Tuesday 28 September 2021

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

 

Source images stop abused save girls

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

ಹೆಣ್ಣು ಮನೆ ಬೆಳಗುವ ದೀಪ. ಸದಾ ತನ್ನವರ ಒಳಿತನ್ನೇ ಬಯಸುವವಳು. ತನ್ನ ವಯೋಸಹಜ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಬದುಕುವ ತ್ಯಾಗಮಯಿ. ಆದರೆ ಹೆಣ್ಣಾಗಿ ಹುಟ್ಟಿದಿ ನೀ ಹುಣ್ಣಿನಂತ ಬಾಳು ಬದುಕು, ಮಣ್ಣಾಗುವ ವರೆಗೂ ನೀ ಎಲ್ಲವನ್ನೂ ಸಹಿಸು ಎಂಬರ್ಥದ ಹಿರಿಯ ಜನಪದ ಹಾಡನ್ನು ಕೂಡ ನಾವು ಕೇಳಿರುತ್ತೇವೆ.  ಹೆಣ್ಣಾಗಿ ಹುಟ್ಟಿದುದಕ್ಕೆ ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮನೆಯಲ್ಲಿ ಮಾತ್ರವಲ್ಲದೇ ಈ ಸಮಾಜದಲ್ಲಿ, ವೃತ್ತಿಜೀವನದಲ್ಲಿ ಅದೆಷ್ಟೋ ಮಹಿಳೆಯರು ಕಿರುಕುಳ, ಒತ್ತಡದ , ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕೆಲವರು ಮೂಕವೇದನೆ ಅನುಭವಿಸುತ್ತಾರೆ. ಕೆಲವರು ಅಂತಹ ಸ್ಥಳದಿಂದ ಹೊರನಡೆಯುತ್ತಾರೆ. ಇನ್ನೂ ಕೆಲವರು ಇಹಲೋಕ ತ್ಯಜಿಸುವುದೂ ಉಂಟು.

ಹಾಗಾಗಿ ಹೆಣ್ಣಿನ ಶೋಷಣೆಗೆ ಕೊನೆ ಇಲ್ಲ ಎಂದೇ ಹೇಳಬಹುದು.  ಕೆಲವರಿಗೆ ಹೆಣ್ಣು ಮಗು ಹುಟ್ಟಿತೆಂದು ಸಸಾರ. ಇನ್ನು ಕೆಲವರಿಗೆ ಕೆಲಸದ ಆಳು, ಮನೆಯಲ್ಲಿಯೇ ಬಿದ್ದಿರಬೇಕು. ವರದಕ್ಷಿಣೆ ಕಿರುಕುಳದಿಂದ ಅಮಾನವೀಯ ಕೃತ್ಯ ಎಸಗುವುದು ಸರ್ವೇಸಾಮಾನ್ಯವಾದ ಸಂಗತಿ. ಯಾರೊಂದಿಗೂ ಹೇಳಿಕೊಳ್ಳುವ ಹಾಗಿಲ್ಲ. ಹೇಳಿದರೂ ಸಾಂತ್ವಾನದ ಮಾತುಗಳು ಕೇಳಿ ಬರುವ ಬದಲು "ಎಲ್ಲರ ಮನೆಯ ದೋಸೆ ತೂತೆ...ಹೊಂದಿಕೊಂಡು ಹೋಗು .." ಎಂಬ ಮಾತು ತೇಲಿಸಿಬಿಡುತ್ತಾರೆ. ಆಕೆಯ ಮನಸ್ಸಿನ ಮೇಲಾಗುವ ಪರಿಣಾಮಗಳನ್ನು ಯಾರೂ ಅರ್ಥಮಾಡಿಕೊಳ್ಳಲು ಹೋಗುವುದಿಲ್ಲ. ಇಷ್ಟೇ ಅಲ್ಲದೇ ಇನ್ನೊಂದು ಮುಖವಾಗಿ ತಮ್ಮ ಯವ್ವನದ ಕಾಮಕೇಳಿಗೆ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಳ್ಳುವ ಹೆಣ್ಮಕ್ಕಳು, ಅಥವಾ ಹೆತ್ತು ತೊಟ್ಟಿಯಲ್ಲಿ ಶಿಶುವನ್ನು ಎಸೆದು ಹೋಗುವವರು ಇದ್ದಾರೆ. ಮಾದಕ ದ್ರವ್ಯಗಳ ಸೇವನೆಗೆ ಬಲಿಯಾಗಿ ಹೆಣ್ಮಕ್ಕಳು ತಮ್ಮ ಸುಂದರ ಬದುಕನ್ನು ನಾಶಮಾಡಿಕೊಳ್ಳುವವರೂ ಇದ್ದಾರೆ. ಇನ್ನು ಹಣದ ಆಸೆಗೆ ವೇಶ್ಯಾವಾಟಿಕೆ  ದಂಧೆಗೆ ನೂಕುವ ಕ್ರೂರಿಗಳು, ಎಳೆ ಮಗುವಿನಿಂದಾದಿಯಾಗಿ ವೃದ್ಧ ಹೆಂಗಸು, ಬಿಕ್ಷುಕಿಯನ್ನೂ ಬಿಡದೇ ನಡೆಯುವ ಅತ್ಯಾಚಾರಗಳು, ಕೊನೆಗೆ ವಿಷಯ ಹೊರಬರಬಾರೆಂದು ಕೊಲೆಯಲ್ಲಿ ಅಂತ್ಯ. ತಮ್ಮ ಕೈಗೆ ಸಿಗದಿದ್ದರೆ ಶೀಲಗೆಟ್ಟವಳೆಂಬ ಪಟ್ಟ ಕಟ್ಟುವುದು ಇಲ್ಲ ಕೆಲ ಗಂಡಸರು ತಮ್ಮ ಹೆಂಡತಿಯ ಮೇಲೆಯೇ ಶಂಕೆ ಪಡುವುದು... ಒಂದೇ ಎರಡೇ...

            ಇದೆಲ್ಲವೂ ಸಮಾಜದಲ್ಲಿ ನಡೆದಾಗ ಉಳಿದ ಹೆಣ್ಮಕ್ಕಳ ರಕ್ತ ಕುದಿಯುತ್ತದೆ. ಅದೇ ತನಗೇ ಹಾಗೆ ಆದಾಗ ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳುತ್ತಾರೆ. ಕೆಲವರು ಮುಂದೆ ಬಂದು ದನಿ ಎತ್ತಿದರೂ ಕಾಣದ ಬಲಿಷ್ಠ ಕೈಗಳು ಅಲ್ಲಿಯೇ ಕ್ಷೀಣಿಸುವ ಹಾಗೆ ಮಾಡಿ ಬಿಡುತ್ತಾರೆ. ಕೆಲವರಿಗೆ ಮಾತ್ರವೇ ನ್ಯಾಯ ಸಿಗುತ್ತದೆ.

Source images: save girls, stop abused


ಅತ್ಯಾಚಾರ, ಆಸಿಡ್ ದಾಳಿ, ಕೊಲೆಯತ್ನ, ಹಲ್ಲೆ ಇವೆಲ್ಲದಕ್ಕೂ ಅವಳ ಮೇಲಿನ ದ್ವೇಷಕ್ಕೆ ಇರಬಹುದು. ಪ್ರೀತಿಯ ವಿಚಾರಕ್ಕಿರಬಹುದು. ಹಣಕ್ಕಾಗಿ ಕೂಡ ಕೃತ್ಯವೆಸಗಬಹುದು. ಅಥವಾ ಅಚಾನಕ್ ಆಗಿ ಯಾರು ಅಪರಿಚಿತನಿಂದಲೂ  ಅತ್ಯಾಚಾರಕ್ಕೊಳಗಾಗಬಹುದು. ಆಸಿಡ್ ದಾಳಿಗಳಾಗಬಹುದು. ಮಹಿಳೆಯರು ಮತ್ತು ಮಕ್ಕಳ ಮೇಲೆ ಆಗುವ ಇಂತಹ ದೌರ್ಜನ್ಯಕ್ಕೆ ತಕ್ಕ ಶಿಕ್ಷೆಯನ್ನು ನಮ್ಮ ಕಾನೂನು ಜಾರಿಗೊಳಿಸಿದರೆ ಅದರ ಭಯ ಅಪರಾಧಿಗಳಿಗೆ ಮೂಡುವುದು ಸುಳ್ಳಲ್ಲ. ಅತ್ಯಾಚಾರಕ್ಕೆ ಒಳಗಾದ ಸಂತೃಸ್ತೆಯ ಹೇಳಿಕೆ ಪಡೆದು ಅಪರಾಧಿಗಳ ಹುಡುಕಿ, ಅಪರಾಧವೆಸಗಿದ್ದು ಸಾಬೀತಾದರೆ ನೇರವಾಗಿ ಗುಂಡಿಕ್ಕಿ ಸಾಯಿಸುವ ಶಿಕ್ಷೆ ನೀಡಬೇಕು. ಕೆಲವು ಸಂತೃಸ್ತರು ದೂರನ್ನು ದಾಖಲಿಸಲು ಮುಂದೆ ಬರುವುದೇ ಇಲ್ಲ. ಮತ್ತೊಂದಿಷ್ಟು ಪ್ರಶ್ನೆಗಳ ಕೇಳಿ ಮನಸ್ಸನ್ನು ಘಾಸಿಗೊಳಿಸುತ್ತಾರೆ ಎಂಬ ಭಯ. ಅಥವಾ ಆಕೆಗೂ ಹಾಗು ಮನೆಯವರಿಗೂ ಅವಮಾನದ ಮೇಲೆ ಅವಮಾನ ಎದುರಿಸುವ ಆತ್ಮಸ್ಥೈರ್ಯ ಕುಂದಿರುವುದು ಇದಕ್ಕೆ ಕಾರಣ ಎನ್ನಬಹುದು.

ಕೆಲವೊಮ್ಮೆ ಆಕೆಯ‌ ಮನೆಯವರಿಗೆ ಒಂದಷ್ಟು ಹಣ ನೀಡಿಯೋ, ಇಲ್ಲ ಮದುವೆ ಮಾಡಿಕೊಂಡೋ ವಿಷಯವನ್ನು ಅಲ್ಲೇ ಮುಚ್ಚಿಹಾಕುತ್ತಾರೆ. ಕಾರಣ, ಕೆಲವೊಮ್ಮೆ ಅತ್ಯಾಚಾರವು ಪರಿಚಿತರಿಂದಲೇ ನಡೆಯುವುದು. ಮಹಿಳೆಯ ಮೇಲಾಗುವ ದೌರ್ಜನ್ಯ ,ಹಿಂಸೆಯು ಕೂಡ ಹಿರಿಯರ ಸಮ್ಮುಖದಲ್ಲಿ ಮಾತುಕತೆ ಸಂಧಾನದ ಮೇಲೆ ವಿಷಯವು ಅಲ್ಲೇ ತಣ್ಣಗಾಗುವುದು. ಹಾಗಾಗಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸರ್ಕಾರವಾಗಲಿ ,ಕಾನೂನಾಗಲಿ ಕಠಿಣ ಶಿಕ್ಷೆಯನ್ನು ವಿಧಿಸಿದರೆ ಮಾತ್ರವೇ ಇಂತಹ ಘಟನೆಗಳು ಮರುಕಳಿಸದಂತೆ ಇರಲು ಸಾಧ್ಯ. ಅಲ್ಲದೇ ತಮಗಾದ ಅನ್ಯಾಯದ ವಿರುದ್ಧ ದನಿ ಎತ್ತಲು ಮಹಿಳೆಯರಿಗೆ ಧೈರ್ಯಬರುವುದು. ಅಂತಹ ಕೂಪದಲ್ಲಿ ಬಿದ್ದು ಸಾಯುವುದಕ್ಕಿಂತ ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದು.

ಮಹಿಳೆಯರಾಗಿ ಇಂತಹ ವಿಷಮ ಸ್ಥಿತಿಯಲ್ಲಿ ಧೈರ್ಯಗೆಡಬಾರದು. ಬದುಕು ಕಟ್ಟಿಕೊಳ್ಳಬೇಕು. ಈ ಸಮಾಜ ಆಡುವ ಚುಚ್ಚು ಮಾತಿಗೆ ಧೃತಿಗೆಡದೆ ತಲೆ ಎತ್ತಿ ಬಾಳಬೇಕು. ನ್ಯಾಯಕ್ಕಾಗಿ ಹೋರಾಡಬೇಕು. ಇಲ್ಲ ಅಂತಹ ಕೆಟ್ಟ ಪರಿಸರದಿಂದ ಹೊರಬಂದು ಹೊಸ ಜೀವನ ಪ್ರಾರಂಭಿಸಬೇಕು. ಬದಲಾಗಿ ಸಾವಿಗೆ ಶರಣಾಗಬಾರದು. ಈ ಜಗತ್ತಿನಲ್ಲಿ ಸಾಂತ್ವಾನ ಹೇಳುವ ಕೈಗಳು ಕೂಡ ಇವೆ‌. ನೆನಪಿರಲಿ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ, ಹೆರುವ ಯಂತ್ರವಾಗಿ, ವರದಕ್ಷಿಣೆ ತಂದು ಕೊಡುವ ATM ಯಂತ್ರವಾಗಿ ನೋಡುವ ಬದಲು, ನಾನಾ ಕಾರಣ ಒಡ್ಡಿ ಪೀಡಿಸುವ ಬದಲು ಅವಳಿಗೂ ಮನಸ್ಸಿದೆ. ನೋಯಿಸದಿರಿ. ಬದುಕಲು ಬಿಡಿ ಎಂಬುದ ಅರ್ಥ ಮಾಡಿಕೊಳ್ಳಿರಿ.

ಸಿಂಧು ಭಾರ್ಗವ್ | ಬೆಂಗಳೂರು-೨೧
ಬರಹಗಾರ್ತಿ

No comments:

Post a Comment