Wednesday, 19 October 2016

ಲೇಖನ- ಸಾಹಿತ್ಯ ಕ್ಷೇತ್ರ

               ಸಾಹಿತ್ಯ ಕ್ಷೇತ್ರ ಅನ್ನುವಂತದ್ದು ಬಹುದೊಡ್ಡ ಸಾಗರದಂತೆ.. ಅದರ ಆಳದಲ್ಲಿರುವ ಪದಭಂಡಾರಗಳೆಂಬ ಮುತ್ತುರತ್ನಗಳನ್ನು ಹುಡುಕಿ ತರುವುದು ಅಷ್ಟು ಸುಲಭದ ಮಾತಲ್ಲ..ಸತತ ಪರಿಶ್ರಮ, ಕೃಷಿ, ಅಗತ್ಯ.. ಅದೊಂದು ರೀತಿಯ ತಪಸ್ಸು.. ಈಗೀಗ ಮಾಧ್ಯಮಗಳ ಸಂಖ್ಯೆ ಅತಿಯಾಗಿದೆ.. ಸಾಮಾಜಿಕ ಜಾಲತಾಣಗಳದ್ದೇ ಮಹಿಮೆ. ನಾವು ಬರೆದ ಬರಹಗಳು ಪತ್ರಿಕೆಗಳಿಗೆ , ಮಾಸಪತ್ರಿಕೆಗಳಿಗೆ ಕಳುಹಿಸಬೇಕೆಂದಿಲ್ಲ. ವಾಟ್ಸ್ಅಪ್ / ಫೇಸ್ ಬುಕ್ ಗಳಲ್ಲಿ ಎರಡೆರಡು ಸಾಲು ಬರೆದು  ಪೋಸ್ಟ್ ಮಾಡಿದರೂ ಲೈಕ್/ಕಮೆಂಟ್ಸ್ ಗಳು ಬರುತ್ತವೆ.. ಕೆಲವರಿಗೆ ಅಷ್ಟೆ ಸಾಕು ಎಂಬ ತೃಪ್ತಿ.. ಅದು ಒಳ್ಳೆಯದಲ್ಲ.. ನಮ್ಮ ಬರಹ ಅಲ್ಲಿಗೆ ಮಾತ್ರ ಸೀಮಿತವಾಗಬಾರದು. ಇನ್ನು ಕೆಲವರಿದ್ದಾರೆ, ನಾಲ್ಕು ಸಾಲು ಬರೆದು ಹಾಕಿದ ಕೂಡಲೇ ಅವನು ಕವಿಯಾಗಲು ಅರ್ಹನಾಗಿರುವುದಿಲ್ಲ.. ಒಂದಷ್ಟು ಜನ ಹೊಗಳುವರು ತನ್ನದೇ ಅಭಿಮಾನ ಬಳಗವಿದೆ ಎನ್ನುವ ಅಹಂ ತಲೆಗೇರಿಸಿಕೊಂಡು ತಾನೊಬ್ಬ ಕವಿಯೆಂದು ತಿರುಗಾಡುವುದು ಈಗೀಗ ಸಾಮಾನ್ಯವಾಗಿಬಿಟ್ಟಿದೆ.. ಅದಕ್ಕೆ ಮೂಲಕಾರಣ ಅಂಗೈಯಲ್ಲಿ ಮನೆಮಾಡಿರುವ ಫೇಸ್ಬುಕ್/ವಾಟ್ಸ್ಅಪ್. ವ
ಮೊಟ್ಟಮೊದಲಾಗಿ ಮನದಲ್ಲಿ ವಿನಯತೆ ಮತ್ತು ವಿಧೇಯತೆ ಇರಬೇಕು.. ಇಂದು ನಿಮ್ಮನ್ನು ಹೊಗಳುವವರು ನಾಳೆ ಇನ್ನು ಸ್ವಲ್ಪ ಚೆಂದವಾಗಿ ಬರೆಯುವವನ ಸ್ನೇಹ ಸಿಕ್ಕಿತೆಂದು ಅಲ್ಲಿಗೆ ಹಾರಿಬಿಡುವರು.. ಅವರನ್ನು ಹೊಗಳಲು ಶುರುಮಾಡುವರು. ನಿಮಗೆ ಬರುವ ಲೈಕ್/ ಕಮೆಂಟ್ ಗಳು ಕಡಿಮೆಯಾಗತೊಡಗಿದಾಗಲೇ ಅರಿವಾಗುವುದು, ಮನಸ್ಸು ಮಂಕಾಗುವುದು.. ತಲೆಕೆಡಿಸಿಕೊಳ್ಳುವುದು.. ದಡದಲ್ಲಿಯೇ ಕುಳಿತು ಸಮುದ್ರದ ಅಲೆಗಳಲಿ ತೆಲಿದಂತೆ ಕನಸುಗಾಣುವುದಲ್ಲ.. ತೆರೆಗಳಿಗೆ ವಿರುದ್ಧವಾಗಿ ಈಜಬೇಕು‌. ಜಯಿಸಬೇಕು.
**
ಅಷ್ಟು ಸುಲಭದಲ್ಲಿ ಸಾಹಿತಿ ಎನ್ನುವ ಪಟ್ಟ ಸಿಗುವುದಿಲ್ಲ‌‌‌.. ಕವಿಯಾಗಲು ಸಾಧ್ಯವಿಲ್ಲ.. ನಮ್ಮಲ್ಲಿ ಇನ್ನಷ್ಟು ಬರೆಯಬೇಕೆಂಬ ಹಸಿವು ಇರಬೇಕು.ಸತತವಾಗಿ ಹೊಸಹೊಸ ಪದಗಳ ಬಳಕೆ, ವಾಕ್ಯರಚನೆ, ಚುಟುಕಾಗಿ ನಾವು ಏನು ಹೇಳಬಯಸಿದ್ದೇವೆ ಅನ್ನುವುದನ್ನು ಸ್ಪಷ್ಟವಾಗಿ ಹೇಳುವ ತಾಕತ್ತು ಇದ್ದರೇನೆ ಬರವಣೆಗೆಯಲ್ಲಿ ನಮ್ಮದೇ ಆದ ಛಾಪನ್ನು ಮೂಡಿಸಲು ಸಾಧ್ಯ..
ನಾನು ಹೇಳುತ್ತಿರುವುದು ಪತ್ರಿಕೋದ್ಯಮ ಪದವಿ ಓದಿ ಲೇಖಕರೆನಿಸಿಕೊಳ್ಳುವವರಿಗಲ್ಲ..ಅವರ ಹಾದಿಯೇ ಬೇರೆ..ಅವರ ನಡುವೆ ಇರುವ ಬರವಣಿಗೆಯಲ್ಲಿ ಆಸಕ್ತಿಯಿರುವವರು ಹೇಗೆ ಗುರುತಿಸಿಕೊಳ್ಳುವುದು?  ಎಲೆಮರೆ ಕಾಯಿಯಂತೆ ಮುತ್ತು ಉದುರಿಸುವ ಹಾಗೆ ಸ್ಫುಟವಾಗಿ ಬರೆಯುವ ಯುವಬರಹಗಾಗರಿಗೆ ಹೇಳುತ್ತಿರುವುದು.. ವೃತ್ತಿಯೊಂದಿರುತ್ತದೆ, ಪ್ರವೃತ್ತಿಯಾಗಿಯೋ ಇಲ್ಲಾ ಹವ್ಯಾಸವಾಗಿಯೋ ಬರಹವನ್ನು ಆಯ್ಕೆ ಮಾಡಿಕೊಂಡಿರುವವರಿಗೆ ಹೇಳುತ್ತಿರುವುದು.. ಅವರು ಪ್ರಕಾಶಿಸುವುದು ಹೇಗೆ.. ಹೊರ ಜಗತ್ತಿಗೆ ಗುರುತಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಮಾತನಾಡುತ್ತಿರುವುದು.
**
ಅದಕ್ಕೆ ಶ್ರೀಯುತ ಡಾ. ನ. ದಯಾನಂದ ಶೆಟ್ಟಿಯವರು ಹೇಳಿದಂತೆ, "ಹೆಚ್ಚೆಚ್ಚು ಓದುವ ಅಭ್ಯಾಸವಿಟ್ಟುಕೊಳ್ಳಬೇಕು, ಪದಗಳ ಭಂಡಾರ ನಮ್ಮ ಮಸ್ತಕದೊಳಗಿರಬೇಕು.." ಪೇಪರ್ ಆಗಲಿ, ಕಾದಂಬರಿಯಾಗಲಿ, ಸಣ್ಣ ಬಜ್ಜಿ ಕಟ್ಟಿಕೊಟ್ಟ ಪೇಪರಿನ ಪೀಸಿನಲ್ಲಿ ಕೂಡ (ಚಿಂದಿ ಹಾಳೆಯೆನ್ನಬಹುದು) ನಮಗೇನು ವಿಷಯ ಸಿಗುತ್ತದೆ? ಹೊಸದಾದ ಪದಗಳು ಇದೆಯಾ? ಅದರ ಅರ್ಥ ಹೇಗೆ? ಯಾಕಾಗಿ ಉಪಯೋಗಿಸಿದರು ಎಂಬಿತ್ಯಾದಿ ತರ್ಕ, ಆಲೋಚನೆಗಳನ್ನು ಮನದಲ್ಲೇ ಮಾಡುತ್ತಾ ಹೋದಂತೆ ನಮಗೆ ಅದರ ಹಿಡಿತ ಸಿಗುತ್ತದೆ.. ಅದೊಂದು ಅಭ್ಯಾಸವಾಗುತ್ತದೆ.. ಅಲ್ಲದೇ ನಾವು ಬರೆದುದನ್ನು ಪತ್ರಿಕೆಗಳಿಗೆ ಕಳುಹಿಸಿದರೆ ಆಯ್ಕೆಯಾಗುವುದಿಲ್ಲ‌ ಎಂಬ ಕೊರಗು ಕೆಲವರಿಗೆ. "ಅವನು ಕಳುಹಿಸಿದ ನಿನ್ನೆಯಷ್ಟೆ ದೊಡ್ಡದಾಗಿ ಪೇಪರಿನಲ್ಲಿ ಬಂತು.. ನಾನು ಎಷ್ಟು ಕಳುಹಿಸಿದ್ದೇನೆ ಆದರೆ ಆಯ್ಕೆ ಮಾಡುವುದೇ ಇಲ್ಲ.." ನನಗೆ ಅದೃಷ್ಟ ವೇ ಸರಿ ಇಲ್ಲ.. ಎಂದು ವೈರಾಗಿಗಳ ಹಾಗೆ ಯುದ್ಧದಲ್ಲಿ ಸೋತವರ ಹಾಗೆ ಮಂಕಾಗಿ ಕುಳಿತುಬಿಡಬೇಡಿ..ಅದನ್ನು‌ ಮೊದಲು ಮನಸ್ಸಿನಿಂದ ತೆಗೆದು ಹಾಕಿ.. ನನ್ನ ಬರಹಗಳನ್ನು ಇನ್ನಷ್ಟು ಓರೆಗೆ ಹಚ್ಚಬೇಕೇನೋ? ಅದಕ್ಕೆ ಆಯ್ಕೆಯಾಗಲಿಲ್ಲವೆಂದು ಮನಸ್ಸಿನಲ್ಲೇ ಯೋಚಿಸಿ. ಪ್ರಯತ್ನ ಪಡುತ್ತಾ ಇರಿ. ಧನಾತ್ಮಕವಾಗಿ ಯೋಚಿಸಿದಷ್ಟು ನಮಗೇ ಒಳ್ಳೆಯದು..
ಎಲ್ಲ ಯುವಬರಹಗಾರರಿಗೂ ಸಾಹಿತ್ಯ ಕ್ಷೇತ್ರದಲ್ಲಿ ಮಿನುಗಲು ಆ ಶಾರದಾ ಮಾತೆಯ ಅನುಗ್ರಹವಿರಲಿ ಎಂದು ಪ್ರಾರ್ಥಿಸುವೆ. ಎಲ್ಲರಿಗೂ ಶುಭವಾಗಲಿ.

-ಸಿಂಧುಭಾರ್ಗವ್. ಬೆಂಗಳೂರು.

Avalokhana - preeti mattu kartavya

*ಪ್ರೀತಿ ಮತ್ತು ಕರ್ತವ್ಯ* :
~~~~~~~~~~~~~~
ಗಮನಿಸಿ ಸ್ನೇಹಿತರೆ, ಮಳೆರಾಯ ಕಲ್ಲು ಬಂಡೆಗಳ ಮೇಲೆ ಹಾಗೂ ಕಾಡು ಮರಗಳಿರುವ ಭುವಿಯಲ್ಲೂ ತನ್ನ ಕರ್ತವ್ಯವೆಂದು ಜೋರಾಗಿ ಸುರಿಯತೊಡಗಿದ..
ಏನಾಗುತ್ತದೆ ಅದರ ಪರಿಣಾಮ ಹೇಳಿ ನೋಡುವ?! ಕಲ್ಲು ಸ್ವಲ್ಪವೂ ನೀರನ್ನು ಹೀರುವುದಿಲ್ಲ, ಏನೂ ಉಪಯೋಗವೂ ಇಲ್ಲ..ಅದೇ ಕಾಡಿನಲ್ಲಿರುವ ಗಿಡಮರಗಳೆಲ್ಲ ಮಳೆಗೆ ಕುಡಿಯೊಡೆದು ಬೆಳೆಯತೊಡಗಿದವು, ಚಿಗುರಿ ನಿಂತ ಕುಡಿಗಳಲ್ಲಿ ಹೂವು ಹಣ್ಣು ತುಂಬಿಹೋಗಿತ್ತು. ಚಿಟ್ಟೆಗಳಿಗೂ, ಪ್ರಾಣಿಪಕ್ಷಿಗಳಿಗೂ ಗಿಜಿಗಿಜಿ ಎಂದು ಹಾಡುತ್ತಾ ಹೊಟ್ಟೆತುಂಬಾ ಹಣ್ಣುಗಳನ್ನು ತಿನ್ನುತ್ತಾ ಹೂವಿನ ಮಕರಂದವನ್ನು ಹೀರುತ್ತಾ ಝೇಂಕರಿಸುತ್ತಾ ಸಂಭ್ರಮಿಸಿದವು.. ಹೊಸ ಪರ್ವವೇ ಶುರುವಾದಂತೆ ಎಲ್ಲೆಲ್ಲೂ ಸಂಭ್ರಮದ ವಾತಾವರಣ ಸೃಷ್ಡಿಯಾಗಿತ್ತು.
ಇಲ್ಲಿ ಗಮನಿಸಬೇಕಾದುದು ಭುವಿಗೂ ಮಳೆಗೂ ಇರುವ ಪ್ರೀತಿಯನ್ನು.
ಹಾಗೆಯೇ,
ನಮ್ಮ ಮಕ್ಕಳನ್ನ ಹೆತ್ತಿದ್ದೇವೆ ಎಂದು ಅವರ ಚಾಕರಿ( *SpoonFeedBaby* ) ಮಾಡುತ್ತಾ ಅದೆಲ್ಲವೂ‌ ನಮ್ಮ ಕರ್ತವ್ಯ ಎನ್ನುವುದು ಶುದ್ಧ ತಪ್ಪು.. ಕರ್ತವ್ಯ ಯಾವುದೆಂದರೆ ಮಕ್ಕಳನ್ನು ಉತ್ತಮ‌ ಪ್ರಜೆಯನ್ನಾಗಿಸುವುದು, ಸುಶಿಕ್ಷಿತರನ್ನಾಗಿಸುವುದು, ತಮ್ಮಕಾಲಮೇಲೆ ತಾವು ನಿಲ್ಲುವಂತೆ ಮಾಡುವುದು,ಅವರ ಏಳುಬೀಳಿನಲ್ಲಿ ಜೊತೆಗೇ ಇದ್ದು ಧೈರ್ಯತುಂಬುವುದು ಇವೆಲ್ಲವೂ ಕರ್ತವ್ಯವೇ. ಆದರೆ ಇದೆಲ್ಲವನ್ನೂ ಪ್ರೀತಿಯಿಂದ ಮಾಡಿದರೇ ಮಾತ್ರ ಅದಕ್ಕೊಂದು ಅರ್ಥ ಸಿಗುತ್ತದೆ. ಮಕ್ಕಳನ್ನು ಪ್ರೀತಿಯಿಂದ ಸಾಕಿ-ಸಲಹಬೇಕೆ ಹೊರತು ನಮ್ಮ ಕರ್ತವ್ಯ ಎಂದು ಮಾಡಬಾರದು. ಆಗ ಮಾತ್ರ ಆ ಪ್ರೀತಿ ಫಲನೀಡುತ್ತದೆ..
~ * ~
📝 *ಸರಿ ಎನಿಸಿದರೆ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ*.

Kavana- jeevanada santeyali ulida bhaavanegaLu


ಜೀವನದ ಸಂತೆಯಲಿ,
ಕೊಂಡುಕೊಳ್ಳದೇ ಉಳಿದಿರುವ ಭಾವನೆಗಳು..
ಮಾರಲಾಗದೇ ಕುಳಿತಿರುವ ಪ್ರೀತಿಗಳು..

ಕೊಳೆತುಹೋದ ಕನಸುಗಳು..
ಬಾಡಿಹೋದ ಚಡಪಡಿಕೆಗಳು..

ರಾಶಿಯಲಿ ಬೆಂದುಹೋದ ಬಿಸಿಕಣ್ಣಿರು..
ಆಗಾಗ ಮನಸಿಗೆ ಮಳೆಯ ಪನ್ನೀರು..

ಅರೆಬರೆ ನೋಟ ಬೀರುವ ಕೊಳ್ಳುಬಾಕ..
ಮಾನ ಮುಚ್ಚಿಕೊಳ್ಳುವ ವ್ಯಾಪಾರಿಗ..

ಹೊಗೆಧೂಳು ಬರಿತ ಹಸಿವಿನ ಬುತ್ತಿ..
ಕಸಿದು ತಿನ್ನುತಿವೆ ಕಾಗೆಗಳು ಕುತ್ತಿಕುತ್ತಿ..

ನಿಂತಲ್ಲೆ ನಿದಿರೆ , ಮತ್ತದೆ ಕನಸಿನ ಹೊದಿಕೆ..

- ಸಿಂಧುಭಾರ್ಗವ್.

Kavana - Jeevanada santeyali tiruvondide

ಜೀವನದ ಸಂತೆಯಲಿ ತಿರುವೊಂದಿದೆ,
ತಿರುವಿನ ಮೂಲೆಯಲಿ ಕನಸೊಂದಿದೆ,

ಬುಟ್ಟಿಯ ತುಂಬಾ ಪ್ರೀತಿ ತುಂಬಿದೆ,
ನೀನು ಬಂದು ಖರೀದಿಸ ಬೇಕಿದೆ..

ಅಂದು
ನಿನ್ನನು ಒಪ್ಪಿಕೊಂಡಿದ್ದೆ, ಅಪ್ಪಿಕೊಂಡಿದ್ದೆ,
ನೋಡು ಮನವೀಗ ಬೆಪ್ಪಾಗಿ ಕುಳಿತಿದೆ..

ನೀ ನನಗಾಗಿ ಬರೆದ ಆ ಮೊದಲ
ಕವನವನ್ನು ಇನ್ನೊಮ್ಮೆ ಹೇಳಬೇಕಿದೆ.

ನಾನಿನ್ನ ಮಡಿಲಿನಲಿ ಮಲಗಿ
ಅದನ್ನೆಲ್ಲಾ ಕೇಳುವ ಆಸೆಯಾಗಿದೆ..

ಇತ್ತಿಚೆಗೆ ನೀನೇಕೋ ಬದಲಾದಂತಿದೆ..
ನಿನ್ನ ಮಾತಿನಲ್ಲಿ  ಏನೋ ಮರೆಯಾಗಿದೆ..

ನಿನ್ನ ಮನವೀಗ ಬೇರೆಲ್ಲೋ ಮುಳುಗಿ ಹೋಗಿದೆ..
ಪ್ರೀತಿಯ ಕಂಗಳಿಂದ  ನೋಡುವುದ ಮರೆತಂತಿದೆ..

GIO Side Effect

: ಪೋಲಿಗಳ_ಪರದಾಟ :
ಅಂದದ ಹುಡುಗೀರ ಕಂಡಾಗೆಲ್ಲ ಮನಸ್ಸು ಹಿಂದ್ ಹಿಂದೇ ಓಡುವುದು..

'ಲವ್ ಯೂ ಕಣ್ರೀ' ಎಂದು ಬಾಯಲಿ ಅರಿಯದೇನೇ ಮುತ್ತು ಉದುರುವುದು..

ಉಗಿದರೂ ಉಗಿಸಿಕೊಳ್ಳುವ ಮರ್ಯಾದೆಗೆಟ್ಟ ಹಾರ್ಟು..

ಬಿಸ್ಕೇಟ್ ಹಾಕೋಣ ಅಂದ್ರೆ ಜೇಬು ತೂತು..

ಕರೆನ್ಸಿ ಹಾಕು ಅನ್ನಲ್ಲ ಜೀಯೋ ಸಿಮ್ ಇದೆ ಅವಳಲ್ಲಿ..

ಸೆಲ್ಫೀ ತೆಗೆಸೋಕೂ ಬರಲ್ಲ ಸೆಲ್ಫೀಸ್ಕಿಟ್ ಇದೆ ಅವಳಲ್ಲಿ..

ಥೋ.. ರಾಹುಕಾಲದಲ್ಲೇ ಹುಡ್ಗೀರ್ ಸಿಕ್ತಾರೋ ಇಲ್ಲಾ
ಪ್ರಪೋಸ್ ಮಾಡೋ ಟೈಮ್ ಲಿ ಬೆಕ್ಕು ಅಡ್ಡ ಬಂತಾ..?
ಶಿವನೇ...
😇😜

Kavana- Namma sainikaru

ನಮ್ಮ ಸೈನಿಕರು :

ಯುದ್ಧ ಘೋಷಣೆ ಮಾಡಿಯೇ
ಎಲ್ಲವೂ ನಡೆಯಬೇಕಂದಿಲ್ಲ..
ಸೇನೆಗೆ ಸೇರಿದ ದಿನದಿಂದಲೇ
ಅವರಲ್ಲಿ ಯುದ್ಧ ಶುರುವಾಗುವುದಲ್ಲ..

ನಮ್ಮನ್ನು ರಕ್ಷಿಸಲು ಪ್ರಾಣದ
ಹಂಗು ತೊರೆಯುವರು..
ಹೆತ್ತವರ /ಸಂಸಾರವ ತೊರೆದು
ಪ್ರಾಣ ತ್ಯಾಗಮಾಡುವರು..

ನಾವು ಕಣ್ತುಂಬಾ ನಿದಿರೆ ಮಾಡಲು
ಅವರ ಕಾವಲಿದೆ..
ಈ ಸತ್ಯವ ಅಂಧರಂತೆ ನಾವೆಲ್ಲ
ಮರೆತ ಹಾಗಿದೆ..

ಪ್ರಾಣಪಕ್ಷಿ ಹಾರಿತೆಂದು ಕಣ್ಣೀರು
ಸುರಿಸಿದರೇನು ಪ್ರಯೋಜನ..?!
ಅವರ ಪ್ರಾಣಕ್ಕೇನಾಗದಿರಲಿ
ಎಂದು ಈಗಲೇ ಪ್ರಾರ್ಥಿಸೋಣ..

~ಸಿಂಧು ಭಾರ್ಗವ್.

Kavana- Tavarumane sagga kaalige kattida hagga

: ತವರುಮನೆ ಸಗ್ಗ :

ಚೂರಾದ ಚಂದಿರನ‌ ಬಿಂಬ
 ಕೆರೆಯಲಿ ಮೂಡಿದೆ..
ರವಿಯ ಕಿರಣಗಳಿಗೆ
ನೈದಿಲೆಯು ಕಾದಿದೆ..

ಹೆಜ್ಜೇನ್ನು ಝೇಂಕರಿಸುತಾ
 ಹೂವ ಪೀಡುಸುತಿದೆ..
ಚಿಲಿಪಿಲಿಯ ಸುಪ್ರಭಾತವು
 ಕಿವಿಗೆ ಇಂಪಾಗಿದೆ..

ಅಳಿಲಿನ ಉಪಚಾರ
ಮನಕೆ ಖುಷಿನೀಡಿದೆ..
ಗಿಳಿಮರಿ ಪೇರಲೆಯ
ಕೊಯ್ದು ತಂದಿದೆ.‌

ನವಿಲಿನ ನರ್ತನ ,
ಮನದಲಿ ತನನನಾ..
ಬಿಸಿಬಿಸಿ  ಖಾದ್ಯ ,
ಅಮ್ಮನ ಗುಣಗಾನ..

ಹಸಿರು ಹಾಸಿಗೆ,
 ಬೇಲಿಹೂವುಗಳು
ಪೋದೆಯ ಮೊಲದಮರಿ,
 ಬಿದ್ದ ಗರಿಗಳು..

ಆಕಾಶ ನೋಡುವ ಅಡಿಕೆಮರ,
ತಂಪಾದ ಎಳನೀರು..
ಹುತ್ತದ ಹಾವು,
ಗದ್ದೆಯ ಪೈರು..


- ಸಿಂಧುಭಾರ್ಗವ್

Kavana nere-kere

ಕವನ : ನೆರೆ-ಕೆರೆಯಲಿ

ನೆರೆ-ಕೆರೆಯಲಿ
ಮುಳುಗಿಹೋದ ಊರದು,
ಹಣತೆ ಹಚ್ಚಬೇಕಿದೆ..

ಕತ್ತಲೆಯ ಬತ್ತಿ ಹೊಸೆದು
ಕಾಯುತಿರುವರು,
ತೈಲ ಸುರಿಯಬೇಕಿದೆ..

ಕಂಟಮಟ್ಟ ನೆನೆದು
ತಂಡಿಗಟ್ಟಿರುವರು
ಹೊದಿಕೆ ನೀಡಬೇಕಿದೆ..

ಬೆಚ್ಚಗಿನ ಹೊದಿಕೆಯಲಿ
ಹಚ್ಚಿದ ಹಣತೆಯಲಿ
ಜೀವನ ನಡೆಸಬೇಕಿದೆ..

ಬನ್ನಿ ಕೈಜೋಡಿಸಿ,
ಬೆಳಕಾಗೋಣ, ಪ್ರೀತಿ ಹಂಚೋಣ,
ಅಸಹಾಯಕರಿಗೆ ಸಹಾಯಮಾಡೋಣ..
ಮೊಗದಲಿ  ಹೂವರಳಿಸೋಣ..
ಭರವಸೆಯ ದೀವಟಿಗೆ ಬೆಳಗಿಸೋಣ..
ಭಯವ ದೂರಾಗಿಸೋಣ..
ನಂಬುಗೆಯ ಹೊದಿಕೆ ಹೊದೆಸೋಣ..

~ಸಿಂಧುಭಾರ್ಗವ್ .

Kavana apoorNa kanasu


ಅಮವಾಸ್ಯೆ ರಾತ್ರಿಯಲಿ
ಚಂದಿರನ ಹುಡುಕುವ ಆಸೆ..

ಕೋಟಿ ತಾರೆಗಳನ್ನ ದಿನವೂ
ದೋಚುವ ಆಸೆ..

ಮುದ್ದು ಬೆನ್ನೇರಿ
ಹತ್ತೂರ ಸುತ್ತುವ ಆಸೆ..

ಗುಬ್ಬಿಗೂಡಿನಲಿ
ಜೀವನ ಕಳೆಯುವ ಆಸೆ..

ಕನಸಿನಲಿ ಅವನ
ಪ್ರತಿರೂಪ ಕಾಣುವಾಸೆ..

Kavana- ee Hunnime muddubigaagi

ಏಕಾಂತದಲಿ ಕುಳಿತಾಗ
ಕಣ್ಣೊಳಗೆ ಇಳಿದ
ಚಂದಿರನ ತುಣುಕು ನೀನೇನಾ..?!

ಪ್ರೀತಿಯ ಪರಿಯ
ವಿವರಿಸಿ ಹೇಳಲು
ಕಾತುರ ನಾಗಿರುವವ ನೀನೇನಾ..?!

ಮನದ ಮೂಲೆಯಲಿ
ಬೆಳದಿಂಗಳಿಗೆ
ಹೊಳೆಯುವ ನೆರಳು ನಿನದೇನಾ..?!

ದೂರದಲೇ ನಿಂತರೂ
ತಂಗಾಳಿ ರೂಪದಲಿ
ಮೈಸೋಕುವವ ನೀನೇನಾ..?!

ಮತ್ತದೇ ಪೂರ್ಣಚಂದಿರ
ನಿದಿರೆ ಗೆಡಿಸಲು,
ಮತ್ತದೇ ಪ್ರೀತಿ ಅಮಲು
ಮನವ ತಣಿಸಲು,

ಮತ್ತದೇ ಮುದ್ದು,
ಮುದ್ದಾಗಿ ಮನಕ್ಕಿಳಿಯುವ ಪರಿ
ನನ್ನನ್ನೇ ನಾ ಮರೆಯುವ ಪರಿ
ಸೋಜಿಗಕೂ ಸೋಜಿಗ..

(( ಮತ್ತೊಂದು ಹುಣ್ಣಿಮೆ ಮುದ್ದುವಿಗಾಗಿ))