Tuesday 28 September 2021

Uses of Amla Custurd Apple and Gauva ಸೀಬೆಹಣ್ಣು, ಸೀತಾಫಲ ಹಾಗು ನೆಲ್ಲಿಕಾಯಿಯ ಉಪಯೋಗ

ಕನ್ನಡ ಲೇಖನ


ಮಾರುಕಟ್ಟೆಯ ಆವರಿಸಿದ ಸೀತಾಫಲ ಹಾಗೂ ಸೀಬೆಹಣ್ಣುಗಳು

ಕಾಲಕ್ಕೆ ತಕ್ಕಂತೆ ಕೋಲ ಕಟ್ಟು ಎಂಬ ಹಿರಿಯರ ನಾಣ್ನುಡಿಯಂತೆ ಆಯಾಯ ಕಾಲಕ್ಕೆ ತಕ್ಕಂತೆ ನಾವು ಹೊಂದಿಕೊಂಡು ಬದುಕಬೇಕು. ನಮ್ಮ ಆಹಾರಕ್ರಮದಲ್ಲಿ ಋತುಗಳಿಗೆ ಅನುಗುಣವಾಗಿ ಕೂಡ ಬದಲಾವಣೆ ಮಾಡಿಕೊಳ್ಳಬೇಕು. ಈಗ ಲ್ಲಿ ಗಲ್ಲಿಯಲ್ಲಿ, ತಳ್ಳೋ ಗಾಡಿಯಲ್ಲಿ, ತರಕಾರಿ ಸಂತೆಗಳಲ್ಲಿ ಕಾಣ ಸಿಗುವ ಹಣ್ಣುಗಳೆಂದರೆ ಸೀಬೆಹಣ್ಣು ಹಾಗೂ ಸೀತಾಫಲ ಹಣ್ಣುಗಳ ರಾಶಿ. ಜೊತೆಗೆ ನೆಲ್ಲಿಕಾಯಿಯು ತನ್ನ ಸ್ಥಾನವನ್ನು ಪಡೆದಿದೆ. ಒಮ್ಮೆ ಗಮನಿಸಿದರೆ ವಿಟಮಿನ್ ಸಿ ಅಂಶ ಹೇರಳವಾಗಿರುವ ಈ ಹಣ್ಣುಗಳು ಈಗಿನ ಮಾಸಕ್ಕೆ ನಮ್ಮ ದಿನನಿತ್ಯದ ಬಳಕೆಯಾಗಬೇಕು. ಇವುಗಳ ಉಪಯೋಗ, ಏಕೆ ಬಳಸಬೇಕು ಎಂದು ನೋಡೋಣ.

ಮೊದಲಿಗೆ ಸೀಬೆಹಣ್ಣು : 

Uses of Gauva Fruits



ನಮ್ಮ ದೇಶದಲ್ಲಿ ಅದರಲ್ಲೂ ಕರ್ನಾಟಕಲ್ಲಿ ಅಗಸ್ಟ್ ಮಾಸದಲ್ಲಿಯೇ ಸೀಬೆಹಣ್ಣುಗಳು ಕಟಾವಿಗೆ ಬರುವುದು. ಒಂದಷ್ಟು ಜನರು ನೇರವಾಗಿ ತೋಟಕ್ಕೆ ಹೋಗಿ ಹಣ್ಣುಗಳ ಖರೀದಿಸಿದರೆ, ಹೆಚ್ಚಿನವರು ಮಾರುಕಟ್ಟೆಯಲ್ಲಿ ಬರುವ ಈ ಸೀಬೆಹಣ್ಣನ್ನು ಖರೀದಿಸುವರು. ಕೆ.ಜಿಗೆ 40-50  ರೂಪಾಯಿ ದರವನ್ನು ನಿಗದಿ ಮಾಡಲಾಗಿರುತ್ತದೆ. ಬಿಳಿ ಬಣ್ಣದ, ಕಡುಗುಲಾಬಿ, ಕೆಂಪು ಬಣ್ಣದ ತುಂಬಾ ಸಿಹಿಯಾದ, ಸ್ಪಲ್ಪ ಸಿಹಿಯಾದ ಹಣ್ಣುಗಳ ನಾವು ಕಾಣಬಹುದಾಗಿದೆ. ಅದರಲ್ಲಿಯೂ ಅತ್ಯಂತ ದೊಡ್ಡ ಗಾತ್ರದ ಥೈಲ್ಯಾಂಡ್ ನ ಸೀಬೆಹಣ್ಣುಗಳು ಕೂಡ ನಮ್ಮ ರಾಜ್ಯಕ್ಕೆ ಲಗ್ಗೆ ಇಟ್ಟಿವೆ ಎನ್ನಬಹುದು. ಒಂದು ಹಣ್ಣು ಸುಮಾರು ೭೦೦-೭೫೦ ಗ್ರಾಂ ತೂಕ ತೂಗುತ್ತದೆ.
ಸೀಬೆಹಣ್ಣು ಎಲ್ಲ ಕಾಲದಲ್ಲೂ ಬೆಳೆಯುವ ಬೆಳೆಯಾಗಿದೆ. ಇದರ ಎಲೆಗಳು ಕೂಡ ಉಪಯೋಗಕಾರಿ. ವಿಟಮಿನ್ ಸಿ ಅಂಶ ಹೇರಳವಾಗಿ ಈ ಹಣ್ಣಿನಲ್ಲಿರುತ್ತದೆ. ಅಲ್ಲದೇ ಐರನ್,ಕ್ಯಾಲ್ಸಿಯಂ, ವಿಟಮಿನ್ ಎ ಅಂಶವೂ ಒಳಗೊಂಡಿದೆ. ಕೊಬ್ಬಿನಂಶ ಅತ್ಯಂತ ಕಡಿಮೆಯಿರುವ ಈ ಹಣ್ಣನ್ನು ಎಲ್ಲರೂ ಸೇವಿಸಬಹುದು. ಬಡವರ ಸೇಬು ಎಂದೇ ಹೆಸರುವಾಸಿಯಾದ ಈ ಹಣ್ಣನ್ನು ಪ್ರತಿದಿನ ಒಂದೊಂದು ಹಣ್ಣನ್ನು ತಿಂದರೆ ಜೀರ್ಣಕ್ರಿಯೆ ವೃದ್ಧಿಸುತ್ತದೆ. ಕಿತ್ತಳೆ ಹಣ್ಣಿಗಿಂತ ಅತಿ ಹೆಚ್ಚು ವಿಟಮಿನ್‌ ಸಿ ಅಂಶ ಹೊಂದಿರುವ ಈ ಹಣ್ಣು ಸೇವಿಸುವುದರಿಂದ ಅಲ್ಜೈಮರ್‌, ಅರ್ಥರೈಟಿಸ್‌ ಹಾಗೂ ಕಣ್ಣಿನ ಪೂರೆಯುಂಟಾಗುವಂತಹ ಕಾಯಿಲೆಗಳನ್ನು ದೂರಾಗಿಸುತ್ತದಂತೆ. ಅಷ್ಟೇ ಅಲ್ಲದೆ ಕ್ಯಾನ್ಸರ್‌ ಹಾಗೂ ಹೃದಯ ಕಾಯಿಲೆಗಳನ್ನು ದೂರವಿಡುತ್ತದಂತೆ.
ಹಣ್ಣಿಗೆ ಸ್ವಲ್ಪ ಪುಡಿ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಬೆರೆಸಿ ತಿಂದರೆ ಇನ್ನೂ ರುಚಿಯಾಗಿರುತ್ತದೆ.

ಸೀತಾಫಲ ಹಣ್ಣು :

Uses of Custerd Apple


 ಮಳೆಗಾಲದಲ್ಲಿ ಹೇರಳವಾಗಿ ಕಾಣಸಿಗುವ ಹಣ್ಣುಗಳಲ್ಲಿ ಇದು ಕೂಡ ಒಂದು. ಇದರಲ್ಲಿ ಕೂಡ ವಿಟಮಿನ್ ಸಿ ಹಾಗೂ ವಿಟಮಿನ್ ಎ ಯಥೇಚ್ಛವಾಗಿ ಸಿಗುತ್ತದೆ. ಇದು ವಿಪರೀತ ಸಿಹಿಯಾದ ಹಣ್ಣಾಗಿದೆ.  ಕಣ್ಣಿನ ದೃಷ್ಟಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಸೀತಾಫಲ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಈ ಮೇಲಿನ ವಿಟಮಿನ್ ಅಂಶಗಳು ಇದರಲ್ಲಿ ಇರುವುದರ ಜೊತೆಗೆ ರಿಬೋಫ್ಲಾವಿನ್, ವಿಟಮಿನ್ ಬಿ2 ಅಂಶಗಳು ಕೂಡ ಆಗಿರುವುದರಿಂದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ರೂಪಗಳು ನಿಸರ್ಗದತ್ತವಾಗಿ ಈ ಹಣ್ಣುಗಳಲ್ಲಿ ಸಿಗುತ್ತವೆ. ನಿಮ್ಮ ಕಣ್ಣಿನ ಹಲವಾರು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದು. ನಾರಿನ ಅಂಶ ಹಾಗೂ ಮ್ಯಾಗ್ನೀಶಿಯಂ ಇದರಲ್ಲಿ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆ ಸಮಸ್ಯೆ ದೂರವಾಗಿಸುತ್ತದೆ. ಬಾಯಿಯ ಹುಣ್ಣಿಗೆ ಕೂಡ ರಾಮಬಾಣ. ಸೀತಾಫಲ ಹಣ್ಣುಗಳಲ್ಲಿ ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಹೃದಯದ ಕಾಯಿಲೆಗಳನ್ನು ದೂರ ಇರಿಸುವ ಮತ್ತು ಮಾಂಸಖಂಡಗಳ ಅಭಿವೃದ್ಧಿಯಲ್ಲಿ ನೆರವಾಗುವ ಜೊತೆಗೆ ರಕ್ತದ ಒತ್ತಡವನ್ನು ಕೂಡ ನಿಯಂತ್ರಣ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೀತಾಫಲ ಹಣ್ಣುಗಳನ್ನು ಸೇವನೆ ಮಾಡಬಹುದು. ಅಲ್ಲದೆ ಕೊಲೆಸ್ಟರಾಲ್‌ ಪ್ರಮಾಣ ಕಡಿಮೆ ಮಾಡಲು ಸಹಕಾರಿಯಾಗಿದೆ.

ನೆಲ್ಲಿಕಾಯಿ : 



ಬೆಟ್ಟದ ನೆಲ್ಲಿ ಎಂದೇ ಖ್ಯಾತಿಪಡೆದ ನೆಲ್ಲಿಕಾಯಿಯಲ್ಲಿ ಕೂಡ ವಿಟಮಿನ್ ಸಿ ಅಂಶ ಅತ್ಯಧಿಕವಾಗಿರುತ್ತದೆ. ಈಗ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ನೆಲ್ಲಿಕಾಯಿಯನ್ನು ತಂದು ಕತ್ತರಿಸಿ ಪುಡಿ ಉಪ್ಪು ಬೆರೆಸಿ ಸೇವಿಸಬಹುದು. ಇದು ಹುಳಿ, ಒಗರು, ಸಿಹಿ ಅಂಶವನ್ನು ಒಳಗೊಂಡಿದೆ. ಇಲ್ಲವೇ ಉಪ್ಪಿನ ಕಾಯಿ ಮಾಡಿಟ್ಟು ಶೇಕರಿಸಿಡಬಹುದು. ಹಾಗೆಯೇ ಕತ್ತರಿಸಿ ಒಣಗಿಸಿ ಡಬ್ಬಿಯಲ್ಲಿ ಸಂರಕ್ಷಿಸಿಡಬಹುದು. ಪ್ರತಿದಿನ ಒಂದೆರಡು ನೆಲ್ಲಿ ಎಸಳು ತಿಂದು ನೀರು ಕುಡಿದರೆ ಕ್ಯಾಲ್ಸಿಯಂ ಅಂಶ ವೃದ್ಧಿಸುತ್ತದೆ. ಸಂಪೂರ್ಣ ದೇಹದ ಆರೋಗ್ಯ ಹೆಚ್ಚಿಸಲು ಸಹಕಾರಿಯಾಗಿದೆ. ಆಯುರ್ವೇದ ಔಷಧದಲ್ಲಿ ಮಹತ್ವದ ಪಾತ್ರ ವಹಿಸುವ ನೆಲ್ಲಿಕಾಯಿ, ಅದರ ಬೇರು, ಎಲೆಗಳು, ಚಕ್ಕೆಗಳನ್ನು ಯಾವಾಗ ಬೇಕಾದರು ನಾವು ಉಪಯೋಗಿಸಬಹುದು. ಇದರಿಂದ ಮಧುಮೇಹವು ನಿಯಂತ್ರಣದಲ್ಲಿರುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳ ಹೊರಹಾಕಲು ಸಹಕಾರಿತಾಗಿದೆ.  ದೇಹದ ತೂಕದ ನಿರ್ವಹಣೆಗೆ ಹಾಗೂ ಕೂದಲಿನ ಪೋಷಣೆ, ಚರ್ಮದ ಆರೈಕೆಯಲ್ಲಿ ಈ ನೆಲ್ಲಿಕಾಯಿ ಮಹಥವದ ಪಾತ್ರ ವಹಿಸುತ್ತದೆ. ಶಾಂಪೂ ರೂಪದಲ್ಲಿ , ನೆಲ್ಲಿಪುಡಿಯ ಬಳಕೆ ಮಾಡಬಹುದಾಗಿದೆ.

ಹಾಗಾಗಿ ಸ್ನೇಹಿತರೇ ಋತುಗಳಿಗನುಸಾರವಾಗಿ ನೈಸರ್ಗಿಕವಾಗಿ ಬೆಳೆಯುವ ಮಾರುಕಟ್ಟೆಯಲ್ಲಿ ಬರುವ ಹಣ್ಣು ತರಕಾರಿಗಳನ್ನು ಮನೆಗೆ ಕೊಂಡೊಯ್ದು ಆಹಾರವಾಗಿ ಸೇವಿಸೋಣ. ಆರೋಗ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಗಮನಹರಿಸೋಣ.

- ಸಿಂಧು ಭಾರ್ಗವ ಬೆಂಗಳೂರು (ಲೇಖಕಿ)

No comments:

Post a Comment