Wednesday 21 October 2020

ರೈತನ ಗೋಳು ಕೇಳುವವರು ಯಾರು?

ಕನ್ನಡ ಕವಿತೆ: ರೈತರ ಗೋಳು ( ನವ್ಯಕಾವ್ಯ ಬಂಡಾಯ ಸಾಹಿತ್ಯ)

ರೈತರ ಗೋಳು ಕೇಳುವವರು ಯಾರು
ಮಳೆಯೇ ಬರದಿರೆ ಬರಗಾಲ ಎದುರಿಸುವರು
ಬಿಡದೇ ಸುರಿದರೆ ನೆರೆಗಾಲ ನೋಡುವರು

ರೈತರ ಗೋಳು ಕೇಳುವವರು ಯಾರು?
ಮಧ್ಯವರ್ತಿಗಳ ಹಾವಳಿ ಬೇರೆ,
ಬೆಳೆದ ಬೆಳೆಯೆಲ್ಲ‌ ಕೊಳೆತಿದೆ ಹೊಲದಲ್ಲೆ
ಅಳಿದುಳಿದ ಬೆಳೆಯ ಕೊಂಡೊಯ್ಯಲು ಬರುವ
ಪುಡಿಗಾಸನು ರೈತರ ಕಿಸೆಗೆ ತುರುಕಿಸುವ..

ರೈತರ ಗೋಳು ಕೇಳುವವರು ಯಾರು?
ತರಕಾರಿ ಧಾನ್ಯಗಳ ಬೆಲೆ ಏರಿಸುವ
ಕಾರಣ ಕೇಳಿದರೆ ನೆರೆ ಬಂತು ಎನ್ನುವ
ಸಂಗ್ರಹಿಸಿದ ಬೆಳೆ ಖಾಲಿ ಎನ್ನುವ
ಗೋದಾಮಿನಲ್ಲಿ ತರಕಾರಿ‌ ಇಲ್ಲೆನ್ನುವ

ರೈತರ ಗೋಳು ಕೇಳುವವರು ಯಾರು?
ಹೇಳಿದ ಹಣವ ಕೊಡಲೇಬೇಕು
ಗ್ರಾಹಕನಿಗೆ ಜೀವನ‌ ನಡೆಯಲೇಬೇಕು
ರೈತರಿಗೆ ಹಣವು ಸಿಗದು ತಮ್ಮ
ಕೊಳೆತ ಬೆಳೆಯು ನಳನಳಿಸದು ತಿಮ್ಮ

ನಿಂತ ನೀರಾಗಿದೆ ಜೀವನವೀಗ
ಕೊಳೆತ ಬಾಳು ಸರಿಯಾಗುವುದು ಯಾವಾಗ?ಸಂಕಷ್ಟದ ಕಾಲಕ್ಕೆ ಇಲ್ಯಾರು ಬಾರರು
ರೈತರ ಗೋಳು ಕೇಳುವವರು ಯಾರು?

(೨)
ಹೋ ದಂಡು ದಂಡೇ ದಾವಿಸಿದೆ ನೋಡಿ
ಸನಿಹಕೆ ಬಂದರು, ಮೊಸಳೆ ಕಣ್ಣೀರು ಸುರಿಸಿ
ಮುಷ್ಕರಕ್ಕೆ ಇವರೇ ಮೊದಲಿಗರು
ಕಂಡ ಕಂಡಲ್ಲಿ ಬೆಂಕಿ ಹಾಕುವರು
ರೈತರ ಪರ ಹೋರಾಟಗಾರರು
ಅಸಲಿಗೆ ಇವರೆಲ್ಲ ಯಾರು?  ಯಾರೂ ತಿಳಿಯರು..
ರಾಜಕೀಯದ ದಾಳವಾಗಿಸಿ ಬಿಟ್ಟರು,
ಬಡರೈತರು ಗಾಳಕೆ ಕಟ್ಟಿದ ಮಿನಿಮಾಂಸವಾದರು//

ಒಂದೆರಡು ವಾರ ಹಾರಾಟ ಕೂಗಾಟ
ಮಾಧ್ಯಮದಲ್ಲೆಲ್ಲ ಇವರದೇ ಕಟುಮಾತು, ನೋಟ
ರೈತರ ಗೋಳಿಗೆ ನ್ಯಾಯವು ಸಿಗದೆ, ತಲೆ ಮೇಲೆ‌ ಕೈಹೊತ್ತು ಕುಳಿತ
ಮುಷ್ಕರಕೆ ಬೆಂಬಲ ಸೂಚಿಸಿ ಬಂದವನು ನಗುತ ಬಿರಿಯಾಣಿ ಸವಿದ...

ರೈತರ ಗೋಳು ಕೇಳುವವರು ಯಾರು?

ರಚನೆ: ಸಿಂಧು ಭಾರ್ಗವ್ ಬೆಂಗಳೂರು-೨೧

( ಚಿತ್ರಕೃಪೆ : ಗೂಗಲ್ ಇಮೇಜ್ ) 


No comments:

Post a Comment