Showing posts with label ಹೆಣ್ಣಿನ ಶೋಷಣೆ. Show all posts
Showing posts with label ಹೆಣ್ಣಿನ ಶೋಷಣೆ. Show all posts

Tuesday, 28 September 2021

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

 

Source images stop abused save girls

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

ಹೆಣ್ಣು ಮನೆ ಬೆಳಗುವ ದೀಪ. ಸದಾ ತನ್ನವರ ಒಳಿತನ್ನೇ ಬಯಸುವವಳು. ತನ್ನ ವಯೋಸಹಜ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಬದುಕುವ ತ್ಯಾಗಮಯಿ. ಆದರೆ ಹೆಣ್ಣಾಗಿ ಹುಟ್ಟಿದಿ ನೀ ಹುಣ್ಣಿನಂತ ಬಾಳು ಬದುಕು, ಮಣ್ಣಾಗುವ ವರೆಗೂ ನೀ ಎಲ್ಲವನ್ನೂ ಸಹಿಸು ಎಂಬರ್ಥದ ಹಿರಿಯ ಜನಪದ ಹಾಡನ್ನು ಕೂಡ ನಾವು ಕೇಳಿರುತ್ತೇವೆ.  ಹೆಣ್ಣಾಗಿ ಹುಟ್ಟಿದುದಕ್ಕೆ ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮನೆಯಲ್ಲಿ ಮಾತ್ರವಲ್ಲದೇ ಈ ಸಮಾಜದಲ್ಲಿ, ವೃತ್ತಿಜೀವನದಲ್ಲಿ ಅದೆಷ್ಟೋ ಮಹಿಳೆಯರು ಕಿರುಕುಳ, ಒತ್ತಡದ , ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕೆಲವರು ಮೂಕವೇದನೆ ಅನುಭವಿಸುತ್ತಾರೆ. ಕೆಲವರು ಅಂತಹ ಸ್ಥಳದಿಂದ ಹೊರನಡೆಯುತ್ತಾರೆ. ಇನ್ನೂ ಕೆಲವರು ಇಹಲೋಕ ತ್ಯಜಿಸುವುದೂ ಉಂಟು.

ಹಾಗಾಗಿ ಹೆಣ್ಣಿನ ಶೋಷಣೆಗೆ ಕೊನೆ ಇಲ್ಲ ಎಂದೇ ಹೇಳಬಹುದು.  ಕೆಲವರಿಗೆ ಹೆಣ್ಣು ಮಗು ಹುಟ್ಟಿತೆಂದು ಸಸಾರ. ಇನ್ನು ಕೆಲವರಿಗೆ ಕೆಲಸದ ಆಳು, ಮನೆಯಲ್ಲಿಯೇ ಬಿದ್ದಿರಬೇಕು. ವರದಕ್ಷಿಣೆ ಕಿರುಕುಳದಿಂದ ಅಮಾನವೀಯ ಕೃತ್ಯ ಎಸಗುವುದು ಸರ್ವೇಸಾಮಾನ್ಯವಾದ ಸಂಗತಿ. ಯಾರೊಂದಿಗೂ ಹೇಳಿಕೊಳ್ಳುವ ಹಾಗಿಲ್ಲ. ಹೇಳಿದರೂ ಸಾಂತ್ವಾನದ ಮಾತುಗಳು ಕೇಳಿ ಬರುವ ಬದಲು "ಎಲ್ಲರ ಮನೆಯ ದೋಸೆ ತೂತೆ...ಹೊಂದಿಕೊಂಡು ಹೋಗು .." ಎಂಬ ಮಾತು ತೇಲಿಸಿಬಿಡುತ್ತಾರೆ. ಆಕೆಯ ಮನಸ್ಸಿನ ಮೇಲಾಗುವ ಪರಿಣಾಮಗಳನ್ನು ಯಾರೂ ಅರ್ಥಮಾಡಿಕೊಳ್ಳಲು ಹೋಗುವುದಿಲ್ಲ. ಇಷ್ಟೇ ಅಲ್ಲದೇ ಇನ್ನೊಂದು ಮುಖವಾಗಿ ತಮ್ಮ ಯವ್ವನದ ಕಾಮಕೇಳಿಗೆ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಳ್ಳುವ ಹೆಣ್ಮಕ್ಕಳು, ಅಥವಾ ಹೆತ್ತು ತೊಟ್ಟಿಯಲ್ಲಿ ಶಿಶುವನ್ನು ಎಸೆದು ಹೋಗುವವರು ಇದ್ದಾರೆ. ಮಾದಕ ದ್ರವ್ಯಗಳ ಸೇವನೆಗೆ ಬಲಿಯಾಗಿ ಹೆಣ್ಮಕ್ಕಳು ತಮ್ಮ ಸುಂದರ ಬದುಕನ್ನು ನಾಶಮಾಡಿಕೊಳ್ಳುವವರೂ ಇದ್ದಾರೆ. ಇನ್ನು ಹಣದ ಆಸೆಗೆ ವೇಶ್ಯಾವಾಟಿಕೆ  ದಂಧೆಗೆ ನೂಕುವ ಕ್ರೂರಿಗಳು, ಎಳೆ ಮಗುವಿನಿಂದಾದಿಯಾಗಿ ವೃದ್ಧ ಹೆಂಗಸು, ಬಿಕ್ಷುಕಿಯನ್ನೂ ಬಿಡದೇ ನಡೆಯುವ ಅತ್ಯಾಚಾರಗಳು, ಕೊನೆಗೆ ವಿಷಯ ಹೊರಬರಬಾರೆಂದು ಕೊಲೆಯಲ್ಲಿ ಅಂತ್ಯ. ತಮ್ಮ ಕೈಗೆ ಸಿಗದಿದ್ದರೆ ಶೀಲಗೆಟ್ಟವಳೆಂಬ ಪಟ್ಟ ಕಟ್ಟುವುದು ಇಲ್ಲ ಕೆಲ ಗಂಡಸರು ತಮ್ಮ ಹೆಂಡತಿಯ ಮೇಲೆಯೇ ಶಂಕೆ ಪಡುವುದು... ಒಂದೇ ಎರಡೇ...

            ಇದೆಲ್ಲವೂ ಸಮಾಜದಲ್ಲಿ ನಡೆದಾಗ ಉಳಿದ ಹೆಣ್ಮಕ್ಕಳ ರಕ್ತ ಕುದಿಯುತ್ತದೆ. ಅದೇ ತನಗೇ ಹಾಗೆ ಆದಾಗ ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳುತ್ತಾರೆ. ಕೆಲವರು ಮುಂದೆ ಬಂದು ದನಿ ಎತ್ತಿದರೂ ಕಾಣದ ಬಲಿಷ್ಠ ಕೈಗಳು ಅಲ್ಲಿಯೇ ಕ್ಷೀಣಿಸುವ ಹಾಗೆ ಮಾಡಿ ಬಿಡುತ್ತಾರೆ. ಕೆಲವರಿಗೆ ಮಾತ್ರವೇ ನ್ಯಾಯ ಸಿಗುತ್ತದೆ.

Source images: save girls, stop abused


ಅತ್ಯಾಚಾರ, ಆಸಿಡ್ ದಾಳಿ, ಕೊಲೆಯತ್ನ, ಹಲ್ಲೆ ಇವೆಲ್ಲದಕ್ಕೂ ಅವಳ ಮೇಲಿನ ದ್ವೇಷಕ್ಕೆ ಇರಬಹುದು. ಪ್ರೀತಿಯ ವಿಚಾರಕ್ಕಿರಬಹುದು. ಹಣಕ್ಕಾಗಿ ಕೂಡ ಕೃತ್ಯವೆಸಗಬಹುದು. ಅಥವಾ ಅಚಾನಕ್ ಆಗಿ ಯಾರು ಅಪರಿಚಿತನಿಂದಲೂ  ಅತ್ಯಾಚಾರಕ್ಕೊಳಗಾಗಬಹುದು. ಆಸಿಡ್ ದಾಳಿಗಳಾಗಬಹುದು. ಮಹಿಳೆಯರು ಮತ್ತು ಮಕ್ಕಳ ಮೇಲೆ ಆಗುವ ಇಂತಹ ದೌರ್ಜನ್ಯಕ್ಕೆ ತಕ್ಕ ಶಿಕ್ಷೆಯನ್ನು ನಮ್ಮ ಕಾನೂನು ಜಾರಿಗೊಳಿಸಿದರೆ ಅದರ ಭಯ ಅಪರಾಧಿಗಳಿಗೆ ಮೂಡುವುದು ಸುಳ್ಳಲ್ಲ. ಅತ್ಯಾಚಾರಕ್ಕೆ ಒಳಗಾದ ಸಂತೃಸ್ತೆಯ ಹೇಳಿಕೆ ಪಡೆದು ಅಪರಾಧಿಗಳ ಹುಡುಕಿ, ಅಪರಾಧವೆಸಗಿದ್ದು ಸಾಬೀತಾದರೆ ನೇರವಾಗಿ ಗುಂಡಿಕ್ಕಿ ಸಾಯಿಸುವ ಶಿಕ್ಷೆ ನೀಡಬೇಕು. ಕೆಲವು ಸಂತೃಸ್ತರು ದೂರನ್ನು ದಾಖಲಿಸಲು ಮುಂದೆ ಬರುವುದೇ ಇಲ್ಲ. ಮತ್ತೊಂದಿಷ್ಟು ಪ್ರಶ್ನೆಗಳ ಕೇಳಿ ಮನಸ್ಸನ್ನು ಘಾಸಿಗೊಳಿಸುತ್ತಾರೆ ಎಂಬ ಭಯ. ಅಥವಾ ಆಕೆಗೂ ಹಾಗು ಮನೆಯವರಿಗೂ ಅವಮಾನದ ಮೇಲೆ ಅವಮಾನ ಎದುರಿಸುವ ಆತ್ಮಸ್ಥೈರ್ಯ ಕುಂದಿರುವುದು ಇದಕ್ಕೆ ಕಾರಣ ಎನ್ನಬಹುದು.

ಕೆಲವೊಮ್ಮೆ ಆಕೆಯ‌ ಮನೆಯವರಿಗೆ ಒಂದಷ್ಟು ಹಣ ನೀಡಿಯೋ, ಇಲ್ಲ ಮದುವೆ ಮಾಡಿಕೊಂಡೋ ವಿಷಯವನ್ನು ಅಲ್ಲೇ ಮುಚ್ಚಿಹಾಕುತ್ತಾರೆ. ಕಾರಣ, ಕೆಲವೊಮ್ಮೆ ಅತ್ಯಾಚಾರವು ಪರಿಚಿತರಿಂದಲೇ ನಡೆಯುವುದು. ಮಹಿಳೆಯ ಮೇಲಾಗುವ ದೌರ್ಜನ್ಯ ,ಹಿಂಸೆಯು ಕೂಡ ಹಿರಿಯರ ಸಮ್ಮುಖದಲ್ಲಿ ಮಾತುಕತೆ ಸಂಧಾನದ ಮೇಲೆ ವಿಷಯವು ಅಲ್ಲೇ ತಣ್ಣಗಾಗುವುದು. ಹಾಗಾಗಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸರ್ಕಾರವಾಗಲಿ ,ಕಾನೂನಾಗಲಿ ಕಠಿಣ ಶಿಕ್ಷೆಯನ್ನು ವಿಧಿಸಿದರೆ ಮಾತ್ರವೇ ಇಂತಹ ಘಟನೆಗಳು ಮರುಕಳಿಸದಂತೆ ಇರಲು ಸಾಧ್ಯ. ಅಲ್ಲದೇ ತಮಗಾದ ಅನ್ಯಾಯದ ವಿರುದ್ಧ ದನಿ ಎತ್ತಲು ಮಹಿಳೆಯರಿಗೆ ಧೈರ್ಯಬರುವುದು. ಅಂತಹ ಕೂಪದಲ್ಲಿ ಬಿದ್ದು ಸಾಯುವುದಕ್ಕಿಂತ ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದು.

ಮಹಿಳೆಯರಾಗಿ ಇಂತಹ ವಿಷಮ ಸ್ಥಿತಿಯಲ್ಲಿ ಧೈರ್ಯಗೆಡಬಾರದು. ಬದುಕು ಕಟ್ಟಿಕೊಳ್ಳಬೇಕು. ಈ ಸಮಾಜ ಆಡುವ ಚುಚ್ಚು ಮಾತಿಗೆ ಧೃತಿಗೆಡದೆ ತಲೆ ಎತ್ತಿ ಬಾಳಬೇಕು. ನ್ಯಾಯಕ್ಕಾಗಿ ಹೋರಾಡಬೇಕು. ಇಲ್ಲ ಅಂತಹ ಕೆಟ್ಟ ಪರಿಸರದಿಂದ ಹೊರಬಂದು ಹೊಸ ಜೀವನ ಪ್ರಾರಂಭಿಸಬೇಕು. ಬದಲಾಗಿ ಸಾವಿಗೆ ಶರಣಾಗಬಾರದು. ಈ ಜಗತ್ತಿನಲ್ಲಿ ಸಾಂತ್ವಾನ ಹೇಳುವ ಕೈಗಳು ಕೂಡ ಇವೆ‌. ನೆನಪಿರಲಿ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ, ಹೆರುವ ಯಂತ್ರವಾಗಿ, ವರದಕ್ಷಿಣೆ ತಂದು ಕೊಡುವ ATM ಯಂತ್ರವಾಗಿ ನೋಡುವ ಬದಲು, ನಾನಾ ಕಾರಣ ಒಡ್ಡಿ ಪೀಡಿಸುವ ಬದಲು ಅವಳಿಗೂ ಮನಸ್ಸಿದೆ. ನೋಯಿಸದಿರಿ. ಬದುಕಲು ಬಿಡಿ ಎಂಬುದ ಅರ್ಥ ಮಾಡಿಕೊಳ್ಳಿರಿ.

ಸಿಂಧು ಭಾರ್ಗವ್ | ಬೆಂಗಳೂರು-೨೧
ಬರಹಗಾರ್ತಿ

Thursday, 25 June 2020

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು?


ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

ಪ್ರತಿನಿಧಿ ದಿನಪತ್ರಿಕೆ ಯಲ್ಲಿ ಪ್ರಕಟವಾಗಿದೆ.

Nudijenu_daily newspaper

ಹೆಣ್ಣಿನ ಶೋಷಣೆಗೆ ಕೊನೆ ಇಲ್ಲ ಎಂದೇ ಹೇಳಬಹುದು.  ಕೆಲವರಿಗೆ ಹೆಣ್ಣು ಮಗು ಹುಟ್ಟಿತೆಂದು ಸಸಾರ. ಇನ್ನು ಕೆಲವರಿಗೆ ಕೆಲಸದ ಆಳು, ಮನೆಯಲ್ಲಿಯೇ ಬಿದ್ದಿರಬೇಕು. ಕೆಲ ಅತ್ತೆಗೆ, ನಾದಿನಿಯರಿಗೆ ಬಂದ ಸೊಸೆ ಮಗನನ್ನು/ಸಹೋದರನನ್ನು ಕೈವಶ ಮಾಡಿಕೊಳ್ಳುತ್ತಾಳೋ ಎಂಬ ಭಯ. ಮಗನ ಮೇಲಿನ ಅತಿಯಾದ ಮೋಹದಿಂದ ಸ್ವಾರ್ಥಿಗಳಾಗಿ ಬಂದ ಸೊಸೆಗೆ ಕಣ್ಣೀರು ಹಾಕಿಸುವುದು, ವರದಕ್ಷಿಣೆ ಕಿರುಕುಳದಿಂದ ಅಮಾನವೀಯ ಕೃತ್ಯ ಎಸಗುವುದು. ತಮ್ಮ ಯವ್ವನದ ಕಾಮಕೇಳಿಗೆ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಳ್ಳುವ ಹೆಣ್ಮಕ್ಕಳು, ಅಥವಾ ಹೆತ್ತು ತೊಟ್ಟಿಯಲ್ಲಿ ಶಿಶುವನ್ನು ಎಸೆದು ಹೋಗುವವರು. ಇನ್ನೊಂದು ಮುಖವಾಗಿ, ಮಾದಕ ವಸ್ತುಗಳ ಸೇವನೆಗೆ ಬಲಿಯಾಗಿಸಿ ಹೆಣ್ಮಕ್ಕಳನ್ನು ದುಡ್ಡಿನ ಆಸೆಗೆ ದೇಹಮಾರಿಕೊಳ್ಳುವ  ದಂದೆಗೆ ನೂಕುವ ಕ್ರೂರಿಗಳು, ಎಳೆ ಮಗುವಿನಿಂದಾದಿಯಾಗಿ ವೃದ್ಧ ಹೆಂಗಸು, ಬಿಕ್ಷುಕಿಯನ್ನೂ ಬಿಡದೇ ಮಾಡುತ ಅತ್ಯಾಚಾರಗಳು, ಕೊನೆಗೆ ವಿಷಯ ಹೊರಬರಬಾರೆಂದು ಕೊಲೆಯಲ್ಲಿ ಅಂತ್ಯ. ತಮ್ಮ ಕೈಗೆ ಸಿಗದಿದ್ದರೆ ಶೀಲಗೆಟ್ಟವಳೆಂಬ ಪಟ್ಟ ಕಟ್ಟುವುದು ಇಲ್ಲ ಕೆಲ ಗಂಡಸರು ತಮ್ಮ ಹೆಂಡತಿಯ ಮೇಲೆಯೇ ಶಂಕೆ ಪಡುವುದು....
            ಇದೆಲ್ಲವೂ ಸಮಾಜದಲ್ಲಿ ನಡೆದಾಗ ಉಳಿದ ಹೆಣ್ಮಕ್ಕಳ ರಕ್ತ ಕುದಿಯುತ್ತದೆ. ಅದೇ ತನಗೇ ಹಾಗೆ ಆದಾಗ ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳುತ್ತಾರೆ. ಕೆಲವರು ಮುಂದೆ ಬಂದು ದನಿ ಎತ್ತಿದರೂ ಅಲ್ಲಿಯೇ ಕ್ಷೀಣಿಸುವ ಹಾಗೆ ಮಾಡಿ ಬಿಡುತ್ತಾರೆ. ಕೆಲವರಿಗೆ ನ್ಯಾಯ ಸಿಗುತ್ತದೆ.
ಹೆಣ್ಣು ಸಹನೆ,ತಾಳ್ಮೆ ,ಸಯ್ಯಮ, ಸ್ನೇಹ-ಪ್ರೀತಿ, ವಾತ್ಸಲ್ಯ, ಮಮಕಾರದ ಸಾಕಾರ ಮೂರ್ತಿ‌. ಸಲಹೆಗಾರ್ತಿ,ಶಿಕ್ಷಕಿ, ರಕ್ಷಕಿ ಕೂಡ.  ಅವಳು ಎಷ್ಟು ಸಾಧ್ಯವೋ ಅಷ್ಟು ಸಹಿಸಿಕೊಂಡು ಬದುಕುತ್ತಾಳೆ. ಎಷ್ಟು ತಿದ್ದಬೇಕು ಅಷ್ಟು ತಿಳಿ ಹೇಳಿ ತಿದ್ದಲು ಪ್ರಯತ್ನಿಸುತ್ತಾಳೆ. ಅಲ್ಲದೇ ಮನಸ್ಸು ಮಾಡಿದರೆ ಅದರ ದುಪ್ಪಟ್ಟು ಕೋಪ, ಆಕ್ರೋಶ, ಧೈರ್ಯ ಸಾಹಸ ಪ್ರವೃತ್ತಿ ಆಕೆಗಿರುತ್ತದೆ. ಆಕ್ರೋಶವನ್ನು ಹೊರಹಾಕುತ್ತಾಳೆ. ಸಿಡಿದೆದ್ದ ಜ್ವಾಲಾಮುಖಿಯಾಗುತ್ತಾಳೆ. ಎಂಬುವುದನ್ನು ಮರೆಯದಿರಿ.
ತಾಯಿ ಇಲ್ಲದ ಮನೆ, ಮನೆಯೇ ಅಲ್ಲ. ಹಾಗಾಗಿ ಗಂಡ ಅತ್ತೆ ಮಾವ, ನಾದಿನಿಯರು ಕೊಡುವ ಕಷ್ಟಗಳ ಸಹಿಸಿಕೊಂಡು, ತನ್ನ ಮಕ್ಕಳಿಗಾಗಿ ಬದುಕುತ್ತ ಬರುತ್ತಾಳೆ. ಹಾಗೆಯೇ ಹೆಣ್ಣು ಹೆತ್ತವರಿಗೆ ಮದುವೆ ಮಾಡಿ ಕಳುಹಿಸುವುದೇ ಕಷ್ಟಕರವಾದ ಪರಿಸ್ಥಿತಿಯಲ್ಲಿ, ಗಂಡನ ಮನೆಯ ಪರಿಸ್ಥಿತಿ, ಅವರು ಕೊಡುವ ಕಷ್ಟ- ನೋವನ್ನು ಹಂಚಿಕೊಳ್ಳುವುದು ಸರಿ ಕಾಣದೇ ಸಹಿಸಿಕೊಂಡು ಗಂಡನ ಮನೆಯಲ್ಲಿ ಬದುಕುತ್ತಿರುತ್ತಾಳೆ. ಅಲ್ಲದೇ ತನ್ನ ನೋವು ಕಣ್ಣೀರು ಮಕ್ಕಳಿಗೆ ಅರಿವಾಗದ ಹಾಗೆ ಬೆಳೆಸುತ್ತಾಳೆ. ಕಾರಣ "ಮನೆ"ಯ ಸ್ವರೂಪ ಕೆಡಿಸಬಾರದು ಎಂದು‌. ಅವಳ ತಾಳ್ಮೆಗೂ ಒಂದು ಮಿತಿಯಿರುವುದು, ನೆನಪಿರಲಿ.
ಇನ್ನು ಅತ್ಯಾಚಾರ, ಆಸಿಡ್ ದಾಳಿ ಅವಳ ಮೇಲಿನ ದ್ವೇಷಕ್ಕೆ ಇರಬಹುದು. ಒತ್ತಾಯಪೂರ್ವಕವಾಗಿ ಪ್ರೀತಿಸಲು ಹೇಳಿದರೆ ಯಾರು ಒಪ್ಪುವುದಿಲ್ಲ. ಪ್ರೀತಿ ಮೂಡಬೇಕಾದದ್ದು ವಿನಃ  ಒತ್ತಾಯಿಸಿ ಬಲತ್ಕಾರದಿಂದ ಪಡೆಯಲು ಸಾಧ್ಯವಿಲ್ಲ. ಅಥವಾ ಅಚಾನಕ್ ಆಗಿ ಯಾರು ಅಪರಿಚಿತನಿಂದಲೂ  ಅತ್ಯಾಚಾರಕ್ಕೊಳಗಾಗಬಹುದು. ಆಸಿಡ್ ದಾಳಿಯಾಗಬಹುದು. ಹಾಗೆಂದು ಧೈರ್ಯಗೆಡಬಾರದು. ಬದುಕು ಕಟ್ಟಿಕೊಳ್ಳಬೇಕು. ಈ ಸಮಾಜ ಆಡುವ ಚುಚ್ಚು ಮಾತಿಗೆ ಧೃತಿಗೆಡದೆ ತಲೆ ಎತ್ತಿ ಬಾಳಬೇಕು. ನ್ಯಾಯಕ್ಕಾಗಿ ಹೋರಾಡಬೇಕು. ಇಲ್ಲ ಅಂತಹ ಕೆಟ್ಟ ಪರಿಸರದಿಂದ ಹೊರಬಂದು ಹೊಸ ಜೀವನ ಪ್ರಾರಂಭಿಸಬೇಕು. ಬದಲಾಗಿ ಸಾವಿಗೆ ಶರಣಾಗಬಾರದು. ಈ ಜಗತ್ತಿನಲ್ಲಿ ಸಾಂತ್ವಾನ ಹೇಳುವ ಕೈಗಳು ಕೂಡ ಇವೆ‌. ನೆನಪಿರಲಿ. ಇದು ಎಲ್ಲ ಗಂಡಸರಿಗೆ ಆರೋಪ ಮಾಡಲು ಬರೆದ ಲೇಖನವಲ್ಲ. ಬದಲಾಗಿ ವರದಕ್ಷಿಗೆ ಕಿರುಕುಳ, ಅನುಮಾನ , ಅತ್ಯಾಚಾರ ಹಿಂಸೆ ನಿಲ್ಲಿಸಲಿ ಎಂದು ಹೇಳಿದ್ದು. ನಮಗೂ ಮನಸ್ಸಿದೆ. ಬದುಕಲು ಬಿಡಿ. 

ಸಿಂಧು ಭಾರ್ಗವ್ | ಬೆಂಗಳೂರು-೨೧
ಬರಹಗಾರ್ತಿ