Monday 5 November 2018

ದೀಪಾವಳಿ ಹಬ್ಬ ೦೧

ದೀಪಾವಳಿ ಎಂದರೆ
 ಬಾಲ್ಯದ ನೆನಪು :-  ನರಕ ಚತುರ್ದಶಿ ಯ ಹಿಂದಿನ ದಿನ ( #ೀರು_ತುಂಬುವ_ಶಾಸ್ತ್ರ) ನೀರು ತುಂಬುವ ಶಾಸ್ತ್ರ:-


 ಬೂದಿನೀರು ಸ್ನಾನಕ್ಕೆ ಒಲೆಯನ್ನು ತೊಳೆದು ಶುದ್ಧಮಾಡಿ ಒಲೆಯೊಳಗಿದ್ದ ಮಸಿ /ಬೂದಿಯನ್ನು ತೆಗೆದು , ದೊಡ್ಡದಾದ ಹರಿ (ಹಿತ್ತಾಳೆ ಚರಿಗೆ) ತೊಳೆದು ಹೂವಿನ ಹಾರ ಮಾಡಿ ಸೇಡಿಯುಂಡೆಯಿಂದ ಚಿತ್ರ ಬಿಡಿಸಿ ಹೂವಿನ ಹಾರ ಹಾಕಿ ಬಾವಿಯಿಂದ ನೀರು ಸೇದಿ ತಂದು ಜಾಗಂಟೆ ಬಡಿಯುತ್ತಾ ದೇವರ ಪದ ಹಾಡುತ್ತಾ ನೀರು ತುಂಬಿಸುವುದು.
ಮರುದಿನ ಸೂರ್ಯ ಉದಯಿಸುವುದಕ್ಕಿಂತ ಮೊದಲೇ ಎದ್ದು ಅಮ್ಮ ದೇವರ ಕಂಡಿ ಎದುರು ಗಣಪತಿ ಚಿತ್ರ ಬಿಡಿಸಿ ಗರಿಕೆ ಹುಲ್ಲು ತಂದು ಎರಡು ಮಣೆ ಹಾಕಿ ಅಪ್ಪನನ್ನು ಕೂರಿಸಿ ಜೊತೆಗೆ ಮೊದಲ ಮಗ/ಮಗಳನ್ನು ಕೂರಿಸಿ ಎಣ್ಣೆ ಶಾಸ್ತ್ರ ಮಾಡುವುದು. ಚೆನ್ನಾಗಿ ಬೆನ್ನಿಗೆ ಕೈ ಕಾಲಿಗೆ ಎಣ್ಣೆಯನ್ನು ಹಚ್ಚುವುದು. ಜೊತೆಗೆ ಕಿವಿಗೆ ಒಂದು ಚಮಚ ಎಣ್ಣೆ ಹಾಕುವುದು. ನಂತರ ಒಂದರ್ಧ ಗಂಟೆ ಬಿಟ್ಟು ಬಿಸಿಬಿಸಿ ಅಭ್ಯಂಗಸ್ನಾನ ಮಾಡುವುದು.ಮೊದಲು ಅಮ್ಮ ಎರಡು ಚೊಂಬು ನೀರು ಹಾಕಿ ಶಾಸ್ತ್ರ ಮಾಡುವರು. ನಂತರ ಬೂದಿನೀರು ದೋಸೆ ಚಟ್ನಿ ( ಮಸಾಲೆ ದೋಸೆ) ಮಾಡಿ ಹೊಟ್ಟೆ ತುಂಬಾ ತಿನ್ನುವುದು...



ಇನ್ನೊಂದು ವಿಷೇಶವೆಂದರೆ :

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು!!
ಮಾವ ಮಗುವಾದನು !!
ಎಂಬ ಹಾಡು ಎಷ್ಟು ಅರ್ಥ ಗರ್ಬಿತವಾಗಿದೆ. ಮದುವೆಯಾದ ಹೊಸ ಮದುಮಕ್ಕಳು, ಮಗಳು-ಅಳಿಯನನ್ನು ದೀಪಾವಳಿ ಹಬ್ಬಕ್ಕೆ ಕರೆದು ಎಣ್ಣೆ ಶಾಸ್ತ್ರ, ಉಡುಗೊರೆ ಕೊಡುವ ಶಾಸ್ತ್ರ  ಮಾಡುವುದು. ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಮಾವನು ಅಳಿಯನ ಜೊತೆ  ಕುಳಿತು ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ, ಅವಳ ಬೇಕು ಬೇಡಗಳ ಪೂರೈಸುವ ಕರ್ತವ್ಯದ ಜೊತೆಗೆ ,ಮನೆಯ ಕೆಲವು ಜವಾಬ್ದಾರಿ ಗಳನ್ನು ವಹಿಸುವರು, ಕಿವಿಮಾತಯಗಳನ್ನು ಹೇಳುವರು. ಅಲ್ಲದೇ ಅವರ ಮಾತುಗಳು ನಗೆ ಚಟಾಕಿಯಿಂದ ಆಸಕ್ತಿ ,ಅಭಿರುಚಿಗಳ ವಿನಿಮಯವಾಗಿ ಮೊದಮೊದಲಿಗಿದ್ದ ಭಯವು ದೂರಾಗಿ ಅಳಿಯನಿಗೆ ಮಾವನ ಜೊತೆ ಸಲುಗೆ ಬೆಳೆಯಲು ಇದು ಕಾರಣವಾಗುತ್ತದೆ. ಮಗಳು ಇದನ್ನೆಲ್ಲ ಬಾಗಿಲ‌ ಸಂಧಿಯಲ್ಲೇ ನಿಂತು  ನೋಡುವುದು ಸುಂದರ ದೃಶ್ಯವಾಗಿದೆ. ವರುಷದೊಳಗೆ ತೊಟ್ಟಿಲು ತೂಗುವ ಭಾಗ್ಯ ಕೊಡಿ ಎಂದು ಮಾವ , ಅಳಿಯನನ್ನು ಕೇಳುವುದು ರಸಮಯ ಕ್ಷಣ ಎನ್ನಬಹುದು. ಹೀಗೆ
ದೀಪಾವಳಿಯ ಮೊದಲ ದಿನ ಮುಗಿಯುತ್ತದೆ.

- ಸಿಂಧು ಭಾರ್ಗವ್.
🎇🎇🎇🎇🎇🎇🎇🎆🎆🎆🎆🎆🌇🌆🌆 🌃🎇🎆🌇

No comments:

Post a Comment