Tuesday 28 September 2021

Breast cancer ಹೆಣ್ಮಕ್ಕಳ ಕಾಡುವ ಸ್ತನ ಕ್ಯಾನ್ಸರ್

 ಲೇಖನ : ಮಹಿಳೆಯರ ಕಾಡುವ ಸ್ತನ ಕ್ಯಾನ್ಸರ್


ಸ್ತನ ಕ್ಯಾನ್ಸರ್ Breast cancer


ಈಗೀನ ಜೀವನ ಕ್ರಮಕ್ಕೆ, ಬದಲಾಗುವ ಹಾರ್ಮೋನ್‌ಗಳಿಂದ ಒಂದಿಲ್ಲ ಒಂದು ತರಹದ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂಬುದೇ  ಆಶ್ಚರ್ಯಕರ. ಅದರಲ್ಲಿಯೂ ಮಹಿಳೆಯರ ಕಾಡುವ "ಸ್ತನ ಕ್ಯಾನ್ಸರ್". ಹಲವು ಲಕ್ಷಣಗಳು ಕಾಣಿಸಿಕೊಂಡರು ಕೂಡ  ಕೆಲವೊಮ್ಮೆ ಹೇಳಲು ಮುಜುರುಗ ಎನಿಸುವ ಮನಸ್ಥಿತಿಯಲ್ಲಿ  ಮಹಿಳೆಯರು ಇರುತ್ತಾರೆ. ಗೌಪ್ಯವಾಗಿಡಲು ಪ್ರಯತ್ನಿಸುತ್ತಾರೆ. ಇದರಿಂದ ಮುಖ್ಯವಾಗಿ ಇಂತದ್ದೇ ಸಮಸ್ಯೆ ಮುಂದೆ ಭಾದಿಸಬಹುದು ಎಂಬ ಸುಳಿವು ಕೂಡ ಅವರಿಗಿರುವುದಿಲ್ಲ. ಪ್ರತೀ ವರ್ಷವೂ ಸರಿಸುಮಾರು 1.5 ಲಕ್ಷದಷ್ಟು ಸ್ತ್ರೀಯರಲ್ಲಿ ಈ ರೋಗವು ಪತ್ತೆಯಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ಉಲ್ಬಣಗೊಂಡ ಮೇಲೆಯೇ ಮಹಿಳೆಯರಿಗೆ ಇದರ ಅರಿವಾಗುವುದು. 


ಸ್ತನ ಕ್ಯಾನ್ಸರ್ ನ ಲಕ್ಷಣಗಳು ಮತ್ತು ಕಾರಣಗಳನ್ನು ತಿಳಿಯೋಣ : 

ಮೊದಲನೆಯದಾಗಿ ಸ್ತನ ಕ್ಯಾನ್ಸರ್ ಎಂದರೆ ಸ್ತನದ ಸುತ್ತಲೂ ರೂಪುಗೊಳ್ಳುವ ಗಡ್ಡೆ. ಕ್ಯಾನ್ಸರ್ ಜೀವಕೋಶಗಳು ಸ್ತನದ ಜೀವಕೋಶಗಳನ್ನು ಆವರಿಸಿ ಈ ರೋಗವು ಕಾಣಿಸಿಕೊಳ್ಳುತ್ತದೆ. ಪ್ರತಿಯೊಂದು ಸ್ತನವು ಹಾಲನ್ನು ಉತ್ಪಾದಿಸುವ ಲೋಬ್ಸ್ ಎಂದು ಕರೆಯಲ್ಪಡುವ 15-20 ಗ್ರಂಥಿಗಳನ್ನು ಹೊಂದಿರುತ್ತದೆ. ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಈ ಲೋಬ್ಸ್‌ನಲ್ಲಿ ಪ್ರಾರಂಭವಾಗುತ್ತದೆ. ಇದು ತೊಟ್ಟುಗಳ ಪ್ರದೇಶದ ಕೆಳಗಿರುವ ಒಂದು ಗಟ್ಟಿ ಗಡ್ಡೆಯಾಗಿ ಕಂಡುಬರುತ್ತದೆ. ಈ ಮಾರಣಾಂತಿಕ ರೋಗಕ್ಕೆ ವಿವಿಧ ಹಂತಗಳಿವೆ. ಮೊದಲ ಹಂತದಲ್ಲಿದ್ದರೆ, ಕ್ಯಾನ್ಸರ್ ಸ್ತನ ನಾಳಕ್ಕೆ (ಹಾಲು ಉತ್ಪಾದಿಸುವ ಸ್ಥಳ) ಸೀಮಿತವಾಗಿದೆ ಎಂದರ್ಥ, ಇದು ಮೊದಲಿನ ಹಂತವಾಗಿದೆ. ಅಲ್ಲದೇ ಸ್ತನ ಕ್ಯಾನ್ಸರ್ಗೆ ಕಾರಣವಾಗುವ ಕೆಲವು ಅಪಾಯಕಾರಿ ಅಂಶಗಳೆಂದರೆ ಸ್ತ್ರೀ ಲೈಂಗಿಕ ಸಂಬಂಧ, ಬೊಜ್ಜು, ದೈಹಿಕ ವ್ಯಾಯಾಮದ ಕೊರತೆ, ಮದ್ಯ ಹಾಗೂ ಧೂಮಪಾನ ಸೇವನೆ, ಋತುಬಂಧದ ಸಮಯದಲ್ಲಿ ಹಾರ್ಮೋನು ಬದಲಿ ಚಿಕಿತ್ಸೆ, ಆಲಸ್ಯವಾಗಿ ಮಕ್ಕಳಾಗುವುದು ಅಥವ ಮಕ್ಕಳು ಆಗದೇನೇ ಇರುವುದು, ಮುದಿ ವಯಸ್ಸಿನಲ್ಲಿ ಕೂಡ ಬರಬಹುದು. 

ಮಹಿಳೆಯರು ಸ್ತನದಲ್ಲಿ ಗಡ್ಡೆಯಾಗಿದೆಯಾ ಎಂದು ಸ್ವತಃ ಪರೀಕ್ಷಿಸಬಹುದು. ಅಥವಾ ತೋಳುಗಳ ವ್ಯಾಯಾಮ ಮಾಡುವಾಗ ನೋವು ಬರುವುದೇ ಎಂದು ಗಮನಿಸಬಹುದು. ಅನುಮಾನ ಬಂದರೆ ಅಲ್ಟ್ರಾಸೌಂಡ್ ಸ್ಕ್ಯಾನ್, ಸ್ತನದ ಎಮ್.ಆರ್.ಐ ಸ್ಕ್ಯಾನ್ ಮಾಡಿಸಬಹುದು. 

ಮುಖ್ಯವಾಗಿ ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ ಮಹಿಳೆಯರಲ್ಲಿ "ಹಾರ್ಮೋನಿನ ಅಸಮತೋಲನ" ಉಂಟಾದಾಗಲು ಈ ತರಹ ಸಮಸ್ಯೆ ಬರಲುಬಹುದು. ಗರ್ಭಾಶಯ, ಅಂಡಾಶಯದ ಕ್ಯಾನ್ಸರ್ ಬಂದಿದ್ದರೆ ನಂತರದಲ್ಲಿ ಸ್ತನದ ಕಡೆಗೂ ವಿಸ್ತರಿಸಬಹುದು. ಹೆರಿಗೆ ಬಾಣಂತಿಯ ಸಮಯದಲ್ಲಿ ಹಾಲೂಡಿಸುವಾಗ ಗಡ್ಡೆ ರಚನೆಯಾಗಿದ್ದರೆ ಇದು ಮುಂದೆ ಕ್ಯಾನ್ಸರ್ ಗಡ್ಡೆಯಾಗುವ ಸಾಧ್ಯತೆಗಳೂ ಇವೆ.  

ಕ್ಯಾನ್ಸರ್ ನಿಂದ ರಕ್ಷಿಸುವ ಬಿಆರ್‌ಸಿಎ1 ಮತ್ತು ಬಿಆರ್‌ಸಿಎ2 ಜೀನ್ಸ್‌ಗಳು ಪ್ರೊಟೀನುಗಳನ್ನು ಉತ್ಪತ್ತಿ ಮಾಡುತ್ತದೆ. ಒಂದು ವೇಳೆ ಅವುಗಳು ದೋಷಪೂರಿತವಾಗಿದ್ದರೆ ೪೦ ವರ್ಷದ ಮೇಲ್ಪಟ್ಟ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 80ರಷ್ಟಿರುತ್ತದೆ. ಖುತುಚಕ್ರದಲ್ಲಿ ಆಗಾಗ್ಗೆ ಏರುಪೇರಾಗುವುದು, ಮಾನಸಿಕ ಆರೋಗ್ಯ ಕೆಡುವುದು, ಅತಿ ಬೇಗ ಭಾವುಕರಾಗುವುದು, ಸಿಡುಕುವುದು, ಕೊರಗುವುದು ಇವೆಲ್ಲವೂ ಹಾರ್ಮೋನುಗಳ ಅಸಮತೋಲನದಿಂದ ಬಳಲುವ ಲಕ್ಷಣಗಳು.  ಸ್ಥೂಲಕಾಯದಿಂದ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚು ಬಿಡುಗಡೆಯಾಗುತ್ತದೆ. ಇದರಿಂದ ಬ್ರೆಸ್ಟ್ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸ್ತನದ ತೊಟ್ಟಿನಲ್ಲಿ ಊತ, ತೊಟ್ಟು ಒಳಕ್ಕೆ ಹೋಗಿರುವುದು, ಅಥವಾ ಬಿಳಿ / ಹಳದಿ ಬಣ್ಣದ ಹಾಲು ಜಿನುಗುವುದು, ಮುಟ್ಟಿದಾಗ ಗಡ್ಡೆಯಂತೆ ಭಾಸವಾಗುವುದು, ನೋವು ಕಾಣಿಸಿಕೊಳ್ಳುವುದು, ಕಂಕುಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಚರ್ಮ ಕೆಂಪಾಗುವುದು ಇವೆಲ್ಲವೂ ಲಕ್ಷಣಗಳಾಗಿವೆ.


ಚಿಕಿತ್ಸಾಕ್ರಮ : 

ಓಂಕೋಟೈಪ್ ಡಿಎಕ್ಸ್ ಮತ್ತು ಮಾಮ್ಮಪ್ರಿಂಟ್ ಗಳಂತಹ ಕೆಲವು ವರ್ಣತಂತು ಪರೀಕ್ಷೆಗಳ ಜೊತೆಗೆ ಕೆಲ ನಿರ್ಧಿಷ್ಟ ವರ್ಣತಂತು ಪರೀಕ್ಷೆಗಳೂ ಮಾಡಿಸಬೇಕಾಗುತ್ತದೆ.  ಒಂದೇ ಗುಂಪಿಗೆ ಸೇರಿರೋ ರೋಗಿಗಳು ಹಾರ್ಮೋನ್ ಚಿಕಿತ್ಸೆಯಿಂದ ಪ್ರಯೋಜನ ಪಡೆಯುವರೋ ಅಥವಾ ಕಿಮೋಥೆರಪಿಯಿಂದ ಪ್ರಯೋಜನ ಪಡೆಯುವರೋ ಎಂಬುದನ್ನ ನಿರ್ಧರಿಸಲು ಈ ವರ್ಣತಂತು ಪರೀಕ್ಷೆಗಳು ನೆರವಾಗುತ್ತವೆ. ಅದನ್ನು ಚಿಕಿತ್ಸೆ ನೀಡುವ ವೈದ್ಯರು ಸಲಹೆ ನೀಡುತ್ತಾರೆ. ಆಗಾಗ್ಗೆ ಚಿಕೊತ್ಸೆಗೆ ಒಳಗಾಗುತ್ತಿರಬೇಕು. ಪ್ರಮುಖವಾಗಿ ಧೂಮಪಾನ ಮದ್ಯಪಾನದಿಂದ ದೂರವಿರಬೇಕು.   ಅದರ ಜೊತೆಗೆ ಬೇಳೆಕಾಳು, ಪೌಷ್ಟಿಕಾಂಶ ಆಹಾರ, ಸೊಪ್ಪು ತರಕಾರಿ ಮೊಳಕೆ ಕಾಳುಗಳ ಸೇವನೆ ಅತ್ಯಗತ್ಯ. ಜೊತೆಗೆ ನಿಯಮಿತ ವ್ಯಾಯಾಮ. ಮನಸ್ಸಿಗೆ ಘಾಸಿ ಮಾಡುವ ವಿಷಯದ ಕುರಿತು ಯೋಚಿಸದೇ ಇರುವುದು ಉತ್ತಮ. ನಕಾರಾತ್ಮಕವಾಗಿ ಯೋಚಿಸದೇ ಸದಾ ಧನಾತ್ಮಕ ಚಿಂತನೆ ಮಾಡುತ್ತಿರಬೇಕು. ಆಧಾತ್ಮದ ಕಡೆಗೆ ಮನವನ್ನು ಕೇಂದ್ರೀಕರಿಸಬಹುದು. ಪ್ರಕೃತಿ ಆರಾಧನೆ ಕೂಡ ಬೇಗದಲ್ಲಿ ಚೇತರಿಸಿಕೊಳ್ಳಲು ಸಹಕಾರಿಯಾಗುವುದು. ರೋಗಿಗೆ ಆತ್ಮಸ್ಥೈರ್ಯ ನೀಡುವ ಮಾತುಗಳನ್ನಾಡಬೇಕು. ಜೊತೆಗೆ, ವರ್ಷಕ್ಕೊಂದು ಬಾರಿ ಸ್ತನಗಳ ಎಂ.ಆರ್.ಐ. ಮಾಡಿಸ್ಕೊಳ್ಳೋದು ಮತ್ತು ಹಾರ್ಮೋನಿನ ಚಿಕಿತ್ಸೆಗೊಳಗಾಗೋದು ಸೂಕ್ತ.


- ಸಿಂಧು ಭಾರ್ಗವ ಬೆಂಗಳೂರು ( ಲೇಖಕಿ )




No comments:

Post a Comment