Wednesday 1 March 2023

ನನ್ನ ಬಿಂಬ

 


ಶೀರ್ಷಿಕೆ : ಮನಸಾರೆ ಅಳುವಾಸೆ


ನೋವಿನ ಮನದ ಭಾರವ ಇಳಿಸಲು

ಮನಸಾರೆ ಅತ್ತು ಬಿಡುವಾಸೆ

ಆದರೆ

ನಾನೀಗ ಎರಡು ಮಕ್ಕಳ ತಾಯಿ

ಹಾಗೆಲ್ಲ ಮಕ್ಕಳೆದುರು ಅಳುವ ಹಾಗಿಲ್ಲ..

ಗಂಡನ ಎದುರು ಅತ್ತರೆ

ಒಮ್ಮೆ ಸಮಾಧಾನ ಮಾಡಬಹುದು

ಮತ್ತೆ ನಾಟಕ ಎಂದು ಕೊಳ್ಳುವರು..

ಮಕ್ಕಳ ಎದುರು ಅತ್ತರೆ?!

ಏನಾಯ್ತಮ್ಮಾ ?? ಎಂದು ಕೇಳುವರು

ಅದರ‌ ಕಾರಣ, ತಂದೆ ಎಂದು ತಿಳಿದರೆ

ಅಪ್ಪನನ್ನೇ ದ್ವೇಷಿಸಲು ಮುಂದಾಗುವರು..

ಬೇಡವೇ ಬೇಡ...

ಹುಟ್ಟಿಸಿದ ತಂದೆಯನ್ನು

ಕಡೆಗಣಿಸುವುದು ಬೇಡ..

ನನ್ನ ನೋವು ನನಗಿರಲಿ

ಹೆಚ್ಚೇನಿಲ್ಲ, ನನ್ನ ಆಸೆ ಕನಸುಗಳಿಗೆ

ಇಲ್ಲಿ‌ ಜಾಗವೇ ಇಲ್ಲ.

ಹಣವೆಂಬ ಮಾರಿ ಎಲ್ಲವ

ನುಂಗಿ ಹಾಕುವಾಗ

ಎಷ್ಟು ಲಕ್ಷ್ಮೀ ಪೂಜೆ ಮಾಡಿದರೂ ಫಲವಿಲ್ಲ.


ಹೆಚ್ಚೇನಿಲ್ಲ..

ನಾನು ಅಳಬೇಕು ಎಂದುಕೊಂಡರೂ

ಪಕ್ವವಾಗುತ್ತಿರುವ ಬುದ್ಧಿ

ದಪ್ಪವಾಗುತ್ತಿರುವ ಚರ್ಮ

ಗಟ್ಟಿಗೊಳ್ಳುವ ಮನಸ್ಸು

ಅಳಲೂ ಬಿಡುತ್ತಿಲ್ಲ.

ಎಲ್ಲವನ್ನೂ ನುಂಗುಕೊಂಡು

ಇದೆಲ್ಲ ಮಾಮೂಲು ಎಂದುಕೊಂಡು

ಹೆಜ್ಜೆ  ಹಾಕುವುದೇ ಜೀವನ..



ಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟಲು ಹೆತ್ತವರು ಶಕ್ತರು

ಅದೇ ಮಡದಿಯ ಕನಸುಳಿಗೆ ಇಲ್ಲಿ ಕಿವಿಗಳಿಲ್ಲ..

ಗೃಹಿಣಿಯ ಪಾಡು ಕೇಳುವವರಿಲ್ಲ..

ನಾನೂ ಕೆಲಸಕ್ಕೆ ಹೋಗುವೆ ಎಂದರೆ ಒಪ್ಪಿಗೆ ಇಲ್ಲ

ಬದುಕು ಬಂದಂತೆ ಸ್ವೀಕರಿಸುತ್ತ

ಹೆಜ್ಜೆ ಹಾಕುವಾಗಲೇ ಕಲ್ಲು ಮುಳ್ಳುಗಳು

ಕಾಲಿಗೆ ಚುಚ್ಚುವುದು‌..

ನಾನು ಅಳುವ ಹಾಗಿಲ್ಲ..

ಮಕ್ಕಳೇ ಬಂದು ಸಮಾಧಾನ ಪಡಿಸುವರು

ಧೈರ್ಯ ತುಂಬುವರು..

ಅವರ ಮುಂದೆ ನಾನು ಚಿಕ್ಕವಳಾಗಿ ಬಿಡುವುದೇ?!


ಇಲ್ಲ ಇಲ್ಲ.... ನಾನು ಅಮ್ಮ,

ಎಲ್ಲವನ್ನೂ ಇಂಗಿಸಿಕೊಂಡು

ಬಲೂನಿನಂತೆ ಗಾಳಿ ತುಂಬಿಸಿಕೊಂಡು

ಉಬ್ಬಿಕೊಂಡು ಬಳ್ಳಿಯಂತೆ ಹಬ್ಬಿಕೊಂಡು

ಬದುಕ ಕಟ್ಟಿಕೊಳ್ಳಬೇಕು..

ಇದೇ ವಾಸ್ತವ..


ಸತ್ಯದ ದರ್ಪಣದಲ್ಲಿ

ನನ್ನ ಮುಖ ಚಂದವೇ ಕಾಣುತ್ತದೆ.

ಕೊಂಚ ನಗು ಎನ್ನುತ್ತದೆ..

ನಾನು ನಗುವೆ,‌ ನನ್ನ ಬಿಂಬವಾದ ಅದು ಕೂಡ ನಗುತ್ತದೆ.


ರಚನೆ ::  ಸಿಂಧು ಭಾರ್ಗವ ,ಬೆಂಗಳೂರು.


ಬರಹ 01 Mar 2023 (ಮೊಬೈಲ್ ಚಿತ್ರ)

No comments:

Post a Comment