಗಳೇ ಕಳೆದರೂ ಅದರ ಒಂದೊಂದು ಹಾಡು ಇನ್ನೂ ಬಾಯಿಪಾಠವಾಗಿ ಹಾಡುತ್ತಿದ್ದೇನೆ.. ನಾವು ಹೋಟೆಲ್ ನಲ್ಲಿದ್ದಾಗ ದಿನವೂ ಆಕಾಶ್ ಆಡಿಯೋ ಕಂಪೆನಿಯ ಕ್ಯಾಸೆಟ್ ನಿಂದ ಆ ಹಾಡುಗಳೆಲ್ಲವನ್ನೂ ಕೇಳಿ ಆನಂದಿಸುತ್ತಿದ್ದೆವು. ಅಷ್ಟು ಪ್ರಭಾವ ಬೀರಿದ ಹಾಡುಗಳು. ಕಥಾನಾಯಕಿ ಕನಕ(ಶಿಲ್ಪಾ) ಎರಡು ಜಡೆ, ಕನಕಾಂಬರ ಹೂ ಮುಡಿದು ಬುಗ್ಗೆ ಕೈ ಬ್ಲೌಸ್ ಉದ್ದಲಂಗ ಧರಿಸಿ ಸಿಂಗಾರಿ ತರಹ ಕಾಣಿಸುತ್ತಿದ್ದಳು.
ಕಥಾನಾಯಕ ಕೃಷ್ಣ(ಶಿವರಾಜ್ ಕುಮಾರ್) ಊರಿಗೆ ಪ್ರೀತಿಯ ಮಗನಾಗಿದ್ದ. 
ಹಳ್ಳಿಯ ಸೊಗಡನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಮೇಲುಜಾತಿ-ಕೀಳುಜಾತಿ ನಡುವಿನಲಿ ಅರಳಿದ ಪ್ರೀತಿ ಹೂವನ್ನು ಸುಟ್ಟುಹಾಕುವ ಎಲ್ಲಾ ಪ್ರಯತ್ನ ನಡೆಸುವರು. ಮಲತಾಯಿ ಕುಡುಕ ತಂದೆವಯಸ್ಸಿನ ಹೆಂಡತಿ ಬಿಟ್ಟ ಅಣ್ಣನಿಗೇ ಮದುವೆ ಮಾಡಿಸಲು ಮುಂದಾದಾಗ ಈ ಜೋಡಿ ಓಡಿಹೋಗಿ ಮದುವೆ ಯಾಗಲು ನಿರ್ಧರಿಸುತ್ತಾರೆ. ಅದಕ್ಕೆ ಅವನ ಸ್ನೇಹಿತರೂ ಸಹಾಯಮಾಡುತ್ತಾರೆ.. ಆದರೆ ಮೋಸಹೋಗಿ ಬಲವಂತವಾಗಿ ಎಡಬಿಡಂಗಿ ಅಂದಾಣಿಗೆ (ಕರಿಬಸವಯ್ಯ ) ಕನಕಳನ್ನು ತಂಗಪ್ಪ & ಸಿಂಗಾರಪ್ಪ  ಮದುವೆ ಮಾಡಿಸಿ ಬಿಡುವ.. ಇದರಿಂದ ಮನನೊಂದು ಕೃಷ್ಣ ಊರು ಬಿಟ್ಟು ತೋಟದಲ್ಲೇ ಇರುವನು. ಏನೋ ಸಾಧಿಸಿದ್ದೇವೆ ಎಂದು ಬೀಗಿ ತಂಗಪ್ಪ ನ ಕೊಲೆಮಾಡಿ ಅದರ ತಪ್ಪನ್ನು ಕೃಷ್ಣನ ಮೇಲೆ ಹಾಕುವ ಪ್ರಯತ್ನ ಮಾಡಿವರು. ಆದರೆ ನಿಜ ವಿಷಯ ಗೊತ್ತಾಗಿ ಜೈಲು ಸೇರುವನು  ಕುತಂತ್ರಿ ಸಿಂಗಾರಿ ಗೌಡ ಮತ್ತು ಅವನ ತಂದೆ.. ಹಾಗೂ ಹೀಗೂ ಅನುದಿನ ಅಪವಾದ ಕೇಳಿಕೇಳಿ ಕೊನೆಗೆ ನಾಯಕಿ ಸಾಯಲು ವಿಷ ಬೆರೆಸಿದ ರೊಟ್ಟಿ ತಯಾರಿಸುತ್ತಾಳೆ. ಆದರೆ ಅದನ್ನು ಎಡಬಿಡಂಗಿ ಗಂಡ ತಿಂದು ಸಾವನ್ನಪ್ಪುತ್ತಾನೆ.. ಗಂಡನನ್ನು ಕೊಂದಳೆಂಬ ಅಪವಾದಕ್ಕೆ ಮತ್ತೆ ಗುರಿಯಾದ ಕಾರಣ ಊರಿನಲ್ಲಿ ಬಹಿಷ್ಕಾರ ಹಾಕಿದ್ದಕ್ಕೆ ಹುಚ್ಚುಹಿಡಿಯುತ್ತದೆ. ಕೃಷ್ಣ ಊರು ಬಿಟ್ಟು ಹೋಗುತ್ತಾನೆ. ಕೊನೆಗೆ ಜಾತ್ರೆ ದಿನ ಅವರಿಬ್ಬರೂ ಒಂದಾಗುತ್ತಾರೆ.. ಒಂದೇ ವರುಷದೊಳಗೆ ಎರಡು ಪ್ರೀತಿಸಿದ ಜೀವಗಳಿಗೂ ಮತ್ತು ಆ ಊರಿನಲ್ಲಿಯೂ ಏನೇನೆಲ್ಲಾ ನಡೆದುಹೋಗುತ್ತದೆ ಎಂಬುದೇ ಕಥೆ..
ಅಚ್ಚಳಿಯದೇ ಉಳಿಯುವ ಸಿನೇಮಾ.. ನಾನು ಇನ್ನೊಮ್ಮೆ ನೋಡಿದೆ..
- ಸಿಂಧುಭಾರ್ಗವ್ ..

(@)(@)


ಕವಿತೆ- ಕರಾಳತೆ

ಕವಿತೆ : ಕರಾಳತೆ

ನೇಹದಲ್ಲಿ ಕಳಪೆಯಿಲ್ಲ
ಮಾತಿನಲ್ಲಿ ಮೋಸವಿಲ್ಲ..
ಮರಿಯು ಗೂಡಿನಲ್ಲಿಲ್ಲ,
ತಾಯಿಹಕ್ಕಿ ಕಾಣುತ್ತಿಲ್ಲ..

ಹದ್ದು ಬಂದ ನೆರಳಿದೆ
ಏನು ಮಾಡಿತೋ ? ಅರಿಯದೆ..
ರೆಕ್ಕೆಪುಕ್ಕ ಚದುರಿದೆ
ಕಿರುಚಿದ ದನಿ ಆವರಿಸಿದೆ..

ತಾಯಿಹಕ್ಕಿ ಬಗೆಯ ಅರಿತು
ಮುಗಿಲ ಕಡೆಗೆ ಹಾರಿತು..
ಬುವಿಯ ಆಳಕಿಳಿದು ಹುಡುಕಿ
ಮುದುಡಿ ನೊಂದು ಕುಳಿತಿತು..

ಕೊನೆಗೂ ಸಿಕ್ಕ ರಕ್ತಸಿಕ್ತ
ಕರುಳಬಳ್ಳಿಯ ದೇಹವು..
ನೆರೆದವರ ಕಂಪಿಸಿತು
ಮುಗಿಲು ಮುಟ್ಟಿದ ರೋಧನವು..

- ಸಿಂಧುಭಾರ್ಗವ್. 🌷‌ 

ಲೇಖನ- ಬಣ್ಣದ ಚಿಟ್ಟೆ ಹಿಡಿಯುತಾ


(@)(@)
ಬಣ್ಣದ ಚಿಟ್ಟೆಯ ಹಿಡಿಯುತಾ

ಮದುವೆ ಎನ್ನುವುದು ನಿಂತಿರುವುದೇ ನಂಬಿಕೆ ಮೇಲೆ. ಆದರೆ ಈಗಿನ ಇಂಟರ್ನೆಟ್ ಕಾಲದಲ್ಲಿ ಯಾರ ಮೇಲೂ ನಂಬಿಕೆ ಮೂಡಲೂ ಸಾಧ್ಯವಾಗುತ್ತಿಲ್ಲ..
**

ಹಿಂದಿನ ಕಾಲದಲ್ಲಿ "ಹುಡುಗ ಹಿಡಿದ ಕೆಲಸ ಮಾಡದೇ ಬಿಡುವವನಲ್ಲ, ಸಾಧಿಸುವ ಛಲವಿದೆ, ಒಳ್ಳೇ ಗುಣವಿದೆ. ಈಗ ಕಷ್ಟ ಇರಬಹುದು, ಮುಂದೆ ಅವನೂ ಶ್ರೀಮಂತ ಆಗ್ತಾನೆ ನೋಡು. ನಿಷ್ಟಾವಂತ, ನಂಬಿಕಸ್ಥ, ನೀನು ಇವನನ್ನ ಮದುವೆ ಆಗಿ ಒಳ್ಳೆಯ ಜೀವನ ನಡೆಸಬಹುದಮ್ಮ.. ಒಪ್ಕೋ ವರನನ್ನ..." ಎನ್ನುತ್ತಿದ್ದರು.. ಹಿರಿಯರ ಮಾತಿಗೆ ಒಪ್ಪಿ ಹುಡುಗಿಯೂ ತಲೆಯಾಡಿಸಿ ಮದುವೆ ಆಗುತ್ತಿದ್ದಳು. ಕಷ್ಟದಲ್ಲೂ ಸುಖದಲ್ಲೂ ಜೊತೆಗಿದ್ದು ಅವನ ಏಳಿಗೆಯನ್ನು ಆನಂದಿಸುತ್ತಿದ್ದಳು. ಅತ್ತೆಮಾವನ ಸೇವೆ ಮಾಡುವುದರ ಜೊತೆಗೆ ಮನೆಯಲ್ಲಿದ್ದ ಗಂಡನ ಒಡಹುಟ್ಟಿದವರನ್ನೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದಳು. ಆದರೆ ಈಗ,
ಪರವೂರಿನಲ್ಲಿ ಕೆಲಸ , ಕಾರು , ಬಂಗಲೆ, ಲಕ್ಷ ಸಂಬಳ, ಒಬ್ಬನೇ ಮಗ, ಅತ್ತೆಮಾವರಿಂದ ದೂರವಿರಬೇಕು, ತಂಗಿಯಿದ್ದರೂ ಅವಳು ಸೆಟಲ್ ಆಗಿರಬೇಕು.. ಹೀಗೆ ಎಲ್ಲವೂ ವ್ಯವಸ್ಥಿತವಾಗಿದ್ದರೆ ಆ ಹುಡುಗನ ಒಪ್ಪುವರು. ಅವನ ಗುಣವನ್ನಾಗಲೀ,‌ ಮನೆಯವರನ್ನಾಗಲಿ ನೋಡಲು ಹೋಗುವುದಿಲ್ಲ..
ಈಗಿನ ವಿದೇಶಿ ಕಂಪೆನಿಯಲ್ಲಿ ಯಾವಾಗ ತೆಗೆದು ಬಿಸಾಕುವರೋ ಗ್ಯಾರೆಂಟಿ ಇಲ್ಲ. ಮನೆಯಲ್ಲಿರುವ ವಸ್ತು ಒಡವೆ ಎಲ್ಲದರಲ್ಲಿಯೂ ಇ.ಎಮ್.ಐ ಹಣೆಪಟ್ಟಿ ಅಂಟಿಸಿಬಿಟ್ಟಿರುತ್ತಾರೆ. ಯಾವಾಗ ಏನಾಗುತ್ತದೆಯೋ ಹರಿಯೇ ಬಲ್ಲ. ಆದರೂ ಅಂತಹ ಹುಡುಗನನ್ನೇ ಹುಡುಕುವರು.. ಟೀಚರ್, ಬ್ಯಾಂಕ್ ಕೆಲಸದವರು, ಲೆಚ್ಚರ್, ಇನ್ಯಾವುದೇ  ಕೆಲಸದವರೋ ಅಥವಾ ಊರಿನಲ್ಲೇ ಉದ್ಯೋಗ ಹುಡುಕಿಕೊಂಡು ನೆಮ್ಮದಿ ಜೀವನ ನಡೆಸುತ್ತಿರುವವರೋ ಕಣ್ಣಿಗೆ ಕಾಣರು.
**
ಮದುವೆ ಎನ್ನುವುದು ನಿಂತಿರುವುದೇ ನಂಬಿಕೆ ಮೇಲೆ. ಆದರೆ ಈಗಿನ ಇಂಟರ್ನೆಟ್ ಕಾಲದಲ್ಲಿ ಯಾರ ಮೇಲೂ ನಂಬಿಕೆ ಮೂಡಲೂ ಸಾಧ್ಯವಾಗುತ್ತಿಲ್ಲ..
**
ಒಂದು ವಧು/ವರನ ಹೆಸರು ಜಾತಕ ಬಂದಿತೆಂದರೆ ಮೊದಲು ಹುಡುಕುವುದು ಮುಖಹೊತ್ತಿಗೆಯಲ್ಲಿ. ಅಲ್ಲಿ ಅವರ ಪ್ರೋಫೈಲ್, ಫೋಟೋಸ್, ಸೆಲ್ಫೀಸ್ ಅವರು ಹಾಕುವ ಪೋಸ್ಟ್ಗಳನ್ನು ನೋಡಿಯೇ ಇವರು ಯಾವ ತರಹದ ಹುಡುಗ/ಗಿ ಎಂದು ವ್ಯಾಖ್ಯಾನವನ್ನು ನೀಡುತ್ತಾರೆ. ಅಲ್ಲದೇ ಒಂದು ಹುಡುಗಿ/ಗನ ಫೋಟೋ ಕೈಗೆ ಸಿಕ್ಕಿತೆಂದರೆ ತನ್ನ ಬಳಗದ ಸ್ನೇಹಿತರಿಗೆಲ್ಲಾ ಮುಕ್ತವಾಗಿ ತೋರಿಸಲು ವಾಟ್ಸ್ಅಪ್ ಇದೆ. ಅಲ್ಲಿ ಒಬ್ಬ ಒಂದು ಕೆಟ್ಟ ಕಮೆಂಟ್ ಮಾಡಿದರೂ ಬಂದ ವರ/ಧುವನ್ನು ಬೇಡವೆಂದು ತಿರಸ್ಕರಿಸಿ ಬಿಡುತ್ತಾರೆ. ಇದರಿಂದ ಮದುವೆ ಆಗದೇ ವಯಸ್ಸು ಓಡಿಹೋಗುತ್ತಲೇ ಇರುತ್ತದೆ.
ನಾನೇ ಸನಿಹದಿಂದ ಕೇಳಿಸಿದಂತೆ, "ಅವನ ಎಫ್.ಬಿ ಫೋಟೋಸ್ ನೋಡು, ವಿಕ್ ಎಂಡ್ ಸುತ್ತೋದೇ ಕೆಲ್ಸವೇನೋ.. ಒಂದಷ್ಟು ಹುಡ್ಗೀರು ಫ್ರೈಂಡ್ಸ್  ಬೇರೆ.. ನನಗೆ ಆ ಹುಡುಗ ಬೇಡ.."
"ಅದು ಅವಳ ಬಾಯ್ ಫ್ರೈಂಡ್ ಇರಬೇಕು ಅವನು ಕಮೆಂಟ್ ಮಾಡುವ ರೀತಿ ನೋಡಿದ್ರೆ ಯಾಕೋ ಅನುಮಾನ ಬರ್ತಾ‌ ಇದೆ, ನನಗೆ ಈ ಹುಡುಗಿ ಬೇಡ.."
"ಸಾವಿರಸಾವಿರ ಸ್ನೇಹಿತರು ಸಾಲದ್ದಕ್ಕೆ ಫೋಲೋವರ್ಸ್ ಬೇರೆ, ಎಷ್ಟು ಹುಡುಗೀರ್ ಗೆ ಫ್ಲರ್ಟ್ ಮಾಡಿದ್ದಾನೋ..? ನನಗೆ ಈ ಹುಡುಗ ಬೇಡ.."
ಅದು ಸರಿ ಇಲ್ಲ ,ಇದು ಸರಿ ಇಲ್ಲ.. ಎಂದು ತಾವೇ ನಿರ್ಧಾರ ಮಾಡುವಷ್ಟು ಮುಂದುವರಿದ್ದಾರೆ.. ಅಷ್ಟಲ್ಲದೇ ಈಗೆಲ್ಲಾ ರೆಸ್ಯೂಮ್ ನೋಡಿ ಹುಡುಗನನ್ನು ಬೇಡ ಹೇಳುವ ಕಯಾಲಿ ಶುರುವಾಗಿದೆ.
"ನಾನು MBA Gold Medalist, ಅವನು ಇಂಜಿನಿಯರಿಂಗ್ ಮಾಡಿದ್ದು, ಮ್ಯಾಚ್ ಆಗಲ್ಲ.." , "ಅವನು MCom  ಮಾಡಿದ್ದು ಬೇಡ, ನಾನು MBA ಮಾಡಿದವಳು.." , "ಅವನಿಗೆ ಒಳ್ಳೆ ಕಂಪೇನಿಲಿ ಜಾಬ್ ಇಲ್ಲ.. ಎರಡು ಕಂಪೆನಿ ಬದಲಿಸಿದ್ದಾನೆ, ಸಂಬಳವೂ ಕಡಿಮೆ ಬೇಡ.." , ಅವಳು ಮದುವೆ ಆದ ಮೇಲೆ ಕೆಲ್ಸ ಬಿಡೋದಾದರೆ ಓಕೆ, ಇಲ್ಲಾಂದ್ರೆ ಬೇಡ.." , "ಅವನಿಗೆ ಸ್ವಂತ ವೆಹಿಕಲ್ ಇಲ್ಲ, ಮನೆ ಇಲ್ಲ ಆಫ಼ೀಸ್ ಕ್ಯಾಬ್ ಲಿ ಹೋಗಿ ಬರ್ತಾನೆ, ಯಾರ್ದೋ ರೂಮಲ್ಲಿ ಇರ್ತಾನಂತೆ, ಬೇಡಾ ನನಗೆ.." ಹೀಗೆ.... ಬೇಡ ಎನ್ನಲು ಹುಡುಕುವ ಪಟ್ಟಿ ಬೆಳೆಯುತ್ತಲೆ ಇರುತ್ತದೆ..ಇದೆಲ್ಲಾ ಸುಳ್ಳು ಎಂದು ಭಾವಿಸುವುದೇ ಬೇಡ, ಕಣ್ಣಾರೆ ನೋಡಿದ್ದಕ್ಕೆ ಬರೆಯುತ್ತಿರುವುದು. ಯಾಕೆ ಹೀಗೆ ? ಹಿರಿಯರು ಇರುವುದಾದರೋ ಯಾಕೆ? ಅವರ ಮಾತಿಗೆ ಬೆಲೆ ಇಲ್ಲವೇ? ಅಷ್ಟಕ್ಕೂ ನಂಬಿಕೆಯೇ ಇಲ್ಲದ ಮೇಲೆ ಮದುವೆ ಆಗಿ ಇವರು ಜೀವನ ನಡೆಸುವುದಾದರೂ  ಹೇಗೆ..?? ನಾನೂ ದುಡಿಯುವೆ, ನಾನೂ ಸಬಲೆ ಎಂದು ಕೈತುಂಬಾ ಸಂಬಳ ಉದ್ಯೋಗ ಕ್ಷೇತ್ರದಲ್ಲಿ ಮಿಂಚುವುದೇ ಮುಖ್ಯವಾಗುತ್ತದೆ.. ಸಂಸಾರ ಸಸಾರವಾಗುತ್ತದೆ.. ಹೊಂದಾಣಿಕೆ, ತ್ಯಾಗಕ್ಕೆ ಜಾಗವೇ ಇರುವುದಿಲ್ಲ, ಮಕ್ಕಳಿರುವುದೇ ಅನುಮಾನ, ಹುಟ್ಟಿದ ಮಕ್ಕಳೂ ಅನಾಥರಾಗುತ್ತಾರೆ. ಎನಿಸಿದರೆ ಭಯವಾಗುತ್ತದೆ. ಏನೋ ಪಡೆದ ಸಂತಸದಲ್ಲಿ ಮುಖ್ಯವಾಗಿ ಬೇಕಾದುದನ್ನ ಕಳೆದುಕೊಳ್ಳುತ್ತಾರೆ..

- ಸಿಂಧುಭಾರ್ಗವ್ 

ಲೇಖನ- ನೀನೊಂದು ಮುಗಿಯದ ಮೌನ

(@)(@)(@)


(@()@)
ನೀನೊಂದು ಮುಗಿಯದ ಮೌನ,
ನಾ ಹೇಗೆ ತಲುಪಲಿ‌ ನಿನ್ನ..
ನೀನೊಂದು ಕಡಲಿನ ಧ್ಯಾನ
ನಾ ಹೇಗೆ ಬೆರೆಯಲಿ ನಿನ್ನ..

ನಿಜ ನೀ ನನಗೆ ಅರ್ಥವಾಗುತ್ತಲೇ ಇಲ್ಲ. ನೀನು ಹೀಗೇ.. ಎಂದು ಕೊಂಡರೆ ಹಾಗಿರುವುದಿಲ್ಲ. ಹೀಗಲ್ಲ ಎಂದೆನಿಸಿದರೆ ಹಾಗೆ ಬದಲಾಗಿರುತ್ತೀ. ಹೀಗೆ ಹಾಗೇ ಅಯ್ಯೋ..!! ನನ್ನ ಮನಸ್ಸನ್ನು ಗೊಂದಲದ ಗೂಡಾಗಿಸಿ ಬಿಟ್ಟೆ  ನೋಡು. ನಿನ್ನ ಜೊತೆ ಮಾತನಾಡಬೇಕು ನಾಲ್ಕು ಹೆಜ್ಜೆ ಕೈಕೈ ಹಿಡಿದು ನಡೆಯಬೇಕು, ನಿನ್ನ ಪ್ರೀತಿಯ ನಿನ್ನ ಬಾಯಿಯಿಂದಲೇ ಕೇಳಿಸಿಕೊಳ್ಳಬೇಕು, ನಿನ್ನ ತರಲೆ,ತುಂಟತನವನ್ನು ಅನುಭವಿಸಬೇಕು.. ಏನೆಲ್ಲ ಕನಸುಗಳು. ನಿನ್ನ ನೋಡಿದ ಮೊದಲ ದಿನದಿಂದ ಇಂದಿನ ವರೆಗೂ ಕನಸುಗಳ ಪಟ್ಟಿ ಬೆಳೆಯುತ್ತಲೇ ಇದೆ.ಆದರೆ ನೀನು ಮಾತ್ರ ಕೈಗೆ ಸಿಗದ ಅಂಬರಕೆ ಚಾಚಿದ ಕುಸುಮವಾದೆ. ಹುಣ್ಣಿಮೆಗೆ ಬಂದು ಮನ ತಣಿಸುವ ಅಮವಾಸ್ಯೆಗೆ ಮಾಯವಾಗುವ ಚಂದಿರನಾದೆ. ನನ್ನ ಪ್ರೀತಿಯ ಪರಿಯ ಹೇಳಿಕೊಳ್ಳಲು ಆತುರವಿದೆ.. ನಿನ್ನೊಂದಿಗೆ ಬೆರೆಯಲು ಕಾತುರವಿದೆ. ಆದರೆ ನಿನಗೆ ಸಮಯವೇ ಇಲ್ಲ. ಅದೊಂದೇ ಕಾರಣ ನೀನನಗೆ ನೀಡುವುದು.. ನಿನ್ನ ಮೇಲೆ ರೇಗಾಡಬೇಕು ಎಂದೆನಿಸುತ್ತದೆ.. ನೀ ಸನಿಹವಿಲ್ಲ. ನನ್ನ ಕೋಪ ತಣಿಸಲು ನೀ ತೊಡೆಯ ಮೇಲೆ ಮಲಗಿಸಿಕೊಂಡು ತಲೆ ಸವರಬೇಕು ಎಂದೆನಿಸುತ್ತದೆ, ನೀ ಸನಿಹವಿಲ್ಲ.. ದೂರದೂರದಲೇ ವಿರಹಬೇಗೆಯಿಂದ ಸುಡುತಿದೆ ಒಡಲು. ಪ್ರೀತಿ ಎಂದರೆ ಹೀಗೇನಾ.. ಎಲ್ಲರೂ ಪಾರ್ಕು, ಬೀಚು ಎಂದು ಸುತ್ತುತ್ತಾರೆ? ನಮಗೇಕೆ ಸಾಧ್ಯವಿಲ್ಲ. ಭ್ರಮೆಯೋ ಕಲ್ಪನಾಲೋಕದಲ್ಲೋ ಸ್ವಚ್ಛಂದವಾಗಿ ವಿಹರಿಸುತ್ತಿರುತ್ತಾರೆ, ನಮಗೇಕೆ ಸಾಧ್ಯವಾಗುತ್ತಿಲ್ಲ.. ನಾನೊಂದು ಕಡೆ, ನೀ'ನೊಂದು' ಕಡೆ ಜೋಡಿ ಹಕ್ಕಿಗಳು ಒಂದೇ ಗೂಡಿನಲಿ ಜೊತೆಯಾಗುವುದಿ ಯಾವಾಗ? ಬೇಡ ಅದೆಲ್ಲ ಬೇಡ ಬಿಡು. ಸಾಧ್ಯವಾಗದ ಕನಸು. ಕಲ್ಪನೆಗಳಿಗೆ ಜೀವ ನೀಡಲು ನಮ್ಮಿಬ್ಬರಿಗೂ ಸಾಧ್ಯವಿಲ್ಲ. ಆದರೆ ದಿನಕ್ಕೆ ಒಮ್ಮೆಯಾದರೂ ಮಾತನಾಡಲು ಏನಾಗಬೇಕು? ಅದೂ ನಿನ್ನಿಂದ ಸಾಧ್ಯವಿಲ್ಲವೇ? ನೀ ಹೀಗೆ ದೂರದೂರ ಸರಿದರೆ ನನಗೇಕೋ ಅಂಜಿಕೆ , 'ಅಳು'ಕು ಎಲ್ಲವೂ. ಮನಸ್ಸು ನೀರಿನಲ್ಲಿ ಅದ್ದಿತೆಗೆದ ಸ್ಪಾಂಜಿನಂತೆ ಆಗುತ್ತದೆ. ಈ ಒದ್ದಾಟ ನನ್ನನೇ ಕುಗ್ಗಿಸುತ್ತಿದೆ. ಬೇರೆ ಯಾರೂ ಬೇಡ ಅನ್ನಿಸುತ್ತಿದೆ. ಮನದಲ್ಲಿ ಇಷ್ಟು ನೋವ ಇಟ್ಟುಕೊಂಡು ಈ ಪ್ರಪಂಚದೆದುರು ನಗುವಿನ ಮುಖವಾಡ ತೊಟ್ಟು ಜೀವಿಸಲು ಇಷ್ಟವಾಗುತ್ತಿಲ್ಲ. ಎಲ್ಲರಿಂದ ಒಂದಷ್ಟು ದೂರವಿರುವ ಆಸೆ. ಅದು ನನ್ನಿಂದ ಮಾತ್ರ ಸಾಧ್ಯ. ನೀ ಸುಖಿಯಾಗಿರು. ಬಿಡುವಾದರೆ ಮಾತನಾಡಬೇಕನಿಸಿದರೆ ತುಟಿಗೆ ಹಾಕಿದ ಬೀಗ ತೆಗಿ.. ಎಲ್ಲರಿಗೂ ಸಮಯದ ಅಭಾವವಿರುತ್ತದೆ. ಆದರೆ ಪ್ರೀತಿಪಾತ್ರರಿಗೆಂದೇ ನಮ್ಮವರಿಗೆಂದೇ ಹೊಂದಿಸಿಕೊಳ್ಳುವುದು ಒಂದು ಕಲೆ. ಕಾರಣ ಅವರು ನಮಗಾಗೇ ಉಸಿರಾಡುತ್ತಿರುತ್ತಾರೆ.. ನಮ್ಮ ಒಳಿತಿಗಾಗೇ ಬೇಡುತ್ತಿರುತ್ತಾರೆ. ನಮಗಾಗೇ ಕೊರಗುತ್ತಾ ಸೊರಗುತ್ತಿರುತ್ತಾರೆ. ಇದನ್ನ ಅರ್ಥಮಾಡಿಕೊಳ್ಳುವುದು ನಮಗೇ ಬಿಟ್ಟಿದ್ದು..

- ಸಿಂಧುಭಾರ್ಗವ್.

Wednesday, 9 November 2016

My Father. ತಂದೆ ಕವಿತೆ

******


ಮಗುವಾಗಿದೆಯಲ್ಲಪ್ಪ ನಿನ್ನ ಮನಸ್ಸೀಗ.
ನಾನೂ ಮಗುವೇ ಇನ್ನೂ ನಿನಗೀಗ..

ನನ್ನ ಕಣ್ಣಲ್ಲಿ ಕಣ್ಣೀರ ನೋಡಲು ಬಯಸದವ ನೀನು.
ನಿನ್ನ ಪ್ರೀತಿಯ ತೋರಿಸಲು ಹೆಣಗಾಡಿದವ ನೀನು..

ಅಷ್ಟು ದಡ್ಡಿನಾನಲ್ಲಪ್ಪ..
ನನ್ನ ಉಸಿರಿನಲಿ ನಿನ್ನ ಪಾಲಿದೆ,
ನಿನ್ನ ರಕುತವೇ ನನ್ನಲ್ಲೂ ಹರಿಯುತಿದೆ..

ಕೆಟ್ಟ ದುನಿಯಾವಿದು ಅಪ್ಪ,
ನೀ ಗಿಣಿಯಂತೆ ಸಾಕಿದ್ದೆ..
ನಾ ಹಾರಾಡಲು ಬಯಸಿದ್ದೆ..
ಕಷ್ಟ ಕಂಡೆ, ನೋವನುಂಡೆ
ನಿನ್ನಲ್ಲಿ ಹೇಳಲು ಭಯಗೊಂಡೆ..

ನಿನ್ನ ಮಾನ, ಸಮ್ಮಾನ ನನ್ನ ಕೈಯಲ್ಲಿದೆ ಅಪ್ಪ..
ಮದುವೆ ಆಯ್ತು ಹೊಸದಾದ ಮನೆಯ ದೀಪಬೆಳಗಿದೆ..

ನಾವು ಹುಟ್ಟಿದಾಗ ನಿನಗೆ ಜವಾಬ್ದಾರಿ ಜಾಸ್ತಿ ಇತ್ತು ,
ಹಗಲು ರಾತ್ರಿಯ ಲೆಕ್ಕ ತಪ್ಪುತಿತ್ತು.

ಕಂದಮ್ಮಗಳ  ದಿನಕ್ಕೆ ಒಮ್ಮೆ  ನೋಡುವುದೂ ಕಷ್ಟವಾಗುತ್ತಿತ್ತು.
ಒಳಗೊಳಗೆ ಅಳುತಲಿದ್ದ ಆ ಮೊಗವೀಗ ಕಣ್ಣೆದುರು ಬಂತು..

ಅರಿಯುವೆನು ಪಿತನೇ..
ನಿನ್ನ ಪ್ರೀತಿಯ ನಿನ್ನ ಕಂಗಳಲ್ಲೇ ನಾ ನೋಡಿದ್ದೆ..
ನಿನ್ನ ಕಾಳಜಿಯನ್ನು ತಾಯಿಯಲ್ಲಿ ನೋಡಿದ್ದೆ..

ನನಗೂ ನೂರಾರು ಕನಸುಗಳ ಕಟ್ಟಿಕೊಳ್ಳಲು ಹಾದಿತೋರಿಸಿದೆ.
ಇಳಿವಯಸ್ಸು ,ಮಗುವಿನ ಮನಸ್ಸು
ವಿಶ್ರಾಂತಿ ಬೇಕಪ್ಪಾ..

ಸ್ವಲ್ಪ ಬಾ ಇಲ್ಲಿ ಕುಳಿತುಕೋ..
ನನ್ನ ಮಗನ ಜೊತೆ ಹರಟೆ ಹೊಡಿ ಆಟವಾಡು ಮತ್ತೆ ಮಗುವಾಗು..
ಮುಸ್ಸಂಜೆ ಹೊಂಗಿರಣ ಮನಕ್ಕಿಳಿದಿದೆ ತಾನೆ..

ಅಷ್ಟೇ ಸಾಕು..
ಇನ್ನೇನು ನಾನಿನಗೆ ಕೊಡಲು ಸಾಧ್ಯ..
ನಿನ್ನ ನೆಮ್ಮದಿಯ, ನಗುಮುಖ ನೋಡುವುದೇ ನನ್ನ ಭಾಗ್ಯ..

- ಶ್ರೀಮತಿ ಸಿಂಧು ಭಾರ್ಗವ್. 🌷

Friday, 28 October 2016

Kavite- Deepavali

ನನ್ನೆಲ್ಲಾ ಸಹೃದಯೀ ಮಿತ್ರರಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.. ಈ ದೀಪಾವಳಿಯೂ ನಿಮ್ಮೆಲ್ಲರ ಮನೆಮನಗಳನ್ನು ಬೆಳಗಲಿ..
ಅಂಧಕಾರವನ್ನು - ಮೌಢ್ಯವನ್ನು  ಕಳೆದು ಹೊರಜಗತ್ತನ್ನು ಪ್ರೀತಿಯಿಂದ ನೋಡುವ ಹಾಗೆ ಆಗಲಿ..
ಶ್ರೀಲಕುಮಿ- ಶ್ರೀಹರಿಯ ಕೃಪೆ ಸದಾ ನಿಮಗೊಲಿಯಲಿ..

~ ಶ್ರೀಮತಿ ಸಿಂಧುಭಾರ್ಗವ್ ಮತ್ತು ಮನೆಯವರು..
~~~~~~~~~~~~~~~~~~~~~

)(@)(


ದೀಪಾವಳಿ ಪರ್ಬ ಮತ್ತೊಮ್ಮೆ ಬಂದಿದೆ..
ಮನೆ-ಮನಗಳಲಿ ಬೆಳಕ ತಂದಿದೆ..

ಎಣ್ಣೆ ಹಚ್ಚಲು ಗರಿಕೆಹುಲ್ಲು ಕಾದಿದೆ..
ಅಲಂಕಾರಗೊಂಡು ಹರಿಯು ನಿಂತಿದೆ..

ದೇವರಿಗೆ ತುಪ್ಪದ ದೀಪ..
ನಡುನಡುವೆ ತುಂಬಿದ ದೂಪ..

ಹೂವಿನ ಹಾರಗಳದ್ದೇ ಹಾಡು..
ಪುಟಾಣಿಗಳ ಹೊಸಬಟ್ಟೆ ನೋಡು..

ವಿವಿಧ ಖಾದ್ಯ ನೈವೇದ್ಯಕ್ಕೆ...
ನೆಂಟರು ಬರುವರು ಭೋಜನಕ್ಕೆ..

ಬಿಡುವಿರದ ಕೆಲಸ ಅಮ್ಮನಿಗೆ..
ಹೊರಗಿನ ಕೆಲಸಗಳು ಅಪ್ಪನಿಗೆ..

ಅಣ್ಣ ತಮ್ಮಂದಿರ ಪಟಾಕಿ..
ಅಕ್ಕತಂಗಿಯರ ಮಾತಿನ ಚಟಾಕಿ..

ಹಿರಿಯರ ನೆನಪಿಸುವ ಆಕಾಶಬುಟ್ಟಿ..
ಗೋಪೂಜೆಗೆ ಕಾಯುತಲಿದೆ ಹಟ್ಟಿ..

ರೈತರಿಗೆ ಬಿಡುವು ಹಸುಗಳಿಗೆ ಮೇವು
ಊರಿಡೀ ತುಂಬಿದೆ ಸಂತಸವು..

~ ಸಿಂಧುಭಾರ್ಗವ್. ಬೆಂಗಳೂರು
((ಹರಿ - ದೊಡ್ಡ ಪಾತ್ರೆ, ಹಟ್ಟಿ - ಕೊಟ್ಟಿಗೆ))