Saturday 5 August 2017

ಲೇಖನ : ಜೀವನದ ಸಂತೆಯಲಿ ಸ್ನೇಹಸುಗಂಧ

ಲೇಖನ : ಜೀವನದ ಸಂತೆಯಲಿ ಸ್ನೇಹಸುಗಂಧ


      ಇನ್ನೇನು ಸ್ನೇಹಿತರ ದಿನಾಚರಣೆ ಹತ್ತಿರ ಬರುತ್ತಿದೆ. ಶಾಲಾ-ಕಾಲೇಜು ಹುಡುಗರಿಗಂತೂ ಕಾಂಪಾಸ್ ನಲ್ಲಿ ಹಬ್ಬದ ವಾತಾವರಣ.ಆ ಹಂತ ದಾಟಿ ಬಂದವರಿಗೆ ನೆನಪು ಇದೆಯೋ ಇಲ್ಲವೋ.. ಹಾಗೆ ಸ್ನೇಹದ ಕುರಿತಾದ ಒಂದು ಸಣ್ಣ ಲೇಖನ, ಓದಿ ನಿಮ್ಮ ಅಭಿಪ್ರಾಯ ತಿಳಿಸಿ..
        ಜೀವನವೇ ಒಂದು ಉಗಿಬಂಡಿಯಂತೆ. ಅದೆಷ್ಟು ದೂರ ಪಯಣಿಸಬೇಕೆಂದು ಯಾರಿಗೂ ತಿಳಿಯದು. ನಡುನಡುವೆ ಸಿಗುವ ನಿಲ್ದಾಣದಲ್ಲಿ ಒಂದಷ್ಟು ಸ್ನೇಹಿತರು ನಮ್ಮ‌ಜೀವನಕ್ಕೆ ಬಂದು-ಇದ್ದು-ಮತ್ತೆ ಇಳಿದು ಹೋಗುತ್ತಾರೆ. ಕೊನೆಗೆ ಉಳಿಯುವುದು ಒಂದಷ್ಟು ನೆನಪುಗಳು, ಸವಿನೆನಪುಗಳಿಂದ ಮೂಡುವ ಆನಂದಭಾಷ್ಪ, ಹಾಗೂ ಕಹಿಘಟನೆಯಿಂದ ಉದುರಿದ ಕಣ್ಣೀರ ಹನಿಗಳು.... ಸ್ನೇಹ ಆರಂಭವಾಗಲು ಕಿರುನಗು ಸಾಕು. ಚಿಗುರಲು ಕಾಳಜಿ ತುಂಟತನದಿಂದ ಕೂಡಿದ ಮಾತು, ಪರಸ್ಪರ ಸಹಾಯ ಮಾಡುವ ಮನೋಭಾವ ಎಲ್ಲವೂ ಬೇಕು‌. ಆದರೊಂದು ಬಹುಮುಖ್ಯವಾಗಿ ಸ್ನೇಹ ಈ ಜಾತಿ-ಧರ್ಮ ನೋಡಿಯಾಗಲಿ, ಆಸ್ತಿ-ಅಂತಸ್ತು ನೋಡಿಯಾಗಲಿ ಬರುವುದಿಲ್ಲ. ಹಾಗೆ ಜೊತೆಗೆ ಬಂದವರೂ ಹೆಚ್ಚು ದಿನ ಉಳಿಯುವುದೂ ಇಲ್ಲ.
          ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಮದುವೆಯಾದ ಮೇಲೆ ಕಾಲೇಜುದಿನದ ಸ್ನೇಹಿತರ ಸಂಪರ್ಕ ದಲ್ಲಿರುವುದು ಕಷ್ಟವಾಗುತ್ತದೆ. ಗೃಹಿಣಿಯರಿಗೆ (ಮನೆಯಲ್ಲೇ ಇರುವವರಿಗೆ) ಅಕ್ಕ-ಪಕ್ಕದ ಮನೆಯ ಮಹಿಳಾಮಣಿಗಳೇ ಸ್ನೇಹಿತರಾಗುತ್ತಾರೆ.ಉದ್ಯೋಗಕ್ಕೆ ಹೋಗುವವರಿಗೆ ಸಹೋದ್ಯೋಗಿಗಳು ಒಂದಷ್ಟು ಜನ. ಈಗಿನ ಕಾಲದಲ್ಲಿ ಎಫ್.ಬಿ (ಫೇಸ್ಬುಕ್, ಫ್ರೈಂಡ್ಸ್ ಬುಕ್) ಇದೆ. ಅಲ್ಲಿ ಒಂದಷ್ಟು ಸ್ನೇಹಿತರು ಸಿಗುತ್ತಾರೆ. ಮೊಬೈಲ್ ನಂಬರ್ ತೆಗೆದುಕೊಂಡು ವಾಟ್ಸ್ ಆಪ್ ನಲ್ಲೂ ಬಂದುಬಿಡ್ತಾರೆ. ಹಾಗೆ ಹಳೆಯ ಗೆಳೆಯ/ತಿಯರೂ ಮತ್ತೆ ಮಾತಿಗೆ/ಸಂಪರ್ಕಕ್ಕೆ ಸಿಗುತ್ತಾರೆ..
.
.

ಆದರೆ ನಿಜವಾದ ಸ್ನೇಹಿತೆ/ತ ಅಂದರೆ ಯಾರು? ನಂಬಿಕೆ, ಪ್ರೀತಿ,ವಿಶ್ವಾಸಕ್ಕೆ ಅರ್ಹರು ಯಾರು..??

ನಮ್ಮ ಮನಸ್ಸಿನ ಮಾತುಗಳನ್ನು (ನೋವುಗಳು ಅಥವಾ ಸಂತೋಷದ ವಿಷಯಗಳಿರಬಹುದು)  ಕೇಳುವ , ಸಾಂತ್ವಾನ ಹೇಳುವ ಸಹೃದಯಿ ಮಿತ್ರರು ನಮ್ಮ ಜೊತೆ ಇದ್ದಾರೆ ಅಂದರೆ ಅದೇ ಅದೃಷ್ಟ..
ಕಷ್ಟ ಕಾಲಕ್ಕೆ ಕರ ಸಹಾಯ ಇಲ್ಲಾ ಹಣದ ಸಹಾಯ ಮಾಡುವ ಸ್ನೇಹಿತರು,ಮಾನವೀಯತೆ ಇರುವ ಮನಸ್ಸುಗಳು ಬೇಗ ಆಪ್ತರಾಗಿ ಬಿಡುತ್ತಾರೆ. ಎಲ್ಲೋ ಯಾವುದೋ ಅಪರಿಚಿತ ಊರಿನಲ್ಲಿ ದಿಕ್ಕುಕಾಣದೇ ಒದ್ದಾಡುತ್ತಿದ್ದಾಗ ಸಹಾಯ ಮಾಡಿದವರೂ ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ. ಆದರೆ ಅವರೆಲ್ಲ ಸ್ನೇಹಿತರಲ್ಲ. ಅವರಲ್ಲಿ ಮಾನವೀಯತೆ ಇದೆ ಎನ್ನಬಹುದು. ಅಂತವರ ಸ್ನೇಹವನ್ನು ಮುಂದುವರಿಸಲೂ ಆಗುವುದಿಲ್ಲ. ಕೃತಜ್ಞತೆಯನ್ನು ತಿಳಿಸಲು ಮಾತ್ರ ಸಾಧ್ಯ.
••••
ಆದರೆ ನಂಬಿಕೆಗೆ ದ್ರೋಹ ಮಾಡುವವರು, ಮೋಸ ಮಾಡುವವರು, ಅಲ್ಲಿಂದ ಇಲ್ಲಿಗೆ ಚಾಡಿ ಹೇಳಿ ಜಗಳ ತಂದಿಡುವವರು, ಮತ್ಸರ ಪಡುವವರು ಮೊಸಳೆ ಕಣ್ಣೀರು ಹಾಕಿ ಸಾಲ ಕೇಳಿಪಡೆದು ಹಣ ವಾಪಾಸು ಮಾಡದೇ ಇರುವವರು, ವ್ಯಾಪಾರ-ವ್ಯವಹಾರದಲ್ಲಿ ಮೋಸ ಮಾಡುವವರು, ಎದುರಿಗೊಂದು-ಹಿಂದೊಂದು ಮಾತನಾಡುವವರು, ಇಷ್ಟವಾಗದಿದ್ದರೂ ನಮ್ಮ ಜೀವನದಲ್ಲಿ ಮೂಗು ತೂರಿಸುವವರು, ಸಂಸಾರದಲ್ಲಿ ಬಿರುಕು ಮೂಡುವ ಹಾಗೆ ಮಾಡುವವರು, ಅವಮಾನ-ಅಗೌರವ ತೋರಿಸುವವರು,ತಾತ್ಸಾರ-ಸಸಾರ ಮಾಡುವವರು....ಅಂತವರು ಯಾರಾಗಿದ್ದರೂ ಸರಿಯೇ, ಮೊದಲು ನಮಗೆ ಎಷ್ಟು ಬೇಕಿದ್ದರು ಸಹಾಯ ಮಾಡಿದವರಾಗಿರಬಹುದು ಅಂತವರಿಂದ ದೂರ ಇರಿ. ಮಾತನಾಡಲು ,ನಿಮ್ಮ ಜೊತೆ ವ್ಯವಹಾರ ಮಾಡಲು ಇಷ್ಟವಿಲ್ಲ ಎಂದು ಮುಲಾಜಿಲ್ಲದೇ ಹೇಳಿ ಬಿಡಿ. ಮಾತು ನಿಲ್ಲಿಸಿಬಿಡಿ. ಆದರೆ ದ್ವೇಷ ಕಟ್ಟಿಕೊಳ್ಳಬೇಡಿ. ದ್ವೇಷದಿಂದ ನಮ್ಮ ಜೀವನ ಇಕ್ಕಳದಲ್ಲಿ ಸಿಕ್ಕಿಹಾಕಿಕೊಂಡಂತಾಗುತ್ತದೆ. ಅವರ ಸೇಡಿನ ಜ್ವಾಲೆಗೆ ಸಾವು-ನೋವು ಸಂಭವಿಸುತ್ತದೆ. ಸ್ನೇಹ ಬೆಳೆಸುವ ಮೊದಲೇ ಜಾಗರೂಕರಾಗಿರಿ. ನಮ್ಮ ತೀರ ವೈಯಕ್ತಿಕ ವಿಷಯಗಳನ್ನು , ಹಣಕಾಸಿನ ಬಗ್ಗೆ , ಸಂಸಾರದ ಒಳಗುಟ್ಟುಗಳನ್ನು ಎಷ್ಟೇ ಆಪ್ತರಾಗಲಿ ಹಂಚಿಕೊಳ್ಳಲು ಹೋಗಬಾರದು.
ಕೊನೆಯದಾಗಿ,ಮುಪ್ಪಿನ ಕಾಲದಲ್ಲಿ ಕೂಡ ಜನರು ಸ್ನೇಹವನ್ನು ಬಯಸುತ್ತಿರುತ್ತಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳಲೋ, ಮನದ ನೋವನ್ನು ಹೊರಹಾಕಲೋ, ಏಕಾಂಗಿತನವನ್ನು ಕಳೆಯಲೋ, ಒಂದಷ್ಟು ಸಮಯ ಕಳೆಯಲೆಂದು ಹಿರಿಯ ಮನಸ್ಸುಗಳು ಪಾರ್ಕ್‌ನಲ್ಲಿ, ದೇವಸ್ಥಾನದ ಕಟ್ಟೆಯಲ್ಲಿ ಮಾತನಾಡುತ್ತಾ ಕುಳಿತಿರುವುದನ್ನು ನಾವು ನೋಡಬಹುದು. ಒಂದಷ್ಟು ಅಮೂಲ್ಯ ಜವಾಬ್ದಾರಿಗಳನ್ನು ಮುಗಿಸಿರುವ ಅವರೆಲ್ಲರಿಗೂ ಸಂಧ್ಯಾಕಾಲದಲ್ಲಿ ಒಂದಷ್ಟು ನೆಮ್ಮದಿ, ಖುಷಿ, ಮನಸ್ಸಿಗೆ ಹಿತವೆನಿಸಿದರೆ ಸಾಕೆಂದೆನಿಸುತ್ತದೆ. ಹೀಗೆ ಒಂದಲ್ಲ ಒಂದು ಹಂತದಲ್ಲಿ ಮನುಷ್ಯ ಸ್ನೇಹಜೀವಿಯಾಗಿರುತ್ತಾನೆ.
.
.

ಸ್ನೇಹ ಹಚ್ಚಹಸಿರಾಗಿರಬೇಕು‌. ಉಸಿರು ಕಟ್ಟುವಂತಾಗಬಾರದು.
"ವಿಶ್ವಸ್ನೇಹಿತರ ದಿನಾಚರಣೆಯ ಶುಭಾಶಯಗಳು."

- ಸಿಂಧು ಭಾರ್ಗವ್.

1 comment:

  1. I am really surprised by the quality of your constant posts.You really are a genius, I feel blessed to be a regular reader of such a blog Thanks so much
    onlinekaj.com/
    What is love
    Mobile price bd
    font copy and paste

    ReplyDelete