Tuesday 7 March 2023

Holi festival celebration at Udupi

 



ಬಾಲ್ಯದ ನೆನಪು : ಲೇಖಕಿ ಸಿಂಧು ಭಾರ್ಗವ ಬೆಂಗಳೂರು


          ಹೋಳಿ ಹಬ್ಬ ಎಂದರೆ ಬಾಲ್ಯದ ನೆನಪುಗಳಿಗೆ ಮನಸ್ಸು ಜಾರುವುದು. ಗುಮ್ಟಿ (ಗುಮ್ಮಟೆ) ವಾದ್ಯದ ಸದ್ದು ಆ ಪುಟ್ಟ ಮಕ್ಕಳ ನೃತ್ಯ ಎಂದೂ ಮರೆಯಲು ಸಾಧ್ಯವಿಲ್ಲ. ಕೊನೆಯ ವಾರ್ಷಿಕ ಪರೀಕ್ಷಾ ಸಮಯದಲ್ಲೇ ಪ್ರತಿವರ್ಷ ಹೋಳಿ ಹಬ್ಬ ಬರುವಾಗ ನಮ್ಮ ಸ್ನೇಹಿತರಿಗೆ ಓದಲು ಶಾಲೆಗೆ ಬರಲು ಕಷ್ಟವಾಗುತ್ತಿತ್ತು. ಹಾಗೆಯೇ ಹೋಳಿ ಹಬ್ಬದ ಆಚರಣೆಯಲ್ಲಿ ತಪ್ಪಿಸಿಕೊಂಡರೆ ಅವರು ಮನೆಯವರಿಂದ ಬೈಗುಳ ತಿನ್ನಬೇಕಿತ್ತು. ಶಾಲೆಯಲ್ಲಿ ಸ್ವಲ್ಪ ವಿನಾಯಿತಿ ಪಡೆದು  ಖುಷಿಖುಷಿಯಾಗಿ ಜೊತೆಗೆ ಸೇರಿ ಹಬ್ಬವನ್ನು ಆಚರಿಸುತ್ತಿದ್ದರು. ನಮ್ಮ ಊರಲ್ಲಿ (ಹಳ್ಳಿಯಲ್ಲಿ) ಶೇಕಡಾ ೮೦%  ಮರಾಠರು, ಕುಡುಬಿ ಹಾಲಕ್ಕಿ ಜನಾಂಗದವರೇ ಇರುವುದು. ಉಳಿದಂತೆ ಬೇರೆ ಜಾತಿಯವರು ವಾಸವಾಗಿದ್ದಾರೆ. ಎಲ್ಲರೂ ಒಬ್ಬರಿಗೊಬ್ಬರು ಸಹಾಯಮಾಡಿಕೊಂಡು ಸ್ನೇಹದಿಂದ ಬದುಕ ಕಟ್ಟಿಕೊಂಡಿದ್ದಾರೆ.

ಇದರ ಮೂಲ: ಮೊದಲೆಲ್ಲ ಮರಾಠರು, ಕುಡುಬಿ (ಹಾಲಕ್ಕಿ ಜನಾಂಗದ ಜನರು) ಜನಾಂಗದವರಲ್ಲಿ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ) ಶಿಕ್ಷಿತರು, ಶಾಲೆಗೆ ಹೋಗುವುದು ತೀರಾ ಕಡಿಮೆ. ಏಳನೇ ತರಗತಿ ತನಕ‌ ಓದಿದರೆ ಅದೇ ಹೆಚ್ಚು. ಅವರು ಹೆಚ್ಚಾಗಿ ತಾಂಡ ಕಾಮನದಲ್ಲಿ ವಾಸಿಸುತ್ತಿದ್ದರು. ತಗ್ಗಾದ ಗುಡಿಸಲು ಮನೆ ಕಟ್ಟಿಕೊಂಡು ವಾಸವಿರುತ್ತಿದ್ದರು. ಗುಂಪು ಗುಂಪಾಗಿ ವಾಸಿಸುತ್ತಿದ್ದರು. ಆಗೆಲ್ಲ ಶಿಕ್ಷಣ, ಮೂಲ ಸೌಕರ್ಯಗಳ ಕೊರತೆ ಎದುರಾಗುತ್ತಿತ್ತು. ತೋಟದ ಕೆಲಸ, ಬುಟ್ಟಿ ಹೆಣೆಯುವುದು, ಹಸುಸಾಕಾಣಿಕೆ, ತರಕಾರಿ ಬೆಳೆಸುವುದು, ಕಾಡು ಜೇನು ಸಂಗ್ರಹಿಸಿ ಮಾರುವುದು, ಸೊಪ್ಪು, ತರಕಾರಿ ಬೆಳೆಸುವುದು, ಹೂವು, ಗಡ್ಡೆ ಗೆಣಸು ಬೆಳೆಸುವುದು ಅದನ್ನು ಸಂತೆಗೆ ಮನೆಮನೆಗೆ ಮಾರುವುದು ಅವರ ಜೀವನೋಪಾಯದ ದಾರಿಯಾಗಿದೆ. ಕೆಲವು ಔಷಧೀಯ ಗಿಡಮೂಲಿಕೆಗಳ ಪರಿಚಯ ಅವರಿಗೆ ಚೆನ್ನಾಗಿದೆ. ನಾಟಿ ವೈದ್ಯರಂತೆ ಕೆಲಸಮಾಡುತ್ತಾರೆ. ಬಹಳ ಚುರುಕುತನ, ಸೂಕ್ಷ್ಮವಾಗಿ ಕಿವಿ ದೃಷ್ಟಿ ಅವರದು.

ಆದರೆ ಈಗ ಆ ಸಮಸ್ಯೆಗಳಿಲ್ಲ. ಸರ್ಕಾರದಿಂದ ಅನೇಕ ಯೋಜನೆಗಳು ಅವರಿಗಾಗಿ ಬಂದಿವೆ. ಸಾಲ ಪಡೆಯಬಹುದು, ಮೀಸಲಾತಿ, ಅವರು ಕೂಡ ಓದಿನಲ್ಲಿ ಆಸಕ್ತಿ ತೋರಿಸುವ ಕಾರಣ ಅತ್ಯಂತ ಹೆಚ್ಚು ಅಂಕ ಗಳಿಸಿ ಸರ್ಕಾರಿ ಉದ್ಯೋಗ ಪಡೆದವರು ತುಂಬಾ ಜನರಿದ್ದಾರೆ. ಅಲ್ಲದೇ ಕೃಷಿ ತರಕಾರಿ ಕೂಡ ಬೆಳೆಸುವುದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮರೆತಿಲ್ಲ.


ಇದರ ಹಿನ್ನೆಲೆ: ಕೆಲವರು ಅನಾರೋಗ್ಯ ಸಮಸ್ಯೆ ಎದುರಾದರೆ ಮಕ್ಕಳು (ಸರಿಯಾಗಿ ನಡೆದುಕೊಳ್ಳದೇ ಇದ್ದರೆ) ಮೊಂಡು, ಹಟಮಾರಿತನವಿದ್ದರೆ ಮುಂದಿನ ಹೋಳಿಗೆ ಮಗನ ಕಾಲಿಗೆ ಗೆಜ್ಜೆ ಕಟ್ಟುವೆ ಎಂದು ತಾಯಂದಿರು ಹರಕೆ ಹೊರುತ್ತಾರೆ. ಹೀಗೆ ಚಿಕ್ಕವರಿಂದಲೇ ಹೋಳಿ ಕುಣಿತಕ್ಕೆ (ನೃತ್ಯಕ್ಕೆ) ಪದಾರ್ಪಣೆ ಮಾಡುವರು. ನಂತರ ಗುರಿಕಾರರ ಸಲಹೆ ಸೂಚನೆ ಮೇರೆಗೆ ಗುಮ್ಟಿ ವಾದ್ಯವನ್ನು ನುಡಿಸುತ್ತಾ ಹಾಡು ಹೇಳುತ್ತ ಮೊದಲು ದೇವಿಯ ಎದುರು ನೃತ್ಯಮಾಡಿ ನಂತರ ಆ ಊರಿನ ಮನೆಮನೆಗೆ ಬರುತ್ತಾರೆ.

ಗದ್ದುಗೆ ಅಮ್ಮನವರಿಗೆ (ವನದುರ್ಗೆ) ಪೂಜೆ ಸಲ್ಲಿಸಿ ಐದು ದಿನಗಳ ಮೊದಲೇ ಕುಡಿತವನ್ನು ಬಿಟ್ಟು ದೇವಿಯ ಆರಾಧನೆಯಲ್ಲಿ ತೊಡಗುತ್ತಾರೆ. ಅವರಲ್ಲಿ ಗುರಿಕಾರರ ಮಾತೇ ಅಂತಿಮ. ಯಾರು ಯಾವ ಊರಲ್ಲಿ ಇದ್ದರು ಕೂಡ ಹೋಳಿ ಹಬ್ಬಕ್ಕೆ ಊರಿಗೆ ಬರಲೇಬೇಕು. ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಮಕ್ಕಳು ಸಹ ಹಾಡುಗಳನ್ನು, ಹೆಜ್ಜೆಹಾಕುವುದನ್ನು ಕಲಿತಿರಬೇಕು. ಅವರ ವರ್ಣಮಯ ವೇಷವನ್ನು ನೋಡುವುದೇ ಚಂದ. ತಲೆಯಲ್ಲಿ ಮುಂಡಾಸು ಕಟ್ಟಿಕೊಂಡು ಅದಕ್ಕೆ ಅಬ್ಬಲಿಗೆ ಹೂವಿನ, ಚೆಂಡು ಹೂವಿನ ಮಾಲೆಯನ್ನು ಸುತ್ತಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕಿರೀಟದಂತೆ ಹಕ್ಕಿಯ ಗರಿಯನ್ನು ಸಿಕ್ಕಿಸಿಕೊಂಡಿರುತ್ತಾರೆ. ಉದ್ದ ಕೈ ನಿಲುವಂಗಿ, ವಿವಿಧ ಬಣ್ಣದ ನೆರಿಗೆ ಕಟ್ಟಿದ ಪಟ್ಟಿ, ನೀಟಾಗಿ ಸೀರೆ ಸುತ್ತಿಕೊಂಡು, ಸೊಂಟಕ್ಕೆ ಬಿಗಿಯಾಗಿ ಇನ್ನೊಂದು ಪಟ್ಟಿ ಕಟ್ಟಿಕೊಳ್ಳುತ್ತಾರೆ. ಮಧ್ಯಾಹ್ನದ ಮೇಲೆ ಮನೆಮನೆ ತೆರಳಲು ಸಿದ್ಧರಾಗುವರು.




ಅವರನ್ನು ಸ್ವಾಗತಿಸಲೆಂದೇ ನಾವು ಮನೆಯ ಅಂಗಳವನ್ನು ಸಗಣಿಯಿಂದ ಅಂದವಾಗಿ ಸಾರಿಸುತ್ತೇವೆ. ಅವರು ಬರುವವರೆಗೆ ಕಾಯುತ್ತ ಕುಳಿತಿರುತ್ತೇವೆ. ಕೆಲವೊಮ್ಮೆ ಮಧ್ಯಾಹ್ನ, ಕೆಲವೊಮ್ಮೆ ಸಂಜೆ ರಾತ್ರಿ ೧೦ ಗಂಟೆ ಸಹ ಆಗಬಹುದು. ಮನೆಗೆ ಬಂದ ಕೂಡಲೇ ಅವರೇ ನೀರು ಕೇಳಿ ಪಡೆದು ಕೈಕಾಲು ತೊಳೆದುಕೊಂಡು ನೃತ್ಯ ಪ್ರಾರಂಭಿಸುತ್ತಾರೆ. ಹದಿನೈದು ಜನ ಗುಂಮ್ಟಿ ಹಿಡಿದು ಬಡಿಯುತ್ತಾ ವೃತ್ತಾಕಾರವಾಗಿ ಕುಣಿಯುತ್ತಾ ಬರುತ್ತಾರೆ. ಗುಂಮ್ಟಿಯ ಜೊತೆಗೆ ತಟ್ಟೆಯಾಕಾರದ ತಾಳ ಬಡಿಯುತ್ತಾ ಕುಣಿಯುತ್ತಾ ಸುತ್ತು ಬರುತ್ತಾರೆ. ಬಣ್ಣ ಬಣ್ಣದ ಹೂವ ತಾಂಬೆ ಎಂದು ಹಾಡುತ್ತಾ ಕುಣಿಯುತ್ತಾರೆ. ಕುಣಿತ ವೇಗ ಪಡೆದಂತೆ ತಮ್ಮಲ್ಲಿರುವ ಕೋಲಾಟದ ನೃತ್ಯ ಪ್ರಾರಂಭವಾಗುತ್ತದೆ. ಎಗರಿ ಎಗರಿ ಕುಣಿವ ಚೆಂದ ಅದಕ್ಕೆ ಅವರದೇ ಆದ ಮರಾಠಿ ಭಾಷೆಯ ಹಾಡು ಒಂದಕ್ಕೊಂದು ಮಿಳಿತಗೊಂಡು ವಿಶೇಷವಾದ ಭಕ್ತಿ ಸನ್ನಿವೇಶ ಮೂಡಿಬರುತ್ತದೆ. ಜನಪದ ಸೊಗಡನ್ನು ಹೊಂದಿದ ಅವರ ನೃತ್ಯ ಬಾಯಿಯಿಂದ ಬಾಯಿಗೆ ಬಂದಿರುವ ಪದ ಕಟ್ಟಿ ಹಾಡುವ ಹಾಡು ಕೇಳಲು ಕಿವಿಗೆ ತಂಪಾಗಿರುತ್ತದೆ. ಕೈಲಾಸವಾಸಿ ಶಿವನ ಕತೆ, ಕಾಮದಹನ , ಕೃಷ್ಣನ ಬಾಲಲೀಲೆ ಹೀಗೆ ಅನೇಕ ಘಟನೆಗಳು ಪದ್ಯದಲ್ಲಿರುತ್ತದೆ.

ಅವರು ಹೋಗುವ ಮನೆಯಲ್ಲಿ ಪುಟ್ಟ ಮಗುವಿದ್ದರೆ ಅದನ್ನು ಭುಜದ ಮೇಲೆ ಕೂರಿಸಿಕೊಂಡು ನೃತ್ಯಮಾಡುತ್ತಾರೆ. ಭಯವನ್ನು ಓಡಿಸಲು ಹೀಗೆ ಮಾಡುವರು ಎಂಬ ನಂಬಿಕೆ. ನಂತರ ಕೋಲಾಟ, ಮಕ್ಕಳ ನೃತ್ಯ ಗುಮ್ಟಿ ನೃತ್ಯ ಹೀಗೆ ಮೂರು ಹಂತದಲ್ಲಿ ಇದೆ. ಕೊನೆಗೆ ಮನೆಯ ಯಜಮಾನ ಒಂದು ಸೇರು ಅಕ್ಕಿ, ಎಲೆ ಅಡಿಕೆ, ತೆಂಗಿನ ಕಾಯಿ, ಹಣ ಶಕ್ತಿಗನುಸಾರವಾಗಿ ನೀಡಿ ನಮಸ್ಕರಿಸುತ್ತಾರೆ. ಲೋಕರೂಢಿ ಮಾತು , ಕಷ್ಟ ನಷ್ಟದ ಬಗ್ಗೆ ಮಾತಿಗಿಳಿಯುತ್ತಾರೆ. ಅವರ ಜಾತಿಯವರ ಮನೆಯಲ್ಲಿ ರಾತ್ರಿ ಊಟದ ವ್ಯವಸ್ಥೆ ಇರುತ್ತದೆ. ಒಂದು ೩೦ರಿಂದ ೪೦ ಜನರ ಮೇಲೆ ಸೇರುತ್ತಾರೆ.ಪ್ರತಿರಾತ್ರಿ ಒಬ್ಬೊಬ್ಬರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಬೇಕು.


ನಂತರ ಮತ್ತದೇ ದೇವಸ್ಥಾನಕ್ಕೆ ಹೋಗಿ ಮನೆಮನೆಯಲ್ಲಿ ಕೊಟ್ಟ ಪಡಿಯನ್ನು ಇರಿಸಿ ನಮಸ್ಕರಿಸಿ ಅದನ್ನು ಒಟ್ಟಾಗಿ ಉಪಯೋಗಿಸುತ್ತಾರೆ. ಕಷ್ಟದಲ್ಲಿರುವವರ ಅಭಿವೃದ್ಧಿಗೆ ವಿನಿಯೋಗಿಸುತ್ತಾರೆ. ಈ ಆಚರಣೆಯನ್ನು ಇಂದಿಗೂ ಚಾಚೂತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ ಎಂಬುವುದೇ ವಿಶೇಷ.

ಕೊನೆಯ ದಿನ ಅಂದರೆ ಫಾಲ್ಗುಣ ಶುದ್ಧ ಹುಣ್ಣಿಮೆಯ ರಾತ್ರಿ ನಡುವಿನಲ್ಲಿ ಕಟ್ಟಿಗೆಯ ಬೆಂಕಿ ಹಾಕಿ ಅದರ ಸುತ್ತ‌ ನರ್ತಿಸಿ ಕೊಳದಲ್ಲಿ ಓಕುಳಿಯ ನೀರಿನಿಂದ ಸ್ನಾನ ಮಾಡುವರು. ನೀರಾಟವಾಡುತ್ತ ಸಂಭ್ರಮಿಸುವರು.



(ಹೇರಾಡಿ ಗ್ರಾಮ ಬಾರಕೂರು ಉಡುಪಿ ಜಿಲ್ಲೆ ...)
(ಕೆಲ ಸಂಗ್ರಹಿತ ಚಿತ್ರ ಮಾಹಿತಿ ಅಂತರ್ಜಾಲ ಕೃಪೆ)
.
.
..

No comments:

Post a Comment