Showing posts with label ಸಿಂಧು ಭಾರ್ಗವ. Show all posts
Showing posts with label ಸಿಂಧು ಭಾರ್ಗವ. Show all posts

Tuesday, 28 March 2023

ಕವನ :ಬರಹದಲ್ಲಿ ಏನು ಅಡಗಿದೆ??

 

ಗೂಗಲ್ ಚಿತ್ರ



ಬರಹದಲ್ಲೇನು ಅಡಗಿದೆ??


ಬರಹದಲ್ಲಿ ಅಡಗಿದೆ ಸಂತಸ

ವಿರಹದಲ್ಲಿ ಅಡಗಿದೆ ದುಃಖ

ಗೆಲುವಿನಲ್ಲಿ ಅಡಗಿದೆ ಗರುವ

ಸೋಲಿನಲ್ಲಿ ಅಡಗಿದೆ ಪಾಠ..


ಬರೆಯುತಲಿ‌ ನೋವ ಮರೆಯಬಹುದು

ಕಲ್ಪನೆಗೆ ಜೀವ ತುಂಬಬಹುದು

ಓದುಗರ ಮನ ತಣಿಸಬಹುದು

ಕುತೂಹಲವನು ಕೆರಳಿಸಬಹುದು


ಭಾವಜೀವಿಯಾಗಿ ವಿಹರಿಸಬಹುದು

ಕನಸುಗಳ ಹೆಣೆಯಬಹುದು

ಬರಹದಿಂದ ಬದಲಾವಣೆಯು

ಮೂಡಿಸಬಹುದು ಹೊಸತನವು


ಬರವಣಿಗೆ ಎಂದರೆ ಸ್ಪರ್ಧೆಯಲ್ಲ

ಬಹುಮಾನ ಪ್ರಮಾಣಪತ್ರಕೆ ಹಾತೊರೆಯಬೇಕಿಲ್ಲ

ಒಳಗುಂಪುಗಾರಿಕೆ ನಡೆಸುವ ಗುಂಪುಗಳು

ಸಾಹಿತ್ಯಸೇವೆಯೆಂಬ ಹೆಸರನ್ನು ಇರಿಸಿಕೊಂಡಿಹರು


ಬರವಣಿಗೆ ಎಂಬುದು ಆತ್ಮಸಖ

ನಮ್ಮೊಳಗಿನ ಹೊಯ್ದಾಟಕೆ 

ಕಂಡುಕೊಳ್ಳುವ ಮುಕ್ತಿಪಥ..

ಸಾಗೋಣ ನಿರಂತರ ಕೃಷಿಯಲ್ಲಿ

ತೊಡಗಿಸಿಕೊಳ್ಳೋಣ ಬರವಣಿಗೆಯಲ್ಲಿ


- ಸಿಂಧು ಭಾರ್ಗವ ಬೆಂಗಳೂರು.


ಎರಡು ತಲೆಮಾರು ಕವನ

ಎರಡು ತಲೆಮಾರು

Pinterest image




ಅಪ್ಪನಿಗೆ ಅರವತ್ತಾದರೆ. ಮಗನಿಗಿನ್ನೂ ಮೂವತ್ತು.

ಅಪ್ಪನಿಗೆ ಬಿಸಿ ರಕ್ತ ತಣ್ಣಗಾಗುತ್ತ ಬಂದರೆ

ಮಗನಿಗೆ ಕುದಿಯುವ ಬಿಸಿಹುಮ್ಮಸ್ಸು...

•••

ಆಗೆಲ್ಲ, ಅಪ್ಪನ ಕೋಣೆ ತುಂಬಾ‌ ಫರ್ಫ್ಯೂಮು ಸುವಾಸನೆ

ಈಗ ಬಿಪಿ ಶುಗರು, ಮಂಡಿನೋವಿನ ಎಣ್ಣೆಯ ವಾಸನೆ

ಮಗನ ಮೈತುಂಬಾ ಬೆವರ ಹನಿಗಳ ಘಮ

ಅವನ ಬಳಿಯಿರುವ ಸುಗಂಧದ್ರವ್ಯಕ್ಕೂ ಬೆಲೆ ಜಾಸ್ತಿ..

•••

ಅಪ್ಪನ ಅನುಭವದ ಮಾತುಗಳು ಮಗನಿಗೆ ಬೇಡವೀಗ.

ಮಗನು ತನ್ನ ಮೇಲೇ ತಾ ಪ್ರಯೋಗಗಳ ಮಾಡಿಕೊಳ್ಳುತ್ತಾ

ಜೀವನವೇ ಒಂದು ಚಾಲೆಂಜ್ ಎಂದು ತೋರಿಸಿಕೊಡಲು ಹೊರಟವ..

•••

ಅಪ್ಪನಿಗೆ ಆಗಾಗ್ಗೆ ಕಾಡುವ ಆರೋಗ್ಯ ಸಮಸ್ಯೆಗೆ

ಸರಿಯಾಗಿ ಮಾತ್ರೆ ತಿನ್ನದೇ ಇರುವುದೇ ಕಾರಣ

ಎಂಬ ತರ್ಕ ಮಗನದ್ದು.

ಆಗಾಗ್ಗೆ ಏರುಪೇರಾಗುವ ತಂದೆಯ ಮನೋಬಲ, ಆತಂಕ, ಒಳಗೊಳಗೆ ಪುಕಪುಕ, ಟೊಳ್ಳಾಗುತ್ತಿರುವ ದೇಹ, ಮೂಳೆ ಮಾಂಸ ಮಜ್ಜೆಗಳು ಎಂದು ಒಪ್ಪುವ ಮನಸಿಲ್ಲ..

ಮಗನಿಗೋ ಕಲ್ಲು ಬಂಡೆಯನ್ನೂ ಒಡೆದುಹಾಕುವಷ್ಟು ಧೈರ್ಯ, ತಾಕತ್ತಿರುವ ರೆಟ್ಟೆಗಳು.

•••

ಅಪ್ಪನಿಗೆ ರಾತ್ರಿ ಕಣ್ಣಿಗೆ ನಿದ್ದೆ ಹತ್ತುವುದಿಲ್ಲ, ಪದೇ‌ಪದೇ ಮೂತ್ರಕ್ಕೆ ಹೋಗಬೇಕು.. ಶುಗರ್ ಎಂದರೆ ಹಾಗೆ ತಾನೆ?!

ಈ ಮಗನೋ ಒಮ್ಮೆ ದುಡಿದು ಮನೆಗೆ ಬಂದರೆ ಬುಸ್ಸಪ್ಪನ ತರಹ ಬಿದ್ದುಬಿಡುವ. ಬೆಳಿಗ್ಗೆಯೇ ಎಚ್ಚರವಾಗುವುದು.. ನಿದ್ದೆಗೆ ಇನ್ನೂ ಸಮಯಬೇಕು ಎಂದು ಹಪಹಪಿಸುವ.

•••

ಆಗ ಅಪ್ಪನ ಪರ್ಸ್ ತುಂಬಾ ನೋಟಿನ ಕಂತೆಗಳಿದ್ದವು.

ಪದೇ ಪದೇ ಎಣಿಸುತ್ತಾ ನಸುನಗುತ್ತಿದ್ದರು‌. ಮಗನಿಗೆ ತೋರಿಸಿ ಹೇಳಿ "ತಾನು ಹಣವಂತ" ಎಂದು ಒಳಗೊಳಗೆ ಬೀಗುತ್ತಿದ್ದರು. ಮಗನ ಕಣ್ಣಲ್ಲೂ ಕನಸುಗಳನ್ನು ತುಂಬಿಸಿದ್ದರು.

ಈಗ ಅಂತದ್ದೇ ಸೇಫ್ಟಿಪರ್ಸ್ ನಲ್ಲಿ ಮಾತ್ರೆಗಳ ಸ್ಟ್ರಿಪ್ಸ್ ನ ತುಂಬಿಸಿಕೊಂಡಿದ್ದಾರೆ. ಅದಕ್ಕೂ ರಬ್ಬರ್ ಬ್ಯಾಂಡ್ ಬೇರೆ..

ಮೂರು ಹೊತ್ತು ಅದನ್ನು ತೆರೆದು ಮಾತ್ರೆಗಳ ಸೇವಿಸುತ್ತಾರೆ. ತಿಂಗಳು ಮುಗಿದರೆ ಮಾತ್ರೆಯೂ ಮುಗಿದಂತೆ.

•••

ಅಪ್ಪ ಆಗೆಲ್ಲ ದುಡಿಮೆಗೆ ಹೋಗುತ್ತಿದ್ದಾಗ ಪೆನ್ನು ಪೇಪರು ಹಿಡಿದು ಅದೇನೋ ಲೆಕ್ಕಚಾರ ಮಾಡುತ್ತಲೆ ಇರುತ್ತಿದ್ದರು. ಕೆಲವೊಮ್ಮೆ ಮಂಡೆಬಿಸಿ ಮಾಡಿಕೊಳ್ಳುತ್ತಿದ್ದರು.

ಈಗ ಪೆನ್ನು ಎಲ್ಲಿದೆಯೋ ?? ಖಾಲಿ ಹಾಳೆಗಳ ಕಂಡಾಗೆಲ್ಲ ಏನಾದರು ಗೀಚುವ ಅನಿಸುವುದು..

ಮಗನದೋ ಫೋನ್ ಪೇ_ಯಲ್ಲೇ ವ್ಯವಹಾರ. ಮೊಬೈಲ್ ನಲ್ಲೇ ನೋಟ್ಸ್ ಮಾಡಿಕೊಳ್ಳುವ ಬಿಡಿ.

•••÷•••

ಹೀಗೆ ಅಪ್ಪ ಮಗನೆಂದರೆ ಹಣ್ಣೆಲ್ಲೆ- ಚಿಗುರೆಲೆಯಿದ್ದಂತೆ. ಅಪ್ಪ ಮಾಡಿದ್ದನ್ನೇ ಮಗನು ಮಾಡುತ್ತಿರುವ.

ಅವಕಾಶ, ಪರಿಸ್ಥಿತಿ, ಸೌಲಭ್ಯಗಳು ಬೇರೆಯಾಗಿವೆ ಎಂಬುದು ಅಷ್ಟೆ ವ್ಯತ್ಯಾಸ.

ಅವನು ಕೂಡ ನಾಳೆ ಸೇಫ್ಟೀ ಪರ್ಸ್ ಮೊರೆ ಹೋಗುವ ಎಂಬುದೇ ಸತ್ಯ. 


✒ ಸಿಂಧು ಭಾರ್ಗವ, ಬೆಂಗಳೂರು

ಲೇಖಕಿ.

Friday, 27 January 2023

ಕವಿ‌ ಕೃತಿ ಪರಿಚಯ: ಭಾವನೆಗಳಿಲ್ಲದವಳ ಭಾವತೀರಯಾನ ಗಜಲ್ ಸಂಕಲನ

 ಕವಿ‌ ಕೃತಿ ಪರಿಚಯ: ಭಾವನೆಗಳಿಲ್ಲದವಳ ಭಾವತೀರಯಾನ

ಕನ್ನಡ ಗಜಲ್ ಸಂಕಲನ -೨೦೨೧

ಅಮೃತಾ ಎಂ ಡಿ.

ನೇರಿಶಾ ಪ್ರಕಾಶನ ಚಿತ್ರದುರ್ಗ.

Publisher Contact number: 8277889529

Mail Id: 

Nerishaprakashanakadur2020@gmail.com

(ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಧನ ಸಹಾಯ ಪಡೆದ ಕೃತಿ)




🌼🌼🌼🌼🌼🌼🌼🌼🌼🌼🌼🌼🌼🌼

ಕವಯತ್ರಿ ಅಮೃತಾ ಎಂ ಡಿ ಅವರ ಸ್ವರಚಿತ ಚೊಚ್ಚಲ ಕನ್ನಡ ಗಜಲ್ ಸಂಕಲನ ಇದಾಗಿದೆ. ಕನ್ನಡ ಗಜಲ್ ಗಳ ಮೂಲಕ ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಗಜಲ್ ಎಂಬುದು ಅರಬ್ಬೀ ಪದ. ಉರ್ದು ಸಾಹಿತ್ಯದಲ್ಲಿ ೨೫ಕ್ಕೂ ಅಧಿಕ ಕಾವ್ಯ ಪ್ರಕಾರಗಳಿವೆ. ಅದರಲ್ಲಿ ಗಜಲ್, ರುಬಾಯಿ, ಶಹರ್ ಕೂಡ ಒಳಗೊಂಡಿದೆ. ಅದರಲ್ಲಿ "ಗಜಲ್ ಉರ್ದು ಕಾವ್ಯದ ರಾಣಿ" ಎನ್ನುವರು. ರುಬಾಯಿ ಶಹರ್ ಪ್ರಸ್ತುತ ಕನ್ನಡದಲ್ಲಿ ಕೂಡ ಸದ್ದು ಮಾಡುತ್ತಿದೆ. 



ನವನವೀನ ಸಾಹಿತ್ಯ ಪ್ರಕಾರಗಳ ಕಲಿತು ಬರೆಯುವ ಯುವ ಕವಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದು ಸಾಹಿತ್ಯ ಕ್ಷೇತ್ರದಲ್ಲಿ ಭರವಸೆ ಮೂಡಿಸುವ ಕವಿಗಳನ್ನು ಹೊಂದಲು ಸಾಧ್ಯವಾಗಬಹುದು ಎಂಬ ಅಭಿಪ್ರಾಯ ಹಿರಿಯರಲ್ಲಿ ಮೂಡಿದೆ. ಈ ಗಜಲ್ ಎಂದರೆ ಹೆಂಗಸರ ಸಂಭಾಷಣೆ, ಪ್ರೀತಿ, ಅನುರಾಗ, ಭಾವನೆಗಳ ವ್ಯಕ್ತಪಡಿಸುವುದು. ಮತ್ಲಾ, ಕಾಫಿಯಾ, ರದೀಪ ಮಕ್ತಾಗಳಿಂದ ರಚಿಸಲ್ಪಡುತ್ತದೆ. ಉಪಮೆ, ರೂಪಕಗಳ ಮೂಲಕ ಇನ್ನಷ್ಟು ಮೆರಗುನೀಡಬಹುದು. ಕನ್ನಡದಲ್ಲಿ ಮೃದು ಮಧುರ ಭಾವಮೂಡಿಸುವ ಗಜಲ್ ಗಳ ಪರಿಚಯಿಸಿದರು "ಶಾಂತರಸರು". ಗಜಲ್ ಗಳು ಓದಿದವರಿಗೆ ಹೃಯದವನ್ನು ನಾಟುವಂತಿರಬೇಕು. ಚಿಂತನೆಗೆ ತಳ್ಳಬೇಕು, ಮನ ಚಡಪಡಿಸುವಂತಿರಬೇಕು. ನಂತರದಲ್ಲಿ ಜೀವನ ಎಲ್ಲ ಆಯಾಮಗಳಲ್ಲಿಯೂ ಕಷ್ಟ-ಸುಖಗಳನ್ನು ತೋಡಿಕೊಳ್ಳಲು ಗಜಲ್ ರೂ‌ಪ ನೀಡಲಾಯಿತು. ಅಲ್ಲದೇ ಸಮಾಜಮುಖಿಯಾಗಿ ಬರೆಯಲಾರಂಭಿಸಿದರು.


ಇನ್ನು ಕವಯಿತ್ರಿ ಅಮೃತಾ ಎಂ ಡಿ ಅವರ ಬಗೆಗೆ: 



ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯಾದ ಅಮೃತಾ ಡಿ. ಎಂ. ಅವರಲ್ಲಿನ ಹೊಸಹೊಸದನ್ನು ಕಲಿಯುವ ಆಸಕ್ತಿಯೇ ಈ ಗಜಲ್ ಗಳ ರಚನೆಗೆ ಸ್ಪೂರ್ತಿಯಾಗಿದೆ. ಇದರಲ್ಲಿನ ಪ್ರತಿ ಮಿಸ್ರಾಗಳು ಸುಲಭದಲ್ಲಿ ಓದಿಸಿಕೊಂಡು ಹೋಗುತ್ತವೆ. ಇವರು ಬಹಳ ಗಂಭೀರವಾಗಿ ಜೀವನವನ್ನು ನೋಡುವಂತಿದೆ. "ಶಬರಿ" ಎಂಬ ಕಾವ್ಯನಾಮದಡಿಯಲ್ಲಿ ಸುಮಾರು ೬೪ ಗಜಲ್ ಗಳನ್ನು ಬರೆದಿರುವ ಕವಯಿತ್ರಿ ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುತ್ತಾ, ಈ ಸಮಾಜದಲ್ಲಿನ ದುಸ್ಥಿತಿಗಳ ಕಂಡು ಮರಗುವರು, ಈ ಸಮಾಜ, ಪ್ರಕೃತಿಯ ಉಳಿವಿಗಾಗಿ ಇನ್ನಾದರು ಬದಲಾಗಿ ಎಂದು ಕರೆ ನೀಡುವರು. ಬದುಕಿನಲ್ಲಿ ಎದುರಾಗುವ ಕಷ್ಟಗಳ ವಿರುದ್ಧ ಹೋರಾಡಲು ಮನಸ್ಸು ಗಟ್ಟಿಯಾಗಿಸಿಕೊಳ್ಳಬೇಕು ಎನ್ನುವರು. 


****

ಗಜಲ್ ೩ ಪು.ಸಂ೩ ಅದರಲ್ಲಿ ಒಂದು ಶೇರ್


ಬಗ್ಗಲೇ ಬೇಕು, ಮಂಡಿಯೂರಿ ನಿಲ್ಲಲೇ ಬೇಕು

ಗರ್ವವೂ ಕರಗುವಾಗ|

ನಾಲ್ಕು ಜನರಿಗೆ ದಾರಿದೀಪವಾಗಬೇಕು 

ಸಾವು ಅರಸಿ ಬರುವ ಮುನ್ನ|| 


ಅಹಂಕಾರ ಕರಗುವಾಗ ಮಂಡಿಯೂರಿ ನಿಲ್ಲಲೇ ಬೇಕಾಗುತ್ತದೆ. ಸಾವು ಅರಸಿ ಬರುವ ಮೊದಲು ನಾಲ್ಕು ಜನರಿಗೆ ಸಹಾಯ ಮಾಡಿರಿ. ಬದುಕನ್ನು ಅರ್ಥಪೂರ್ಣವಾಗಿ ಜೀವಿಸಿರಿ ಎಂಬ ಸಂದೇಶ ಈ ಶೇರ್ ನಲ್ಲಿದೆ. ಪ್ರಕೃತಿಯ ಮಡಿಲಿಗೆ ಮೀಟುವುದು ಇರಿಯುವುದು ನೀವು ಕಲಿತ ವಿದ್ಯೆಯೇನು ಮೂಢನಂಬಿಕೆಯುಳ್ಳವರೆ ಎಚ್ಚೆತ್ತುಕೊಳ್ಳಿ ಪ್ರಕೃತಿಯ ವಿನಾಶಕ್ಕೆ ತಳ್ಳದಿರಿ ಎನ್ನುವರು. 


ಗಜಲ್ ೧೫ ಪು.ಸಂ.೧೫ ಐದು ಶೇರ್ ಇರುವ ಗಜಲ್ 

ಅನಂತದೆಡೆಗೆ ಧಾವಿಸುವ ಆಸೆ ಹುಚ್ಚಾಟವೆನಿಸಿದೆ| ಕಾರಿರುಳ ದರ್ಶನ ಕೂಪದಲ್ಲೇ ಬೇಯಿಸಿದೆ ಗಾಲಿಬ್|| ಶಬರಿಯ ಜೀವಮಾನವು ಉತ್ತರಕ್ಕಾಗಿ ಅಲೆಯುತ್ತಿದೆ| ಪ್ರಶ್ನೆಗಳ ತಾಣವೇ ಎದುರು ನಿಂತು ನರ್ತಿಸಿದೆ ಗಾಲಿಬ್||

ಭೀತಿಯೊಂದು ಎದುರಾಗಿ ಕಾಡುತ್ತಿದೆ ಸತ್ಯ ಮಿಥ್ಯಗಳ ಸೆಣಸಾಟದಲ್ಲಿ ಬಾಳು ಮರೀಚಿಕೆಯಂತೆ ಎನ್ನುವರು‌. ಜೀವನದ ಬಗ್ಗೆ ಗಂಭೀರ ಚಿಂತನೆ ಮಾಡುವಂತಹ ಗಜಲ್ ಎನ್ನಬಹುದು.


 ಗಜಲ್ ೨೦ ಪು.ಸಂ೨೦ ಇದರ ನಡುವೆ ಇನಿಯನ ನೆನಪಾಗಿ ರಸಮಯ ಕ್ಷಣಗಳ ಕಳೆಯ ಬಯಸುವ ಕವಯಿತ್ರಿ 


ಬೇಹುಗಾರಿಕೆ ಸಾಕಿನ್ನು ಮೃದು ಸ್ಪರ್ಶವ ನೀಡಿನ್ನು ಇನಿಯ|

ಸರಸ ಸಲ್ಲಾಪದಲ್ಲಿ ಮನವು ಮೀಯಬೇಕಿನ್ನು ಇನಿಯಾ|| 

ತುಸು ತರಲೆ ತುಂಟಾಟವ ನೀ ಮಾಡುತ್ತಲೇ ಇರಬೇಕು|

ಪೋಲಿಯೆಂದು ಶಬರಿ ಕೋಪಗೊಳ್ಳಬೇಕಿನ್ನು ಇನಿಯಾ|| ಎನ್ನುವರು.‌ 


ಪ್ರೀತಿಯ ಹಂಬಲಿಸದವರು ಯಾರಿಲ್ಲ ಹೇಳಿ, ಇನಿಯನ ಪ್ರೀತಿಯ ಬಯಸಿದ ಗಜಲ್ ಸೊಗಸಾಗಿದೆ...


 ಗಜಲ್ ೨೩ ಪು.ಸಂ ೨೩ ನಮ್ಮ ನಡೆ ನುಡಿ ಗುರಿಯು ಎಂದಿಗೂ ಎದುರಿಗಿದ್ದವರ ಎದೆ ನಡುಗಿಸುವಂತೆ ಇರಬೇಕು. ಭಯ ಅಂಜಿಕೆಯಿಲ್ಲದೇ ಗುರಿಯತ್ತ ಚಿತ್ತ ಹರಿಸಬೇಕು ಎನ್ನುವರು. ನಮ್ಮ ವ್ಯಕ್ತಿತ್ವ ಇತರರ ಗುಣಗಾನಕ್ಕೆ ಒಳಗಾಗಬೇಕು. 


ಮೊಗದಲ್ಲಿನ ಮಂದಹಾಸ ಆಕರ್ಷಿಸುವಷ್ಟು 

ಮೌನವಾಗಿರಬೇಕು ರಾಜನ್|

ಕಂಚಿನ ಕಂಠದಲ್ಲಿ ಹೊರಡುವ ಮಾತುಗಳು

ಎದೆಗೆ ನಾಟಬೇಕು ರಾಜನ್|| 


ಗಜಲ್ ೩೧. ಪು.ಸಂ೩೧ 


ಪದಪುಂಜ ಸಾಲದು ನಿನ್ನ ಬಣ್ಣಿಸಲು,

ಕುಂಚವೂ ಎಡವಿದಂತಿದೆ ಗೆಳೆಯ|

ಯಾವ ಕಲೆಗಾರನ ಕೈಯಲ್ಲಿ ಚಿತ್ರಿಸಬೇಕೋ

ತಿಳಿಯದಂತಾಗಿದೆ ಗೆಳೆಯ||

ಸಾವಿರ ಜನ್ಮವಿದ್ದರು ನಿನ್ನ ಮಡಿಲ ಕಂದಮ್ಮ ನಾನು, 

ಋಣಭಾರವಿದೆ ಗೆಳೆಯ|

 'ಶಬರಿ' ಮನೆಯ ಜ್ಯೋತಿಯು

ಅಂಗೈಯೊಳಗೆನಿಂತಿದೆ ಗೆಳೆಯ||


ಎಷ್ಟೊಂದು ಮುಗ್ಧಭಾವ. ಓದಿದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. 

....


ಹೀಗೆ ಒಂದರ ಮೇಲೆ ಒಂದರಂತೆ ಪ್ರೀತಿ ಪ್ರೇಮ ಸಮಾಜಿಕವಾಗಿ ಚಿಂತನೆ ಮಾಡುತ್ತ ರಚಿಸಿದ ಗಜಲ್ ಗಳ ಓದುವಾಗ ಕವಯಿತ್ರಿಯ ಯೋಚನೆಯಲ್ಲಿನ ಗಂಭೀರತೆ, ಸಮಾಜದ ಪರ ಕಾಳಜಿ, ಇನಿಯನ ಬಗೆಗಿನ ಪ್ರೀತಿ ವ್ಯಕ್ತವಾಗುತ್ತದೆ. ಎಲ್ಲರೂ ಕೊಂಡು ಓದಿರಿ. ಅತ್ಯಂತ ಅರ್ಥಪೂರ್ಣವಾದ, ಸಂಗ್ರಹ ಯೋಗ್ಯವಾದ ಗಜಲ್ ಸಂಕಲನವಾಗಿದೆ.

..

ಶುಭಹಾರೈಕೆಗಳು💐 

- ಸಿಂಧು ಭಾರ್ಗವ, ಬೆಂಗಳೂರು

(ಲೇಖಕಿ)

Wednesday, 6 October 2021

ಲೇಖನ: ಹರೆಯದ ಮಕ್ಕಳ ಸಮಸ್ಯೆಯನ್ನು ಹೆತ್ತವರು ಕೂತು ಪರಿಹರಿಸಬೇಕು

 

Google source images

ಲೇಖ‌ನ  : ಈಸಬೇಕು ಇದ್ದು ಜೈಸಬೇಕು

ನಿತ್ಯಶ್ರೀ ಎಂಬ ಮುದ್ದಾದ ಹುಡುಗಿ ಹರೆಯಕ್ಕೆ ಕಾಲಿಟ್ಟು ಒಂದೆರಡು ಮಾಸವಾಯಿತಷ್ಟೆ. ಮಗಳು ಮೈನೆರೆದಳು ಎಂದು ಅಕ್ಕ ಪಕ್ಕದವರನ್ನೆಲ್ಲ ಕರೆದು ವಿಶೇಷವಾದ ಕಾರ್ಯಕ್ರಮವನ್ನು ನಡೆಸಿ ಆರತಿ ಎತ್ತಿ ಜರಿಸೀರೆ ಉಡಿಸಿ ಹೂವಮುಡಿಸಿ ಮದುಮಗಳಂತೆ ಸಿಂಗರಿಸಿದ್ದಳು. ಮಾವ ಬಂದು ಚಿನ್ನದ ಸರ, ಅಜ್ಜಿ ಚಿನ್ನದ ಬಳೆಯನ್ನು ಉಡುಗೊರೆ ನೀಡಿದರು. ತಾಯಿ ಮನೆಯಿಂದ ಸಂಭ್ರಮವೋ ಸಂಭ್ರಮ. ಎಲ್ಲವೂ ಮುಗಿದು ಒಂದೆರಡು ತಿಂಗಳು ಕಳೆಯುತಲೇ ನಿತ್ಯನ ನಡವಳಿಕೆಯಲ್ಲಿ ಬದಲಾವಣೆಗಳು ಕಾಣಿಸತೊಡಗಿದವು. ಅಕ್ಕ ಪಕ್ಕದ ಗೆಳತಿಯೊಂದಿಗೆ  ಹೆಚ್ಚೆಚ್ಚು ಮಾತನಾಡುವುದು, ನಗುವುದು ಅಲ್ಲೇ ಸಮಯ ಕಳೆಯುವುದು. ಓದುವುದರಲ್ಲಿ ಆಸಕ್ತಿ ಕಡಿಮೆಯಾಗುತ್ತ ಬಂದಿತು. ಯಾವಾಗಲೂ ತನ್ನ ಸೌಂದರ್ಯದ ಬಗ್ಗೆ ಚಿಂತಿಸುವುದು. ಗೆಳತಿಯರು ಹೊಗಳಲಿ ಎಂದು ಏನೇನೋ ಪ್ರಯತ್ನಪಡುವುದು, ಅರೆಬರೆ ಮೈತೋರಿಸುವ ಬಟ್ಟೆ ಹಾಕುವುದು, ಮೊಬೈಲ್ ನಲ್ಲೇ ಮುಳುಗಿದ್ದು ಸೆಲ್ಫೀ ತೆಗೆದುಕೊಳ್ಳುವುದು. ತಾಯಿಗೆ ಇದೆಲ್ಲವೂ ವಿಚಿತ್ರ ಅನಿಸಿದರೂ ವಯಸ್ಸಿನ ಮಗಳು ಎಂದು ಸುಮ್ಮನಾಗುತ್ತಿದ್ದರು. ಆದರೆ ದಿನೇದಿನೇ ಇದು ಹೆಚ್ಚಾಗತೊಡಗಿತು. ಒಮ್ಮೆ ಮೊಬೈಲ್ ನಲ್ಲಿ ಮಧ್ಯರಾತ್ರಿ ತನಕ ಸಂದೇಶ ಕಳುಹಿಸುತ್ತ ಯಾರೊಂದಿಗೋ ಸಂವಹನ ನಡೆಸುತ್ತಿದ್ದಳು. ಮಗಳಿನ್ನೂ ಎಚ್ಚರದಿಂದಿರುವುದನ್ನು ತಾಯಿ ಗಮನಿಸಿದರು‌. ಯಾರೊಂದಿಗೆ ಮಾತನಾಡುತ್ತಿದ್ದೀ ಎಂದು ಕೇಳಿದರೆ ಉತ್ತರ ಕೊಡದೇ ಮಲಗಿದ್ದಳು.

ಇದಾದ ಮೇಲೆ ಮರುದಿನ ಕೂಡ ಹಾಗೆಯೇ ಮೊಬೈಲ್ ನಲ್ಲಿ ಮಾತನಾಡುತ್ತ  ಮೇಲಿನ ಮಹಡಿಗೆ ಹೋಗಿದ್ದಳು. ತಾಯಿಯು ಹಿಂಬಾಲಿಸಿ ಹೋದಾಗ ಹುಡುಗನ ದನಿ ಕೇಳಿಸಿತ್ತು. ಮೊಬೈಲ್ ಕಸಿದುಕೊಂಡು "ಯಾರವನು? ನಮ್ಮ ಮರ್ಯಾದೆ ಕಳೆಯುವೆಯಾ? ತಂದೆಗೆ ಗೊತ್ತಾದರೆ ನಿನ್ನ ಕೊಂದೇ ಬಿಡುವರು.. ಇದನ್ನೆಲ್ಲ ಇಂದಿಗೆ ನಿಲ್ಲಿಸು .." ಎಂದು ಕೇಳಿಕೊಂಡರು. ದೊಡ್ಡ ಜಗಳವಾಗಿ ಮಗಳಿಗೆ ಹೊಡೆದರು. ಅತ್ತರು. ಎಲ್ಲವೂ ಒಂದೇ ಸಮನೆ ಜೋರಾಗಿತ್ತು.
ಒಮ್ಮೆ ಬಿಗಿಯಾದ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಹಾಕಿಕೊಂಡು ಸೆಲ್ಪೀ ತೆಗೆದರೆ ಇನ್ನೊಮ್ಮೆ ಮೇಕಪ್ ಮಾಡಿಕೊಂಡು ಕೂದಲನ್ನು ಹಾರಲು ಬಿಟ್ಟು ಸೆಲ್ಫೀ ತೆಗೆದುಕೊಳ್ಳುತ್ತಿದ್ದಳು. ಮೊದಮೊದಲು ತಾಯಿಗೆ ಹೆದರುತ್ತಿದ್ದರೆ ನಂತರದಲ್ಲಿ ತಾಯಿಯ ಎದುರೇ ಹುಡುಗನ ಜೊತೆ ಮಾತನಾಡುತ್ತಿದ್ದಳು. ನೇರವಾಗಿ ತನ್ನ ಫೋಟೋ ತೆಗೆದು ಕಳುಹಿಸುತ್ತಿದ್ದಳು. ತಾಯಿಗೆ ಇದೇನು ಅರಿವಾಗುತ್ತಿರಲಿಲ್ಲ. ಮಗಳ ಮೇಲಿನ ವ್ಯಾಮೋಹವೋ, ಅತಿಯಾದ ನಂಬಿಕೆಯೋ ಅಥವಾ ಈಗಿನ ತಂತ್ರಜ್ಞಾನದ ಸಾಮಾಜಿಕ ಜಾಲತಾಣಗಳ ಪ್ರಭಾವದ ಅರಿವು ಅವರಿಗೆ ಇಲ್ಲದ ಕಾರಣ ಮಗಳು ಎಂತಹ ಅಪಾಯದಲ್ಲಿ ಸಿಲುಕಿದ್ದಾಳೆ ಎಂದೂ ಕೂಡ ಗೊತ್ತಿರದ ಪರಿಸ್ಥಿತಿಯಲ್ಲಿ ಅವರಿದ್ದರು. ಆದರೆ ಯಾವಾಗಲೂ ಬೈಯುವುದು, ಓದು ಎಂದು ಹೇಳುವುದು ಆಗಾಗ್ಗೆ ಜಗಳ ಸಾಮಾನ್ಯವಾಗಿ ನಡೆಯುತ್ತಿತ್ತು. ಎಷ್ಟು ಹೇಳಿದರೂ ಮಗಳು ಮಾತ್ರ ಹರೆಯದ ಹುಚ್ಚುತನಕ್ಕೆ ತನ್ನತನವನ್ನು ಯಾವುದೋ ಪುಂಡ ಹುಡುಗರ ಕೈಗೆ ಒಪ್ಪಿಸಿದ್ದಳು. ಆಚೆಕಡೆಯಿಂದ ಆ ಹುಡುಗ ವಿಧವಿಧವಾಗಿ ಹೊಗಳುತ ಅರೆಬರೆ ಬಟ್ಟೆಹಾಕಿಕೊ ಎಂದು ಹೇಳುವುದು, ಅವಳನ್ನು ಒಬ್ಬಳೇ ರೂಮಿಗೆ ಹೋಗಿ ಅರೆನಗ್ನ ಫೋಟೋ ಕಳುಹಿಸು ಎಂದು ಒತ್ತಾಯಿಸುವುದು, ಪ್ರೀತಿಯ ಹೆಸರಿನಲ್ಲಿ ಇವಳನ್ನು ಸಂಪೂರ್ಣವಾಗಿ ಮುಳುಗಿಸಿದ್ದ. ಅಲ್ಲದೇ ತಾನೊಬ್ಬನೆ ಇರುವೆ ಎಂದು ಸುಳ್ಳು ಹೇಳಿ ತನ್ನ ಸುತ್ತ ಒಂದಷ್ಟು ಹುಡುಗರ ಗುಂಪನ್ನೇ ಕೂಡಿಕೊಂಡು ಅವಳು ಕಳುಹಿಸುತ್ತಿದ್ದ ಫೋಟೋಗಳನ್ನು ನೋಡಿ ಮಜ ಮಾಡುತ್ತಿದ್ದ. ಗೆಳೆಯರ ಮೊಬೈಲ್ ಗಳಿಗೂ ಕಳುಹಿಸುತ್ತಿದ್ದ. ಅವನ ಕಣ್ಣಿಗೆ ಅವಳೊಂದು ಕುರಿಯಂತೆ ಕಾಣಿಸುತ್ತಿದ್ದಳು. ತನ್ನ ವಿಕೃತ ಮನಸ್ಸಿಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದ‌. ಇತ್ತಲಿಂದ ಇದೇನು ಗೊತ್ತೇ ಇರದ ಅವನ ನೀಚಬುದ್ದಿಗೆ ಅಮಾಯಕಿಯು ಬಲಿಯಾಗುತ್ತಿದ್ದಳು. ಯಾವ ಅಪಾಯದ ಕರೆಗಂಟೆ ಕೂಡ ಕೇಳಿಸಿಕೊಳ್ಳದ ಕೊಂಚವೂ ಅನುಮಾನವನ್ನು ಪಡದೇ ಅವನು ಹೇಳಿದ ಹಾಗೆ ನಡೆದುಕೊಳ್ಳುತ್ತಿದ್ದಳು. ಅದಕ್ಕೆ ಮೇಲಿನ ಮನೆ ಗೆಳತಿ ಕೂಡ ದಿನವೊಂದರಂತೆ ಪುಂಕಾನುಪುಂಕ ಹುಡುಗರ ಬಗ್ಗೆ ವಿಷಯ ತಿಳಿಸುತ್ತಿದ್ದಳು. ಹುಡುಗರ ಮೇಲೆ ಆಸಕ್ತಿ ಬರುವ ಹಾಗೆ ಮಾಡಿ, ನೀನು ಇನ್ನು ಚಂದ ಕಾಣಿಸಿಕೊಳ್ಳಬೇಕು. ಹಳ್ಳಿಗುಗ್ಗು ಎನ್ನಬಾರದು ಅಂತೆಲ್ಲ ಕಿವಿ ಊದಿ ಉಬ್ಬಿಸುತ್ತಿದ್ದಳು. ಅದರಂತೆ ನಿತ್ಯಶ್ರೀ ಪ್ರತಿದಿನ ತಾಯಿಯ ಹತ್ತಿರ ಹಣ ಕೇಳುವುದು , ಬಟ್ಟೆ ಖರೀಸುವುದು, ಮೇಕಪ್ ಗೆ ಬೇಕಾದ ಸಾಮಾಗ್ರಿಗಳ ಖರೀಸುವುದು, ಹೀಗೇ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಳು. ತಾಯಿಗೆ ಇದುವೇ ದೊಡ್ಡ ತಲೆಬಿಸಿಯಾಯಿತು. ಒಮ್ಮೆ ಆ ಹುಡುಗ " ಬಾಯ್ ಕಟ್ ಮಾಡಿಸಿಕೋ ನಿನಗೆ ಚಂದ ಕಾಣಿಸುತ್ತದೆ. ಎಂದು ಯಾವುದೋ ಸಿನೆಮಾದ, ನಟಿಯ ಫೋಟೋ ಕಳುಹಿಸಿ ಹೀಗೆ ಡ್ರೆಸ್, ಹೇರ್ ಸ್ಟೈಲ್ ಮಾಡಿಕೋ.." ಎಂದಿದ್ದ.  ಆಗ  ತಾಯಿಯ ಹತ್ತಿರ "ನನಗೆ ಬಾಯ್ ಕಟ್ ಮಾಡಿಸಬೇಕು. ಬ್ಯೂಟಿ ಪಾರ್ಲರ್ ಗೆ ಹೋಗುವೆ, ಹಣ ಕೊಡು..." ಎಂದು ದುಂಬಾಲು  ಬಿದ್ದಳು. ಹತ್ತನೇ ತರಗತಿಗೆ ಹೋಗಲು ಅಡ್ಮಿಶನ್ ಕೂಡ ಮಾಡಿಸಿಕೊಳ್ಳಲು ಇಷ್ಟ ಪಡದೇ ಮನೆಯಲ್ಲೇ ಇದ್ದಳು. ಆನ್ಲೈನ್ ಕ್ಲಾಸ್ ಇದೆ ಎಂದು ಸುಳ್ಳು ಹೇಳಿ ಒಬ್ಬ ಬೀದಿ ಹುಡುಗನ ಸೆಳೆತಕ್ಕೆ ಸಿಲುಕಿದ್ದಳು. ತಾಯಿ ಎಷ್ಟು ಅತ್ತರು ಗೋಗರೆದರು ಕೇಳಿಸಿಕೊಳ್ಳುತ್ತಲೇ ಇರಲಿಲ್ಲ.

" ಇದ್ದಕ್ಕಿದ್ದಂತೆ ಇವಳಿಗೆ ಈ ಆಲೋಚನೆ ಏಕೆ ಬಂದಿತು‌ ಅದೂ ಇಷ್ಟ ಉದ್ದ ಕೂದಲನ್ನು ಕತ್ತರಿಸುವುದಾದರೂ ಏಕೆ? ನಾನು ಹಣ ಕೊಡುವುದಿಲ್ಲ. ನಿನಗೆ ಹುಚ್ಚು ಹಿಡಿದಿದೆಯಾ? ಯಾವಾಗ ನೋಡಿದರೂ ಸೌಂದರ್ಯದ ಬಗೆಗೆ ಆಸಕ್ತಿ ಜಾಸ್ತಿ. ಮೇಕಪ್ ,ಬಟ್ಟೆ, ನೈಲ್ ಪಾಲಿಶ್, ಇಯರ್ ರಿಂಗ್ಸ್, ಮ್ಯಾಚಿಂಗ್ಸ್ ಎಂದೆಲ್ಲ ಹಣ ಕೇಳುವೆ. ಎಲ್ಲಿಂದ ಬರುತ್ತದೆ? ಟ್ಯೂಷನ್ ಫೀಸ್ ಜೊತೆಗೆ  ಆನ್ಲೈನ್ ಕ್ಲಾಸ್ ಫೀಸ್ ಕೂಡ ಕೊಡಬೇಕು. ಕರೋನಾದಿಂದ ತಂದೆಗೆ ಕೆಲಸ ಇಲ್ಲ. ಹಣ ಎಲ್ಲಿಂದ ಬರುತ್ತದೆ ಹೇಳು..." ಎಂದು ಬೈಯ ತೊಡಗಿದರು. ಜಗಳ ಮಾಡಿದರು. ಹೊಡೆದರು."ಕಾಯಿ ಕದ್ದವರ ಬಾಯಿ ಮೇಲು" ಎಂಬಂತೆ ನಿತ್ಯಶ್ರೀ ತಾಯಿಗೆ ಬೈಯತೊಡಗಿದಳು. ಬೊಬ್ಬೆಹಾಕುವುದು, ಅಳುವುದು ಹೆಚ್ಚಾಯಿತು. ಇವರಿಬ್ಬರ ಜೋರುದನಿ ಅಕ್ಕಪಕ್ಕದ ಮನೆಗಳಿಗೂ ಕೇಳಿಸಿತು. "ಮರ್ಯಾದೆ ಕಳೆಯುವೆಯಾ?" ಎಂದು ಹೊಡೆದರು. ನಿತ್ಯಶ್ರೀ ಕಿರುಚುತ್ತ ಒಳ ಓಡಿದಳು. ಆದರೆ ತನ್ನ ಹಟ ಬಿಡಲಿಲ್ಲ ‌. ದಿನಗಳು ಉರುಳಿದವು ಅಮ್ಮ ಹಣ ಕೊಡಲಿಲ್ಲ. ಆಚೆಯಿಂದ ಹುಡುಗ ಒತ್ತಾಯ ಮಾಡುವುದು ಹೆಚ್ಚಾಯಿತು. ನಿತ್ಯಶ್ರೀಗೆ ಒತ್ತಡ ಹೆಚ್ಚಾಯಿತು. ಒಂದು ರೀತಿಯಲ್ಲಿ ಅವನ ವಶಕ್ಕೊಳಗಾದವಳಂತೆ ನಡೆದುಕೊಳ್ಳುತ್ತಿದ್ದಳು. ನಾನು ಸೋಲುತ್ತಿದ್ದೇನೆ ಎಂದು ಅವಳಿಗೆ ಅನಿಸತೊಡಗಿತು. ಅವನು ಹೇಳಿದ ಒಂದು ಕೆಲಸ ನನಗೆ ಮಾಡಲು ಆಗುತ್ತಿಲ್ಲವಲ್ಲ. ಎಂದು ಅನಿಸತೊಡಗಿತು‌. ಅವನು ಕೂಡ "ನನ್ನ ಪ್ರೀತಿಸುತ್ತೀಯಾ ತಾನೆ?! ನನ್ನ ಆಸೆಗೆ ಇಲ್ಲ ಎನ್ನುವುದಿಲ್ಲ ತಾನೆ??.." ಎಂದೆಲ್ಲ ಬ್ಲಾಕ್ ಮೇಲ್ ಮಾಡುತ್ತಿದ್ದ. ಆಗಾಗ್ಗೆ ಪೀಡಿಸುತ್ತಿದ್ದ.

Google source Images


ಇವಳಿಗೆ ಏನಾಯಿತೋ ಏನೋ? ಮತ್ತೆ ತಾಯಿಯ ಬಳಿ ಕೇಳಿದಳು. "ನನಗೆ ಬಾಯ್ ಕಟ್ ಮಾಡಿಸಿಕೊಳ್ಳಲೇಬೇಕು. ಹಣ ಕೊಡು" ಎಂದು. "ಅದಕ್ಕೆ ಮುನ್ನೂರು-ನಾನೂರು ರೂಪಾಯಿ ಖರ್ಚಾಗುತ್ತದೆ ನಾನು ಕೊಡುವುದಿಲ್ಲ" ಎಂದರು. ಕೂಡಲೇ ಸಿಟ್ಟು ಮಾಡಿಕೊಂಡು ರೂಮುಗೆ ಹೋಗಿ ಜೋರಾಗಿ ಬಾಗಿಲು ಹಾಕಿಕೊಂಡು ಆ ಹುಡುಗನಿಗೆ ವೀಡಿಯೋ ಕರೆಮಾಡಿ ಫ್ಯಾನಿಗೆ ಸೀರೆ ಬಿಗಿದು "IAm Sorry.. ನಾನು ಸೋತುಹೋದೆ.. ನಿನ್ನ ಒಂದು ಸಣ್ಣ ಆಸೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ನೀನೆಷ್ಟು ಪ್ರೀತಿಸುತ್ತೀಯಾ.. ನನಗಾಗಿ ಏನೆಲ್ಲ ಮಾಡಿದಿ. ಆದರೆ ನನ್ನ ಕೈಲಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ ಬಿಡು. ನನ್ನ ತಾಯಿ, ತುಂಬಾ ಜೋರು ಕೆಟ್ಟವಳು, ನನ್ನ ಆಸೆಗೆ, ಕನಸುಗಳಿಗೆ ಬೆಲೆ‌ ಕೊಡೋದಿಲ್ಲ. ನಾನಿಲ್ಲಿ ಒಂಟಿ, ನನಗ್ಯಾರು ಇಲ್ಲ... ಎಂದೆಲ್ಲ ಹೇಳಿ ನೇಣು ಬಿಗಿದುಕೊಂಡಳು. ಒದ್ದಾಡತೊಡಗಿದಳು. ಅವಳ ದನಿ ತಾಯಿಗೆ ಕೇಳಿಸಿತು‌ ಕಿಟಕಿಯಿಂದ ನೋಡಿದಾಗ ಆಘಾತವಾಯಿತು. ಒಮ್ಮೆಗೆ ಬಾಗಿಲನ್ನು ಒಡೆದು ಒಳ ಹೋದರು. ಅತ್ತಲಿಂದ ಆ ಹುಡುಗನಿಗೆ ಶಾಕ್ ಆಗಿ ನಂಬರ್ ಡಿಲೀಟ್ ಮಾಡಿದ್ದ. ಕೂಡಲೇ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ.

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ,
೧) ನಿತ್ಯಶ್ರೀ, ಆ ಹುಡುಗ ಯಾರು ಏನು ಎಂದು ಕೂಡ ಅರಿಯದೇ ಪ್ರೀತಿ ಎಂಬ ಹೆಸರಿನಲ್ಲಿ ಮೋಸದ ಜಾಲಕ್ಕೆ ಬಿದ್ದವಳು. ತರಗತಿಯ ಹುಡುಗನಲ್ಲದಿದ್ದರೂ ಅಪರಿಚಿತ ಹುಡುಗನ ಸ್ನೇಹ ಬೆಳೆಸಿದ್ದಳು.
೨) ಹೆತ್ತವರಿಗೆ ಸುಳ್ಳು ಹೇಳಿ ಹಾಡುಹಗಲೇ ಮೋಸ ಮಾಡುತ್ತಿದ್ದಳು. ತಾನೇ ಬುದ್ಧಿವಂತೆ , ತಾಯಿಯನ್ನು ಹೇಗೆ ಬೇಕಾದರೂ ಮೋಸ ಮಾಡಬಹುದು ಎಂದು ಬಗೆದ ನಿತ್ಯಶ್ರೀ ತಾನೇ ಮೋಸ ಹೋದಳು.
೩) ಹರೆಯದ ಹುಚ್ಚು ಆಸೆಗಳಿಗೆ ರೆಕ್ಕೆ ಕಟ್ಟಲು ಹೋಗಿ, ನನಗೂ ಒಬ್ಬ ಗೆಳೆಯ ಬೇಕು... ಎಂದು ಬಯಸಿ ರೆಕ್ಕೆ ಮುರಿದುಕೊಂಡು ನೆಲಕ್ಕುರುಳಿ ಬಿದ್ದವಳು.
೪) ಅಲ್ಲದೇ ಹರೆಯದ ಮಕ್ಕಳ ಜವಾಬ್ದಾರಿಯನ್ನು ತಂದೆಯಾದವರು ತೆಗೆದುಕೊಳ್ಳದೇ ತನಗೆ ಉದ್ಯೋಗವೇ ಮೊದಲು ಎಂಬಂತೆ ಮನೆ ಮತ್ತು ಮಕ್ಕಳ ಜವಾಬ್ದಾರಿಯನ್ನು ಹೆಂಡತಿಗೆ ವಹಿಸುವುದು.
೫) ಹರೆಯಕ್ಕೆ ಕಾಲಿಟ್ಟಾಗ ಆ ಮಕ್ಕಳಿಗೆ ಮನೆ, ಹೆತ್ತವರ ಮಾತುಗಳು ಉಸಿರು ಕಟ್ಟಿದಂತಾಗಿ , ಹೊರಗಿನವರ ಮೇಲೆ ನಂಬಿಕೆ ಅತಿಯಾಗುವುದು.
೬) ಹೆತ್ತವರನ್ನೇ ಶತ್ರುಗಳ ಹಾಗೆ ನೋಡಿ, ಹೊರಗಿನ ಸೆಳೆತಕ್ಕೆ ಬಲಿಯಾಗುವುದು.
೭) ಒಂದೇ ಮಗಳು ಯಾ ಮಗನೆಂದು ಅತಿಯಾಗಿ ಮುದ್ದು ಮಾಡಿ ಸಾಕಿ, ಅವರ ಬೇಡಿಕೆಗಳನ್ನೆಲ್ಲ ಇಡೇರಿಸುತ್ತ ಬಂದರೆ ಹರೆಯಕ್ಕೆ ಬಂದಾಗ ಕೈಗೆ ಸಿಗುವುದಿಲ್ಲ.
೮) ಮಕ್ಕಳು ಹರೆಯಕ್ಕೆ ಬಂದಾಗ ಎಚ್ಚರವಹಿಸುವ ಬದಲು ಮೊದಲಿನಿಂದಲೇ ಅವರ ಜೊತೆಗಿದ್ದು ಕಷ್ಟನಷ್ಟಗಳ ಬಗ್ಗೆ ಆಗಾಗ್ಗೆ ತಿಳುವಳಿಕೆ ನೀಡುತ್ತಿರಬೇಕು. ಜೀವನದ ಮೌಲ್ಯಗಳನ್ನು ತಿಳಿಸಿಕೊಡಬೇಕು. ಓದು, ವಿದ್ಯಾಭ್ಯಾಸದ ಮಹತ್ವ, ಉದ್ಯೋಗ , ಹಣದ ಮಹತ್ವ, ಕಷ್ಟ ನಷ್ಟಗಳ ಅರಿವು ಮೂಡಿಸುತ್ತಿರಬೇಕು.
೯) ತಮ್ಮ ತಾಯಿ ಈಗಿನ ತಂತ್ರಜ್ಞಾನದ ಅರಿವು ಇಲ್ಲದೇ ಇರಬಹುದು ,ಆದರೆ ಹೆತ್ತ ಕರುಳಿಗೆ ಮಗ/ಮಗಳು ಅಡ್ಡದಾರಿ ಹಿಡಿಯುತ್ತಿದ್ಸಾಗ ಮುಂದೇನೋ ಅನಾಹುತವಾಗುತ್ತದೆ ಎಂಬ ಸುಳಿವು ಬರುವುದು ಸುಳ್ಳಲ್ಲ.
೧೦) ಮಕ್ಕಳ ಕೈಗೆ ಮೊಬೈಲ್ ಸಿಕ್ಕಿದಾಗ ಅತಿಯಾಗಿ ಬಳಸುತ್ತ, ಪ್ರಪಂಚವೇ ತನ್ನ ಮುಷ್ಠಿಯಲ್ಲಿದೆ ಎಂದು ಭಾವಿಸುವುದೇ , ಯಾರದೋ ಕಾಣದ ಕೈಗೆ ಸಿಕ್ಕಿಹಾಕಿಕೊಳ್ಳಲು ಕಾರಣ. ಅತಿಯಾದ ಆಕರ್ಷಣೆ, ಕುತೂಹಲಗಳೇ ಅನಾಹುತಗಳನ್ನು ಆಹ್ವಾನಿಸುತ್ತವೆ.

- ಸಿಂಧು ಭಾರ್ಗವ ಬೆಂಗಳೂರು (ಲೇಖಕಿ)

Wednesday, 29 September 2021

Mom She is Always Great ತಾಯಿಯಾದ ಮೇಲೆ ಆಗುವ ಬದಲಾವಣೆಗಳು


ಲೇಖನ : ತಾಯಿಯಾದ ಮೇಲೆ ಆಗುವ ಬದಲಾವಣೆಗಳು

ಹೆಚ್ಚಿನ ಕಡೆಯಲ್ಲಿ ನೀವು ಗಮನಿಸಿದಂತೆ ೨೦-೨೪ ವರುಷದೊಳಗೆ ಹೆಣ್ಮಕ್ಕಳಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸುವುದನ್ನು. ಕೆಲವರಿಗೆ ಮದುವೆಯ ಬಗ್ಗೆ  ಆಸಕ್ತಿ ಇಲ್ಲದಿದ್ದರೂ ಕೂಡ ಮನೆಯವರ ಒತ್ತಾಯದ ಮೇರೆಗೆ ಮದುವೆಯಾಗುತ್ತಾರೆ. ಕೆಲವರು ಮನೆಯವರ ಜವಾಬ್ದಾರಿ ಕಡಿಮೆ ಮಾಡಲು ಒಪ್ಪುತ್ತಾರೆ. ಕೆಲವರಿಗೆ ಮದುವೆ ಬಗ್ಗೆ ಏನೂ ಯೋಚನೆಯೂ ಇಲ್ಲದಿದ್ದರೂ ಮದುವೆಯಾಗಿರುತ್ತದೆ. ಕೆಲವರಿಗೆ ಒತ್ತಾಯದ ಮದುವೆಯಾಗುತ್ತದೆ. ಇನ್ನು ಮದುವೆ ಎಂದರೆ ಬಂಧನ /ಜೈಲು ಎಂದೆಲ್ಲ ಯೋಚಿಸುವವರೂ ಇದ್ದಾರೆ. ಮದುವೆ ಎಂಬುದು ಎರಡು ಮನೆ ಮನಸ್ಸುಗಳ ಬೆಸೆಯುವ ಕೊಂಡಿ. ಹೊಸತನಕ್ಕೆ ಮನಃಪೂರ್ವಕವಾಗಿ ಒಗ್ಗಿಕೊಳ್ಳಲೇಬೇಕು.
ಸಂಭ್ರಮಿಸಬೇಕು. ಖುಷಿಪಡಬೇಕು.

ಅದಕ್ಕೆ ಹೇಳುವುದು ಆಯಾಯ ಸಮಯದಲ್ಲಿ ಏನೇನು ಆಗಬೇಕೋ ಹಾಗೆ ನಡೆದರೆ ಒಳ್ಳೆಯದೆಂದು.  ಹೆಣ್ಮಕ್ಕಳಿಗೆ ಉದ್ಯೋಗ, ಮದುವೆ, ಗಂಡನ ಜೊತೆಗಿನ ಹೊಸ ಜೀವನ ಎಲ್ಲವನ್ನೂ ನಿಭಾಯಿಸುವುದು ಕಷ್ಟ. ಹಾಗೆಯೇ ಇವೆಲ್ಲವನ್ನೂ ನಿಭಾಯಿಸಲು ಶಕ್ತರಾಗುವ ಹೊತ್ತಿಗೆ ವರುಷ ೨೬+ ಆಗಿರುತ್ತದೆ. ಆಗ ಎದುರಾಗುವ ಸಮಸ್ಯೆಗಳು ಬೇರೆಯೇ ಇರುತ್ತದೆ.

ಕೆಲವರಿಗೆ ಅನಿಸುವುದಿದೆ, "ಈಗಿನ ಕಾಲದಲ್ಲೂ ಇಷ್ಟು ಬೇಗ ಮದುವೆ ಮಾಡಿಸೋದಾ..?? ಜಾಬ್ ಗೆ ಹೋಗೋದಿಲ್ವಾ ನಿಮ್ಮ ಸೊಸೆ?!??  ಮನೆಯಲ್ಲೇ ಮಕ್ಕಳ ಸಾಕೊಂಡು ಇದ್ದಾಳಾ?!? " ಎಂದು ಬಾಯಿ ಅಗಲಿಸಿ ಗುಂಡು ಕಣ್ಣು ಮಾಡಿಕೊಂಡು ಕೇಳುತ್ತಾರೆ. ಏನೋ ಅಪರಾಧ ಮಾಡುತ್ತಿರುವಂತೆ, ಅಥವಾ ಅವರಿಗೆ ಮೂರ್ಖರಂತೆ ಕಾಣಿಸುವುದು ಹಾಸ್ಯಾಸ್ಪದ. ತಮ್ಮ ಮೂಲವನ್ನು ಮರೆತು ಈಗಿನ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವವರು ಮಾತ್ರವೇ ಈ ರೀತಿ ಕೇಳುವುದು.

ಬೇಗ ಮದುವೆಯಾದರೆ ಹೆಣ್ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ವೈದ್ಯಕೀಯ ವಲಯವೇ ಹೇಳುತ್ತದೆ. ಒಂದೆರಡು ವರುಷದೊಳಗೆ ಮಗುವಾದರೆ ಮತ್ತೆ ಅವುಗಳ ಲಾಲನೆ ಪಾಲನೆಯಲ್ಲಿ ೧೦ ಹತ್ತು ವರ್ಷಗಳನ್ನು ವ್ಯಯಿಸಬೇಕಾಗುತ್ತದೆ. ನಮ್ಮ ಜೀವಿತದ ಹತ್ತು ವರುಷ ಏನೂ ಅರಿಯದ ಮುಗ್ಧ ಮಕ್ಕಳನ್ನು ಬೆಳೆಸಲು ತ್ಯಾಗ ಮಾಡಬೇಕಾಗುತ್ತದೆ. ಅದೊಂದು ಗ್ರೇಟ್ ಅನುಭವ. ಮಹತ್ವದ ಸಾಧನೆ. ಈಗಿನ ಕಾಲದಲ್ಲಿ ಒಂದು ಸುಸಂಸ್ಕೃತ ವಾತಾವರಣದಲ್ಲಿ ಮಕ್ಕಳ ಬೆಳೆಸುವುದೂ ಅಗತ್ಯವಾಗಿದೆ.

ನಂತರ ೩೪ ವರ್ಷದ ಮೇಲೆ ಕೆಲಸಕ್ಕೆ ಸೇರಬಹುದು. ನಿಮ್ಮ ಜೀವನ ನಿಮಗಾಗಿ ಬದುಕಬಹುದು. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸುತ್ತಾರೆ. ಓದುವುದು ಬರೆಯುವುದು, ಗಂಡ ಆಫೀಸಿಗೆ ಹೋದರೆ ಮಕ್ಕಳು ಶಾಲೆಗೆ ಹೋದರೆ ಮನೆ ಖಾಲಿ ಇರುತ್ತದೆ. ಬೇಸರ ಕಳೆಯಲು ನೀವೂ ಉದ್ಯೋಗಕ್ಕೆ ಸೇರಬಹುದು.. ಒಂದು ೫೫-೬೦ ವರುಷಗಳ ಕಾಲ ದುಡಿಯಬಹುದು.

ಹಾಗಾಗಿ ತಾಳ್ಮೆ ಅಗತ್ಯ. ಎಲ್ಲದಕ್ಕೂ ಅತಿಯಾಗಿ ಯೋಚಿಸದೆ ಮಕ್ಕಳಿಗಾಗಿ ಒಂದಷ್ಟು ವರುಷಗಳು ತ್ಯಾಗ ಮಾಡಬೇಕಾಗುತ್ತದೆ.

ಇನ್ನು ತಾಯಿಯಾದ ಮೇಲೆ ಕಂಡ ಬದಲಾವಣೆಗಳು :
*****************************************
ಪ್ರಥಮವಾಗಿ ಸಮಯದ ಅಭಾವ. ನಮಗೆ ಅಂತ ಸಮಯ ಸಿಗುವುದಿಲ್ಲ. ಅತಿಯಾದ ಕೆಲಸ. ಪುಟ್ಟ ಮಕ್ಕಳು ಅವರಾಗೇ ಏನೂ ಮಾಡುವುದಿಲ್ಲವೆಂದಾಗ ಬೆಳಿಗ್ಗೆ ಏಳಿಸಿ ಹಲ್ಲು ಉಜ್ಜಿಸುವುದರಿಂದ ರಾತ್ರಿ ನೀತಿಕತೆ ಹೇಳಿ ಮಲಗಿಸುವ ತನಕ ಎಲ್ಲವೂ ತಾಯಿಯೇ ಮಾಡಬೇಕು. ಹಗಲು - ರಾತ್ರಿ‌ ನಿದಿರೆ ಬಿಡಬೇಕು. ನಮಗಾಗಿ ಕುಳಿತು ತಿನ್ನುವಷ್ಟು ಸಮಯ ಇರುವುದಿಲ್ಲ. ಗಬಗಬ ತಿಂದು, ಅರೆಬರೆ ತಿಂದು ಮಕ್ಕಳ ನೋಡುವುದಾಗುತ್ತದೆ. ಮಗುವಿಗೆ ತಿನಿಸಿದ ಮೇಲೆ ನಮ್ಮ ಹಸಿವು ಇಂಗಿರುತ್ತದೆ. ಸಮಯ ಕಳೆದು ಹೋಗುವುದೇ ತಿಳಿಯುವುದಿಲ್ಲ. ದಪ್ಪ ಆಗುತ್ತಾರೆ. ವ್ಯಾಯಾಮ ಮಾಡಲು ಸಮಯವಿರುವುದಿಲ್ಲ. ಹಾಡು ಸಿನೆಮಾ ಓದುವುದು ಯಾವುದಕ್ಕೂ ವೈಯಕ್ತಿಕ ಸಮಯ ಸಿಗುವುದಿಲ್ಲ. ಮಕ್ಕಳ ಆರೋಗ್ಯ ಕೆಟ್ಟಾಗ ವೈದ್ಯರ ಬಳಿ ಓಡಿ ಹೋಗಿ ಕಾದು ಔಷಧಿ ಕೊಡಿಸಬೇಕು. ರಾತ್ರಿ ನಿದಿರೆ ಬಿಟ್ಟು ಅವರ ಆರೈಕೆ ಮಾಡಬೇಕು.

ಗಂಡನ ಜೊತೆ ಏಕಾಂತವಾಗಿ ಸಮಯ ಕಳೆಯಲು ಆಗುವುದಿಲ್ಲ. ಅವನಿಗೆ ಬೇಸರವಾದರೆ ನಮಗೂ ಬೇಸರ. ಕೆಲವು ಗಂಡಸರು ಕೊಂಚಕೊಂಚವೇ ಬದಲಾಗುತ್ತ ಹೋಗುತ್ತಾರೆ. ಉದ್ಯೋಗಕ್ಕೆ ಹೋಗುವವರು ಕೆಲವೊಮ್ಮೆ ತಮ್ಮ ವೃತ್ತಿಯನ್ನು ನಿಲ್ಲಿಸಿ ಮಗುವಿನ ಪಾಲನೆಯಲ್ಲಿ ತೊಡಗಬೇಕಾಗುತ್ತದೆ. ಕಾರಣ ಸಹಾಯಕ್ಕೆ ಆಯಾ, ಅಥವಾ ಬೇರೆ ಯಾರೂ ಇರದಿದ್ದಾಗ ಈ ಸಮಸ್ಯೆ ಎದುರಾಗುತ್ತದೆ.

ಮಕ್ಕಳ ಎದುರು ಅಳುವ ಹಾಗಿಲ್ಲ. ಬೇಸರವಾದರೆ ತೋಡಿಕೊಳ್ಳುವ ಹಾಗಿಲ್ಲ. ಓಡೋಡಿ ಬಂದು "ಯಾಕಮ್ಮ ಅಳುವೆ " ಎಂದು ಕೇಳುವರು. ಸದಾ ನಗುತ್ತ ಇರಬೇಕು. ನಮ್ಮ ಮನಸ್ಸಿನ ನೋವನ್ನು ನಾವೇ ಯಾವುದೋ ಮೂಲೆಯಲ್ಲಿ ಮಕ್ಕಳಿಗೆ ಗೊತ್ತಾಗದ ಹಾಗೆ ಅಳಬೇಕು. ಅವರೆದು ಹೇಳುವ ಹಾಗಿಲ್ಲ. ನಕಾರಾತ್ಮಕವಾಗಿ ಯೋಚಿಸುವ ಹಾಗಿಲ್ಲ,ಮಾತನಾಡುವ ಹಾಗಿಲ್ಲ. ಸಮಾಧಾನ ಮಾಡಿಕೊಳ್ಳಬೇಕು. ಹೊಂದಿಕೊಂಡು ಹೋಗಬೇಕು. ಸಹಿಸಿಕೊಳ್ಳಬೇಕು. ಕೆಲವರಿಗೆ ಗಂಡ ಸರಿಯಿಲ್ಲದಿದ್ದರೆ ಕೂಡ ಮಕ್ಕಳ ಎದುರು ದೂರು ಹೇಳಬಾರದು. ಮಕ್ಕಳ ಎದುರೇ ಗಂಡನೊಂದಿಗೆ ಜಗಳ ಮಾಡಬಾರದು. ಗಂಡನ ಬಗ್ಗೆ ಕೇವಲ ವಾಗಿ ಮಾತನಾಡಬಾರದು.  ಅವರಿಗೆ ಕೂಡ ತಂದೆಯ ಬಗ್ಗೆ ಕೆಟ್ಟ ಅಭಿಪ್ರಾಯ ಬೆಳೆಯಲು ಕಾರಣವಾದೀತು. ಅವರು ಕೂಡ ತಂದೆಗೆ  ಗೌರವ ಕೊಡದಿರಬಹುದು.

ಬದುಕು ಏನೆಲ್ಲ ಕಲಿಸಿಕೊಡುತ್ತದೆ. ಮೊದಲಿಗೆ ಸಹನೆ ತ್ಯಾಗ ಒಂದೇ ನಾಣ್ಯದ ಎರಡು ಮುಖಗಳಂತೆ. ಹೆಣ್ಣಿಗೆ ಅದೇ ಭೂಷಣ. ತಾಯಿಯಾಗಿ ಮಕ್ಕಳಿಗೆ ಓದಿಸುವುದು ಬರೆಯಲು ಕಲಿಸಿಕೊಡಬೇಕು. ಸ್ನೇಹಿತರ ಜೊತೆಗೆ ಹೇಗೆ ಸ್ನೇಹದಿಂದ ಇರಬೇಕು ಎಂಬುದೂ ತಿಳಿಸಿಕೊಡಬೇಕು. ಹೆದರದೇ ಧೈರ್ಯದಿಂದ ಇರಲು , ಮಾತನಾಡಲು ಕಲಿಸಿಕೊಡಬೇಕು. ನೀತಿ ಕತೆಗಳನ್ನು ಹೇಳಿಕೊಡಬೇಕು.

ಅಮ್ಮ - ಹೇಗೆ ಗ್ರೇಟ್ ಎಲ್ಲರಿಗಿಂತ ಒಂದು ಹಂತ ಮೇಲೆಯೇ ಇರುವುದು ಎಂದು ಯೋಚಿಸುವುದಕ್ಕಿಂತ ಹಾಗೆಯೇ ಬಾಳಿ ತೋರಿಸಬೇಕು. ಮಕ್ಕಳಿಗೆ ಅಮ್ಮನೇ ಸರ್ವಸ್ವ. ಅವಳನ್ನು ನೋಡುತ್ತಲೇ ಅವಳ ಒಡನಾಟದಲ್ಲೇ ಬೆಳೆಯುತ್ತಾರೆ. "ಅಮ್ಮ... ಅಮ್ಮಾ..." ಎಂದು ಕಾಲಿಗೆ ಸುತ್ತು ಹಾಕಿಕೊಂಡಿರುತ್ತಾರೆ. ಪ್ರತಿಯೊಂದಕ್ಕೂ ಅಮ್ಮನನ್ನೇ ಅವಲಂಭಿಸಿಕೊಂಡಿರುತ್ತಾರೆ. ಅಮ್ಮನಿಲ್ಲದ ಮನೆಯೇ ಶೂನ್ಯ ವಾತಾವರಣ.

ಅತಿಯಾಗಿ ನಗಲೂ ಹಾಸ್ಯ ಮಾಡಿಕೊಂಡು ಚಿಲ್ ಔಟ್ ಮಾಡಲೂ ಸಾಧ್ಯವಾಗದು. ಅಮ್ಮ ಯಾವಾಗಲೂ ಎಲ್ಲವನ್ನೂ ತ್ಯಜಿಸುವವಳು.  ಮಮತೆಯ ಸ್ಥಾನವನ್ನು ತುಂಬಿಸುವವಳು. ಆತ್ಮಬಲ, ಶಕ್ತಿ , ಧೈರ್ಯ ನೀಡುವವಳು. ಅಮ್ಮನ ಸ್ಥಾನ ಪಡೆದ ಮೇಲೆ ಏನೆಲ್ಲ ಅನುಭವವಾಗುವುದು. ಇದು ನಿಜಕ್ಕೂ ಗ್ರೇಟ್.

ಧನ್ಯವಾದಗಳು
ಸಿಂಧು ಭಾರ್ಗವ ಬೆಂಗಳೂರು

(ಲೇಖಕಿ)

Friday, 24 September 2021

September month of articles..

 Paper cuttings.. September month of articles..

1) ಸಂಪದ ಸಾಲು ಮಾಸಪತ್ರಿಕೆ - ಮಕ್ಕಳ ಸಾಹಿತ್ಯ ಪದ್ಯ ನೀತಿ ಕತೆ

೨) ಕೊಂಕಣವಾಹಿನಿ ದಿನಪತ್ರಿಕೆ - ಭಕ್ತಿಗೀತೆಗಳು, ಲೇಖನ ಆರೋಗ್ಯ ಮಾಹಿತಿ

೩) ಜನಮಿಡಿತ ದಿನಪತ್ರಿಕೆ.  ಕವನಗಳು, ಪತ್ರಿಕಾ ವರದ

೪) ಹರ್ಷವಾಣಿ ಮಾಸಪತ್ರಿಕೆ ಮಕ್ಕಳ ಸಾಹಿತ್ಯ ಕತೆ


ಆಯ್ಕೆ ಮಾಡಿ ಪ್ರಕಟಿಸಿದ ಸಂಪಾದಕ ಬಳಗಕ್ಕೆ ವಂದನೆಗಳು🌹










ಸ್ತನ ಕ್ಯಾನ್ಸರ್ ಲಕ್ಷಣಗಳು & ಚಿಕಿತ್ಸಾ ಕ್ರಮಗಳು