Thursday 1 October 2020

ಲೇಖನ : ಕಥೆ ಹೇಳುವ ಬಿಂದಿ ಹಣೆಯ ಬೊಟ್ಟು

 


 ಅರ್ಥಪೂರ್ಣ ಲೇಖನ : "ಕಥೆ ಹೇಳುವ ಬಿಂದಿ"







ನಾನು ಬಿಂದಿ, ಸ್ಟಿಕರ್ , ಹಣೆಗೆ ಹಚ್ಚುವ ಬೊಟ್ಟು. ಗೊತ್ತಾಯಿತಾ..? ಹೆಣ್ಮಕ್ಕಳು ಬೊಟ್ಟು ಇಟ್ಟುಕೊಂಡರೆ ಮಹಾಲಕ್ಷ್ಮಿ ತರಹ ಕಾಣಿಸ್ತಾರೆ ಅಂತ ಹೇಳೋದು ವಾಡಿಕೆ. ಅದು ನಮ್ಮ ಸಂಸ್ಕೃತಿ ತಾನೆ.  ನಿಜ ಬೋಳು ಬೋಳು ಹಣೆಯನ್ನು ಯಾರಿಗೆ ತಾನೆ ನೋಡೋಕೆ ಇಷ್ಟವಾಗುತ್ತೆ. ಹುಡುಗಿಯರು, ಚಿಕ್ಕ ಕಪ್ಪು ಕಲರ್ ಬಿಂದಿ ಹಣೆಗೆ ಇಟ್ಟುಕೊಂಡು ಕಾಲೇಜಿಗೆ ಹೋಗುತ್ತಾರೆ. ಮದುವೆಯಾದ ಮಹಿಳೆಯರು ಕೆಂಪು ಬಿಂದಿ ಹಾಕಿಕೊಳ್ಳುತ್ತಾರೆ. ಇನ್ನೂ ಉಡುಪಿಗೆ ಸರಿಹೊಂದುವ ಬಿಂದಿಯನ್ನು ಹಣೆಗಿರಿಸಿಕೊಳ್ಳುವ ಯುವತಿಯರೇನೂ ಕಡಿಮೆಯಿಲ್ಲ ಬಿಡಿ. ವಿವಿಧ ಆಕಾರದ ಬಿಂದಿಗಳು ಕಾಣಸಿಗುತ್ತವೆ. ಕುಂದನ್ ವರ್ಕ್ ಕೂಡ ಮಾಡುತ್ತಾರೆ.


ವಿಷಯ ಅದಲ್ಲ. ನಾನು ಕಥೆ ಹೇಳಹೊರಟಿರುವುದು, ತುಂಬಾ ಕುತೂಹಲಭರಿತವಾಗಿದೆ ಮುಂದೆ ಓದಿರಿ. ನೀವು ಬಾತ್ ರೂಮ್ ನಲ್ಲಿ ಗಮನಿಸೀದ್ದೀರಾ. ಕನ್ನಡಿಯಲ್ಲಿ ಒಂದು ಪುಟ್ಟ ಕೆಂಪು ಬಣ್ಣದ ಬಿಂದಿ ಬಣ್ಣ ಮಾಸಿದರೂ ಹಾಗೆಯೇ ಅಂಟಿಕೊಂಡಿರುತ್ತದೆ‌. ಸ್ನಾನಕ್ಕೆ ಹೋಗುವಾಗ ಇಲ್ಲ ಮುಖ ತೊಳೆದುಕೊಳ್ಳುವಾಗ ದರ್ಪಣದ ಮೇಲೋ ಇಲ್ಲ ಗೋಡೆಯ ಮೇಲೋ ನನ್ನನ್ನು ಅಂಟಿಸಿಟ್ಟು ತಮ್ಮ ಮುಖವನ್ನು ತೊಳೆದುಕೊಳ್ಳುತ್ತಾರೆ. ಆಮೇಲೆ ಮರೆತುಬಿಟ್ಟು ಹಾಗೆ ಹೋಗುತ್ತಾರೆ. ನಾನು ಮಾತ್ರ ಗೋಡೆ ಮೇಲೆ ಅಂಟಿಕೊಂಡಿರಬೇಕು. ಕೆಲವರು ನನ್ನ ಮೇಲಿನ ಪ್ರೀತಿಗೆ ಮತ್ತೆ ವಾಪಾಸು ಬಂದು ಹಣೆಗಿರಿಸಿಕೊಳ್ಳುತ್ತಾರೆ. ಕೆಲವು ಕಂಜೂಸು ಹೆಣ್ಮಕ್ಕಳು ಹುಡುಕಿ ಹುಡುಕಿ ಅದೇ ಬಿಂದಿಯನ್ನು ಹಣೆಗಿರಿಸಿಕೊಳ್ಳುತ್ತಾರೆ. ವರುಷಕ್ಕೊಮ್ಮೆ ಗೋಡೆಗೆಲ್ಲ ಪೇಯಿಂಟ್ ಹಚ್ಚುವಾಗ ನನಗೂ ಬಣ್ಣ  ಬಳಿಯುತ್ತಾರೆ. ಇನ್ನೂ ಬೆಡ್ ರೂಮಿನ ಕಪಾಟಿನ ಮೇಲೆ ಅಮ್ಮನ ಕೆಂಪು ಬಣ್ಣದ ಕಾಸಿನಷ್ಟಗಲದ ಬಿಂದಿ ಗಮನಿಸಿದ್ದೀರಾ. ಎಷ್ಟು ವರುಷವಾದರೂ ಇನ್ನೂ ಹಾಗೆಯೇ ಅಂಟಿಕೊಂಡಿರುತ್ತದೆ. ಅದರ ಮೇಲೆಲ್ಲ ಪೌಡರ್ ಸ್ಪರ್ಷಿಸಿ ಬಿಳಿ ಬೂದಿಯಾಗಿರುತ್ತದೆ. ಅಮ್ಮನ ಮಮತೆ ಕೂಡ ಅದರಲ್ಲಿ ತುಂಬಿರುತ್ತದೆ.


ಇನ್ನು ನೀವೇನಾದರೂ ನೆಂಟರಿಷ್ಟರ ಮನೆಗೆ ಹೋದರೂ ಅದೇ ಅಭ್ಯಾಸ, ಬೊಟ್ಟು ತೆಗೆದಿಟ್ಟು ಮುಖ ತೊಳೆದುಕೊಳ್ಳುವುದು. ಅದರ ಜೊತೆಗೆ ಮರೆವಿನ ಕಾಯಿಲೆ ಇರುವುದರಿಂದ ಅದನ್ನು ಅಲ್ಲೇ ಬಿಟ್ಟು ಹಿಂತಿರುಗುವುದು. ನಿಮ್ಮಿಂದಾಗಿ ನಮಗೆ ಊರಿಂದೂರಿಗೆ ಬಡ್ತಿ. ಇನ್ನೂ ಹೇಳಲು ಅಸಯ್ಯವಾಗುವ ವಿಷಯ. ಅಪ್ಪ ಅಮ್ಮ ಮನೆಯಲ್ಲಿ ಇಲ್ಲದ ದಿನ ಗಮನಿಸಿ ಈ ಗಂಡುಹೈಕಳು ಡೇಟಿಂಗ್ ಗೆ ಅಂತ ಹುಡುಗಿಯನ್ನು ಕರೆದುಕೊಂಡು ಬರುವುದು. ಅವಳು ಕೂಡ ಅವನ ಬೆಡ್ ರೂಮಿನ ವಾಷ್_ಬೇಸಿನ್ ನಲ್ಲಿರುವ ಮಿರರ್ ಮೇಲೆ ಬಿಂದಿ ಅಂಟಿಸಿ ಮರೆತು ಹೋಗಿರುವುದು.  ಇಲ್ಲ ಅವನಿಗೆ ಯಾವಾಗಲೂ ತನ್ನ ನೆನಪಾಗಲಿ ಎಂದು ಬೇಕಂತಲೇ ಆ ಬಿಂದಿಯನ್ನು ಅಂಟಿಸಿಹೋಗಿದ್ದರೆ ನಾನು ಹುಡುಗರ ರೂಮಿನಲ್ಲಿಯೂ ಟಿಕಾಣಿ ಹೂಡಬೇಕಾಗುವ ಕರ್ಮ ಬರುತ್ತದೆ. ಎಲ್ಲಿಯಾದರೂ ಅವನ ಅಮ್ಮನೋ ತಂಗಿಯೋ ಗಮನಿಸಿದರೆ ಅವನಿಗೆ ಬಡಿತ ಗ್ಯಾರೆಂಟಿ. ಹ್ಹ..ಹ್ಹ..ಹ್ಹ..😆😆 ಒಮ್ಮೆ ಯೋಚಿಸಿ. ನಿಮಗೇ ಬಿದ್ದು ಬಿದ್ದು ನಗು ಬರುವುದು.


ನಡುರಾತ್ರಿಯಲ್ಲಿ ಗಂಡ ಹೆಂಡಿರ ಸಲ್ಲಾಪ ಮುಗಿದು , ಗಂಡನ ಕೆನ್ನೆ ಮೇಲೆ ಕೂಡ ನಾನು ಅಂಟಿಕೊಂಡಿರುವುದುಂಟು, ಯಾರಾದರು ಕಂಡು ಹೇಳುವಾಗ ಅವನಿಗೆ ನಾಚಿಕೆ. ಇನ್ನೂ ಈ ಬೇಸಿಗೆ ಬೆವರಿನ ಕಷ್ಟ ಎಷ್ಟು ಹೇಳಿದರೂ ತೀರದು. ಕೆಲವು ಹುಡುಗೀಯರಿಗೆ ದಿನಕ್ಕೆ ಎರಡು ಮೂರು ಬಿಂದಿ ಬೇಕಾಗುತ್ತದೆ. ಬೆವರಿಗೆ ಅಂಟು ಕಿತ್ತುಹೋಗಿ ಬಿಂದಿ ಬಿದ್ದು ಹೋಗುತ್ತದೆ. ಕೆಲವರಿಗೆ ಹಣೆಯಲ್ಲಿನ ಬಿಂದಿ ಬಿದ್ದು ಹೋಗಿರುವುದೇ ತಿಳಿದಿರುವುದಿಲ್ಲ. ಯಾರಾದರೂ ಅವರ ಮುಖ ನೋಡಿ ಹೇಳಿದ ಮೇಲೆಯೇ ಗೊತ್ತಾಗೋದು‌‌. ಕೂಡಲೇ ಪರ್ಸ್ ತೆಗೆದು ಸ್ಟಿಕರ್ ಪ್ಯಾಕ್ನಲ್ಲಿದ್ದ ಒಂದು ಬೊಟ್ಟು ಹಣೆ ಏರುತ್ತದೆ. ಒಂದ್ಚೂರು ಅಂಟು ಇಲ್ಲ ಎಂದು ನನ್ನ ಬೈದುಕೊಳ್ಳುವವರೂ ಇದ್ದಾರೆ.

ಹೇಗಿದೆ ನನ್ನ ಕಥೆ...ಓದಿದಿರಾ?


ಬರೆದವರು: ಸಿಂಧು ಭಾರ್ಗವ್ | ಬೆಂಗಳೂರು-೨೧ ಬರಹಗಾರ್ತಿ...




#ಕನ್ನಡಕಥೆ ಅರ್ಥಪೂರ್ಣ #ಹಾಸ್ಯಲೇಖ‌ನ : #ಕಥೆಹೇಳುವಬಿಂದಿ

#ನುಡಿಜೇನು_ದಿನಪತ್ರಿಕೆ ಯಲ್ಲಿ ಪ್ರಕಟವಾಯಿತು

೦೧/೧೦/೨೦೨೦ ಗುರುವಾರ

ಆಯ್ಕೆ ಮಾಡಿ‌ಪ್ರಕಟಿಸಿದ ಸಂಪಾದಕ ಬಳಗಕ್ಕೆ ವಂದನೆಗಳು💐

#Sindhubhargavquotes  #kannadaliterature #kannadigaru #kannadaarticles #dailynewspaper #kannadanewspaper #magazinewriters #kannadaliterature #kannadigaru #kannadakavana #kannadakavitegalu #octobermonth 01/10/2020 ಗುರುವಾರ

No comments:

Post a Comment