Tuesday 14 February 2023

ಬಸ್ಸಿನಲ್ಲಿ ಸಂಚರಿಸುವಾಗ ಆಗುವ ಅನುಭವಗಳು

 



Google image

ಬೆಳಿಗ್ಗೆ ಆರು ಗಂಟೆಗೆಲ್ಲ ಎದ್ದು ಮನೆ ಗುಡಿಸಿ ಸ್ವಚ್ಛ ಮಾಡಿ ತಿಂಡಿ ಕಾಫಿ ಎಂದು ಅದನ್ನು ರೆಡಿ ಮಾಡಿ ಗಂಡ ಮಕ್ಕಳ ‌ಏಳಿಸಿ ಅವರಿಗೆ ತಿಂಡಿ ಕೊಟ್ಟು ಶಾಲೆ ಆಫೀಸಿಗೆ ಕಳುಹಿಸುವಾಗ ಸೀಮಾಳ ದಿನಚರಿಯಲ್ಲಿ ಒಂದಷ್ಟು ಮುಗಿದಂತೆ. ನಂತರ?

ನಂತರ ತಾನು ತಿಂಡಿಯ ಡಬ್ಬಕ್ಕೆ ತುಂಬಿಸಿಕೊಂಡು ಜೊತೆಗೆ ಯಾವುದಾದರು ಹಣ್ಣನ್ನು ಕತ್ತರಿಸಿ ಅದನ್ನು ಇಟ್ಟುಕೊಂಡು ನೀರಿನ ಬಾಟಲಿ ರೆಡಿ‌ ಮಾಡಿಕೊಂಡು ಮನೆ ಬಾಗಿಲಿಗೆ ಬೀಗ ಹಾಕುವಾಗಲೇ ಅವಳ ಆಫೀಸಿನ ಬಸ್ಸು ಹಾರ್ನ್ ಹಾಕುತ್ತದೆ.

"ಬಂದೇ..." ಎಂದು ಡ್ರೈವರ್ ಅಣ್ಣನ ಕೂಗಿ ಕರೆದು ಅವಸರದಲ್ಲಿ ಬಸ್ ಹತ್ತುವಾಗ ಎಲ್ಲರಿಗೂ ಗುಡ್ ಮಾರ್ನಿಂಗ್ ಹೇಳಿ ನಗುಮುಖದಿಂದ ಸ್ವಾಗತಿಸಿ ಆ ದಿನವನ್ನು ಕಳೆಯಲು ಮನಸ್ಸು ಸಿದ್ದಗೊಳ್ಳುತ್ತದೆ. ಆಫೀಸಿನ ಒತ್ತಡದ ಎಲ್ಲಾ ಕೆಲಸಗಳನ್ನು ಮುಗಿಸಿ ಮಧ್ಯಾಹ್ನ ಕಟ್ಟಿ ತಂದಿದ್ದ ತಿಂಡಿ ಸವಿದು ಸಂಜೆಯವರೆಗೆ ಕೆಲಸ ಮುಗಿಸಿ ಮತ್ತದೇ ಬಸ್ಸು ಏರುವಾಗ ದಣಿವಾಗಿ ದೇಹವು ಕಿಟಕಿಯ ತಂಪು ಗಾಳಿಗೆ ಮುಖ ಒಡ್ಡಲು ಹೇಳುತ್ತದೆ.

ಹಾಗೆಂದು ಪ್ರತಿ ಸಂಜೆ ಮನೆಗೆ ಬರುವಾಗ ನಿದ್ದೆ ಮಾಡಿದರೆ ಹೇಗೆ? ಹೊರಗೆ ಏನು ನಡೆಯುತ್ತಿದೆ ಎಂದು ತಿಳಿಯುವ ಕುತೂಹಲ ಬೇಡವೇ.?? ಹೋಗಲಿ ಬಸ್ಸಿನೊಳಗೆ ಏನೆಲ್ಲ ನಡೆಯುತ್ತದೆ ಎಂಬ ಕುತೂಹಲ ಇಲ್ಲವೇ??

ಸೀಮಾಳು ಕೂಡ ಮಾತು ಕಡಿಮೆ. ಎಲ್ಲರನ್ನು ಒಮ್ಮೆ ಮಾತನಾಡಿಸಿ ಕೈ ತೊಳೆದುಕೊಳ್ಳುವವಳು. ಮತ್ತೆ ಯಾರ ವೈಯಕ್ತಿಕ ಜೀವನದ ಬಗ್ಗೆಯಾಗಲಿ, ಆಫೀಸಿನಲ್ಲಿ ನಡೆದ ಕತೆಯನ್ನಾಗಲಿ ಚರ್ಚಿಸುವ ಗೋಜಿಗೆ ಹೋಗುವುದಿಲ್ಲ. ಮೊದಲೆಲ್ಲ ಆಫೀಸು ಮುಗಿದಾಗ ವಿಪರೀತ ತಲೆನೋವು ಕಾಣಿಸಿಕೊಂಡು ಅಲ್ಲೇ ಕಿಟಕಿಗೆ ಒರಗಿ ನಿದ್ದೆಗೆ ಜಾರುತ್ತಿದ್ದಳು. ಸುಮಾರು ನಲವತ್ತು ನಿಮಿಷಗಳ ಪ್ರಯಾಣವಾದ ಕಾರಣ ಆ ನಿದ್ದೆ ಸಹಾಯಮಾಡುತ್ತಿತ್ತು.


ನಂತರ ಅದೇ ಅಭ್ಯಾಸವಾಗಿ ಹೋದ ಕಾರಣ ತಲೆನೋವು ಕಡಿಮೆಯಾಯಿತು. ತನ್ನ ಸೀಟಿನಲ್ಲಿ ಕುಳಿತವಳು ಮೆಲ್ಲಗೆ ಮೊಬೈಲ್ ನಲ್ಲಿ ಎಫ್. ಎಂ. ಹಾಡು ಕೇಳುವ ಅಭ್ಯಾಸ ಬೆಳೆಸಿಕೊಂಡಳು. ಆ ಹಾಡಿಗೆ ಗುನುಗುತ್ತ ತಲೆ ಅಲ್ಲಾಡಿಸುತ್ತಾ ಚಿಟಕಿ ಹೊಡೆಯುತ್ತಾ  ಅವಳದೇ ಲೋಕವನ್ನು ಸೃಷ್ಟಿಸಿಕೊಂಡು ಖುಷಿಪಡುತ್ತಿದ್ದಳು. ನಂತರ ಪಕ್ಕದಲ್ಲೇ ಕುಳಿತ ಸಹೋದ್ಯೋಗಿಯ ಮಾತನಾಡಿಸುವ ಮನಸ್ಸು ಮಾಡಿದಳು. ಅವಳ ಮನೆ ಮದುವೆ ಸಂಸಾರದ ವಿಷಯ ಎಲ್ಲ ಕೇಳಿ ತಿಳಿದುಕೊಂಡು ಸ್ನೇಹಿತೆಯರಾದರು.

ನಂತರದಲ್ಲಿ ಪ್ರತಿಸಂಜೆ ಇಬ್ಬರೂ ಜೊತೆಗೆ ಕೂರುವುದು ಅಭ್ಯಾಸ ಮಾಡಿಕೊಂಡರು. ಅವಳಿಗೂ ಎಫ್.ಎಂ. ಗೀಳು ಹತ್ತಿಸಿದಳು‌.


ಸೀಮಾಳಿಗೆ ಒಳ್ಳೆಯ ಗುಣ ಇದ್ದ ಕಾರಣ ಯಾರ ಜೊತೆಗೂ ತಕರಾರು ಮಾಡಿಕೊಳ್ಳುವುದಾಗಲಿ, ತಂದಿಡುವ ಕೆಲಸವಾಗಲಿ ಮಾಡುತ್ತಿರಲಿಲ್ಲ. ಹಾಗಾಗಿ ಜಗಳವಾಗುವ ಪ್ರಶ್ನೆಯೇ ಇಲ್ಲ. ಒಮ್ಮೆ ಹಾಗೆ ಸೀಮಾಳು ‌ಕುಳಿತ ಹಿಂದಿನ ಸೀಟಿನಲ್ಲಿ ನಗುತ್ತಾ , ಪರಸ್ಪರ ಕಾಲೆಳೆದುಕೊಂಡು  ಮಾತನಾಡುತ್ತಿದ್ದವರು ಒಂದೇ ಸಮನೆ ಮಾತಿಗೆ ಮಾತು ಬೆಳೆಸಿ ಜಗಳ ಮಾಡಿಕೊಂಡರು. ಕಾಲರ್ ಪಟ್ಟಿ ಹಿಡಿದೆಳೆದು ಬೈಸಿಕೊಳ್ಳುತ್ತಿದ್ದರು. ನಂತರ ಬಸ್ಸಿನ ಚಾಲಕ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿ ಚೆನ್ನಾಗಿ ಉಗಿದು "ಏನು ನಾನೀಗ ಗಾಡಿ ಓಡಿಸಬೇಕಾ? ಇಲ್ಲಾ ಪೋಲೀಸ್ ಠಾಣೆಗೆ ತೆಗೆದುಕೊಂಡು ಹೋಗಬೇಕಾ? ಎಂದು ಕೇಳಿದ.
ಉಳಿದವರು. "ಏನ್ರೀ ನಿಮ್ಮ ಜಗಳ.... ಸುಮ್ಮನಿರಿ. ಸಮಾಧಾನ ಮಾಡಿಕೊಳ್ಳಿ..." ಎಂದು ಹೇಳಿದರು. ಅಲ್ಲೇ ವಿಷಯ ನಿಂತಿತು. ಸೀಮಾ ಬೆಚ್ಚಿ ಬಿದ್ದರು.

ಸೀಮಾಳ ಗೆಳತಿಗೆ ಒಬ್ಬ ಪ್ರೇಮಿಯಿದ್ದ. ಪ್ರತಿಸಂಜೆ ಕೆಲಸ ಮುಗಿಸಿ ಮನೆಗೆ ಹೊರಡುವಾಗಲೇ ಕರೆ ಮಾಡುತ್ತಿದ್ದ. ಪಿಸುಗುಟ್ಟಲು ಶುರುಮಾಡಿದರೆ ಸೀಮಾಳ ಮನೆ ಬಂದರೂ ನಿಲ್ಲಿಸುತ್ತಲೇ ಇರಲಿಲ್ಲ. ಅದೆಂತ ಮಾತನಾಡುವುದೋ? ಅದೇನು ವಿಷಯ ಇರುವುದೋ? ಸೀಮಾಳಿಗೆ ಅಚ್ಚರಿ.
"ನೀವಿಬ್ಬರೂ ಏನು ಮಾತನಾಡುವುದು? ಎಂದು ಕೇಳಿದರೆ "ಏನೂ ಇಲ್ಲ... ಸುಮ್ನೆ.. ಹೀಗೆ....??"  ಎನ್ನಬೇಕೆ😃

ಸೀಮಾಳಿಗೆ ಸಂಜೆಯ ತಂಗಾಳಿ ಆ ಟ್ರಾಫಿಕ್ ಜಾಮ್ ಗು ಪುಷ್ಟಿ ನೀಡುವುದು. ಅವಳಿಗೆ ಬೋರ್ ಎನಿಸುವುದೇ ಇಲ್ಲ. ಆ ಟ್ರಾಫಿಕ್ ನ ಸಂಧಿಯಲ್ಲಿ ಬೈಕ್ ನವನು ನುಸುಳಿ ಹೋಗುವುದ ನೋಡುವುದೆ ಚಂದ. ಹುರಿಗಡಲೆ ಹುರಿಯುತ್ತ ತನ್ನ ಕಬ್ಬಿಣದ ಬಾಣಾಲೆ‌ ಕುಟ್ಟಿ ಕರೆಯುವ ದನಿ ಚಂದ.. ಕಾಲೇಜು ಹುಡುಗರ ಗುಂಪುಗಳು‌ ನಡೆದುಕೊಂಡು ಹೋಗುವುದ‌ ನೋಡುವಾಗ ತನ್ನ ಕಾಲೇಜು ದಿನಗಳ‌ ಮೆಲುಕು ಹಾಕಿಕೊಳ್ಳುವುದಿದೆ.

ಕೆಲವೊಮ್ಮೆ ಅಪಘಾತ ಸಂಭವಿಸಿ ಚದುರಿ ಬೀಳುವ ಗಾಜಿನ ಚೂರುಗಳು, ಗುಂಪು ಸೇರುವ ಜನರು, ಅಪಾಯ ಸೂಚಬೆ ನೀಡುತ್ತ ಕೂಗುತ್ತ ಬರುವ ಅಂಬ್ಯುಲೆನ್ಸ್ ನೋಡಿ ಎದೆ ನಡುಗಿ ದೇವರ ಬೇಡುವುದು... ಆ ಸಂಜೆ ಹಕ್ಕಿಗಳು ಮನೆ ಕಡೆಗೆ ಸಾಗುವ ಸಾಲುಗಳ‌ನೋಡಲು ಕಣ್ಣಿಗೆ ಹಬ್ಬ. ಆ ಸಂಜೆಯ ಸೂರ್ಯಾಸ್ತಮಾನದ ಬಣ್ಣಬಣ್ಣದ ಆಗಸವನ್ನು ನೋಡುವುದೇ‌‌ ಕಣ್ಣಿಗೆ ಹಬ್ಬ..



ಹೀಗೆ ಸೀಮಾಳು ಬಸ್ಸಿನಲ್ಲಿ ಸಂಚರಿಸುವಾಗ ಮನಸಾರೆ ಆಸ್ವಾದಿಸುವಳು.‌

- ಸಿಂಧು ಭಾರ್ಗವ ಬೆಂಗಳೂರು
ಲೇಖಕಿ



.....

No comments:

Post a Comment