Tuesday 28 March 2023

ಎರಡು ತಲೆಮಾರು ಕವನ

ಎರಡು ತಲೆಮಾರು

Pinterest image




ಅಪ್ಪನಿಗೆ ಅರವತ್ತಾದರೆ. ಮಗನಿಗಿನ್ನೂ ಮೂವತ್ತು.

ಅಪ್ಪನಿಗೆ ಬಿಸಿ ರಕ್ತ ತಣ್ಣಗಾಗುತ್ತ ಬಂದರೆ

ಮಗನಿಗೆ ಕುದಿಯುವ ಬಿಸಿಹುಮ್ಮಸ್ಸು...

•••

ಆಗೆಲ್ಲ, ಅಪ್ಪನ ಕೋಣೆ ತುಂಬಾ‌ ಫರ್ಫ್ಯೂಮು ಸುವಾಸನೆ

ಈಗ ಬಿಪಿ ಶುಗರು, ಮಂಡಿನೋವಿನ ಎಣ್ಣೆಯ ವಾಸನೆ

ಮಗನ ಮೈತುಂಬಾ ಬೆವರ ಹನಿಗಳ ಘಮ

ಅವನ ಬಳಿಯಿರುವ ಸುಗಂಧದ್ರವ್ಯಕ್ಕೂ ಬೆಲೆ ಜಾಸ್ತಿ..

•••

ಅಪ್ಪನ ಅನುಭವದ ಮಾತುಗಳು ಮಗನಿಗೆ ಬೇಡವೀಗ.

ಮಗನು ತನ್ನ ಮೇಲೇ ತಾ ಪ್ರಯೋಗಗಳ ಮಾಡಿಕೊಳ್ಳುತ್ತಾ

ಜೀವನವೇ ಒಂದು ಚಾಲೆಂಜ್ ಎಂದು ತೋರಿಸಿಕೊಡಲು ಹೊರಟವ..

•••

ಅಪ್ಪನಿಗೆ ಆಗಾಗ್ಗೆ ಕಾಡುವ ಆರೋಗ್ಯ ಸಮಸ್ಯೆಗೆ

ಸರಿಯಾಗಿ ಮಾತ್ರೆ ತಿನ್ನದೇ ಇರುವುದೇ ಕಾರಣ

ಎಂಬ ತರ್ಕ ಮಗನದ್ದು.

ಆಗಾಗ್ಗೆ ಏರುಪೇರಾಗುವ ತಂದೆಯ ಮನೋಬಲ, ಆತಂಕ, ಒಳಗೊಳಗೆ ಪುಕಪುಕ, ಟೊಳ್ಳಾಗುತ್ತಿರುವ ದೇಹ, ಮೂಳೆ ಮಾಂಸ ಮಜ್ಜೆಗಳು ಎಂದು ಒಪ್ಪುವ ಮನಸಿಲ್ಲ..

ಮಗನಿಗೋ ಕಲ್ಲು ಬಂಡೆಯನ್ನೂ ಒಡೆದುಹಾಕುವಷ್ಟು ಧೈರ್ಯ, ತಾಕತ್ತಿರುವ ರೆಟ್ಟೆಗಳು.

•••

ಅಪ್ಪನಿಗೆ ರಾತ್ರಿ ಕಣ್ಣಿಗೆ ನಿದ್ದೆ ಹತ್ತುವುದಿಲ್ಲ, ಪದೇ‌ಪದೇ ಮೂತ್ರಕ್ಕೆ ಹೋಗಬೇಕು.. ಶುಗರ್ ಎಂದರೆ ಹಾಗೆ ತಾನೆ?!

ಈ ಮಗನೋ ಒಮ್ಮೆ ದುಡಿದು ಮನೆಗೆ ಬಂದರೆ ಬುಸ್ಸಪ್ಪನ ತರಹ ಬಿದ್ದುಬಿಡುವ. ಬೆಳಿಗ್ಗೆಯೇ ಎಚ್ಚರವಾಗುವುದು.. ನಿದ್ದೆಗೆ ಇನ್ನೂ ಸಮಯಬೇಕು ಎಂದು ಹಪಹಪಿಸುವ.

•••

ಆಗ ಅಪ್ಪನ ಪರ್ಸ್ ತುಂಬಾ ನೋಟಿನ ಕಂತೆಗಳಿದ್ದವು.

ಪದೇ ಪದೇ ಎಣಿಸುತ್ತಾ ನಸುನಗುತ್ತಿದ್ದರು‌. ಮಗನಿಗೆ ತೋರಿಸಿ ಹೇಳಿ "ತಾನು ಹಣವಂತ" ಎಂದು ಒಳಗೊಳಗೆ ಬೀಗುತ್ತಿದ್ದರು. ಮಗನ ಕಣ್ಣಲ್ಲೂ ಕನಸುಗಳನ್ನು ತುಂಬಿಸಿದ್ದರು.

ಈಗ ಅಂತದ್ದೇ ಸೇಫ್ಟಿಪರ್ಸ್ ನಲ್ಲಿ ಮಾತ್ರೆಗಳ ಸ್ಟ್ರಿಪ್ಸ್ ನ ತುಂಬಿಸಿಕೊಂಡಿದ್ದಾರೆ. ಅದಕ್ಕೂ ರಬ್ಬರ್ ಬ್ಯಾಂಡ್ ಬೇರೆ..

ಮೂರು ಹೊತ್ತು ಅದನ್ನು ತೆರೆದು ಮಾತ್ರೆಗಳ ಸೇವಿಸುತ್ತಾರೆ. ತಿಂಗಳು ಮುಗಿದರೆ ಮಾತ್ರೆಯೂ ಮುಗಿದಂತೆ.

•••

ಅಪ್ಪ ಆಗೆಲ್ಲ ದುಡಿಮೆಗೆ ಹೋಗುತ್ತಿದ್ದಾಗ ಪೆನ್ನು ಪೇಪರು ಹಿಡಿದು ಅದೇನೋ ಲೆಕ್ಕಚಾರ ಮಾಡುತ್ತಲೆ ಇರುತ್ತಿದ್ದರು. ಕೆಲವೊಮ್ಮೆ ಮಂಡೆಬಿಸಿ ಮಾಡಿಕೊಳ್ಳುತ್ತಿದ್ದರು.

ಈಗ ಪೆನ್ನು ಎಲ್ಲಿದೆಯೋ ?? ಖಾಲಿ ಹಾಳೆಗಳ ಕಂಡಾಗೆಲ್ಲ ಏನಾದರು ಗೀಚುವ ಅನಿಸುವುದು..

ಮಗನದೋ ಫೋನ್ ಪೇ_ಯಲ್ಲೇ ವ್ಯವಹಾರ. ಮೊಬೈಲ್ ನಲ್ಲೇ ನೋಟ್ಸ್ ಮಾಡಿಕೊಳ್ಳುವ ಬಿಡಿ.

•••÷•••

ಹೀಗೆ ಅಪ್ಪ ಮಗನೆಂದರೆ ಹಣ್ಣೆಲ್ಲೆ- ಚಿಗುರೆಲೆಯಿದ್ದಂತೆ. ಅಪ್ಪ ಮಾಡಿದ್ದನ್ನೇ ಮಗನು ಮಾಡುತ್ತಿರುವ.

ಅವಕಾಶ, ಪರಿಸ್ಥಿತಿ, ಸೌಲಭ್ಯಗಳು ಬೇರೆಯಾಗಿವೆ ಎಂಬುದು ಅಷ್ಟೆ ವ್ಯತ್ಯಾಸ.

ಅವನು ಕೂಡ ನಾಳೆ ಸೇಫ್ಟೀ ಪರ್ಸ್ ಮೊರೆ ಹೋಗುವ ಎಂಬುದೇ ಸತ್ಯ. 


✒ ಸಿಂಧು ಭಾರ್ಗವ, ಬೆಂಗಳೂರು

ಲೇಖಕಿ.

No comments:

Post a Comment