Thursday 31 January 2019

ವರಕವಿ ಬೇಂದ್ರೆಯವರ ಲೇಖನ

ಲೇಖನ: ನಾಕುತಂತಿಯ ನಾಯಕ ದ.ರಾ.ಬೇಂದ್ರೆ


ವರಕವಿ ಬೇಂದ್ರೆ ಎಂಬ ನಾಮಾಂಕಿತರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ೧೮೯೬ ಜನವರಿ ೩೧ ರಂದು ಧಾರವಾಡದ ಬ್ರಾಹ್ಮಣ ಕುಟುಂಬದಲ್ಲಿ ರಾಮಚಂದ್ರ ಭಟ್, ಮತ್ತು ಅಂಬಿಕೆ ಯವರ ಪುತ್ರನಾಗಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಇವರು ಅಂಬಿಕಾತನಯದತ್ತ ಎಂಬ ಕಾವ್ಯನಾಮದಡಿಯಲ್ಲಿ ಅನೇಕ ಕವಿತೆ ಕಥೆ, ಅನುವಾದ, ವಿಮರ್ಷಾತ್ಮಕ ಕಾವ್ಯಗಳನ್ನು ರಚಿಸಿದ್ದಾರೆ. ಅಂಬಿಕಾತನಯದತ್ತ ಎಂದರೆ "ಸಾರ್ವತ್ರಿಕ ಒಳದನಿ" ಎಂಬ ಅರ್ಥವನ್ನು ನೀಡುತ್ತದೆ. ಕಾಲೇಜು ಜೀವನದಲ್ಲಿಯೇ ಕವಿತೆಗಳನ್ನು ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದ ಇವರು ೧೯೧೮ರಲ್ಲಿ ಮೊದಲ ಕವನವು "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಅಲ್ಲದೆ ೧೯೨೨ ರಲ್ಲಿ "ಕೃಷ್ಣಕುಮಾರಿ" ಎಂಬ ಮೊದಲ ಕಾವ್ಯ ಸಂಕಲನ ಪ್ರಕಟವಾಗಿತ್ತು.  ಅದರಿಂದಾಚೆ ಗರಿ, ಕಾಮಕಸ್ತೂರಿ, ಸೂರ್ಯಪಾನ, ನಾದಲೀಲೆ, ನಾಕು ತಂತಿ, ಮೊದಲಾದ ಕವನಸಂಕಲನಗಳನ್ನು ಪ್ರಕಟಿಸಿದರು‌. ಅವರು ತಮ್ಮೊಳ ಹೊಕ್ಕು ನೋಡುವ ಪರಿ ಅದ್ಭುತವಾಗಿ ಅವರ ಕವಿತೆಗಳಲ್ಲಿ ಮೂಡಿಬಂದಿದೆ.

೧೯೭೪ರಲ್ಲಿ ಇವರು ಬರೆದ ನಾಕುತಂತಿ ಕವನಸಂಕಲನ ಕ್ಕೆ ಕೇಂದ್ರ ಸರ್ಕಾರದಿಂದ ಜ್ಞಾನಪೀಠ ಪ್ರಶಸ್ತಿಯು ಲಭಿಸಿತು. ಕವಿತೆಗಳನ್ನಲ್ಲದೇ ಸಂಶೋಧನಾತ್ಮಕ ಲೇಖನಗಳನ್ನು, ವಿಮರ್ಶೆಗಳನ್ನು ,ನಾಟಕಗಳನ್ನು, ಅನುವಾದಗಳನ್ನು ಬರೆಯುತ್ತಿದ್ದರು. ಅಲ್ಲದೇ ಆಗಿನ ಕಾಲದಲ್ಲಿಯೇ  ಅಂದರೆ ಸರಿಸುಮಾರು ೧೯೨೧ ರಲ್ಲಿಯೇ "ಗೆಳೆಯರ ಗುಂಪು " ಎಂಬ ತಂಡವನ್ನು ಕಟ್ಟಿಕೊಂಡು ಗೆಳೆಯರೊಂದಿಗೆ ಸಾಹಿತ್ಯದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಆಗೆಲ್ಲ ಬ್ರಿಟಿಷ್ ಸರ್ಕಾರವಿದ್ದ ಕಾಲ. ಬೇಂದ್ರೆಯವರ "ಗರಿ" ಕವನಸಂಕಲನ ದಲ್ಲಿ "ನರಬಲಿ" ಎಂಬ ಕವನವು ಬ್ರಿಟಿಷ್ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಕಾರಣ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸುವಂತಹ ಕವನವನ್ನು ಬರೆದು ಅವರು ಪ್ರತಿಯೊಬ್ಬ ದೇಶಭಕ್ತನ ಮನದಲ್ಲಿ ಆಕ್ರೋಶ ಹುಟ್ಟುವಂತೆ ಮಾಡಿದ್ದರು. ಅಪಾರ ದೇಶಪ್ರೇಮಿಯಾದ ಬೇಂದ್ರೆಯವರು ತಮ್ಮ ಕವಿತೆಗಳ ಮೂಲಕವೇ ಒಂದು ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದರು. ಚಳುವಳಿಗಳಲ್ಲಿ ಭಾಗವಹಿಸಿ ಸೆರೆಮನೆವಾಸ ಕೂಡ ಅನುಭವಿಸಿದ್ದರು. ಕ್ರಾಂತಿಕಾರಿ ಕವಿತೆಗಳನ್ನು ಬರೆದು ಪ್ರತಿಯೊಬ್ಬ ವ್ಯಕ್ತಿಗೂ ತಲುಪುವಂತೆ ಮಾಡುತ್ತಿದ್ದರು.

ಅಲ್ಲದೇ ಕುಣಿಯೋಣು ಬಾರಾ, ಪಾತರಗಿತ್ತಿ ಪಕ್ಕ ನೋಡಿದೇನಾ ಅಕ್ಕ (ಮಕ್ಕಳಗೀತೆಗೆ ಇಂದಿಗೂ ಶಾಲೆಗಳಲ್ಲಿ ಮಕ್ಕಳು ನೃತ್ಯ ಮಾಡುತ್ತಾರೆ.) ಇಳಿದು ಬಾ ತಾಯೇ ಇಳಿದು ಬಾ....(ದೇಶಭಕ್ತಿ ಹೆಚ್ಚಿಸುವ ಗೀತೆ) ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು...(ಎಂಬ ಪ್ರೇಮಗೀತೆ, ಜೀವನದ ಮೌಲ್ಯವನ್ನು ಸಾರುವ ಕವಿತೆಗಳು)
" ನನ್ನ ಹರಣ ನಿನಗೆ ಶರಣ, ಸಕಲ ಕಾರ್ಯ ಕಾರಣ....
ಸರಸ ಜನನ ವಿರಸ ಮರಣ , ಸಮರಸವೇ ಜೀವನ...!! ಎಂಬ ಗೀತೆಯಾಗಲಿ, "ನೀ ಹೀಂಗ ನೋಡಬ್ಯಾಡ ನನ್ನ( ಮಗ ತೀರಿಹೋದಾಗ ಹಾಡುವ ಹಾಡು) ತುಂಬಾ ಹೃದಯ ಸ್ಪರ್ಶಿಯಾಗಿದೆ. " ನೀನು, ನಾನು, ಆನು ತಾನು... ನಾಕೇ ನಾಕುತಂತಿ..."  "ಬಂಗಾರದೆಲೆಯ ಮೇಲೆ ತಂಗಾಳಿ ಬೀಸಿಬಂತು...", " ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ...",  "ಬಾ ಬಾರೋ.. ಬಾರೋ ಬಾರೋ ಬಾರೋ ಸಾಧನಕೇರಿಗೆ.. ಮರಳಿ ನಿನ್ನೀ ಊರಿಗೆ....." ಎಂಬ ಹಾಡಿನಿಂದ ಸುಮಧುರ ತರಂಗದ ರೀತಿಯಲ್ಲಿ ನಯವಾಗಿ, ಹಿತವಾಗಿ ಕವಿಮನಸ್ಸುಗಳನ್ನು ಸೆಳೆಯುತ್ತಾರೆ. ಅದೊಂದು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಬೇರೂರಿದೆ. ಇಂದಿಗೂ ಜನ ಆಗಾಗ ಗುನುಗುನಿಸುತ್ತಾ ಇರುವುದು ವಿಷೇಶವಾಗಿದೆ. ಸಿ.ಅಶ್ವತ್, ಮೈಸೂರು ಅನಂತಸ್ವಾಮಿ, ಅವರ ಪುತ್ರರಾದ ರಾಜು ಅನಂತಸ್ವಾಮಿಯವರು, ಎಂಡಿ. ಪಲ್ಲವಿ ಯವರ ಧ್ವನಿಯಲ್ಲಿ ಬೇಂದ್ರೆಯವರು ಬರೆದ ಅನೇಕ ಹಾಡುಗಳು ಹೊನ್ನಿನಂತೆ ಹೊಳೆಯಲು ಶುರುಮಾಡಿತು. ಆಗೆಲ್ಲ ಕ್ಯಾಸೆಟ್ ನಲ್ಲಿ ಹಾಡು ಕೇಳುವ ಕಾಲ. ಇವರ ಹಾಡುಗಳು ಕ್ಯಾಸೆಟ್ ಕಂಪೆನಿಗಳಿಗೆ ಅಪಾರ ಕೀರ್ತಿ,ಯಶಸ್ಸು , ಆರ್ಥಿಕವಾಗಿಯೂ ಲಾಭ ತಂದು ಕೊಟ್ಟಿತು.. "ಧಾರವಾಡದ ಅಜ್ಜ" ಎಂದೇ ಕರೆಯಲ್ಪಡುವ ಇವರು ಈಗಿನ ಯುವಕವಿಗಳಿಗೆ ಸ್ಪೂರ್ತಿಯ ಚಿಲುಮೆ. ಇಂದಿನ ಜಾಲತಾಣಗಳ ಯುಗದಲ್ಲಿ ಅನೇಕ ಸಾಹಿತ್ಯ ಪ್ರೇಮಿಗಳು ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿ ಸಾಧನಕೇರಿ , ಧಾರವಾಡದ ಅಜ್ಜ , ಕನ್ನಡಸಾಹಿತ್ಯ ಕೃಷಿ, ಎಂಬಿತ್ಯಾದಿ ಗುಂಪು ಕಟ್ಟಿಕೊಂಡು ಅವರ ನೆರಳಿನಡಿಯಲ್ಲಿ ಹೆಜ್ಜೆಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಅದರ ಮೂಲಕ ಧಾರವಾಡದ, ಹಾಗೆಯೇ ಬೇಂದ್ರೆಯವರ ಹೆಸರನ್ನು ವಿಶ್ವದಾದ್ಯಂತ ಬೆಳಗಿಸುವಲ್ಲಿ ತೊಡಗಿಸಿಕೊಂಡಿದ್ದಾರೆ‌.
  ಕನ್ನಡ ಅಲ್ಲದೇ ಮರಾಠಿ ಭಾಷೆಯಲ್ಲಿ ಕೂಡ ಅನೇಕ ಕವಿತೆಗಳನ್ನು ಬರೆದಿದ್ದಾರೆ. ಹೀಗಾಗಿ ಇವರನ್ನು "ಕನ್ನಡದ ಠಾಗೋರ್"  ಎಂದು ಕರೆಯುತ್ತಿದ್ದರು. ಹಾಗೆಯೇ ಅರಳು ಮಲ್ಲಿಗೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂವಾದ (ಮರಾಠಿ ಕೃತಿಗೆ) ಕೇಳ್ಕರ್ ಬಹುಮಾನ, ನಾಕುತಂತಿಗೆ ಕೇಂದ್ರ ಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಇನ್ನೂ ಅನೇಕ ಪ್ರಶಸ್ತಿಗಳು ಅವರ ಸಾಹಿತ್ಯ ಸೇವೆಗೆ ನೀಡಿದ ಗೌರವವಾಗಿದೆ. ಅಲ್ಲದೇ ಉಡುಪಿ ಅದಮಾರು ಮಠದವರಿಂದ "ಕನ್ನಡ ಕವಿಕುಲ ತಿಲಕ" ( ಕನ್ನಡ ಕವಿಗಳಲ್ಲಿಯೇ ಇವರೊಂದು ಸ್ವರ್ಣ ಮುಕುಟ) ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಮತ್ತೆ ಶ್ರಾವಣ ಬಂತು, ಒಲವೇ ನಮ್ಮ ಬದುಕು, ಮುಗಿಲ ಮಲ್ಲಿಗೆ, ಉತ್ತರಾಯಣ, ಹೃದಯ ಸಮುದ್ರ, ಜೀವಲಹರಿ,ನಮನ, ಉಯ್ಯಾಲೆ, ಸಖೀಗೀತ, ಸೂರ್ಯ ಪಾನ ಇನ್ನೂ ಅನೇಕ ಸಮಗ್ರ ಕಾವ್ಯಗಳನ್ನು ರಚಿಸಿದ್ದಾರೆ. "ನವೋದಯ ಸಾಹಿತ್ಯ ಚಳುವಳಿಯ ಹರಿಕಾರ" ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

 ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್‌ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದಾಗಿದೆ.
😊💐🌸🌱🌹🌻🌼🌷🌱🌿🍀📚📚📚📝
ನುಡಿನಮನ ಬರೆದವರು,
ಸಿಂಧು ಭಾರ್ಗವ್. ಬೆಂಗಳೂರು.

No comments:

Post a Comment