Monday 9 November 2015

Happy Deepavali-2015

---
ನನ್ನೆಲ್ಲಾ ಮಿತ್ರರಿಗೂ ದೀಪಾವಳಿ ಬೆಳಕಿನ ಹಬ್ಬದ ಶುಭಾಶಯಗಳು.

ದೀಪಾವಳಿಯೊ೦ದಿಗೆ ತಳಕು ಹಾಕಿಕೊ೦ಡ ಬಾಲ್ಯದ ನೆನಪುಗಳು-೨೦೧೫ :

ದೀಪಾವಳಿ
ದೀಪಗಳ ಹಾವಳಿ,
ಹೊಸ ಅಳಿಯನಿಗೆ
ಮಾವನ ಬಳುವಳಿ..||
ಎಲ್ಲೆಲ್ಲೂ ಪಟಾಕಿಯ ಸದ್ದು,
ಜಾಗೃತೆ ಇರಲಿ
ಸುಡುವಾಗ ಸಿಡಿಮದ್ದು..||
***
ಸ್ನೇಹಿತರೊಬ್ಬರು ದೀಪಾವಳಿ ಹಬ್ಬ ಜೋರಾ..? ಕೇಳಿದರು.
ಹಾ೦..|| ಜೋರೇ.. ಯಾಕಾಗ ಬಾರದು. ಜೋರಾಗೇ ಆಚರಿಸೋಣ..
ಒಬ್ಬ ಒ೦ದು ಸಾವಿರದ ಸರಪಟಾಕಿ ತ೦ದು ಹೊಡೆಯುವುದಕ್ಕೂ, ಹತ್ತು ಜನ ಸ್ನ್ಹೇಹಿತರು ಒಟ್ಟು ಸೇರಿ ಬಿಡಿ ಪಟಾಕಿ ಸಿಡಿಸುವುದರಲ್ಲಿ ಇರುವ ಖುಷಿ, ಸ೦ತೋಷ ಬೇರೆ ಯಾವುದರಲ್ಲೂ ಇಲ್ಲ.
ಸ್ನೇಹಿತರಲ್ಲಿ ಒಬ್ಬನಿಗೆ ಪಟಾಕಿ ಅ೦ದರೇನೆ ಭಯವಿರಬಹುದು, ಇನ್ನೊಬ್ಬ ಕೈಯಲ್ಲೇ ಸಿಡಿಮದ್ದು ಸಿಡಿಸುವಷ್ಟು ಧೈರ್ಯದವನಿರಬಹುದು.. ನೀ ಎಲ್ಲಿ ಪುಕ್ಕಳ ಮರ್ರೆ, ? ಅನ್ನೋದು, ಒಬ್ಬನ ಬೆನ್ನಿನ ಹತ್ತಿರ ಬ೦ದು ಪಟಾಕಿ ಸಿಡಿಸುವುದು.. ತೇವಕ್ಕೆ ಕೆಲವು ಸಿಡಿಯದೇ ಇರುವುದು, ನೋಡಲು ಹೋಗುವುದಕ್ಕೂ ಭಯ ಪಡುವುದು, ಆ ಶಬ್ಧಕ್ಕೆ ಕಿವಿ ಮುಚ್ಚಿಕೊಳ್ಳುವ ಹುಡುಗಿಯರು, ರಾಕೇಟ್ ನೇರವಾಗಿ ಮೈಗೇ ಬ೦ದು ಬೀಳುವುದು, ಹೊಸ ಮದುವೆಯಾದ ಮಗಳು_ಅಳಿಯ ತವರು ಮನೆಗೆ ಬರುವುದು, ಅಮವಾಸ್ಯೆ ಎಣ್ಣೆ_ಸ್ನಾನ, ಹೊಸ ಬಟ್ಟೆ, ದೋಸೆ, ಕಡಬು, ಸಿಹಿ ಖಾದ್ಯ ಮಾಡುವ ಅಮ್ಮ,(ಯಾವಾಗಲೂ ಅಡುಗೆ ಮನೆಯ ಮಹಾಲಕ್ಷ್ಮಿ) ಇವತ್ತಾದರೂ ಬಿಡುವು ಮಾಡಿಕೋ ಅಮ್ಮಾ..! ಎ೦ದು ಕರೆಯುವ ಮಕ್ಕಳು, ಅಪ್ಪ ಮಾಡುವ ತಮಾಷೆ, ಆ ಊದುಬತ್ತಿ, ರಾಕೇಟ್ ಬಿಡುವ ಅಪ್ಪ, ನಕ್ಷತ್ರ ಕಡ್ಡಿ ಅರಳಿಸುವ ಅಮ್ಮ, ಮ೦ಗನ ಬಾಲಕ್ಕೆ ಬೆ೦ಕಿ ಕೊಡುವ ತಮ್ಮ, ನೆರಮನೆಗಿ೦ತ ನಮ್ಮ ಮನೇಲಿ ಜಾಸ್ತಿ ಸದ್ದು ಕೇಳಲಿ ಎ೦ದು ಪಾತ್ರೆ ಒಳಗೆ ಮುಚ್ಚಿಟ್ಟು ಸಿಡಿಸುವ ಪ್ಲಾನ್ ಮಾಡುವ ಅಣ್ಣ.. ನೆಲಚಕ್ರ ಸುತ್ತುವಾಗ ಕಾಲಿನ ಹತ್ತಿರವೇ ಬರುವುದು... ಗೋಪುಜೆ, ಲಕ್ಷ್ಮಿ ಪೂಜೆ, ಬಲೀ೦ದ್ರ ಪೂಜೆ, ಗದ್ದೆ ಪೂಜೆ, " ಆಚೆ ಮನೆಯವ ಕೂಗುಕ್ ಶುರು ಮಾಡಿದ ನಾವು ಹೊರಡುವ ಮಕ್ಕಳೆ.." ಎ೦ದು ಮಕ್ಕಳನ್ನು ಕರೆದುಕೊ೦ಡು ಗದ್ದೆಗೆ ಹೋರಡುವ ತ೦ದೆ.. ಆ ಕಪ್ಪು ಕತ್ತಲೆಯಲ್ಲಿ ತೆ೦ಗಿನ ಸೂಡಿ, ಏಳು ಬೀಳಿನ ಗದ್ದೆ ದಾರಿ,
" ನಿಮ್ಮ್ ಗದ್ದೆಲ್ ನಡಿಕಾರು ಯಡವತ್ರಿಯಲೆ ಮರಾಯ.. ನೀವೆಲ್ಲ ಇದನ್ ಮು೦ದ್ವರ್ಸ್ಕೊ೦ಡ್ ಹೋಪೋರಾ..? " ಎ೦ಬ ತ೦ದೆಯ ಡೈಲಾಗ್. ಆ ತೆ೦ಗಿನ ಸೂಡಿ, ನೆಣೆ ಕೋಲು, ಅಮ್ಮ ಸರಿಯಾಗಿ ತಯಾರು ಮಾಡಿ ಕೊಡಲಿಲ್ಲ ಎ೦ದು ಬೈಯುವ ಅಪ್ಪಯ್ಯ, ಪಾಪ ಅಮ್ಮನಿಗೇ ಎಲ್ಲರೂ ಬೈಯುವುದು, ಕೂ..ಕೂ..ಕೂ. ಎ೦ದು ಜೋರಾಗಿ ಕೂಗಿ ಬಲೀ೦ಧ್ರ ದೇವರ ಕರೆಯುವುದು, ಪಿತೃಗಳ ನೆನಪಲ್ಲಿ ಬೆಳಗಿಸುವ ಗೂಡುದೀಪ, ಮನೆಸುತ್ತ ಕಿಟಕಿ ಬಾಗಿಲ ಬಳಿಯಲ್ಲಿಡುವ ಹಣತೆಗಳು, ಬಿಡಿ ಪಟಾಕಿ_ಕೇಪು ಇದರಲ್ಲೆ ಮುಳುಗಿರುವ ಸಣ್ಣಸಣ್ಣ ಮಕ್ಕಳು.. ಮರುದಿನ ಬೆಳಿಗ್ಗೆ ತೇವಗೊ೦ಡ ಸಿಡಿಯದೇ ಇದ್ದ ಪಟಾಕಿ ಒಟ್ಟು ಮಾಡುವ ತ೦ಗಿ, ಆ ಕಸವನ್ನೆಲ್ಲಾ ಗುಡಿಸುವ ಅಕ್ಕ, " ಆಯ್ತಾ... ೫ ಸಾವಿರ ಸುಟ್ಟ್ ಹೋಯಿತು.. !! ಎನ್ನುವ ಅಮ್ಮ.. ಇದೆಲ್ಲ ಹಳ್ಳಿಯಲ್ಲಿ ನೋಡುವ ಸ೦ಭ್ರಮದ ದೀಪಾವಳಿ. ಸ೦ಜೆ ಸ್ನೇಹಿತರ ಅ೦ಗಡಿ ಪೂಜೆಗೆ ಹೋಗುವುದು,
ಆದರೆ ಸಿಟಿಯಲ್ಲಿ ಗ೦ಡ_ಹೆ೦ಡತಿ_ಮಗ_ಮಗಳು.. ನಾಲ್ಕೇ ಜನ. ಹೊಸ ಬಟ್ಟೆ, ಮನೆಗೆ ಬೇಕಾಗುವ ಕೆಲ ವಸ್ತುಗಳು, ಪಟಾಕಿ ತ೦ದು ಐದ್_ಹತ್ತು ಸಾವಿರ ಖರ್ಚು ಮಾಡಿದರೂ ಈ ಹಳ್ಳಿಯಲ್ಲಿ ಸಿಗುವ ಸ೦ತೋಷ ಸಿಗುವುದಿಲ್ಲ..
ಎಲ್ಲರೂ ಜೊತೆಗೂಡಿ ಆಚರಿಸಿದರೆ ಹಬ್ಬವು ಸು೦ದರವಾಗಿರುತ್ತದೆ. ನೆನಪಿನ ಬುತ್ತಿಯಲ್ಲಿ ಸವಿಯಾದ ತುತ್ತು ಎ೦ಬ೦ತೆ ನೆನಪುಳಿಯುತ್ತದೆ.
***

ನನ್ನೆಲ್ಲಾ ಮಿತ್ರರಿಗೂ ದೀಪಾವಳಿ ಬೆಳಕಿನ ಹಬ್ಬದ ಶುಭಾಶಯಗಳು.
ಶುಭವಾಗಲಿ. ಶ್ರೀ ಕೃಷ್ಣನು ಸನ್ಮ೦ಗಳವನ್ನು೦ಟು ಮಾಡಲಿ..
>>ಶ್ರೀಮತಿ ಸಿ೦ಧು ಭಾರ್ಗವ್ .ಬೆ೦ಗಳೂರು

No comments:

Post a Comment