Wednesday, 21 December 2016

ಕವಿತೆ: "ಸಾಗಲಿ ನಗುವಿನೊಂದಿಗೆ ನಮ್ಮೀ ಜೀವನ"

ಕವಿತೆ: "ಸಾಗಲಿ ನಗುವಿನೊಂದಿಗೆ ನಮ್ಮೀ ಜೀವನ"




ಎಷ್ಟು ಸುಂದರವಲ್ಲವೇ..?!
ಎನಿಸಿದಾಗ ಬಾಲ್ಯ ತಿರುಗಿ ಬಂದರೆ ?!
ನೆನೆದ ಮೊದಲ ಮಳೆಗೆ ಅಮ್ಮ ಬೈದರೆ ?!
ಕಾಸು ಕದ್ದೆನೆಂದು ಅಪ್ಪ ಹೊಡೆದರೆ ?!
ತಿಂಡಿಯಲ್ಲಿ, ಅಕ್ಕ ಅಣ್ಣನ ಪಾಲೂ ಸಿಕ್ಕರೆ...?!

ಎಷ್ಟು ಸುಂದರವಲ್ಲವೇ ?!
ಅಳುವಿನ ಕಡಲು ಕಂಗಳಲಿ,
ನಗುವಿನ ಹೂದೋಟ ಎದುರಿನಲಿ,
ನಾವು ಅತ್ತಿಗೆ, ಅತ್ತೆಯ ಆಡಳಿತದಲಿ,
ಗಂಡಸರು ಪರದಾಟದಲಿ..!!

ಎಷ್ಟು ಬದಲಾವಣೆ ಜೀವನದ ಹಾದಿಯಲಿ,
ಹೊಸದನ್ನು ಬರಮಾಡಿಕೊಳ್ಳಲು  ಹಳೆಯದಕ್ಕೆ ತಿಲಾಂಜಲಿ,
ಸಹ್ಯವಾಗದಿರಲಿ, ಅಸಹ್ಯವೇ ಆಗಿರಲಿ,
ಸಾಗಲೇಬೇಕು ಜೀವನದ ಹಾದಿ..!!

ಎಷ್ಟು ಸುಂದರವಲ್ಲವೇ..
ಜೀವನದ ಸಂತೆಯಲಿ
ನಮ್ಮ ಪರದಾಟ, ದಕ್ಕಿದ ಲಾಭ-ನಷ್ಟ,
ಕೊಂಡುಕೊಳ್ಳದ ಭಾವನೆಗಳು ಕೊಳೆತರೆ ಕಷ್ಟ,
ನಿನ್ನೆ ರಾತ್ರೆ ಕಂಡ ಕನಸಿದೆ,
ಹಾದಿಯುದ್ದಕ್ಕೂ ಗುನುಗಲು ಹಾಡಿದೆ..!!
~*~
ಸಿಂಧುಭಾರ್ಗವ್.ಬೆಂಗಳೂರು

ವಾರದ ಸಣ್ಣ ಕತೆ: ಇನ್ನೇನಿದ್ದರು ಮರೆತಂತೆ ನಟಿಸಬೇಕಷ್ಟೆ.

ವಾರದ ಸಣ್ಣ ಕತೆ:
ಇನ್ನೇನಿದ್ದರು ಮರೆತಂತೆ ನಟಿಸಬೇಕಷ್ಟೆ...
~~@~~




ಈ ಭೂಮಿ ನಿಂತಿರುವುದೇ ಸ್ನೇಹ ಮತ್ತು ಪ್ರೀತಿ ಮೇಲೆ ಎಂದು ನಾನು ಬಲವಾಗಿ ನಂಬಿರುವೆ.. ನಿಮಗೆ ಸಮ್ಮತವಿದೆಯಾ?! ಭೂಮಿ ನಿಂತಿರುವುದೇ ಗುರುತ್ವಾಕರ್ಷಣೆಯ ಬಲದಿಂದ. ಅಂದರೆ ಅಲ್ಲಿಯೂ ಒಂದು ರೀತಿಯ ಆಕರ್ಷಣೆ ಇರಬೇಕು ಮತ್ತು ಇದೆ ಎಂದಾಯಿತು ತಾನೆ..?! ಕೆಲವರ ಮನಸ್ಸು ಬಲು ಸೂಕ್ಷ್ಮ. ಇನ್ನೂ ಕೆಲವರದು ಒರಟು ಕಲ್ಲಿನಂತೆ, ಇನ್ನೂ ಕೆಲವರದು ಮಳೆಗಾಲದಲ್ಲಿ ಜಾರುವ ಪಾಚಿಯಂತೆ (ಬೇಕೆಂದಾಗ ಅಂಟಿಕೊಳ್ಳುವುದು, ಬೇಡವೆಂದಾಗ ಜಾರಿಕೊಳ್ಳುವುದು) ಎಷ್ಟೇ ಕಷ್ಟಪಟ್ಟು ನಾವು ಪ್ರೀತಿಸುವ ಸ್ನೇಹಿತರನ್ನು ದೂರವಿಡಬೇಕು ಎಂದರೂ ಸಾಧ್ಯವಾಗದು. ನೆನಪುಗಳು ಸುತ್ತಿಸುತ್ತಿ ಬರುತ್ತಲೇ ಇರುತ್ತವೆ. ನಮ್ಮ ನಡುವೆ ಅದೆಷ್ಟೋ ಜನರಿದ್ದರೂ ನಮ್ಮ ಮನಸ್ಸು ಎಲ್ಲರನ್ನೂ ಸ್ನೇಹಿತರೆಂದು ಒಪ್ಪಬೇಕೆಂದಿಲ್ಲ. ಒಪ್ಪಿಕೊಂಡ ಸ್ನೇಹಿತರನ್ನು ಯಾವುದೋ ಕ್ಷುಲ್ಲಕ ನೆಪವೊಡ್ಡಿ ದೂರವಿಡುವ ವರ್ಗ ಮೊದಲಿನಿಂದಲೂ ಇತ್ತು. ಈಗೀಗ ಹೆಚ್ಚಾಗುತ್ತಿದೆ. ಕೆಲವರ ಸ್ನೇಹ ಕಾಲೇಜು ದಿನಕ್ಕೆ ಮಾತ್ರ ಸೀಮಿತವಾಗಿದೆ. ಉದ್ಯೋಗಕ್ಕೆ ಹೋಗುವಾಗ ಅಲ್ಲಿ ಒಂದಷ್ಟು ಜನರ ಪರಿಚಯ, ಸ್ನೇಹ ಎಂಬಿತ್ಯಾದಿ. ಕೆಲವರಿಗೆ ಸಮಯ ಕಳೆಯಲು‌ ನಾಲ್ಕು ಜನ ಬೇಕಲ್ಲ ಎಂದೋ, ಸಿರಿವಂತನೆಂದೋ, ಗುಣವಂತನೆಂದೋ, ಬುದ್ಧಿವಂತನೆಂದೋ ಸ್ನೇಹ ಬೆಳೆಸುವುದುಂಟು. ಆದರೂ ಒಂಟಿಯಾಗಿ ಕೊರಗುವ ಬದಲು ಭಾವನೆಗಳಿಗೆ ಕಿವಿಯಾಗುವ ಒಬ್ಬರಾದರೂ ಸ್ನೇಹಿತನನ್ನು ಹೊಂದಿರಲೇಬೇಕು. ಕೆಲವರು ಹೀರೋಯಿಸಮ್ ತೋರಿಸಲೆಂದೇ ಸಾಕಷ್ಟು ಗೆಳೆಯರ ಬಳಗವನ್ನು ಕಟ್ಟಿಕೊಂಡಿರುತ್ತಾರೆ. ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವವನೇ ನಿಜವಾದ ಸ್ನೇಹಿತ. ಅವನು ಯಾರೇ ಆಗಿರಲಿ, ಜಾತಿ,ಧರ್ಮ, ಬಣ್ಣ, ಹಣ ಇದ್ಯಾವುದೂ ಸ್ನೇಹಕ್ಕೆ ಅಡ್ಡಿ ಬರುವುದಿಲ್ಲ. ಆದರೆ ಕಾಲೇಜು ಕಾಂಪಸ್ಸಿನಿಂದ ಹೊರ ಬಂದಕೂಡಲೇ ಅದೇ ಬಹು ದೊಡ್ಡ ಗೋಡೆಯಾಗಿ ಮಾರ್ಪಾಡಾಗಿರುತ್ತದೆ. ಕಾರಣವೇ ಇಲ್ಲದೇ ದೂರಸರಿದು, ಮರೆತು ಗೋರಿ ಕಟ್ಟಿ ಕುಸುಮವೊಂದನ್ನು ಇಟ್ಟಿರುತ್ತಾರೆ.
***
ಆದರೂ ಹೆಣ್ಣುಮಕ್ಕಳಿಗೆ ಈ ಸ್ನೇಹವನ್ನು ಹೆಚ್ಚುಕಾಲ ಮುಂದುವರಿಸಲು ಸಾಧ್ಯವಾಗದು. ಅದಕ್ಕೆ ಜೀವಕೊಡಲು ನೆನಪುಗಳಿಗೆ ಮಾತ್ರ ಸಾಧ್ಯವಾಗುವುದೇ ವಿನಃ ಜೊತೆಗೆ ನಡೆಯಲು ಆಗದು. ಕಾರಣ ಮದುವೆಯಾದ ಮೇಲೆ ಅವರ ಜೀವನ ಸಂಪೂರ್ಣ ಬದಲಾಗುತ್ತದೆ. ಅದಕ್ಕೆ ಒಗ್ಗಿಕೊಳ್ಳಲೇಬೇಕು.  ಇಲ್ಲ "ನಾನು ಇರುವುದೇ ಹೀಗೆ, ಸ್ನೇಹಿತರಿಲ್ಲದೇ ನನಗೆ ಬದುಕಲು ಆಗುವುದಿಲ್ಲ, ಅವರೇ ಉಸಿರು, ಅವರೇ ಜೀವ, ಸಾಯುವ ತನಕ ಅವರನ್ನು ದೂರವಿಡಲಾರೆ ಅವರ ಜೊತೆ ಸುತ್ತಾಡಲು ಹೋಗುವೆ, ಬಂಧುಗಳಿಗಿಂತ ಅವರೇ ಹೆಚ್ಚು, ಹಾಗೆ ಹೀಗೆ..." ಎಂದೆಲ್ಲ ದನಿ ಎತ್ತಿದರೆ ತಾಯಿ‌ಮನೆಗೆ ತಿರುಗಬೇಕಾಗ ಬಹುದು. ಉದ್ಯೋಗ ಮಾಡುವ ಜಾಗದಲ್ಲಿಯೂ ಸಲುಗೆಯಿಂದ ವ್ಯವಹರಿಸಿದರೆ ಹೆಸರು ಕೆಡಿಸಿಕೊಳ್ಳಬೇಕಾದೀತು. ಮನೆಯಲ್ಲಿ ಕಿರಿಕಿರಿ ಗಂಡ-ಹೆಂಡಿರ ನಡುವೆ ಅಸಮಾಧಾನ, ಜಗಳ ಹೀಗೆ ಸಮಸ್ಯೆಗಳೆಂಬ ಕುದಿಯುವ ಬಿಸಿನೀರನ್ನು ಮೈಗೆ ಸುರಿದುಕೊಂಡಂತೆ.. ಬೊಕ್ಕೆ ಬಂದು, ಉರಿ ಕಡಿಮೆಯಾಗಿ ಆದ ಗಾಯ ಗುಣವಾದರೂ ಕಲೆ ಮಾತ್ರ ಮಾಸದು.. ಕೊನೆಗೆ ಮನೆಯವರೆಲ್ಲ ಹುಡುಗಿಯ ಸುತ್ತಕುಳಿತು ಪುಂಕಾನುಪುಂಕ ಬುದ್ಧಿ ಮಾತುಗಳನ್ನಾಡಿ "ಯಾಕೆ ಬೇಕು ನಿನಗೆ ಇದೆಲ್ಲಾ..?!" ಎಂದು ಕೇಳುವವರೇ ಜಾಸ್ತಿ.. ಆಗ ಬೇಡವೆಂದರೂ ಒಂದು ರೀತಿಯ ವೇದನೆ ಅತೀಯಾಗಿ ಕಾಡುವುದು. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು. ಎಲ್ಲದರಲ್ಲಿಯೂ ವಿಶಾಲ ಮನೋಭಾವದಿಂದ ನೋಡುವ ಗಂಡಾಗಲಿ/ ಹೆಣ್ಣಾಗಲಿ ನನ್ನ ಸಂಗಾತಿ ಬೇರೆಯವನ/ಳ ಜೊತೆ ಅತಿಯಾಗಿ ಇಲ್ಲದಿದ್ದರೂ ಸಲುಗೆಯಿಂದ ಇರುವುದ ನೋಡಿದರೆ ಸಹಿಲಾರರು. ಹೊಟ್ಟೆಉರಿಯೋ ಇಲ್ಲಾ ಪೊಸೆಸಿವ್ ಆಗಿಯೋ ವರ್ತಿಸುವುದು ಸಹಜ. ಅದನ್ನು ತಪ್ಪು ಎನ್ನಲೂ ಆಗದು. ಆದರೆ ಅದೇ ಅನುಮಾನಕ್ಕೆ ತಿರುಗಿ ಮಾನಸಿಕವಾಗಿ/ ದೈಹಿಕವಾಗಿ ಹಿಂಸಾಚಾರಕ್ಕೆ ಬದಲಾದರೆ ಮಾತ್ರ ಖಂಡಿಸಬೇಕಾಗುತ್ತದೆ. ಆಗ ಹೆಣ್ಣಿನ ಹೆತ್ತವರು ಒಡಹುಟ್ಡಿದವರು ಅಲಕ್ಷ್ಯಮಾಡದೇ ಅವಳ ನೋವಿನ ಮಾತನ್ನು ತಳ್ಳಿಹಾಕದೇ ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬರಬೇಕಾಗಿತ್ತದೆ..
**
ಈಗೀಗ ಸಾಮಾಜಿಕ ಜಾಲತಾಣ ಇರುವುದರಿಂದ ಬೇಡವೆಂದರೂ ಹಳೆಯ ಗೆಳೆಯ/ತಿಯರೆಲ್ಲ ಸಿಗುತ್ತಾರೆ.  ಹಳೆಯ ಮೊದಲ ಪ್ರೀತಿ ಕೂಡ ಕೆಲವೊಮ್ಮೆ ಚಿಗುರಬಹುದು. ವಾಟ್ಸ್ ಅಪ್ ನಿಂದ ಮತ್ತೆ ಹಳೆಯ ನೆನಪುಗಳನ್ನು  ಮೆಲುಕು ಹಾಕುತ್ತಾ ಹರಟುತ್ತಾ ಇನ್ನೊಂದು ಜೀವಕ್ಕೆ ಮೋಸಮಾಡುತ್ತಿರಬಹುದು. ಬಹುಮುಖ್ಯವಾದುದೆಂದರೆ ನಮಗೆ ಸರಿ ಎನಿಸಿದ್ದು ಮಾಡಿದಾಗ ಯಾರ ಮಾತು ನೆನಪಾಗಿವುದಿಲ್ಲ. ಅದೇ ಬೇರೆಯವರು ಆ ತಪ್ಪನ್ನೇ ಮಾಡಿದಾಗ ಎತ್ತಿ ತೋರಿಸುತ್ತೇವೆ. ಬಾಗಿ ಬೆನ್ನು ತೋರಿಸಿದರೆ ನಾಲ್ಕು ಪೆಟ್ಟು ಕೂಡ ಕೊಡುತ್ತೇವೆ. ಹಾಗಾಗಿ ಈ ಸಾಮಾಜಿಕ ಜಾಲತಾಣದಿಂದ ಒಂದಷ್ಟು ಜನರ ನೆಮ್ಮದಿ ಕೆಟ್ಟಿರುವುದಂತು ನಿಜ. ಕೆಲ ಸಂಬಂಧಗಳಲ್ಲಿ ಬಿರುಕು ಮೂಎಇರುಬುದಂತೂ ನಿಜ. ಇನ್ನು ಕೆಲವು ಗಂಡಸರು ದಬ್ಬಾಳಿಕೆ ಮಾಡುವುದು, ಕೈಹಿಡಿದ ಸಂಗಾತಿಯ ಮನದ ಇಚ್ಛೆಯನ್ನು ಅರಿತುಕೊಳ್ಳುವ ಮನಸ್ಸು‌ ಮಾಡದೇ, ಅವರ ಆಸಕ್ತಿಗಳೇನು? ಎಂದು ಕೇಳದೆ ಕೇವಲ ಮನೆ ಕೆಲಸಕ್ಕೆ ಸೂಕ್ತೆ ಎನ್ನುವಂತೆ ಬಿಂಬಿಸಿ ಮತ್ತಷ್ಟು ಮಾನಸಿಕವಾಗಿ‌ ಕುಗ್ಗಿಸುವುದು. ಅತ್ತೆಮಾವನವರ ಕಿರಿಕುಳ ಅದಕ್ಕೆ ಸಾಥ್ ಕೊಡಲು. ಹೀಗೆಲ್ಲ ಇರುವಾಗ ನಡುನಡುವೆ ಸಂಜೆ ತಂಗಾಳಿಯಾಗಿ ಹಳೆಯನೆನಪುಗಳೆಲ್ಲ ಮೈಸೋಕಿ ಹೋಗುವಾಗ ಮನಸಿಗೊಂದು ರೀತಿಯ ರೋಮಾಂಚನವಾಗಿವುದು. ಸ್ನೇಹಿತರ ನೆನಪು, ಕಾಲೇಜು ದಿನಗಳು ಕಾಡತೊಡಗಿದಾಗ ಬೇಡವೆಂದರೂ ಕಂಗಳಲಿ ಹನಿ ತುಂಬಿಕೊಳ್ಳುವುದು. ಆ ದಿನ ಮತ್ತೆ ಬರುವುದಿಲ್ಲವೆಂದು ಒಪ್ಪಿಕೊಂಡಾಗ ಬೇಕಂಯಲೇ ಕಲ್ಲಾಗಿ ಹೋಗಬೇಕಾಗುತ್ತದೆ.. ಯಾರೊಂದಿಗೂ ಮಾತನಾಡಲು ಆಗದು. ಯಾರ ಸಂಪರ್ಕದಲ್ಲಿ ಇರಲು ಅಸಾಧ್ಯವೆಂದಾಗ ಸ್ನೇಹಿತರೆಲ್ಲರನ್ನೂ  ಮರೆತಂತೆ ನಟಿಸಬೇಕಷ್ಟೆ..

~ ಸಿಂಧುಭಾರ್ಗವ್.ಬೆಂಗಳೂರು 

ಕವನ - ಒರಟು ಕಲ್ಲಿನ ಸಂಧಿಯಿಂದ



ಒರಟು ಕಲ್ಲಿನ ಸಂಧಿಯಿಂದ ಪ್ರೀತಿಬಳ್ಳಿ ಚಿಗುರಿದೆ...
ಕುರುಚಲು ಗಡ್ಡಕೊಂದು ಮೊದಲ ಮುತ್ತು ಸಿಕ್ಕಿದೆ..

ಬೆಂಕಿ ಆತ ಕರಗಿದ ಬೆಣ್ಣೆಯಂತೆ..
ಬೆಣ್ಣೆ ಈಕೆ ಪ್ರೀತಿಯಲಿ ಮಗುವಿನಂತೆ..

ಮನಸು ಮಾಯವಾಗಲು ಕಣ್ಣೋಟವೇ ಸಾಕಾಯ್ತು..
ಪ್ರೀತಿ ಕುಸುಮ ಅರಳಿ ಸಲುಗೆ ಹೆಚ್ಚಾಯ್ತು..

ಸಿಡಿಲಿನ ಮಳೆ ಬಂದರೂ ನೆನೆಯುವ ಆಸೆಯಾಗಿದೆ..
ಕಾಡುಮರಗಳಿಂದ ಹೂವುಗಳ ಘಮವು ಹರಡಿದೆ..

ಮಾಯಾವಿನಿಯಾಗಿ ನಾನು ನಿನ್ನ ಜೊತೆ ಹೆಜ್ಜೆಹಾಕಬೇಕಿದೆ..
ಮುದ್ದು ಮಾಡುತಾ ಸಮಯ ಕಳೆಯಬೇಕಿದೆ..

ಸೋಲುತಿಹೆನು ಆದರೂ ಗೆಲುವೇ ನನಗೆ..
ನಿನ್ನ ಪಡೆದ ಭಾಗ್ಯ ವರ್ಣಿಸಲಿ ಹೇಗೆ?!

~ ಸಿಂಧುಭಾರ್ಗವ್.

ಕವಿತೆ- ನಿನ್ನ ನೆನಪಿನ ಮಳೆಯೇ ತಂಪು



ತಂಪು ತಂಪು ನಿನ್ನ ನೆನಪಿನ ಮಳೆಯೇ ತಂಪು
ಇಂಪು ಇಂಪು ನಿನ್ನ ನೆನಪಿನ ಸವಿಗಾನವಿಂಪು
ಗುನುತಿರುವೆ ,ನೆನೆಯುರುವೆ
ನೆನಪಿನ ಮಳೆಯಲಿ
ಗುನುಗುತಿರುವೆ , ನೆನೆಯುತಿರುವೆ
ಹಾಡಿನ ಲಯದಲಿ..
||ತಂಪು ತಂಪು||
***
ಈ ಸಂಜೆ ಮಂದ ದೀಪದಡಿ ನಡೆಯುವುದೇ ತಂಪು..
ಜೀರುಂಡೆ ಹಾಡುವುದು ಕಿವಿಗೆ ಇಂಪು..
**
ಮಿಂಚುಹುಳ ಮಿನುಗುವುದ ನೋಡುವುದೇ ತಂಪು.
ಪಂಚಿಗಳೆಲ್ಲ ಹಾಡುತ ಗೂಡು ಸೇರುವುದೇ ಇಂಪು..
**
ಮೋಡಗಳ ಬಿರುಸಿನ ಓಟ ನೋಡುವುದೇ ತಂಪು.
ಗುಡುಗು ಸಿಡಿಲಿನ ಸಂಗೀತವೇ ಮನಸಿಗೆ ಇಂಪು...
**
ಮಳೆಬರಲಿ ಒಮ್ಮೆ..
ಮನಬಿಚ್ಚಿ ಕುಣಿದರೆ ಆಗುವುದು ತಂಪು..
ಪ್ಯಾತೋ ಸಾಂಗಿಗೂ ರಾಪ್ ಮ್ಯೂಸಿಕ್ ಬೆರೆಸಿದಂತೆ ಇಂಪು..
*
ನಿನ್ನ ವಿರಹವೀಗ ನೀಡುತಿದೆ ಹಿತವಾದ ತಂಪು..
ಜೊತೆಗಿರುವಾಗಿನ ಖುಷಿಗಿಂತ ದುಪ್ಪಟ್ಟಾದ ಇಂಪು..
~~~~~
- ಸಿಂಧುಭಾರ್ಗವ್

Monday, 19 December 2016

Donate Your Eyes Sindhu Bhargav



@()@


@()@


@()@


@()@


ನನಗೊಂದು ಆಸೆ ಇದೆ. ಕಷ್ಟದಲ್ಲಿರುವವರಿಗೆ ಧನ ಸಹಾಯ ಮಾಡಬೇಕು. ನಾಲ್ಕು ಬಡಮಕ್ಕಳಿಗೆ ಅವರ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು ಎಂದು. ಸಧ್ಯದ ಪರಿಸ್ಥಿತಿಯಲ್ಲಿ ನನಗದು ಸಾಧ್ಯವಿಲ್ಲ. ಇನ್ನೂ ಸಮಯವಿದೆ ಮುಂದೆ ಆಗುತ್ತದೆ ಎಂಬುದು ನಂಬಿಕೆ ಕೂಡ ಇದೆ...
ಅದೇ ಸಮಯದಲ್ಲಿ ಈ ನೇತ್ರದಾನದ ಬಗ್ಗೆ ಕೇಳ್ಪಟ್ಟೆ. ನೇತ್ರದಾನ ಮಹಾದಾನ. ಇಬ್ಬರು ಅಂಧರಿಗೆ ನಮ್ಮ ಕಣ್ಣುಗಳು ಬೆಳಕಾಗುತ್ತವೆ ಎಂದೆನಿಸಿದರೆ ಮೈ ರೋಮಾಂಚನವಾಗುತ್ತದೆ. ತಡಮಾಡಲಿಲ್ಲ. ಫಾರ್ಮ ಭರ್ತಿಮಾಡಿ ಸೆಂಡ್ ಮಾಡಿದೆ. ಕಾರ್ಡ್ ಕೂಡ ಬಂದಿತು.ಮನಸ್ಸಿಗೆ ನೆಮ್ಮದಿಯಾಯ್ತು. ಹೆಮ್ಮಯೂ ಕೂಡ.. ಮಾಹಿತಿ ತಿಳಿಸಿದ ಸಂತೋಷ್ ಶೆಟ್ಟಿಗೆ ಹೃತ್ಪೂರ್ವಕ ವಂದನೆಗಳು. ಲಯನ್ಸ್ ಕ್ಲಬ್ ವತಿಯಿಂತ ನಡೆಯುವ ಕಾರ್ಯಕ್ರಮ ಇನ್ನಷ್ಟು ಯಶಸ್ಸು ಕಾಣಲಿ.

- ಸಿಂಧು ಭಾರ್ಗವ್. 🍁

(@)(@)(@)

Eye Pledge Card. Donate your Eyes...
~~~~

ನಾವು ಸತ್ತ ಮೇಲೆಯೂ ಹುಡುಗರಿಗೆ ಲೈನ್ ಹಾಕ್ಬೇಕಂತಿದ್ರೆ ನೇತ್ರದಾನ ಮಾಡಿ.
-ಹಳೇ ಡೈಲಾಗ್.

ನಾವು ಸತ್ತ ಮೇಲೂ ಫ಼ೇಸ್ಬುಕ್ ವಾಟ್ಸ್ಅಪ್ ನೋಡ್ಬೇಕಂತಿದ್ರೆ ನೇತ್ರದಾನ ಮಾಡಿ.
- ಹೊಸ ಡೈಲಾಗ್..

ಆದರೆ,
ಈ ಪ್ರಕೃತಿ ನಮಗೆ ಏನೆಲ್ಲಾ ಕೊಟ್ಟಿದೆ..‌ ಶಾಂತ ಸ್ವರೂಪಿ, ತ್ಯಾಗ-ತಾಳ್ಮೆಯ ಮೂರ್ತಿಮಾತಾ.
ಹಸಿರು ಹೊದ್ದ ಈ ಸುಂದರ ಪ್ರಕೃತಿಯನ್ನ ನೀವು ಸತ್ತ ಮೇಲೂ ನೋಡಬೇಕೆಂದಿದ್ದರೆ , ನೇತ್ರದಾನ ಮಾಡಿ.
- ಇದು ನನ್ನ ಡೈಲಾಗ್.
~~~~

" #LoveNature_LoveYourAttitude "
" #ಹಸಿರೇಉಸಿರು_ನಮ್ಮ ಕಣ್ಣು ಮಣ್ಣಲ್ಲಿ ಮಣ್ಣಾಗುವ ಬದಲು ಇನ್ನೊಬ್ಬರಿಗೆ ಬೆಳಕಾಗಲಿ"

~~~~

- ಸಿಂಧು ಭಾರ್ಗವ್ 🙏

Sunday, 18 December 2016

ಕಥೆ: ರಾಧಾ ನೆನಪಾದಳು

)(@)(@)(@)(@)(
ಕಥೆ: ಯಾಕೋ ರಾಧಾ ನೆನಪಾದಳು..
ಹಳ್ಳಿ ಜೀವನವೆಂದರೇ ಹಾಗೆ. ಹಸಿರು ಹೊದ್ದು ಮಲಗಿರುವ ಗದ್ದೆತೋಟಗಳು, ಅಡಿಕೆ ತೆಂಗು ಮರಗಳ ನಡುವೆ ಸುಳಿದಾಡೋ ತಂಗಾಳಿ, ನವಿಲಿನ ನರ್ತನ, ಹಿಮ. ಮಂಜು ಮುಸುಕಿದರೆ ಸಾಕು ಏನೋ‌ ಕೇಡು ಸಂಭವಿಸಬಹುದು ಎಂಬ ಮುನ್ಸೂಚನೆ, ನಡು ರಾತ್ರಿಯಲಿ ಗೀಳಿಡುವ ನರಿಗಳ ದನಿಕೇಳಿದರೆ ಸಾಕು ಭಯಕ್ಕೆ ಅಮ್ಮನ ತಬ್ಬಿಕೊಳ್ಳುವುದು, ಗಂಟೆ ಕಟ್ಟಿದ ಅಂಬಾ ಕರು, ಮುಂಜಾನೆ ಕರೆದ ಹಾಲನು ಡೈರಿಗೆ  ಕೊಟ್ಟು ಮತ್ತೆ ಸ್ಕೂಲಿಗೆ ಹೋಗುವುದು, ಸತ್ಯವೆಂದರೆ ಸತ್ಯ, ಮುಗ್ಧರೆಂದರೆ ಮುಗ್ಧರೇ. ಕೆಲವರು ಮೋಸ ವಂಚನೆ ಮಾಡಿಯೇ ಜೀವನ ನಡೆಸುವವರು, ಕೆಲವರು ಬ್ರೋಕರ್ಗಳು. ಕೆಲವರು ಸ್ವಾಭಿಮಾನಿಗಳು, ಛಲವಂತರು, ಕಷ್ಟಪಟ್ಟು ದುಡಿಯುವವರು. ಕೆಲವರು ಮೈಗಳ್ಳರು. ನಮ್ಮ ಮನೆಕೆಲಸಕ್ಕೆ ತೋಟದ ಕೆಲಸಕ್ಕೆ ಹತ್ತಾರು ಜನ ಗಂಡಾಳು, ಹೆಣ್ಣಾಳುಗಳು ಬರುತ್ತಿದ್ದರು. ಬಾಯಿತುಂಬಾ "ಅಮ್ಮಾ" ಎಂದು ಕರೆಯಿಸಿಕೊಳ್ಳುವ ಗತ್ತು-ಗಮ್ಮತ್ತೇ ಬೇರೆಯದಾಗಿತ್ತು. ಅವರಲ್ಲಿ ರಾಧಾ ಅಜ್ಜಿ ಕೂಡ ಒಬ್ಬಳು. ಸುರಸುಂದರಿ, ಬೆಳ್ಳಗಿನ ತಿಳಿ ಮಜ್ಜಿಗೆ, ಸಪೂರ ಮೈಕಟ್ಟು, ಆಗಿನ ಕಾಲದ ಹೀರೋಯಿನ್ ತರಹ, ಅಲ್ಲದೇ ಛಲವಂತೆ,ಪರಿಶ್ರಮಿ, ಎಲ್ಲರನ್ನೂ ನಕ್ಕು ನಗಿಸುವ ವಿದೂಷಕಿ, ಮಿಮಿಕ್ರೀ ಮಾಡುವಳು, ಸುಗ್ಗೀ ಹಾಡು ಹಾಡುವಳು, ಅಬ್ಬಾ...!! ಅವಳು ಸಕಲಕಲಾ ವಲ್ಲಭೇ.
***
ಅದು 1940 ರ ಕಾಲ. ವಯಸ್ಸಿನ್ನು ಹನ್ನೆರಡಾಗಿರಲಿಲ್ಲ ರಾಧಾಳನ್ನು ಮದುವೆ ಶಾಸ್ತ್ರ ಮುಗಿಸಿ ಗಂಡನ ಮನೆಗೆ ಕಳುಹಿಸಿದರು. ಮದುವೆ ಆದ ಮೇಲೆಯೇ ಗಂಡನ ಮುಖನೋಡಿದ್ದು. ಘಟ್ಟ ಅಂದರೆ ಗೊತ್ತಲ್ಲ, ತೀರ್ಥಹಳ್ಳಿಯಲ್ಲಿ ಗಂಡನ ಮನೆ. ಅವನು ಚಿಕ್ಕ ಹುಡುಗನಾಗಿದ್ದಾಗಿನಿಂದ ಭಟ್ಟರ ಮನೆಯ ಅಡಿಕೆ ತೋಟಕ್ಕೆ ಬೆಚ್ಚಪ್ಪನಾಗಿದ್ದ. ಅಂದರೆ ಅವನ ತಂದೆ ತಾಯಿ ಒಡಹುಟ್ಟಿದವರು ಎಲ್ಲರೂ ಅಲ್ಲೇ ಇರುವುದು.. ಇವಳೋ ಮುದ್ದಾಗಿ ಸಾಕಿದ್ದ ಹೆಣ್ಮಗಳಾದರೂ ಗಂಡನ ಜೊತೆ ಹೆಜ್ಜೆ ಹಾಕಿದ ಮೇಲೆ ಅಲ್ಲಿಗೆ ಸರಿಯಾಗಿ ಇರಲೇ ಬೇಕಲ್ಲ ಎಂದು ಅಡಿಕೆ ಸುಲಿಯುವುದು, ಬೇಯಿಸುವುದು ಎಲ್ಲಾ ಕೆಲಸವನ್ನು ಬಲುಬೇಗನೇ ಕಲಿತುಕೊಂಡಳು. ನಗುಮೊಗದಿಂದ ಎಲ್ಲರ ಮನಗೆದ್ದಳು. ಆದರೆ ಗಂಡ ಕುಡುಕ, ಬೇಡವೆಂದರೂ ರಾತ್ರಿ ಯಕ್ಷಗಾನ ನಡೆಯುವಲ್ಲಿ ಹೋಗುತ್ತಿದ್ದ. ಅಲ್ಲಿ ಏನಾದರೂ ಸಹಾಯ ಮಾಡಿ ನಾಲ್ಕು ಪುಡಿಕಾಸು ಜೇಬಿಗಿಳಿಸುತ್ತಿದ್ದ. ವರುಷದೊಳಗೆ ಮೊದಲ ಮಗುವಿನ ತಾಯಿಯಾದಳು. ಮಗುವನ್ನು ಸಾಕಲು ಭಟ್ಟರ ಮನೆಯವರೇ ಸಹಾಯ ಮಾಡಿದ್ದರು. ಎರಡು ವರುಷಗಳು ಅಂತರದಲ್ಲಿ ಇನ್ನೊಂದು ಗಂಡುಮಗುವಾಯಿತು. ಇವಳಿಗೆ ಗಂಡನ ಪ್ರೀತಿ ಸಿಗುವುದು ಕಡಿಮೆಯಾಯಿತು. ತಾನೇ ದುಡಿದು ಮಕ್ಕಳನ್ನು ಸಾಕಿದಳು. ಆಗೆಲ್ಲಾ ಶಾಲೆಗೆ ಹೋಗುವುದು ಕಡ್ಡಾಯವಾಗಿರಲಿಲ್ಲ. ಹಾಗಾಗಿ ಮಕ್ಕಳಿಬ್ಬರೂ ಓದಿನ ಕಡೆ ಗಮನಕೊಡಲಿಲ್ಲ. ಅಷ್ಟರ ನಡುವೆ ಗಂಡ ಯಕ್ಷಗಾನ ಮೇಳದವರ ಜೊತೆ ಹೋದವನು ಮತ್ತೆ ವಾಪಾಸಾಗಲೇ ಇಲ್ಲ.
***
ಗಂಡ ಇಲ್ಲದ ಹೆಂಗಸನ್ನ ನೋಡುವ ದೃಷ್ಟಿ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಅವಳ ಯವ್ವನೇ ಸುಡುವ ಕೆಂಡವಾಯಿತು. ರಾತ್ರಿ ಕಳೆಯುವುದು ಕಷ್ಟವಾಗುತ್ತಿತ್ತು.  ಕುಡಿದ ನಾಯಿಗಳು ಬೇಕಂತಲೇನೆ ಅವಳ ಮನೆ ಬಾಗಿಲ ಬಡಿದು ಮಾನಸಿಕ ಹಿಂಸೆ ನೀಡುತ್ತಿದ್ದವು. ಆದರೂ ಗಟ್ಟಿಗಿತ್ತಿ. ಹತ್ತಿರ ಬರಲು ಯಾರಿಗೂ ಬಿಡುತ್ತಿರಲಿಲ್ಲ. ಅಲ್ಲದೇ ಸೋಂಟೆ ಹಿಡಿದು ಅತೀಯಾಗಿ ವರ್ತಿದುವವರಿಗೆ ಮೈಕೈ ಮುರಿಯುವಷ್ಟು ,ಬಾಸುಂಡೆ ಬರುವಷ್ಟು ಹೊಡೆದಿದ್ದಳು. ಹಗಲು ರಾತ್ರಿ ಅರೆಬರೆ ನಿದ್ದೆ ಕಣ್ಣಿನಲ್ಲಿಯೇ ಕಳೆಯುತ್ತಿದ್ದಳು. ಅದನ್ನು ಗಮನಿಸಿದ ಭಟ್ಟರ ಅಮ್ಮ ತನ್ನ ಮನೆಯ ಪಕ್ಕದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿರಲು ಹೇಳಿದರು.ಆಗ  ಜೀವಕ್ಕೆ ಸ್ವಲ್ಪ ಧೈರ್ಯ ನೆಮ್ಮದಿ ಬಂತು. ಗಂಡಬೇಗ ವಾಪಾಸಾಗಲಿ ಎಂದು ಕಂಡಕಂಡ ದೇವರಲ್ಲಿ ಪ್ರಾರ್ಥಿಸುವುದೇ ಆಯಿತು. ಕೊನೆಗೂ ಆರು ವರುಷದ ನಂತರ ಗಂಡ ಬಂದ. ಕುಡಿತದಲ್ಲಿ ಸ್ನಾನ ಮಾಡುತಲಿದ್ದ. ಮಕ್ಕಳಿಗೆ ಮಾತನಾಡಿಸಲೂ ಇಷ್ಟವಾಗಿರಲಿಲ್ಲ. ರಾಧಾಗೆ ಅವನನ್ನು ನೋಡಿ ಅಳುವೇ ಬಂದಿತು. ಬಿಸಿಬಿಸಿ ಅಡುಗೆ ಮಾಡಿ ಬಡಿಸಿದಳು ಕರ್ತವ್ಯವೆಂಬಂತೆ ಮಾಡಿ ಮುಗಿಸಿದಳು. ಆ ರಾತ್ರಿ ಏನಾಯಿತೋ ಗೊತ್ತಿಲ್ಲ. ಮತ್ತೆ ಒಂದು ವಾರ ಹೆಂಡತಿಯ ಸೆರಗಿನಲ್ಲೇ ಅಂಟಿಕೊಂಡಿದ್ದ. ಆದರೂ ಅವಳಿಗೆ ಇಷ್ಟವಾಗುತ್ತಿರಲಿಲ್ಲ. ಮತ್ತೆ ಮೇಳದವರು ಕರೆದರೆಂದು ಹೊರಟೇ ಬಿಟ್ಟ. ಇವಳು ಬೇಡವೆಂದು ಗೋಗರೆದರೂ ಕೇಳಿಸಿಕೊಳ್ಳಲೇ ಇಲ್ಲ. "ಅಮ್ಮಾವ್ರೆ.. ಅವನು ಇನ್ನು ಬಂದರೂ ನಾನು ಸೇರಿಸಿಕೊಳ್ಳುವುದಿಲ್ಲ.. ಬೇಜವಾಬ್ದಾರಿ ಮನುಷ್ಯ ಅವ. ಮಕ್ಕಳನ್ನು ನಾನೇ ದುಡಿದು ಸಾಕ್ತೇನೆ.." ಎಂದು  ತನ್ನ ನೋವನ್ನು ಹೊರಹಾಕಿದಳು. ಅಷ್ಟರಲ್ಲಿ ಮತ್ತೆ ವಾಂತಿ ಮಾಡಿದಳು. ಬೇಡವೀ ಪಿಂಡವೆಂದು ತೆಗೆಸಿಕೊಳ್ಳು ಯಾವುದೋ ಮರದ ಕೆತ್ತೆ ಕಡಿದು ಕುಡಿದಳು. ಉ.ಹುಂ ಗಟ್ಟಿಪಿಂಡ ಸಾಯಲಿಲ್ಲ. ಅಂತೂ ಹೇರಿಗೆ ನೋವು ಕಾಣಿಸಿಕೊಂಡಿತು. ಮುದ್ದಾದ ಹೆಣ್ಣುಮಗು ಹಡೆದಳು. ಆ ಮಗುವು ರಾಧಾಳನ್ನೇ ಹೋಲುತ್ತಿತ್ತು. ಕೆಂಪು-ಕೆಂಪು ಮುಖದ ಗೊಂಬೆಯ ರೀತಿ ಮುದ್ದಾಗಿತ್ತು. ನೋಡಿ ಖುಷಿಯಾಯಿತು. ಹೇಳಬೇಕೆಂದರೆ ರಾಧಾಳಿಗೆ ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರು ಹಾಗೆ ನಾಲ್ಕು ಜನ ಸಮವಾಗಿ ತಮ್ಮ, ತಂಗಿ ಇದ್ದ ದೊಡ್ಡ ಕುಟುಂಬವಾಗಿತ್ತು. ಅವಳ ಕಷ್ಟ ಅಣ್ಣನಿಗೆ ನೋಡಲಾಗಲಿಲ್ಲ. "ಮನೆತುಂಬಾ ಮಕ್ಕಳಿದ್ದಾರೆ. ನೀನು ಊರಿಗೆ ತಿರುಗಿ ಬಂದುಬಿಡು, ಇಲ್ಲೆ ಒಂದು ಕೆಲಸನೋಡಿದರಾಯಿತು. ಪಾಲಿನ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸು.." ಎಂದ.
***
ಮತ್ತೆ ಹೊಸ ಜೀವನ ಪ್ರಾರಂಭ. ಆಗ ನಾವೆಲ್ಲ ಐದಾರು ವರುಷದ ಪುಟ್ಟಮಕ್ಕಳಷ್ಟೆ. ಅವಳ ಮಕ್ಕಳು ದೊಡ್ಡವರಾಗಿದ್ದರು ಮದುವೆ ಆಗುವ ವಯಸ್ಸಾಗಿತ್ತು. ಗಾರೆ ಕೆಲಸ ಮಾಡಿಕೊಂಡು ಎರಡನೇ ಮಗ ನ್ಯಾಯಯುವ ಜೀವನ ನಡೆಸುತ್ತಿದ್ದ. ಮೊದಲನೇ ಮಗ ತಂದೆಯ ರಕ್ತವೇ ಹರಿಯುವುದನ್ನು ತೋರಿಸಿಕೊಟ್ಟ. ಯಕ್ಷಗಾನ ಬಯಲಾಟದ ಮೇಳಕ್ಕೆ ಸೇರಿದ್ದ. ಹಗಲು ನಿದಿರೆ,ರಾತ್ರೆ ಕುಣಿತ ಅದೇ ಜೀವನವಾಗಿತ್ತು. ಮಗಳಿಗೆ ಯೋಗ್ಯವಾದ ವರನ ನೋಡಿ ಮದುವೆ ಮಾಡಿಸಿದರು. ಆದರೆ ಅವಳು "ಅಮ್ಮನ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ.." ಎಂದು ಆಸ್ತಿಯಲ್ಲಿ ಪಾಲು ಕೇಳಿ ಅಲ್ಲಿಯೇ ಒಂದು ಮನೆ ಕಟ್ಟಿಕೊಂಡಳು. ಗಂಡನು ಬಾಯಿಮುಚ್ಚಿಕೊಂಡು ಬಂದ. ಆದರೆ ಕೈಯಲ್ಲಿ ಕೆಲಸವೆಂಬುದಿರಲಿಲ್ಲ. ಹೆಂಡತಿಗೆ ಹೊಡೆಯುವುದು, ಹಣ ಕೇಳುವುದು, ಕುಡಿಯುವುದು ಹೀಗೆ ಹಿಂಸಾಕೂಪವಾಗಿತ್ತು ಅವಳ ಸಂಸಾರ. ರಾಧಾಳಿಗೆ ರಾತ್ರಿ ನಿದಿರೆಯೇ  ಮಾಡುತ್ತಿರಲಿಲ್ಲ. ನಂಬಿದ ದೇವರಿಗೆ ಒಂದು ಹರಿಕೆ ಹೊತ್ತು ಮಗಳ ಸಂಸಾರ ಸರಿಯಾಗಲಿ ಎಂದು ಬೇಡಿಕೊಂಡಳು. ದೊಡ್ಡ ಮಗನೋ ಎಲ್ಲಿಯೋ ಯಕ್ಷಗಾನ ಆಟಕ್ಕೆ ಹೋದಾಗ ಒಂದು ಹುಡುಗಿಯ ಕಂಡಿದ್ದ. ಸಿರಿವಂತರ ಮನೆ ಹುಡುಗಿಯವಳು. ಅವಳನ್ನೇ ಮದುವೆ ಆಗುವೆ ಎಂದು ಅವಳ ಸಹೋದರನಲ್ಲಿ ಕೇಳಿ ಒಮ್ಮೆ ಉಗಿಸಿಕೊಂಡಿದ್ದ. ಪಟ್ಟು ಹಿಡಿದು ಅವಳೇ ಬೇಕು ಎಂದು ಹಟಮಾಡಿ ಮದುವೆಯಾದ. ಚೆನ್ನಾಗಿಯೇ ಸಂಸಾರ ನಡೆಯುತ್ತಿತ್ತು. ಆದರೆ ಮನೆಯ ಪಾರುಪತ್ಯ ಪೂರ್ತಿ ಹೆಂಡತಿಯದೇ ಮತ್ತು ಅವಳ ಮನೆಯವರದೇ ಆಗಿತ್ತು. ಆದರೂ ಅವನು ದಾರಿಗೆ ಬಂದನಲ್ಲ ಎಂದು ರಾಧಾ ನಿಟ್ಟುಸಿರು ಬಿಟ್ಟಳು. ಇನ್ನು ಎರಡನೇ ಮಗನಿಗೆ ಸಂಬಂಧ ಬಂದಿತ್ತು. ಹುಡುಗಿಯ ನೋಡಿ ಒಪ್ಪಿದ, ಮದುವೆಯೂ ಆಯಿತು. ಅಲ್ಲಿಂದ ಶುರುವಾಯಿತು ನೋಡಿ ಮಕ್ಕಳ ನಿಜರೂಪ. ಅವರ ಯಕ್ಷಗಾನ ಬಯಲಾಟ..
***
ಮೊದಲಿನ ಸೊಸೆ ಅತ್ತೆಗೆ (ರಾಧಾಳಿಗೆ) ಊಟವಿರಲಿ ,ತೊಟ್ಟು ನೀರು ಕೊಡಲು ನಿರಾಕರಿಸಿದಳು. "ಎರಡನೇ ಮಗನ ಮನೆಯಿದೆ ತಾನೆ, ಹೋಗಲಿ ಅಲ್ಲಿಗೇ.. ಮಗಳೂ ಇಲ್ಲೇ ಇದ್ದಾಳೆ.. ನಾವ್ಯಾಕೆ ಮಾಡಬೇಕು ಎಂದು ದಿನ ಬೆಳಗಾದರೆ ಬೈಯುವುದು, ಹಂಗಿಸುವುದು. ಅವಳ ಕೊಂಕುನುಡಿಗಳ ನುಂಗಲಾಗದೇ ಕಣ್ಣೀರಿಡುತ್ತಿದ್ದಳು ನಮ್ಮಮನೆ ಕೆಲಸಕ್ಕೆ ಬಂದಾಗಲೆಲ್ಲ.. ಇನ್ನು ಎರಡನೇ ಸೊಸೆ "ತಿನ್ನಲು ಉಣ್ಣಲು ಏನೂ ತಕರಾರಿಲ್ಲ, ರಾತ್ರಿ ಮಲಗಲು ಮಗಳ ಮನೆಗೇ ಹೋಗಿ.." ಎನ್ನುತ್ತಿದ್ದಳು. ಅಲ್ಲದೇ "ಗಂಡನ (ಎರಡನೇ ಮಗ) ದುಡಿದ ಹಣ ಕೇಳುವಂತಿಲ್ಲ. ನೀವೇ ದುಡಿಯುತ್ತೀರಲ್ಲ. ಬೇಕಾದರೆ ಮಗಳು-ಅಳಿಯ ಕೊಡುವರು" ಎಂದು ವ್ಯಂಗವಾಡುತ್ತಿದ್ದಳು. ಅಳಿಯ ಬೈದರೂ ತನ್ನ ಗಂಡ ಕುಡುಕ ಎಂದು ಮಗಳಿಗೆ ಗೊತ್ತಿತ್ತು. ನನ್ನ ಸಹಾಯಕ್ಕೆ ಅಮ್ಮ, ಅಮ್ಮನಿಗೆ ನಾನು ಎಂದು ಮನೆಯಲ್ಲಿಯೇ ಇರಿಸಿಕೊಂಡಿದ್ದಳು. ಆಗಲೇ ಶುರುವಾಯಿತು ಮಗಳಿಗೆ "ಜೀವದಲ್ಲಿ ರಕ್ತವಿಲ್ಲ, ಲೋ ಬಿ.ಪಿ, ರೆಸ್ಟ್ ಮಾಡಬೇಕು, ಆರೋಗ್ಯದ ಕಡೆ ಗಮನ ಕೊಡಿ, ಕೆಲಸವೇನು ಮಾಡಬೇಡಿ.. ಹೀಗೆ ಡಾಕ್ಟರ್ ರ ಹಿತವಚನಗಳು. ಬಡವರಿಗೆ ಬೇಡದ ಕಾಯಿಲೆಗಳು ಹೊದ್ದು ಮಲಗಲು ಎಂದು ಗೊಣಗುತ್ತಾ ವಾಪಾಸ್ಸಾದಳು. ತಾಯಿಯೇ ದುಡಿದು ಹಣ್ಣು ಹಂಪಲು ತಂದು , ನೆರಮನೆಯಿಂದ ಹಾಲು ಕೇಳಿ ಪಡೆದು ಮನೆಯಲ್ಲಿ ಅಡುಗೆ ಮಾಡಿ ಮಗಳ ಜೊತೆಗೆ ಮೂರ್ನಾಲ್ಕು ಮೊಮಕ್ಕಳನ್ನೂ ಸಾಕಿ ಸಲಹುತ್ತಿದ್ದಳು. ಮನಸ್ಸಿಗೆ ನೆಮ್ಮದಿಯಿಲ್ಲದೇ ಕಳ್ಳು-ಸಾರಾಯಿಯ ಮೊರೆ ಹೋಗಿ ಅದೆಷ್ಟೋ ಬರುಷಗಳೇ ಆಗಿತ್ತು. ಹೊಗೆಸೊಪ್ಪು ತಿನ್ನುತ್ತಿದ್ದಳು. ಅದೊಂದು ಅಭ್ಯಾಸವಾಗಿ ,ಕೆಟ್ಟ ಚಟವಾಗಿಹೋಯ್ತು. ರಾತ್ರಿ ನಿದಿರೆ ಬರಬೇಕಾದರೆ ಕುಡಿಯಲೇ ಬೇಕಿತ್ತು.
ಇದರ ನಡುವೆ ನಮ್ಮ ಮನೆಗೆ ತೋಟದ ಕೆಲಸಕ್ಕೆ ಬಂದಾಗಲೆಲ್ಲ ನಗುತ್ತಾ ನಗಿಸುತ್ತಾ ಮನಸ್ಸಿನ ನೋವು ಮರೆಯುತ್ತಾ ನಮಗೆಲ್ಲ ಮುದ ನೀಡುತ್ತಿದ್ದಳು.
***
ಇಪ್ಪತ್ತು ವರುಷಗಳು ಉರುಳಿದವು. ಈಗ ರಾಧಾ ಹಾಸಿಗೆ ಹಿಡಿದಿದ್ದಾಳೆ. ಕುಡಿತಕ್ಕೆ ಕರುಳು ಸುಟ್ಟು ಹೋಗಿದೆ. ಪಾರ್ಶ್ವವಾಯು ಬಂದು ದೇಹದ ಎಡಭಾಗದ ಯಾವ ಅಂಗಾಂಗಗಳೂ  ಕೆಲಸಮಾಡುತ್ತಿಲ್ಲ. ಯಾರು ಬಂದರೂ,ಹೋದರೂ ಗೊತ್ತಾಗುವುದಿಲ್ಲ. ಕಣ್ಣುಗಳು ಪೊರೆಬಂದು ಕುರುಡಾಗಿದೆ. ಸೊಸೆಯೋ ಯಾವಾಗ ಸಾಯುವರೋ ಎಂದು ಬಂದವರೆದುರೇ ಹೇಳುತ್ತಾಳೆ. ಅಳಿಯ ಸಂಪೂರ್ಣ ಬದಲಾಗಿ ಹೊಸ "ಮಾಂಸಾಹಾರಿ ಊಟದ ಹೋಟೆಲ್" ಮಾಲೀಕನಾದ. ಒಂದು ಗೂಡು ರಿಕ್ಷಾ, ಬೈಕ್, ಕಾರು, ದೊಡ್ಡ ಮನೆ ಕಟ್ಟಿಸಿ ಸಿರಿವಂತನಾದ. ರಾಧಾಳನ್ನು ಅವನೇ ನೋಡಿಕೊಳ್ಳುತ್ತಿದ್ದಾನೆ. ಎರಡನೇ ಮಗ ಕಣ್ಣಿದ್ದೂ ಕುರುಡ. ಕೇಳಿದರೇ ನಮಗೇ ನಮ್ಮದು ಹೆಚ್ಚಾಗಿದೆ ಅನ್ನುವ. ಹೆಂಡತಿ ಹೇಳಿದ ಹಾಗೆ ಕುಣಿಯುವ. ಬದಲಾಗಿ ಹೋಗಿದೆ ಎಲ್ಲರ ಬದುಕು. ರಾಧಾಳನ್ನ ಕೊನೆಗೂ ಚೆನ್ನಾಗಿ ಆರೈಕೆ ಮಾಡಿದ್ದು ಅವಳ ಮಗಳು-ಅಳಿಯನೇ.‌ ಅದಕ್ಕೇ ಹೇಳುವುದು ಮನೆಗೆ ಒಂದಾದರೂ ಹೆಣ್ಮಗಳಿರಬೇಕು ಎಂದು. ಅವಳಿಗೆ ಮಾತ್ರ ದಯೆ,ಕರುಣೆ, ಸಹನೆ, ಪ್ರೀತಿ, ಮಮತೆ ಎಲ್ಲವೂ ಅರ್ಥವಾಗುವುದು. (ಕೆಲವು ಕಡೆಯ ಅಪವಾದದ ಹೊರತಾಗಿ).

- ಸಿಂಧುಭಾರ್ಗವ್.

ಕವಿತೆ: ಬೇಸರ ಕಳೆಯಲು ಬರೆಯುವೆಯಾ

ಕವನ: ಕವಿತೆ ಬರೆಯುವೆಯಾ

ಮನವು ಮಂಕಾಗಿ ಕುಳಿತಿದೆ ಗೆಳೆಯಾ
ನನಗಾಗಿ ಒಂದು ಕವಿತೆ ಬರೆಯುವೆಯಾ

ರಾಗವಿರಲಿ, ತಾಳವಿರಲಿ
ಪ್ರೀತಿ ಕಲಸಿದ ಸಿಹಿ ಪಾಯಸದಂತಿರಲಿ..

ನಗುವ ತರಿಸುವ ವಿನೋದವಿರಲಿ
ಅಳುವ ತರಿಸುವ ವಿಷಾದವಿರಲಿ

ಸರಸವಿರಲಿ, ಜೊತೆಗೆ
ಕಾಡುವ ಸಾಲೊಂದಿರಲಿ..
ವಿರಸವಿರಲಿ, ಜೊತೆಗೆ
ಬೇಡುವ ಬಯಕೆಯೊಂದಿರಲಿ..

ಮನವು ಮಂಕಾಗಿ ಕುಳಿತಿದೆ ಗೆಳೆಯಾ
ನನಗಾಗಿ ಒಂದು ಕವಿತೆ ಬರೆಯುವೆಯಾ...

- ಸಿಂಧುಭಾರ್ಗವ್.

ಕವನ ಆಶಾಮಣಿಗಳ ಮಾಲೆ

ಕವನ : ಆಶಾಮಣಿಗಳ ಮಾಲೆ :

ಬೆಳಕು ಹರಿದಿದೆ ಪಂಚಿ ಹಾರಿದೆ
ಚಿಲಿಪಿಲಿ ಹಾಡು ಕೇಳಿ ಬರುತಿದೆ
ತೊಳೆದ ಮೊಗದಲಿ ಹೊಸ ಕಳೆಯಿದೆ
ದಿನದ ಪುಟವ ಕಾಣ್ವ ತವಕವಿದೆ..

ಮನೆಯಲೇ ಕುಳಿತರೇನು ಬಂತು
ನಡಿ ನೋಡು ಹೊರಗೆ ಹೊಂಟು

ತಪ್ಪುಗಳ ಹುಡುಕುವ ಜನರಗುಂಪು ನೋಡಲ್ಲಿ
ಬೆನ್ನು ಮುರಿದು ಕೆಲಸ ಮಾಡುವರಿಲ್ಲಿ

ಅವರ ಶಕ್ತಿ ಅಡಗಿದೆ ಗುಟುಕು ಚಹಾದಲ್ಲಿ
ನಡುವೆ ಜೀವನಕೆ ಬೇಕಾಗುವ ನುಡಿಯಲ್ಲಿ

ನಮ್ಮ‌ದೇ ಮಾತು ಕೆಲವರಿಗೆ ಸ್ಪೂರ್ತಿ
ನಾವೇ ಕುಳಿತಿರುವೆವು ಮಂಕಾಗಿ ಪೂರ್ತಿ

ದಿನೇ ದಿನೇ ಏರುವುದು ನಶೆ..
ಬದಲಾಗುವುದು ನಮ್ಮ ದೆಶೆ..

ಆಶಾ ಮಣಿಗಳ ಎಣಿಸುತ ಕುಳಿತುಕೊಳ್ಳುವುದಲ್ಲ..
ಮಾಲೆಮಾಡಿ ಕೊರಳಿಗಿಸಿ ಕೆಲಸ ನೋಡಲ್ಲ..

ನಿನ್ನೆಯದು ಇಂದಿಲ್ಲ
ಇಂದಿನದು ನಾಳೆಗಿಲ್ಲ
ಪುಟಗಳು ತಿರುವುತಲೇ ಸಾಗಬೇಕಲ್ಲ..

ಹೊಸ ಉತ್ಸಾಹದ ಜೊತೆಗೆ ಹೆಜ್ಜೆಯಿಡು ನೀನು
ಸಿಕ್ಕಸಿಕ್ಕ ಕೆಲಸವ ಮಾಡಿ ಅನುಭವೀ ಆಗು

ಜೊತೆಗೆ ಜನರ ಸ್ನೇಹ ಬೆಳೆಸು
ನಗುಮೊಗದಿ ಸ್ವಾಗತಿಸು..
ಕೆಲವರಿಂದ ನಗುವು
ಹಲವರಿಂದ ಪಾಠವು ಸಿಗುವುದು ನೋಡು..

ಆ ಶುಭ ಗಳಿಗೆ, ಇಂದು ಸಿಗುವುದೋ
ನಾಳೆ ಬರುವುದೋ‌ ಕಾಯಬೇಡ ಮನವೇ..

ಖುಷಿಯು ಸಂಗಡವಿರಲಿ
ರಂಗು ತುಂಬಿಸು, ಜೀವನ ಸಾಗುತಲಿರಲಿ..
ರಂಗು ತುಂಬಿಸು, ಜೀವನ ಸಾಗುತಲಿರಲಿ..

- ಸಿಂಧುಭಾರ್ಗವ್ 🌷

ಕವಿತೆ ನಿನಗೆಂದೇ ಕವಿತೆಬರೆದೆ

  "ಕವಿತೆ ಬರೆದೆ"

ನಿನ್ನ ಮಂದಹಾಸ ಬೆಳದಿಂಗಳಿನಂತೆ,
ಹಲ್ಲುಗಳೋ ದಾಳಿಂಬೆ ಕಾಳಿಯಂತೆ,
ಕಂಗಳೋ ಮಿನುಗೋ ತಾರೆಗಳಂತೆ,
ಹುಬ್ಬುಗಳು ಥೇಟ್ ಕಾಮನಬಿಲ್ಲಿನಂತೆ...

ಹೇಯ್ ಮುದ್ದು,
ಹೆಂಗಳೆರ ಹೊಗಳುವ ಕವಿಗಳಿದ್ದಾರೆ,
ನಿನ್ನಂದವ ಹೊಗಳುತ ಕವಯಿತ್ರಿಯಾದೆನಲ್ಲಾ..
ಬರೆವ ಕವಿತೆಗಳ ಸಂಖ್ಯೆ ಹೆಚ್ಚುತಿದೆಯಲ್ಲ..

ತಿಂಗಳ ಹುಣ್ಣಿಮೆಗೊಂದು,
ನಿನ್ನ ಹುಸಿ ಕೋಪಕ್ಕೊಂದು,
ನನಗಾಗಿ ಮೀಸಲಿಡುವ ಸಮಯಕ್ಕೆಂದು,
ಜೊತೆಗಿರದಾಗಿನ ವಿರಹ ವೇದನೆಗೆಂದು...

ಹೇಯ್ ಮುದ್ದು,
ಮುದ್ದಾಗಿ ನೀ ನನ್ನಲ್ಲಿ ಇಳಿದ ಬಗ್ಗೆ ಕುತೂಹಲವಿದೆ,
ನಮ್ಮ‌ ಪ್ರೀತಿಗೀಗ ಹೊಸ ರೆಕ್ಕೆ ಬಂದಿದೆ..
ಬಯಕೆಗಳು ಹೆಚ್ಚಾಗಿವೆ , ಕನಸುಗಳು ಲೆಕ್ಕತಪ್ಪಿವೆ..

ಹೊಸ ಪುಟಗಳ ತಿರುವಿದಂತೆಲ್ಲ
ಕೊನೆಯದಾಗಿ ನಿನ್ನ ಹಸ್ತಾಕ್ಷರವಿದೆ..
ಅದನು ಎದೆಗಪ್ಪುತ
ನಯನಗಳು ತೇವಗೊಂಡಿವೆ...

- ಸಿಂಧುಭಾರ್ಗವ್ 🌸

ಲೇಖನ- ಹೆತ್ತವರನ್ನು ಹೆದರಿಸುವ ಮಕ್ಕಳ ಹರೆಯ

ಹೆತ್ತವರನ್ನು ಹೆದರಿಸುವ ಮಕ್ಕಳ ಹರೆಯ :

ಘಟನೆ ೦೧: ತನು ಕಾಲೇಜಿಗೆ ಈಗಷ್ಟೆ ಸೇರಿಕೊಂಡಿದ್ದಾಳೆ. ಎಲ್ಲವೂ ಹೊಸತು. ಹೊಸ ಗೆಳೆಯರು, ಹೊಸ ಜಾಗ, ಹೊಸ ಪ್ರಾಧ್ಯಾಪಕರ ವರ್ಗ ಎಲ್ಲವೂ.. ಪಿ.ಯೂ.ಸಿ ಯ ಮೊದಲ ವರ್ಷಕ್ಕೆ ಹೋಗುವಾಗ ಎರಡನೇ ವರುಷಕ್ಕೆ ಬಡ್ತಿ ಪಡೆದ ಹುಡುಗರು ರೇಗಿಸುವುದು, ತಮಾಷೆ ಮಾಡುವುದು, ಸ್ನೇಹ ಬೆಳೆಸಿಕೊಳ್ಳಲು ನಿಲ್ಲಿಸಿ ಮಾತನಾಡಿಸುವುದು ಎಲ್ಲವೂ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ತುಂಬಾ ಮುಗ್ದೆಯಾಗಿದ್ದ ತನುವಿಗೆ ಅದು ಹಿಂಸೆ ಎನಿಸತೊಡಗಿತು. ಒಂದು ಹುಡುಗರ ಗುಂಪು ದಿನವೂ ಅವಳ ದಾರಿಗೆ ಅಡ್ಡಲಾಗಿ ನಿಂತು ರೇಗಿಸುತ್ತಿದ್ದರು. ಅವರಲ್ಲೇ ಇರುವ ಸ್ನೇಹಿತನಿಗೆ (ರಾಜ್) ಪ್ರೀತಿ ನಿವೇದನೆ ಮಾಡಬೇಕೆಂದು ತಾಕೀತು ಮಾಡಿದ್ದರು. ಅದನ್ನು ಇಷ್ಟಪಡದ ತನು ಅಲ್ಲಿಂದ ತಪ್ಪಿಸಿಕೊಳ್ಳಲು ಸಮಯ ಕೇಳಿದಳು. ವಾರಾಂತ್ಯಕ್ಕೆ ರಾಜ್ ನ ಎದುರು ನಿಲ್ಲಲೇ ಬೇಕಾಯಿತು. ಅವಳು ಹೆದರುತ್ತಾ ಕೈಕಾಲು ನಡುಗುತ್ತಾ ಬೆವತುಹೋಗಿದ್ದಳು. ಒಪ್ಪಿಗೆ ಸೂಚಿಸಿದಳು. ರಾಜ್ ನ ಸ್ನೇಹಿತರೆಲ್ಲರೂ ಅವಳನ್ನು ರಾಜ್ ನ ಪ್ರೇಯಸಿ ಎಂದು ಕರೆಯತೊಡಗಿದರು. ಸುತ್ತುವರೆದು ರ್ಯಾಗಿಂಗ್ ಮಾಡಲಾರಂಭಿಸಿದರು. ಅವಳಿಗೆ ಹೇಗೆ ಎದುರಿಸಬೇಕೆಂದು ತಿಳಿಯಲಿಲ್ಲ. ಗೋಡೆಯ ಮೇಲೆಲ್ಲಾ ಅವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬರ್ಥದಲ್ಲಿ ಹೆಸರು ಬಳಸಿದರು. ಇದು ಅವಳ ಮನಸ್ಸನ್ನು ಘಾಸಿಗೊಳಿಸಿತು. ಒಂದು ತಿಂಗಳು ಕಳೆಯುವಷ್ಟರಲ್ಲಿ ತನು ನೇಣಿಗೆ ಶರಣಾಗಿದ್ದಳು..
**
ಘಟನೆ ೦೨: ಪ್ರಥಮ ಪಿ.ಯು. ವಿದ್ಯಾರ್ಥಿ ಅಜಯ್ ಗೆ ಯಾವ ವಿಷಯವೂ ಅರ್ಥವಾಗುತ್ತಿರಲಿಲ್ಲ. ಕನ್ನಡ ಮೀಡಿಯಂ ನಲ್ಲಿ ಓದಿದ ಅವನಿಗೆ ಪ್ರತಿಯೊಂದು ವಿಷಯವೂ ಇಂಗ್ಲೀಷಿನಲ್ಲಿಯೇ ಇದ್ದದ್ದು ಕಬ್ಬಿಣದ ಕಡಲೆಯ ಹಾಗಾಯಿತು. ಜೊತೆಗೆ ಅವನಿಗೆ ಸಿಕ್ಕ ಸ್ನೇಹಿತರ ಗುಂಪು ಕೂಡ ಹಾಗೆಯೇ ಇತ್ತು. ಸಿಗರೇಟು ಸೇದಿ(ಧೂಮ್ರಪಾನ ಆರೋಗ್ಯಕ್ಕೆ ಹಾನಿಕಾರಕ) ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಬರ್ತ್ ಡೇ ಪಾರ್ಟಿ ಅದು ಇದು ಇಲ್ಲದ ನೆಪ ಹೇಳಿ ಹಣ ಖರ್ಚು ಮಾಡುವುದರ ಜೊತೆಗೆ ಕುಡಿದು ಮನೆಗೆ ಹೋಗದೇ ಅಲ್ಲಿಯೇ ಮಲಗುತ್ತಿದ್ದರು. ಹೆತ್ತವರಿಗೆ ಕೇಳಿದ್ದಕ್ಕೆಲ್ಲ ಸುಳ್ಳಿನ ಕತೆ ಹೆಣೆಯುತ್ತಿದ್ದರು. ಅದರ ಪರಿಣಾಮ ಮೊದಲ ವರ್ಷದ ಫಲಿತಾಂಶ ಅಜಯ್ ಫೇಲಾಗಿದ್ದು. ಮನೆಗೆ ಬರದ ಅವನನ್ನು ತಾಯಿ ಹುಡುಕಿದ ರೀತಿ ಕಣ್ಣೀರು ತರಿಸುತ್ತಿತ್ತು. ಸಿಕ್ಕ ಸಿಕ್ಕ ಸ್ನೇಹಿತರಿಗೆಲ್ಲ ಕರೆ ಮಾಡಿ "ಅಜಯ್ ಮನೆಗೆ ಬಂದಿದ್ದನಾ..?? ಅಲ್ಲಿದ್ದಾನ? ಎಲ್ಲಿ ಇರುವನೆಂದಾದರೂ ಗೊತ್ತಿದೆಯಾ.." ಎಂದು ಅಳುತ್ತಿದ್ದರು..
**
ಇದು ಒಂದೆರಡು ಘಟನೆಗಳಷ್ಟೆ. ಇಂತಹುದು ಅನೇಕ ನಡೆಯುತ್ತದೆ. ಹರೆಯ ಎನ್ನುವುದು ಸುಕೋಮಲ ಬಳ್ಳಿಯಂತೆ. ಹೆಚ್ಚು ಒತ್ತಡ ಹಾಕಿದರೂ ಕಷ್ಟ, ಹಾಗೆ ಬಿಟ್ಟರೆ ಹೇಗಂದರೆ ಹಾಗೆ ಬೆಳೆಯುತ್ತದೆ. ಯಾವ ರೀತಿಯಾಗಿ ಮಕ್ಕಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೆತ್ತವರು ಒದ್ದಾಡುತ್ತಾರೆ. ಹರೆಯದ ಮನಸ್ಸಿನಲ್ಲಿ ಏನೇನು ನಡೆಯುತ್ತದೆ ಎಂದು ತಿಳಿದುಕೊಳ್ಳಲು ಆಪ್ತ ಸಮಾಲೋಚನೆ ಮಾಡಲೇ ಬೇಕು. ಮಗಳಾಗಲಿ, ಮಗನಾಗಲಿ ಕಾಲೇಜಿನಿಂದ ಬಂದ ಕೂಡಲೆ ಒಮ್ಮೆ ಏನೆಲ್ಲಾ ನಡೆದಿದೆ ಎಂದು ಕೇಳಬೇಕು. ನಾನೇನು ಚಿಕ್ಕ ಮಗುವಾ? ಎಂದು ಕೇಳಬಹುದು. ಆದರೂ ಅಲ್ಲಿನ ವಿಷಯ ನಾಜೂಕಾಗಿ ತಿಳಿದುಕೊಳ್ಳಬೇಕು. ಅಲ್ಲದೆ ಏನೇ ನಡೆದರೂ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಧೈರ್ಯ ತುಂಬ ಬೇಕು. ಪಾಸೋ ಫೈಲೋ ಜೀವನ ಬೇರೆಯದೇ ಇದೆ. ಅದು ಕಷ್ಟವಾದರೆ ಬೇರೆಯದೇ ಕೋರ್ಸ್ ಮಾಡಬಹುದು ಚಿಂತಿಸಬೇಡ ಎಂಬ ಧನಾತ್ಮಕ ವಿಚಾರಗಳನ್ನು ಹತ್ತಿರದಲ್ಲೇ ಕುಳಿತು ತಿಳಿಹೇಳಬೇಕು. ತನುವಿನ ವಿಚಾರಕ್ಕೆ ಬಂದರೆ "ಅವಳು ಚಂದದ ಹುಡುಗಿ ಎಂದು ರೇಗಿಸುವುದು ಸಹಜವೇ.." ಆದರೆ ಅದನ್ನು ಮನೆಯವರ ಹತ್ತಿರ ಬಂದು ಹೇಳಬೇಕಿತ್ತು. ಮಕ್ಕಳು ಚಿಕ್ಕದಿರುವಾಗ ಹೆತ್ತವರೇ ಕೈ-ಕೈಹಿಡಿದು ಬಿಟ್ಟು ಬರುತ್ತಾರೆ. ಆಗ ಮಕ್ಕಳಿಗೆ ಈ ಪ್ರಪಂಚವೇ ಒಂದು ಸೋಜಿಗದಂತೆ, ವಿಸ್ಮಯದಂತೆ ಕಾಣುತ್ತದೆ. ಅಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನು ಓಡೋಡಿ ಬಂದು ಕುತೂಹಲದಿಂದ ಹೇಳತೊಡಗುತ್ತವೆ. ಒಂದಷ್ಟು ದಿನ ಕೇಳಿಸಿಕೊಂಡ ಹೆತ್ತವರು ಕೊನೆಗೊಂದು ದಿನ ಬೈದುಬಿಡುತ್ತಾರೆ. ನಿನ್ನ ಕತೆ ಕೇಳಲು ಸಮಯವಿಲ್ಲ. ತರಗತಿಯ ಅಧ್ಯಾಪಕರು ಕೊಟ್ಟ ಮನೆಕೆಲಸ ಮಾಡಿ, ಓದು ಹೋಗು.." ಎಂದು. ಅಲ್ಲಿಂದ ಶುರುವಾಗುತ್ತದೆ. ಮನದೊಳಗೆ ಯುದ್ಧ. ಯಾವುದು ಅಗತ್ಯವಾಗಿ ಹೇಳಬೇಕೋ ಅದನ್ನೇ ಮಕ್ಕಳು ಭಯದಿಂದ ಹೇಳಲು ಹಿಂಜರಿಯಿತ್ತಾರೆ. ಅದಕ್ಕಿಂತಲೂ  ಅಸುರಕ್ಷತೆ ಕಾಡುತ್ತದೆ. ಆತ್ಮ ಸ್ಥೈರ್ಯ ಕುಂದುತ್ತದೆ. ನಮ್ಮ ಹೆತ್ತವರು ನಮಗೆ ಒತ್ತಾಸೆಯಾಗಿಲ್ಲ ಎನ್ನುವ ಭಾವ ಬಲವಾಗಿ ಕುಳಿತುಬಿಡುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿ ಪರಿಹಾರ ಹೆತ್ತವರೇ ಹುಡುಕಬೇಕು. ಸ್ನೇಹಿತರಂತೆ ವ್ಯವಹರಿಸಬೇಕು. ಇಲ್ಲದಿದ್ದರೆ ತುಂಬಲಾರದ ನಷ್ಟ ಅನುಭವಿಸುವುದು ಹೆತ್ತವರೇ.

- ಸಿಂಧು ಭಾರ್ಗವ್.