Saturday 5 August 2017

ಸಂತೆಯಲಿ ಗುನುಗಿದ ಹಾಡು : ಮಳೆಯು ಸುರಿಯುತಿದೆ

ಸಂತೆಯಲಿ ಗುನುಗಿದ ಹಾಡು : ಮಳೆಯು ಸುರಿಯುತಿದೆ..

ಸುತ್ತ‌ಮುತ್ತಲು
ಕಪ್ಪು ಕತ್ತಲು
ಮಳೆಯು ಸುರಿಯುತಿದೆ..

ಹಗಲು ಇರುಳಿನ
ಅರಿವೇ ಆಗದು
ಮಳೆಯು ಸುರಿಯುತಿದೆ...

ಕಪ್ಪೆಗಳ ಮನವೀಗ
ತಂಪಗಾಗಿದೆ
ಮಳೆಯು ಸುರಿಯುತಿದೆ...

ಸೊಳ್ಳೆಗಳ ಬಳಗದ
ಹಾಡು ಕೇಳಿದೆ
ಮಳೆಯು ಸುರಿಯುತಿದೆ...

ಮಿಂಚು ಹುಳುಗಳು
ಮಿಂಚುತಲಿವೆ
ಮಳೆಯು ಸುರಿಯುತಿದೆ..

ನವಿಲುಗಳು ಗರಿಯ
ಮುದುಡಿ ಕುಳಿತಿವೆ
ಮಳೆಯು ಸುರಿಯುತಿದೆ...

ಹೂವುಗಳು ನೆನೆದು
ತೊಪ್ಪೆಯಾಗಿವೆ
ಮಳೆಯು ಸುರಿಯುತಿದೆ...

ಕೆರೆ-ಕಟ್ಟೆಗಳು
ತುಂಬಿ ಹರಿದಿದೆ
ಮಳೆಯು ಸುರಿಯುತಿದೆ...

ಗಾಳಿಯ ರಭಸಕೆ
ಮರಗಳುರುಳಿವೆ
ಮಳೆಯು ಸುರಿಯುತಿದೆ...

ಕಡಲ ಕೊರೆತವು
ಅಧಿಕವಾಗಿದೆ
ಮಳೆಯು ಸುರಿಯುತಿದೆ...

ಮೀನುಗಾರರ
ಕೆಲಸ ನಿಂತಿದೆ
ಮಳೆಯು ಸುರಿಯುತಿದೆ...

ಕರಿದ ಖಾದ್ಯಕೆ
ಬೇಡಿಕೆ ಬಂದಿದೆ
ಮಳೆಯು ಸುರಿಯುತಿದೆ...

ಕಡುಬು ಪತ್ರೊಡೆ
ಘಮವ ಸೂಸಿದೆ
ಮಳೆಯು ಸುರಿಯುತಿದೆ...

ಗೊರಬು- ಕೊಡೆಯು
ತಲೆಯ ಏರಿದೆ
ಮಳೆಯು ಸುರಿಯುತಿದೆ...

ನೇಗಿಲ ಯೋಗಿಗೆ
ಕೆಲಸ ಹೆಚ್ಚಿದೆ
ಮಳೆಯು ಸುರಿಯುತಿದೆ...

- 📝 ಸಿಂಧು ಭಾರ್ಗವ್ 🍁

(( ಕರಾವಳಿಯ ಮಳೆಯ ಸೊಬಗನು ನೋಡಲೆರಡು ಕಣ್ಣು ಸಾಲದು..ಮನದಲೇನೋ ಹರುಷ ಭಯವು ಜೊತೆಜೊತೆಗೆ ಮೂಡುವುದು.. ))

No comments:

Post a Comment