Wednesday 8 January 2020

ಕೋಟ ಶಿವರಾಮ ಕಾರಂತರು ನೆನಪಿಗಾಗಿ ಕವಿತೆ ಬರೆದೆನು

ಕೋಟ ಶಿವರಾಮ ಕಾರಂತರ ನೆನಪಿನಲ್ಲಿ ಈ ಕವಿತೆ ಅರ್ಪಣೆ.

Images source:- Google Images

ಕವಿತೆಯ ಶೀರ್ಷಿಕೆ: ಕಾರಂತಜ್ಜನ ನೆನಪಿನಲ್ಲಿ...

ಅಲೆಗಳ‌ ಜೊತೆಯಲಿ ಆಡಿಬೆಳೆದ
ಕಡಲ ತೀರದ ಭಾರ್ಗವ
ಬರಹ ರೂಪಕೆ ಜ್ಞಾನಪೀಠವ
ತಂದು ಕೊಟ್ಟ ಗೌರವ

ನೋವು ನಲಿವಿಗೆ ಕಡಲೇ
ಉತ್ತರ ನೀಡಿ ಗೆಳೆಯನಾಗಿದೆ
ಹೊಸತು ಹುರುಪು ಮೂಡಿ
ಬರಲು ಕಡಲು ಕಾರಣವಾಗಿದೆ

ಪದಗಳನ್ನೇ ಅಸ್ತ್ರ ಮಾಡಿ
ದೇಶಕಾಗಿ ಸಿಡಿದಿದ್ದರು
ಕ್ರಾಂತಿಕಾರಿ ಕವನಗಳಿಂದ
ಜನರನ್ನು ಎಬ್ಬಿಸಿದ್ದರು

ಸ್ವಾತಂತ್ರ್ಯ ನಮ್ಮ ಹಕ್ಕು
ಬನ್ನಿ ಗೆಳೆಯರೇ ಎಂದರು
ಉಪವಾಸವ ಮಾಡಿ
ಗಾಂಧಿಯವರಿಗೆ ಹೆಗಲಾದರು

ಮೂಕಜ್ಜಿಯ ಕನಸಿನಲ್ಲಿ
ತನ್ನ ಕನಸನು ಬಿತ್ತುತ
ಚೋಮನ ದುಡಿಯ ಬಡಿದು
ಸ್ಥಾನಮಾನಕ್ಕಾಗಿ ಗುಡುಗಿದರು

ಹುಚ್ಚು ಮನಸಿನ ಹತ್ತು ಮುಖಗಳು
ಓದುಗನಲಿ ಅಚ್ಚಾಗಿದೆ
ದೇವದೂತ ಬಂದು ಈಗ
ಮನದ ದನಿಯ ಕೇಳದೇ??

ನೇರನೇರ ನುಡಿದರೇನೆ
ಜನರ ಮೈಯು ಉರಿವುದು
ಜಾತಿ ವಿಜಾತಿ ಎಂಬೆ ಏತಕೀ ಜೀವ
ಮರಳಿ ಮಣ್ಣಿಗೆ ಹೋಗುವುದು

"ವಸಂತ"ದಲ್ಲಿ ಮೂಡಿ ಬಂದ
ಕಂತುಕಂತಿನ ಕಥೆಗಳು
ಕಾದಂಬರಿ ರೂಪ ಪಡೆದು
ಇಂದು ಅಮರವಾದವು

ಯಕ್ಷಲೋಕವ ಪ್ರೇಕ್ಷಕನೆದುರು
ತೆರೆದಿಟ್ಟ ಕಲೆಗಾರನು
ನಟನೆ, ನಾಟ್ಯ ಸಂಭಾಷಣೆಗೆ
ಹೆಸರಾದ ಗಂಡು ಮೆಟ್ಟಿದ ಕಲೆಯಿದು

ಉತ್ತರಕನ್ನಡದಲ್ಲಿ ಚಿರುಗಿದ ಕನಸೊಂದು
ಬೆಟ್ಟದ ಜೀವವಾಗಿ ಎಲ್ಲರ ಸೆಳೆಯಿತಂದು
ಹಸಿದ ಆಡು ಮುಟ್ಟದ ಸೊಪ್ಪಿರಲಿಲ್ಲ
ಕಾರಂತಜ್ಜರು ಅರಿಯದ ಸಾಹಿತ್ಯ ಪ್ರಕಾರಗಳಿಲ್ಲ

ಸನ್ಮಾನ, ಪ್ರಶಸ್ತಿ ಪುರಸ್ಕಾರಗಳದ್ದೇ ಹೊಳೆಹರಿಯಿತು
ಕಡಲ ತೀರದ ಭಾರ್ಗವನಿಗೆ ಸಾಷ್ಟಾಂಗ ನಮನವೆಂದಿತು

ರಚನೆ: ಸಿಂಧು ಭಾರ್ಗವ್ . ಬೆಂಗಳೂರು






No comments:

Post a Comment