Tuesday 13 August 2013

ರಸವಾರ್ತೆಗಳು

ರಸವಾರ್ತೆಗಳು : ಭಾಗ 1


ನಮಸ್ಕರಗಳು. ರಸವಾರ್ತೆಗೆ ಸ್ವಾಗತ. ಓದುತ್ತಿರುವವರು ಬ್ಯಾಡಗಿ ಮೆಣಸಿನ ಕಾಯಿ.
ಮುಖ್ಯಾ೦ಶಗಳು : ರ೦ಜಾನ್ ಹಬ್ಬವನ್ನು ಬಹಳ ಉತ್ಸುಕರಾಗಿ ಮುಸಲ್ಮಾನ್ ಆತ್ಮೀಯರು ಆಚರಿಸಿದರು. ಇತ್ತ ನಾಗರ ಪ೦ಚಮಿ ಹಬ್ಬವನ್ನು ಹಿ೦ದುಗಳು ಹಾವಿಗೆ ಹಾಲೇರೆಯುವುದರ ಮೂಲಕ ಆಚರಿಸಿ ಸ೦ಭ್ರಮಿಸಿದರು.
ರ೦ಜಾನ್ ಉಪವಾಸ ನಿಮಿತ್ತ ಬೀದಿ ಬದಿಯ ಅ೦ಗಡಿಗಳಲ್ಲಿ ಸಮೋಸದ ವ್ಯಾಪಾರ ಬಹಳ ಜೋರಾಗಿ ನಡೆಯುತ್ತಿದುದ ನೋಡಿ ಮೊಟ್ಟೆಯ೦ಗಡಿ ಸೀನಣ್ಣ ಹೊಟ್ಟೆ ಉರಿಸಿಕೊಳ್ಳುತ್ತಿದ್ದನ೦ತೆ. ಆದ ಕಾರಣ ತನ್ನ ಮೊಟ್ಟೆಗಳನ್ನು ಆಲೂಗಡ್ಡೆಯ ಜೊತೆ ಜಗಳವಾಡಲು "ಛೂ.." ಬಿಟ್ಟಿದ್ದಾನೆ೦ದು ತಿಳಿದುಬ೦ದಿದೆ. ಮಾರ್ಗ ಮಧ್ಯೆ  ಆಲೂ-ಮೊಟ್ಟೆಯ ಜಗಳ ನೋಡಲು ಜನಸಮೂಹವೇ ಸೇರಿತ್ತೆ೦ದು ನಮ್ಮ ವರದಿಗಾರರು ತಿಳಿಸಿದ್ದಾರೆ. ನಾಗರ ಪ೦ಚಮಿಯ ಹಬ್ಬಕ್ಕೆ೦ದು ತ೦ಗಿಯನ್ನು ತವರು ಮನೆಗೆ ಕರೆತರುತ್ತಿದ್ದ ಮ೦ಜಣ್ಣ ನ ಸೈಕಲ್ ಮಾರ್ಗ ಮದ್ಯೆದಲ್ಲಿ ಪ೦ಚರ್ ಆದ ಕಾರಣ ಕೆಲ ಸಮಯ ವಾಹನ ಸ೦ಚಾರದಲ್ಲಿ ಉದ್ವಿಗ್ನ ಪರಿಸ್ಥಿತಿ ಉ೦ಟಾಯಿತೆ೦ದು ಹೆಬ್ರಿ ಪೋಲಿಸರು ತಿಳಿಸಿದ್ದಾರೆ. ಅಲ್ಲದೆ ಸೈಕಲ್ ಟೈಯರ್ ಬದಲಿಸುವ ಮೆಕ್ಯಾನಿಕ್ ಬರುವುದು ತಡವಾದ ಕಾರಣ ಎರಡೂ ಕಡೆ ಸಾಲುಗಟ್ಟಿ ನಿ೦ತಿದ್ದ ವಾಹನಗಳು ಬೇರೆ ದಾರಿಯಿಲ್ಲದೆ ತ೦ತಮ್ಮ ಕುಶಲೋಪರಿ ವಿಚಾರಿಸುತ್ತ ಸಮಯ ಕಳೆದವು ಎ೦ದು ನಮ್ಮ  ವರದಿಗಾರರಾದ ಚ೦ದ್ರ ಹೆಬ್ರಿ ತಿಳಿಸಿದ್ದಾರೆ. ಪ೦ಚಮಿಯ ವಿಶೇಶವೆ೦ಬ೦ತೆ ನಾರಿಯರು ಹುತ್ತಕ್ಕೆ ಪೂಜೆ ಮಾಡುವ ನಿಮಿತ್ತ ಹಾಲೆರೆಯುತ್ತಿದ್ದಾಗ ಕೇರೆ ಹಾವೊ೦ದು ಹುತ್ತದಿ೦ದ ಮೆಲ್ಲನೆ ಹೊರಬ೦ದು ಸರಕ್ಕನೆ ಸರಿದು ಮ೦ಗಮಾಯವಾದ ಘಟನೆ ಹಾಸನದ ಕಾಡುತೋಪಿನಲ್ಲಿ ನಡೆದಿದೆ. ಭಕ್ತಿ ಪರವಶದಲ್ಲಿದ್ದ ನಾರಿಯರು ನಿಜವಾದ ನಾಗರಾಜನೇ ಬ೦ದನೆ೦ದು ಖುಶಿಪಟ್ಟರೆ೦ದು ತಿಳಿದು ಬ೦ದಿದೆ.
ಇತ್ತ ಮಳೆ ಕಡಿಮೆಯಾದ ಕಾರಣ ಜನರು ಸ್ವಲ್ಪ ನಿರಾಳರಾಗಿ ಜೀವನ ನಡೆಸುವ೦ತಾಗಿದೆ. ಗದ್ದೆ ಕೆಲಸದಲ್ಲಿ ಬಿಸಿಯಾಗಿದ್ದ ಕೋಣಗಳೆಲ್ಲ ಹಟ್ಟಿಯಲ್ಲಿ ಹಸಿಹುಲ್ಲು ತಿನ್ನುತ್ತಾ ಆರಾಮವಾಗಿದ್ದಾವೆ೦ದು ನಮ್ಮ ವರದಿಗಾರರು ತಿಳಿಸಿದ್ದಾರೆ. ಬಿರುಗಾಳಿ, ರಭಸದಿ ಸುರಿದ ಮಳೆಗೆ ಚಳಿ ಹಿಡಿದು ೯೯ರ ನವ ತರುಣಿ ಮ೦ಗಮ್ಮ ಕ೦ಬಳಿಹೊದ್ದು ಮಲಗಿದ್ದವರು ಇನ್ನೂ ಎದ್ದಿಲ್ಲವ೦ತೆ. ಅವರು ಉಸಿರಾಡುತ್ತಿದ್ದಾರೋ ಇಲ್ಲವೋ ಎ೦ದು ತಿಳಿದುಕೊಳ್ಳಲು ಮಗ ಸುರೇಶ ಯಮರಾಜನಿಗೆ ಫೋನಾಯಿಸಿ ವಿಚಾರಿಸುತ್ತಿದ್ದ ಎ೦ದು ಮೂಲಗಳು ತಿಳಿಸಿವೆ.
ಮಳೆಯ ಪರಿಣಾಮವಾಗಿ ಎಲ್ಲಾ ಕಡೆ ಹಸಿರು ಹಾಸಿಗೆಯ೦ತೆ ಕಾಣುತ್ತಿದ್ದರಿ೦ದ ಗೋ೦ಕರ ಕಪ್ಪೆಗಳಿಗೆ ಖುಶಿಯಾಗುತ್ತಿದೆ ಅ೦ತೆ. ಕಾರಣ ಕೇಳಿದ್ದಕ್ಕೆ " ಉಚಿತ ಹಾಸಿಗೆ ಮೇಲೆ ಮಲಗಿ ರಾತ್ರಿ ಹಾಯಾಗಿ ಕನಸು ಕಾಣಬಹುದಲ್ಲ ಎ೦ದು ಪ್ರತಿಕ್ರೀಯಿದ್ದಾವೆ" ಎ೦ದು ವರದಿಗಾರ ರಾಜೇಶ್ ತಿಳಿಸಿದ್ದಾರೆ.
ಇನ್ನು ಹವಾಮಾನ ವರದಿ : ಮು೦ಗಾರು ಮಳೆ ಸ್ವಲ್ಪ ಸಾವರಿಸಿಕೊ೦ಡು ಬರುತ್ತಿರುವುದರಿ೦ದ ರಾತ್ರಿ ಮಾರ್ಗ ಮಧ್ಯೆಯಲ್ಲಿ ಸತ್ತು ಬೀಳುತ್ತಿರುವ ಮರಿ ಕಪ್ಪೆಗಳ ಸ೦ಖ್ಯೆ ಕಡಿಮೆಯಾಗಿದೆ ಎ೦ದು ಹವಾಮಾನ ಇಲಾಖೆ ತಿಳಿಸಿದೆ.
ಇಲ್ಲಿಗೆ ರಸವಾರ್ತೆ ಮುಗಿಯಿತು.


ವ೦ದನೆಗಳೊ೦ದಿಗೆ,
ಬ್ಯಾಡಗಿ ಮೆಣಸಿನ ಕಾಯಿ.

No comments:

Post a Comment